ADVERTISEMENT

ಚಿತ್ರದುರ್ಗ: ಜಿಲ್ಲೆಯ ವಿವಿಧೆಡೆ ಸಂಭ್ರಮದ ಗಣೇಶೋತ್ಸವ

ಎಲ್ಲೆಡೆ ಹಬ್ಬದ ಸಡಗರ; ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಗಮನ ಸೆಳೆಯುತ್ತಿವೆ ಲಂಬೋದರನ ಮೂರ್ತಿಗಳು

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2022, 4:36 IST
Last Updated 2 ಸೆಪ್ಟೆಂಬರ್ 2022, 4:36 IST
ಚಿತ್ರ 1. ಚಿತ್ರದುರ್ಗದ ಜೈನಧಾಮದಲ್ಲಿ ವಿಶ್ವ ಹಿಂದೂ ಪರಿಷತ್‌, ಬಜರಂಗದಳದಿಂದ ವೀರ ಸಾವರ್ಕರ್‌ ಮಂಟಪದಲ್ಲಿ ಪ್ರತಿಷ್ಠಾಪಿಸಿರುವ ಹಿಂದೂ ಮಹಾಗಣಪತಿ. ಚಿತ್ರ 2. ಬಸವ ಮಂಟಪದ ದರ್ಬಾರ್‌ ಗಣಪತಿ ಚಿತ್ರ 3.ವಿನಾಯಕ ಗೆಳೆಯರ ಬಳಗದ ಐದು ಹೆಡೆ ಸರ್ಪದ ಶಿವಸ್ವರೂಪಿ ಗಣಪ. ಚಿತ್ರ 4. ಏಕನಾಥೇಶ್ವರಿ ಪಾದಗುಡಿಯ ಸರ್ಕಲ್ ಅಡ್ಡ ಬಳಗದ ಪಂಚಮುಖಿ ಆಂಜನೇಯ ಗಣಪ
ಚಿತ್ರ 1. ಚಿತ್ರದುರ್ಗದ ಜೈನಧಾಮದಲ್ಲಿ ವಿಶ್ವ ಹಿಂದೂ ಪರಿಷತ್‌, ಬಜರಂಗದಳದಿಂದ ವೀರ ಸಾವರ್ಕರ್‌ ಮಂಟಪದಲ್ಲಿ ಪ್ರತಿಷ್ಠಾಪಿಸಿರುವ ಹಿಂದೂ ಮಹಾಗಣಪತಿ. ಚಿತ್ರ 2. ಬಸವ ಮಂಟಪದ ದರ್ಬಾರ್‌ ಗಣಪತಿ ಚಿತ್ರ 3.ವಿನಾಯಕ ಗೆಳೆಯರ ಬಳಗದ ಐದು ಹೆಡೆ ಸರ್ಪದ ಶಿವಸ್ವರೂಪಿ ಗಣಪ. ಚಿತ್ರ 4. ಏಕನಾಥೇಶ್ವರಿ ಪಾದಗುಡಿಯ ಸರ್ಕಲ್ ಅಡ್ಡ ಬಳಗದ ಪಂಚಮುಖಿ ಆಂಜನೇಯ ಗಣಪ   

ಚಿತ್ರದುರ್ಗ: ಕೋವಿಡ್‌ನಿಂದಾಗಿ ಎರಡು ವರ್ಷಗಳಿಂದ ಕಳೆಗುಂದಿದ್ದ ಗಣೇಶೋತ್ಸವವನ್ನು ಈ ಬಾರಿ ಸಂಭ್ರಮದಿಂದ ಆಚರಿಸಲಾಯಿತು. ಜಿಲ್ಲೆಯಾದ್ಯಂತ ಬುಧವಾರ ಹಬ್ಬದ ಸಡಗರ ಮನೆ ಮಾಡಿತ್ತು. ಏಕದಂತನನ್ನು ಭಕ್ತರು ಮನೆ, ದೇಗುಲ, ಮಂಟಪಗಳಲ್ಲಿ ಪ್ರತಿಷ್ಠಾಪಿಸಿ ಪೂಜಿಸಿದರು.

