ADVERTISEMENT

ಒಳಮೀಸಲಾತಿ ಪಡೆಯಲು ಜಾತಿ ಘೋಷಣೆ ಕಡ್ಡಾಯ; ಎಚ್‌. ಆಂಜನೇಯ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2025, 7:39 IST
Last Updated 10 ಅಕ್ಟೋಬರ್ 2025, 7:39 IST
<div class="paragraphs"><p>ಎಚ್‌.ಆಂಜನೇಯ</p></div>

ಎಚ್‌.ಆಂಜನೇಯ

   

ಚಿತ್ರದುರ್ಗ: ‘ಪರಿಶಿಷ್ಟ ಜಾತಿ ಸಮೀಕ್ಷೆಯಲ್ಲಿ ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ ಎಂದು ಬರೆಸಿರುವವರು ಒಳಮೀಸಲಾತಿಯ ಲಾಭ ಪಡೆಯಲು ಕಡ್ಡಾಯವಾಗಿ ಜಾತಿ ಘೋಷಣೆ ಮಾಡಿಕೊಳ್ಳಬೇಕಿದೆ. ಹೊಲೆಯ– ಮಾದಿಗ ಸಮುದಾಯದವರು ಅದಲು–ಬದಲಾಗದಂತೆ ಎಚ್ಚರಿಕೆ ವಹಿಸಬೇಕಾಗಿದೆ’ ಎಂದು ಕೆಪಿಸಿಸಿ ಉಪಾಧ್ಯಕ್ಷ ಎಚ್‌.ಆಂಜನೇಯ ಹೇಳಿದರು.

‘ಜಾತಿ ಸೂಚಕ ವರ್ಗದಲ್ಲಿ ಎಕೆ, ಎಡಿ, ಎಎ ಎಂದು ಗುರುತಿಸಿಕೊಂಡವರು ‘ಎ’ ಅಥವಾ ‘ಬಿ’ ಗುಂಪಿನಲ್ಲಿ ಗುರುತಿಸಿಕೊಳ್ಳಬೇಕಾಗಿದೆ. ಈ ಪ್ರಕ್ರಿಯೆಯಲ್ಲಿ ಬೇರೆಯವರು ಕಳ್ಳದಾರಿಯಲ್ಲಿ ನಮ್ಮ ‘ಬಿ’ ಗುಂಪಿಗೆ ಪ್ರವೇಶಿಸಿದರೆ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಅವರಿಗೆ ಶಿಕ್ಷೆಯಾಗುವವರೆಗೂ ಹೋರಾಟ ನಡೆಸುತ್ತೇವೆ’ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದರು.

ADVERTISEMENT

‘ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಬದ್ಧತೆಯಿಂದ ಶೈಕ್ಷಣಿಕ ಹಾಗೂ ಸಾಮಾಜಿಕ ಸಮೀಕ್ಷೆ ನಡೆಸುತ್ತಿದೆ. ಈ ಸಮೀಕ್ಷೆಯು ರಾಜ್ಯದ ಪ್ರಗತಿಗೆ ದಾರಿ ಮಾಡಿಕೊಡಲಿದೆ. ಯಾರೊಬ್ಬರೂ ಅಪಸ್ವರ ಮಾಡದೇ ಪಾಲ್ಗೊಳ್ಳಬೇಕು. ಯಾವುದೇ ರಾಜ್ಯ ಅಭಿವೃದ್ಧಿ ಕಾಣಬೇಕಾದರೆ ಅಲ್ಲಿನ ಜನರ ಸ್ಥಿತಿಗತಿ ಅರಿತುಕೊಳ್ಳಬೇಕು. ಸಮುದಾಯಗಳ ಜನಸಂಖ್ಯೆ, ಹಿಂದುಳಿದಿರುವಿಕೆ ಮಾಹಿತಿಯ ಅಗತ್ಯವಿದೆ. ಅ. 18ರವರೆಗೆ ಸಮೀಕ್ಷೆ ವಿಸ್ತರಣೆ ಮಾಡಿರುವುದು ಉತ್ತಮ ನಡೆಯಾಗಿದೆ’ ಎಂದರು.

