ADVERTISEMENT

ವಾಟ್ಸ್‌ಆ್ಯಪ್‌ನಲ್ಲೇ ಬಗೆಹರಿಯಲಿದೆ ವ್ಯಾಜ್ಯ

ಸೆ.19ರಂದು ನಡೆಯಲಿದೆ ಇ–ಲೋಕ ಅದಾಲತ್‌

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2020, 16:35 IST
Last Updated 10 ಸೆಪ್ಟೆಂಬರ್ 2020, 16:35 IST
   

ಚಿತ್ರದುರ್ಗ: ನ್ಯಾಯಾಲಯಕ್ಕೆ ಅಲೆದು ಸಾಕಾಗಿದೆ ಎಂಬ ಕೊರಗು ಕಾಡುತ್ತಿದೆಯೇ? ಪ್ರಕರಣ ಬಗೆಹರಿಸಿಕೊಳ್ಳುವ ಇಚ್ಛೆ ಇದ್ದರೆ ಕಾನೂನು ಸೇವಾ ಪ್ರಾಧಿಕಾರಕ್ಕೆ ವ್ಯಾಟ್ಸ್‌ಆ್ಯಪ್‌ನಲ್ಲಿ ದಾಖಲೆ ಕಳುಹಿಸಿ ಸಮ್ಮತಿ ಸೂಚಿಸಿ. ಸೆ.19ರಂದು ನಡೆಯಲಿರುವ ಮೆಗಾ ಇ–ಲೋಕ ಅದಾಲತ್‌ನಲ್ಲಿ ವ್ಯಾಜ್ಯ ಬಗೆಹರಿಯಲಿದೆ.

ರಾಜ್ಯ ಕಾನೂನು ಸೇವಾ ಪ್ರಾಧಿಕಾರ ಕಕ್ಷಿದಾರರಿಗೆ ಇಂತಹದೊಂದು ಅವಕಾಶ ಕಲ್ಪಿಸಿದೆ. ಕೊರೊನಾ ಸೋಂಕಿನ ಕಾರಣಕ್ಕೆ ಅದಾಲತ್‌ನ ಸ್ವರೂಪ ಬದಲಿಸಲಾಗಿದೆ. ಇ–ಮೇಲ್‌, ದೂರವಾಣಿ ಕರೆ, ವಾಟ್ಸ್‌ಆ್ಯಪ್‌, ಎಸ್‌ಎಂಎಸ್‌ ಮೂಲಕವೂ ವ್ಯಾಜ್ಯಗಳನ್ನು ಬಗೆಹರಿಸಿಕೊಳ್ಳಲು ಸಾಧ್ಯವಿದೆ.

‘ರಾಜಿ ಮಾಡಿಕೊಳ್ಳಲು ಸಾಧ್ಯವಿರುವ ಪ್ರಕರಣಗಳನ್ನು ಅದಾಲತ್‌ನಲ್ಲಿ ಇತ್ಯರ್ಥಪಡಿಸಲು ಸಾಧ್ಯವಿದೆ. ಕಕ್ಷಿದಾರರು ನೇರವಾಗಿ ಅದಾಲತ್‌ನಲ್ಲಿ ಪಾಲ್ಗೊಳ್ಳಲು ಅವಕಾಶವಿಲ್ಲ. ಪ್ರಾಧಿಕಾರದ ದೂರವಾಣಿ ಸಂಖ್ಯೆ 08194–222322ಸಂಪರ್ಕಿಸಿದರೆ ವಾಟ್ಸ್‌ಆ್ಯಪ್‌ ಸಂಖ್ಯೆ ಹಾಗೂ ಇ–ಮೇಲ್‌ ವಿಳಾಸ ಸಿಗಲಿದೆ. ವಿಡಿಯೊ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಲಾಗುತ್ತದೆ’ ಎಂದು ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಕೆ.ಗಿರೀಶ್‌ ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ADVERTISEMENT

ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಬಸವರಾಜ ಎಸ್‌.ಚೇಗಾರೆಡ್ಡಿ ಮಾತನಾಡಿ, ‘15,090 ಸಿವಿಲ್ ಹಾಗೂ 15,952 ಕ್ರಿವಿನಲ್ ಸೇರಿ ಜಿಲ್ಲೆಯಲ್ಲಿ 31,042 ಪ್ರಕರಣಗಳು ವಿಚಾರಣೆಗೆ ಬಾಕಿ ಇವೆ. ಲೋಕ ಅದಾಲತ್‍ನಲ್ಲಿ 4,087 ಪ್ರಕರಣಗಳನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಲಾಗಿದೆ. ರಾಜಿ ಮಾಡಿಕೊಳ್ಳಬಹುದಾದ ಅಪರಾಧಿಕ ಪ್ರಕರಣ, ಚೆಕ್‌ಬೌನ್ಸ್‌, ಬ್ಯಾಂಕ್‌ ಪ್ರಕರಣ, ಹಣವಸೂಲಿ, ಅಪಘಾತ, ಜೀವನಾಂಶ, ವಿದ್ಯುತ್‌ ಸಂಬಂಧಿತ ವ್ಯಾಜ್ಯ, ಕಾರ್ಮಿಕ, ಸಿವಿಲ್‌ ಸೇರಿ ಹಲವು ಬಗೆಯ ಪ್ರಕರಣಗಳನ್ನು ಅದಾಲತ್‌ಗೆ ಶಿಫಾರಸು ಮಾಡಲಾಗಿದೆ. ಆಸಕ್ತರು ಪ್ರಾಧಿಕಾರ ಸಂಪರ್ಕಿಸಬಹುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.