ADVERTISEMENT

ಸಾರಿಗೆ ನೌಕರರ ಮುಷ್ಕರ; ಪ್ರಯಾಣಿಕರ ಪರದಾಟ

ಖಾಸಗಿ ಬಸ್‌ ಸೇವೆ ಪಡೆದ ಸಾರ್ವಜನಿಕರು, ಮುಷ್ಕರ ಮುಂದುವರಿಯುವ ಸಾಧ್ಯತೆ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2021, 13:55 IST
Last Updated 7 ಏಪ್ರಿಲ್ 2021, 13:55 IST
ಚಿತ್ರದುರ್ಗದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಬುಧವಾರ ಪ್ರಯಾಣಿಕ ಸಂಖ್ಯೆ ವಿರಳವಾಗಿತ್ತು.
ಚಿತ್ರದುರ್ಗದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಬುಧವಾರ ಪ್ರಯಾಣಿಕ ಸಂಖ್ಯೆ ವಿರಳವಾಗಿತ್ತು.   

ಚಿತ್ರದುರ್ಗ: ಆರನೇ ವೇತನ ಆಯೋಗದ ಶಿಫಾರಸು ಅನುಷ್ಠಾನಗೊಳಿಸುವಂತೆ ಆಗ್ರಹಿಸಿ ಸಾರಿಗೆ ನೌಕರರು ಬಸ್‌ ಸಂಚಾರ ಸ್ಥಗಿತಗೊಳಿಸಿ ಮುಷ್ಕರ ಆರಂಭಿಸಿದ್ದರಿಂದ ಸಾರ್ವಜನಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಖಾಸಗಿ ಬಸ್‌ ಸೇವೆ ಲಭ್ಯವಿದ್ದರೂ ಪ್ರಯಾಣಿಕರು ತೊಂದರೆ ಅನುಭವಿಸಿದರು.

ಚಿತ್ರದುರ್ಗ ವಿಭಾಗ ವ್ಯಾಪ್ತಿಯ 1,250 ಸಾರಿಗೆ ನೌಕರರ ಪೈಕಿ ಅಧಿಕಾರಿ ಹಂತದವರು ಮಾತ್ರ ಕರ್ತವ್ಯಕ್ಕೆ ಹಾಜರಾಗಿದ್ದರು. ಸಾವಿರಕ್ಕೂ ಅಧಿಕ ನೌಕರರು ಕೆಲಸದಿಂದ ಹೊರಗೆ ಉಳಿದಿದ್ದರು. ಚಾಲಕರು, ನಿರ್ವಾಹಕರು ಹಾಗೂ ಮೆಕ್ಯಾನಿಕ್‌ ಸೇರಿ ಇತರರು ಕರ್ತವ್ಯಕ್ಕೆ ಹಾಜರಾಗಲಿಲ್ಲ. ಕೆಲಸಕ್ಕೆ ಗೈರಾಗಿದ್ದಾರೆ ಎಂಬುದನ್ನು ಹಾಜರಾತಿಯಲ್ಲಿ ಉಲ್ಲೇಖಿಸಿದ ಅಧಿಕಾರಿಗಳು, ಸರ್ಕಾರದ ನಿರ್ದೇಶನದಂತೆ ವೇತನ ಕಡಿತಕ್ಕೆ ಶಿಫಾರಸು ಮಾಡಿದರು.

ಚಿತ್ರದುರ್ಗ, ಹೊಸದುರ್ಗ, ಚಳ್ಳಕೆರೆ ಹಾಗೂ ಪಾವಗಡ ಡಿಪೊ ವ್ಯಾಪ್ತಿಯಲ್ಲಿ 260 ಮಾರ್ಗಗಗಳಿವೆ. ವಿಭಾಗ ವ್ಯಾಪ್ತಿಯ 294 ಬಸ್‌ಗಳಲ್ಲಿ ಯಾವ ಬಸ್‌ಗಳು ರಸ್ತೆಗೆ ಇಳಿಯಲಿಲ್ಲ. ಇದರಿಂದ ಅಂದಾಜು ₹ 30 ಲಕ್ಷ ನಷ್ಟ ಉಂಟಾಗಿದೆ. ಜಿಲ್ಲಾಧಿಕಾರಿ ಕವಿತಾ ಎಸ್‌.ಮನ್ನಿಕೇರಿ ಅವರು ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪ್ರಯಾಣಿಕರ ಸಮಸ್ಯೆ ಆಲಿಸಿದರು.