ನಗರದಲ್ಲಿ ಸಾವಿರಾರು ಭಕ್ತರು ಮನೆಗಳಲ್ಲಿ ಗಣಪನನ್ನು ಪ್ರತಿಷ್ಠಾಪಿಸಿದ್ದರು. ಮುಂಜಾನೆಯಿಂದಲೇ ಆರಂಭವಾದ ಪೂಜಾ ಕಾರ್ಯಗಳು ನಿರಂತರವಾಗಿ ಸಾಗಿದವು. ಮನೆಗಳಲ್ಲಿ ಸಿದ್ಧಪಡಿಸಿದ್ದ ಅಡುಗೆಗಳನ್ನು ಎಡೆಯಾಗಿ ಸಮರ್ಪಿಸಿದರು. ಬಹುತೇಕರು ರಾತ್ರಿ ಆಗುತ್ತಿದ್ದಂತೆ ನಗರಸಭೆಯಿಂದ ವಿವಿಧೆಡೆ ನಿರ್ಮಿಸಿದ್ದ ಚಿಕ್ಕ ತೊಟ್ಟಿಗಳಲ್ಲಿ ಗಣೇಶಮೂರ್ತಿಗಳನ್ನು ವಿಸರ್ಜಿಸಿದರು.

ಸಿಂಹಾರೂಢ ಭಂಗಿಯಲ್ಲಿ ಆನೆಬಾಗಿಲ ಬಳಿಯ ಪ್ರಸನ್ನ ಗಣಪತಿ, ಬುರುಜನಹಟ್ಟಿಯ ಸಿದ್ದಲಿಂಗೇಶ್ವರ ಸ್ವಾಮಿ ದೇವಸ್ಥಾನದಲ್ಲಿನ ಹೂವಿನ ಮೇಲಿನ ಚಿಟ್ಟೆ ಗಣಪತಿ, ಏಕನಾಥೇಶ್ವರಿ ಪಾದಗುಡಿಯ ಏಕನಾಥೇಶ್ವರಿ ಗ್ರೂಪ್ಸ್‌ ಸರ್ಕಲ್‌ ಅಡ್ಡ ಬಳಗದ ಪಂಚಮುಖಿ ಆಂಜನೇಯ ಗಣಪತಿ, ಬಸವ ಮಂಟಪದಲ್ಲಿ ದರ್ಬಾರ್‌ ಗಣಪ, ಸೊಪ್ಪಿನವರ ಬೀದಿಯ ವಿನಾಯಕ ಗೆಳೆ‌ಯರ ಬಳಗದ ಗಲಾಟೆ ಗಣಪತಿ, ಸಿಹಿನೀರು ಹೊಂಡದ ಬಾಗಿಲಿನ ಬನಶಂಕರಿ ಕ್ರೀಡಾ ಕ್ಲಬ್‌ನ ವಿನಾಯಕ ಸೇವಾ ಸಮಿತಿಯ ದರ್ಬಾರ್‌ ಗಣಪ, ಪತ್ರಿಕಾ ಭವನದಲ್ಲಿನ ಪರಿಸರ ಗಣಪ ಸೇರಿದಂತೆ ಮತ್ತಿತರ ಸ್ವರೂಪಿಯ ಗಣೇಶಗಳನ್ನು ಕೂರಿಸಿ ಪೂಜಿಸಲಾಗುತ್ತಿದೆ.

ADVERTISEMENT

ಉಳಿದಂತೆ ಜೋಗಿಮಟ್ಟಿ ರಸ್ತೆ, ಜಿಲ್ಲಾ ಕ್ರೀಡಾಂಗಣ ರಸ್ತೆ, ಚಿಕ್ಕಪೇಟೆ, ಕೋಟೆ ರಸ್ತೆ, ಜೆಸಿಆರ್, ಹೊಳಲ್ಕೆರೆ ರಸ್ತೆ, ಗಾರೇಹಟ್ಟಿ, ಮುನ್ಸಿಪಲ್ ಕಾಲೊನಿ ಸೇರಿದಂತೆ ಅನೇಕ ಬಡಾವಣೆಗಳಲ್ಲಿ ಗಣೇಶನನ್ನು ಸಾರ್ವಜನಿಕವಾಗಿ ಪ್ರತಿಷ್ಠಾಪಿಸಲಾಗಿದೆ.

