
ಚಳ್ಳಕೆರೆ: ಕಾರ್ಮಿಕ ಸಂಹಿತೆಗಳ ಅಧಿಸೂಚನೆ ವಿರೋಧಿಸಿ ಸಿಐಟಿಯು ತಾಲ್ಲೂಕು ಘಟಕದ ಕಾರ್ಯಕರ್ತರು ಕೇಂದ್ರ ಸರ್ಕಾರ ಹೊರಡಿಸಿದ ಅಧಿಸೂಚನಾ ಪತ್ರದ ಪ್ರತಿಗಳನ್ನು ಸುಟ್ಟು ಹಾಕುವ ಮೂಲಕ ಬುಧವಾರ ನಗರದ ಪ್ರಮುಖ ಬೀದಿಯಲ್ಲಿ ಪ್ರತಿಭಟನೆ ನಡೆಸಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು.
ಅಸಂಘಟಿತ ಕಾರ್ಮಿಕ ವಿವಿಧ ಮಂಡಳಿಗಳಿಗೆ ಅಯವ್ಯಯದಲ್ಲಿ ಹೆಚ್ಚು ಅನುದಾನ ಮೀಸಲಿಡಬೇಕು. ರಾಜ್ಯದಲ್ಲಿ ಕಾರ್ಖಾನೆ ಕಾಯ್ದೆಗೆ ತಂದಿರುವ ತಿದ್ದುಪಡಿಗಳನ್ನು ಕೂಡಲೇ ರದ್ದುಪಡಿಸಬೇಕು. ಕಾರ್ಮಿಕ ಮಸೂಧೆಯನ್ನು ಜಾರಿಗೊಳಿಸುವ ಮೂಲಕ ದೇಶದ ಕಾರ್ಮಿಕರನ್ನು ವಂಚಿಸುವ ಕೆಲಸ ಮಾಡುತ್ತಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಸಿಐಟಿಯುಸಿ ತಾಲ್ಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಟಿ.ತಿಪ್ಪೇಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ಕನಿಷ್ಠ ವೇತನದ ಮಂಡಳಿ ಶಿಫಾರಸ್ಸು ಮಾಡಿರುವ ಕರಡು ಅಧಿಸೂಚನೆ ಅಂತಿಮಗೊಳಿಸಬೇಕು. ಅಂಗನವಾಡಿ, ಬಿಸಿಯೂಟ ಮತ್ತು ಆಶಾ ಕಾರ್ಯಕರ್ತೆಯರಿಗೆ ಕನಿಷ್ಠ ವೇತನ ಜಾರಿ ಮಾಡಬೇಕು. ಅಸಂಘಟಿತ ವಲಯದಲ್ಲಿ ದುಡಿಯುತ್ತಿರುವ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ, ಔಧ್ಯೋಗಿಕ ಸುರಕ್ಷತೆ, ಆರೋಗ್ಯ ವಿಮಾ ಸೌಲಭ್ಯ ಒದಗಿಸಬೇಕು ಎಂದು ತಾಲ್ಲೂಕು ಘಟಕದ ಅಧ್ಯಕ್ಷ ಟಿ. ನಿಂಗಣ್ಣ ಮನವಿ ಮಾಡಿದರು.
ಹಮಾಲಿ ಕಾರ್ಮಿಕ ಮುಖಂಡ ಎಚ್.ಓ. ನಾಗರಾಜ, ಕೆ.ನಾಗರಾಜ, ಎಸ್.ರಾಜಣ್ಣ ಮಾತನಾಡಿದರು.
ಸ್ವೀಕರಿಸಿದ ಮನವಿಯನ್ನು ಸರ್ಕಾರಕ್ಕೆ ಕಳುಹಿಸಿಕೊಡುವುದಾಗಿ ತಹಶೀಲ್ದಾರ್ ರೇಹಾನ್‍ಪಾಷ ಭರವಸೆ ನೀಡಿದರು.
ಕಾರ್ಮಿಕ ಪಿ.ಸತೀಶ್, ಪಿ.ನಾಗೇಶ್, ವೆಂಕಟೇಶ್, ಚನ್ನಕೇಶವಮೂರ್ತಿ, ಬೋರಯ್ಯ, ನಾಗರಾಜ, ಮಂಜುನಾಥ, ರಂಗಸ್ವಾಮಿ, ಪಾಲಯ್ಯ, ಗಂಗಣ್ಣ ಇದ್ದರು.