ADVERTISEMENT

ಬಸ್‌ ನಿಲ್ದಾಣ ಭಣಭಣ:

ಸದಾ ಜನಜಂಗುಳಿಯಿಂದ ತುಂಬಿರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ಬುಧವಾರ ಬಿಕೊ ಎನ್ನುತ್ತಿತ್ತು. ಸಾರಿಗೆ ಬಸ್‌ಗಳು ಡಿಪೊದಿಂದ ಹೊರಗೆ ಬರದಿರುವುದರಿಂದ ನಿಲ್ದಾಣ ಖಾಲಿಯಾಗಿತ್ತು. ಪ್ರಯಾಣಿಕರ ಸಂಖ್ಯೆಯೂ ವಿರಳವಾಗಿತ್ತು. ಮಾಹಿತಿ ಕೊರತೆಯಿಂದ ಬಂದಿದ್ದ ಕೆಲವರು ಖಾಸಗಿ ಬಸ್‌ ನಿಲ್ದಾಣದತ್ತ ಹೆಜ್ಜೆ ಹಾಕಿದರು.

ನಿಲ್ದಾಣದ ಒಳಭಾಗದಲ್ಲಿರುವ ಸಾರಿಗೆ ಇಲಾಖೆಯ ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಿಸಿದವು. ಅಧಿಕಾರಿಗಳು ಕರ್ತವ್ಯ ನಿರ್ವಹಿಸಿದರು. ಸಂಚಾರ ನಿಯಂತ್ರಣ ಕೊಠಡಿ ಕಾರ್ಯನಿರ್ವಹಿಸಿತು. ನಿಲ್ದಾಣದಲ್ಲಿರುವ ಮಳಿಗೆಗಳು ಬಾಗಿಲು ತೆರೆದಿದ್ದವು. ಕೆಲ ಮಕ್ಕಳು ನಿಲ್ದಾಣದಲ್ಲಿ ಸೈಕಲ್‌ ತುಳಿದು ಖುಷಿಪಟ್ಟರು.

ಮೂರು ಬಸ್‌ಗಳಿಗೆ ಭದ್ರತೆ:

ಮುಷ್ಕರದ ನಡುವೆಯೂ ಮೂರು ಬಸ್‌ಗಳು ಪ್ರಯಾಣಿಕರಿಗೆ ಸೇವೆ ಒದಗಿಸಿದವು. ಪೊಲೀಸ್ ಭದ್ರತೆಯಲ್ಲಿ ಹೊರ ಜಿಲ್ಲೆಗೆ ಸಂಚರಿಸಿದವು. ಪುಣೆಯಿಂದ ದಾವಣಗೆರೆ ಮಾರ್ಗವಾಗಿ ಬಂದಿದ್ದ ವೋಲ್ವೊ ಬಸ್ ಬೆಂಗಳೂರಿಗೆ ತೆರಳಿತು. ಪ್ರಯಾಣಿಕರು ಸಾಕಷ್ಟು ಸಂಖ್ಯೆಯಲ್ಲಿ ಬಂದಿದ್ದರಿಂದ ಕೊಟ್ಟೂರು ಮಾರ್ಗವಾಗಿ ಹೂವಿನಹಡಗಲಿ ಹಾಗೂ ಮತ್ತೊಂದು ಬಸ್ ಭರಮಸಾಗರ ಮಾರ್ಗವಾಗಿ ದಾವಣಗೆರೆಗೆ ಸಂಚರಿಸಿತು.