ಕೋಟೆಯ ಮೇಲುದುರ್ಗದಲ್ಲಿನ ಬೆಟ್ಟದ ಗಣಪತಿ ದೇಗುಲದಲ್ಲಿ ಮುಂಜಾನೆಯಿಂದಲೇ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು. ಪ್ರಸನ್ನ ಗಣಪತಿ, ಮದಕರಿ ಗಣಪತಿ, ಜೆಸಿಆರ್ ಬಡಾವಣೆ, ಪಿ ಅಂಡ್‌ ಟಿ ಕ್ವಾರ್ಟರ್ಸ್‌ನ ಸಂಕಷ್ಟಹರ ಗಣಪತಿ ದೇವಸ್ಥಾನಗಳಲ್ಲಿ ವಿಶೇಷ ಅಲಂಕಾರಗಳು ನೆರವೇರಿದವು. ನೂರಾರು ಭಕ್ತರು ದರ್ಶನ ಪಡೆದು ಭಕ್ತಿ ಸಮರ್ಪಿಸಿದರು.

ಉತ್ಸವ ಸಮಿತಿಯವರಲ್ಲಿ ಕಳೆಗುಂದಿದ್ದ ಉತ್ಸಾಹ ಮರುಕಳಿಸಿದೆ. ಪ್ರತಿಷ್ಠಾಪನೆ ವೇಳೆ ಅದ್ದೂರಿಯಾಗಿ ಟ್ರ್ಯಾಕ್ಟರ್‌, ಆಪೆ ವಾಹನಗಳಲ್ಲಿ ಗಣೇಶನನ್ನು ಕೂರಿಸಿ ಮೆರವಣಿಗೆ ನಡೆಸಿದರು.

ಆಕರ್ಷಿಸುತ್ತಿದೆ ಹಿಂದೂ ಮಹಾಗಣಪತಿ

ಗಣೇಶ ಚತುರ್ಥಿ ಅಂಗವಾಗಿ ಜೈನಧಾಮದಲ್ಲಿ ವಿಶ್ವ ಹಿಂದೂ ಪರಿಷತ್‌, ಬಜರಂಗದಳದಿಂದ ವೀರ ಸಾವರ್ಕರ್‌ ಮಂಟಪದಲ್ಲಿ ಪ್ರತಿಷ್ಠಾಪಿಸಿರುವ ಹಿಂದೂ ಮಹಾಗಣಪತಿಗೆ ಭಕ್ತರು ಪೂಜೆ ಸಲ್ಲಿಸಿದರು.

ಕೆಂಪು ವರ್ಣದ ಕಚ್ಚೆಪಂಚೆ ತೊಟ್ಟು, ಒಂದು ಕೈಯಲ್ಲಿ ಬಿಲ್ಲು, ಇನ್ನೊಂದು ಕೈಯಲ್ಲಿ ಬಾಣ, ಮತ್ತೊಂದು ಕೈಯಲ್ಲಿ ಖಡ್ಗ ಹಿಡಿದು ಭಕ್ತರಿಗೆ ಅಭಯ ನೀಡುತ್ತಿರುವ ಭಂಗಿಯಲ್ಲಿರುವ ಮಹಾಗಣಪತಿಯನ್ನು ಸಾವಿರಾರು ಭಕ್ತರು ಕಣ್ತುಂಬಿಕೊಂಡರು. ವೈಭವಯುತವಾದ ಮಂಟಪ ಹಾಗೂ ವಿದ್ಯುತ್ ದೀಪಾಲಂಕಾರ ಆಕರ್ಷಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.