‘ಕೆಲ ಸಂಘಟನೆಗಳು ಎಚ್.ಸಿ.ಮಹಾದೇವಪ್ಪ ಸೇರಿ ವಿವಿಧ ಮಂತ್ರಿಗಳ ಮನೆಗಳಿಗೆ ಮುತ್ತಿಗೆ ಹಾಕುವುದಾಗಿ ಹೇಳುತ್ತಿರುವುದು ಸರಿಯಲ್ಲ. ಈ ಹಿಂದೆ ಕಾಂತರಾಜ್ ಆಯೋಗ ವೈಜ್ಞಾನಿಕ ವರದಿ ನೀಡಿತ್ತು. ಆದರೆ, 10 ವರ್ಷ ಹಳೆಯದ್ದಾಗಿದೆ ಎಂಬ ಆರೋಪ ಕೇಳಿಬಂದ ಕಾರಣ ಮತ್ತೊಮ್ಮೆ ಸಮೀಕ್ಷೆ ನಡೆಯುತ್ತಿದೆ. ಈ ಕಾರ್ಯಕ್ಕೆ ಆರಂಭದಲ್ಲಿ ಕೆಲವರು ವಿರೋಧ ವ್ಯಕ್ತಪಡಿಸಿದ್ದರು. ಆದರೆ, ಈಗ ವಾಸ್ತವತೆ ಅರಿತು ಎಲ್ಲರೂ ಪಾಲ್ಗೊಳ್ಳುತ್ತಿರುವುದು ಸ್ವಾಗತರ್ಹ ನಡೆ’ ಎಂದರು.

‘ದಕ್ಷಿಣ ಕನ್ನಡ ಭಾಗದಲ್ಲಿ ಎಡಿ ಜಾತಿ ಸೂಚಕ ಜನರನ್ನು ಬಿ ಗುಂಪಿನಲ್ಲಿ ಗುರುತಿಸಲಾಗಿದೆ. ಒಳಮೀಸಲಾತಿ ವಿಷಯದಲ್ಲಿ ಯಾವುದೇ ಗೊಂದಲಗಳು ಇಲ್ಲ. ಅನಗತ್ಯವಾಗಿ ಸುಳ್ಳು ವದಂತಿಗಳಿಗೆ ಕಿವಿಗೊಡದೆ ಮೀಸಲು ಸೌಲಭ್ಯ ಸದ್ಬಳಕೆ ಮಾಡಿಕೊಳ್ಳಲು ಮುಂದಾಗಬೇಕು. ಮಕ್ಕಳನ್ನು ಶಿಕ್ಷಣವಂತರನ್ನಾಗಿಸಿ, ಉದ್ಯೋಗಸ್ಥರನ್ನಾಗಿ ಮಾಡಲು ಶ್ರಮಿಸಬೇಕು’ ಎಂದರು.

‘ಕಾಡುಗೊಲ್ಲರು ಈಗ ಜಾಗೃತಗೊಂಡಿದ್ದು, ಅವರು ಜಾತಿ ಕಲಂನಲ್ಲಿ ಕಾಡುಗೊಲ್ಲ ಎಂದೇ ಬರೆಸುವಂತೆ ಜಾಗೃತಿ ಮೂಡಿಸುತ್ತಿದ್ದಾರೆ. ಅವರ ಈ ಕಾರ್ಯ ಸ್ವಾಗತರ್ಹ. ಸಮೀಕ್ಷೆ ಕಾರ್ಯದಲ್ಲಿ ಸಮುದಾಯಗಳ ಪ್ರತಿಯೊಬ್ಬ ವ್ಯಕ್ತಿಯೂ ಪಾಲ್ಗೊಳ್ಳಬೇಕು. ಹಳ್ಳಿ, ಕೊಳೆಗೇರಿ, ಮಾದಿಗರ ಹಟ್ಟಿಗಳಿಗೆ ತೆರಳಿ ಜಾಗೃತಿ ಮೂಡಿಸಬೇಕು’ ಎಂದರು.

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಗೀತಾ ನಂದಿನಿಗೌಡ, ಮಾಜಿ ಸದಸ್ಯ ಆರ್.ನರಸಿಂಹರಾಜು, ಲಿಡ್ಕರ್ ಮಾಜಿ ಅಧ್ಯಕ್ಷ ಒ.ಶಂಕರ್, ವಕೀಲರಾದ ಶರಣಪ್ಪ, ಸಿ.ಎಸ್.ರವೀಂದ್ರ, ಅನಿಲ್ ಕೋಟಿ, ಚೇತನ್ ಎಚ್.ಬೋರೇನಹಳ್ಳಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.