‘ರಕ್ಷಣೆ ನೀಡುವ ಆಶ್ವಾಸನೆ ನೀಡಿದರೂ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಿಲ್ಲ. ವಾಸ್ತವ್ಯ ಹೂಡಿದ್ದ ಬಸ್‌ಗಳನ್ನು ಡಿಪೊಗಳಿಗೆ ತಲುಪಿಸುವ ಜವಾಬ್ದಾರಿ ಇತ್ತು. ಹೀಗಾಗಿ, ಪೊಲೀಸ್‌ ಭದ್ರತೆಯಲ್ಲಿ ಬಸ್‌ ಸಂಚರಿಸಲು ಅವಕಾಶ ಕಲ್ಪಿಸಿದೆ’ ಎನ್ನುತ್ತಾರೆ ವಿಭಾಗೀಯ ನಿಯಂತ್ರಣಾಧಿಕಾರಿ ವಿಜಯಕುಮಾರ್‌.

ಖಾಸಗಿ ಬಸ್‌ ಸೇವೆ:

ಸಾರಿಗೆ ಬಸ್‌ಗಳಿಗೆ ಪರ್ಯಾಯವಾಗಿ ಖಾಸಗಿ ಬಸ್‌ ಹಾಗೂ ಮ್ಯಾಕ್ಸಿ ಕ್ಯಾಬ್‌ಗಳು ಸಂಚರಿಸಿದವು. ಕೆಎಸ್ಆರ್‌ಟಿಸಿ ಬಸ್‌ ನಿಲ್ದಾಣದ ಹೊರ ಭಾಗದಲ್ಲಿ ಖಾಸಗಿ ಬಸ್‌ಗಳು ಸಾಲುಗಟ್ಟಿ ನಿಂತಿದ್ದವು. ಬೆಂಗಳೂರು, ದಾವಣಗೆರೆ, ಬಳ್ಳಾರಿ, ಶಿವಮೊಗ್ಗ ಸೇರಿ ಹಲವೆಡೆ ಸಂಚರಿಸಿದವು. ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಖಾಸಗಿ ಬಸ್‌ ಸಂಚಾರ ಎಂದಿನಂತೆ ಇತ್ತು. ಮುಷ್ಕರದ ಮಾಹಿತಿ ಅರಿತಿದ್ದರಿಂದ ಖಾಸಗಿ ಬಸ್‌ ಸೇವೆಯಲ್ಲಿ ಪ್ರಯಾಣಿಕರ ದಟ್ಟಣೆ ಕಂಡುಬರಲಿಲ್ಲ.

ಸರ್ಕಾರದ ನಿರ್ದೇಶನದಂತೆ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ಪ್ರವೇಶಕ್ಕೆ ಖಾಸಗಿ ಬಸ್‌ಗಳಿಗೂ ಅವಕಾಶ ಕಲ್ಪಿಸಲಾಯಿತು. ದಾವಣಗೆರೆ ಹಾಗೂ ಜಿಲ್ಲೆಯ ಗ್ರಾಮೀಣ ಪ್ರದೇಶದ ಪ್ರಯಾಣಿಕರಿಗೆ ಬಸ್‌ಗಳು ಸೇವೆ ಒದಗಿಸಿದವು. ಖಾಸಗಿ ಬಸ್‌ ದರದಲ್ಲಿ ಯಾವುದೇ ವ್ಯತ್ಯಾಸ ಕಂಡುಬರಲಿಲ್ಲ.

***

ಕರ್ತವ್ಯಕ್ಕೆ ಹಾಜರಾಗುವಂತೆ ನೌಕರರ ಮನವೊಲಿಸುವ ಪ್ರಯತ್ನ ನಡೆಯುತ್ತಿದೆ. ಪ್ರಯಾಣಿಕರಿಗೆ ತೊಂದರೆ ಉಂಟಾಗದ ರೀತಿಯಲ್ಲಿ ಖಾಸಗಿ ಬಸ್‌ ವ್ಯವಸ್ಥೆ ಕಲ್ಪಿಸಲಾಗಿದೆ.

–ವಿಜಯಕುಮಾರ್‌, ವಿಭಾಗೀಯ ನಿಯಂತ್ರಣಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.