ADVERTISEMENT

ಚಿತ್ರದುರ್ಗ: ‘ಸಿ’ ಗುಂಪನ್ನು ‘ವಿಮುಕ್ತ ಸಮುದಾಯ’ ಎಂದು ಗುರುತಿಸಿ

ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಆಗ್ರಹ

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2025, 2:41 IST
Last Updated 24 ಆಗಸ್ಟ್ 2025, 2:41 IST
ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ
ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ   

ಚಿತ್ರದುರ್ಗ: ‘ಒಳಮೀಸಲಾತಿಯಲ್ಲಿನ ‘ಸಿ’ ಗುಂಪಿಗೆ ‘ಸ್ಪೃಶ್ಯ ಜಾತಿ’ ಎಂಬ ಅಸಂವಿಧಾನಕ ಪದ ನೀಡಿದ್ದು, ಅದನ್ನು ಕಡತದಿಂದ ತೆಗೆದು ‘ವಿಮುಕ್ತ ಸಮುದಾಯ’ಗಳೆಂದು ಗುರುತಿಸಬೇಕು’ ಎಂದು ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ರಾಜ್ಯ ಸರ್ಕಾರವನ್ನು ಅಗ್ರಹಿಸಿದ್ದಾರೆ.

‘ಆ. 19ರಂದು ನಡೆದ ಸಚಿವ ಸಂಪುಟದಲ್ಲಿ ನಾಗಮೋಹನದಾಸ್‌ ವರದಿಯ ಶಿಫಾರಸುಗಳನ್ನು ಕೆಲವು ಮಾರ್ಪಾಟುಗಳೊಂದಿಗೆ ರಾಜಕೀಯ ಒತ್ತಡದಲ್ಲಿ ಅಂಗೀಕರಿಸಿದೆ. ಸ್ವಾತಂತ್ರ್ಯ ನಂತರದಲ್ಲಿ 1952ರ ಕೇಂದ್ರ ಸರ್ಕಾರದ ಅನಂತ ಶಯನಂ ಅಯ್ಯಂಗಾರ್‌ ಸಮಿತಿ ಶಿಫಾರಸ್ಸಿನಂತೆ ಕೊರಮ, ಕೊರಚ, ಭೋವಿ, ಲಂಬಾಣಿ ಸಮುದಾಯಗಳನ್ನು ವಿಮುಕ್ತ ಸಮುದಾಯಗಳು ಎಂದು ಭಾರತ ಸರ್ಕಾರ ಅಧಿಕೃತವಾಗಿ ಮತ್ತು ಕಾನೂನುಬದ್ಧವಾಗಿ ಗುರುತಿಸಿದೆ’ ಎಂದು ತಿಳಿಸಿದ್ದಾರೆ.

ರಾಜ್ಯದ ಪರಿಶಿಷ್ಟ ಜಾತಿಯಲ್ಲಿ ಬರುವ ಕೊರಮ, ಕೊರಚ, ಭೋವಿ ಸಮುದಾಯಗಳು ಸ್ಪೃಶ್ಯರಲ್ಲ. ಇದು ಅಸಂವಿಧಾನಿಕ ಪದ ಪ್ರಯೋಗವಾಗಿದೆ. ಮೀಸಲಾತಿ ಉಪ–ವರ್ಗೀಕರಣದ ಕಡತದಿಂದ ‘ಸ್ಪೃಶ್ಯ’ ಎಂಬ ಪದ ತೆಗೆದು ವಿಮುಕ್ತ ಜಾತಿಗಳು ಅಥವಾ ವಿಮುಕ್ತ ಸಮುದಾಯಗಳು ಎಂಬ ಪದ ಸೇರಿಸಬೇಕು ಎಂದು ಒತ್ತಾಯಿಸಿದ್ದಾರೆ.

ADVERTISEMENT

‘ಭೋವಿ, ಬಂಜಾರ, ಕೊರಮ, ಕೊರಚ ಜಾತಿಗಳು ಶೇ 5 ಮತ್ತು ಅಲೆಮಾರಿಗಳು ಶೇ 1ರಷ್ಟು ಜನಸಂಖ್ಯೆ ಇರುವುದರಿಂದ, 6 ಕೋಟಿ ಜನಸಂಖ್ಯೆಯಲ್ಲಿ 1 ಕೋಟಿ 8 ಲಕ್ಷ ಜನಸಂಖ್ಯೆ ಅಂದರೆ ಶೇ 18ರಷ್ಟು ಪರಿಶಿಷ್ಟ ಜಾತಿ ಜನಸಂಖ್ಯೆ ಇದೆ. ಜನಸಂಖ್ಯಾ ಅನುಗುಣವಾಗಿ ಶೇ 17ರ ಬದಲು ಶೇ 18ರಷ್ಟು ಮೀಸಲಾತಿ ಹೆಚ್ಚಿಸಬೇಕು’ ಎಂದು ಮನವಿ ಮಾಡಿದ್ದಾರೆ.

‘ನ್ಯಾ. ನಾಗಮೋಹನ ದಾಸ್‌ ವರದಿ ಪ್ರಕಾರ ಭೋವಿ, ಬಂಜಾರ, ಕೊರಮ, ಕೊರಚ ಅಲೆಮಾರಿ ಸಮುದಾಯಗಳೇ ಹೆಚ್ಚಿನ ಮೀಸಲಾತಿ ವಂಚಿತ ಸಮುದಾಯಗಳು ಎಂದು ಗುರುತಿಸಿದೆ. ಈ ಕಾರಣದಿಂದ ಮೀಸಲಾತಿ ಬಿಂದುಗಳು ರಚಿಸುವಾಗ ಮೊದಲನೇ ಆದ್ಯತೆ ಈ ಗುಂಪಿಗೆ ನೀಡಬೇಕು. ಪರಿಶಿಷ್ಟ ಜಾತಿಗಳಲ್ಲಿನ ಚಲನಶೀಲತೆ ಹಾಗೂ ಲಭ್ಯವಾಗುವ ದತ್ತಾಂಶ ಪರಿಶೀಲಿಸಿಕೊಂಡು, ಕಾಲಕಾಲಕ್ಕೆ ಈ ಜಾತಿಗಳನ್ನು ಅಧ್ಯಯನ ಮಾಡಿ ವರದಿ ನೀಡಲು ಶಾಶ್ವತ ಪರಿಶಿಷ್ಟ ಜಾತಿಗಳ ಆಯೋಗವನ್ನು ರಚಿಸಲು ಸರ್ಕಾರವು ತೀರ್ಮಾನಿಸಿರುವುದು ಸ್ವಾಗತಾರ್ಹ ಬೆಳವಣಿಗೆ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.