ಚಳ್ಳಕೆರೆ: ಮುಂಗಾರು ಹಂಗಾಮಿನ ಶೇಂಗಾ, ಈರುಳ್ಳಿ ಬೆಳೆ ವಿಫಲವಾಗಿವೆ. ಕೂಡಲೇ ಬೆಳೆನಷ್ಟ ಪರಿಹಾರ ಘೋಷಣೆ ಮಾಡಬೇಕು ಎಂದು ಆಗ್ರಹಿಸಿ ರೈತ ಸಂಘದ ತಾಲ್ಲೂಕು ಘಟಕದ ಕಾರ್ಯಕರ್ತರು ಸೋಮವಾರ ನಗರದ ಪ್ರಮುಖ ಬೀದಿಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಶೇಂಗಾ ಬೆಳೆಗೆ ಕರಿಜೀಡಿಗೆ ಹಾಗೂ ಬೆಂಕಿ ರೋಗ ಹರಡಿದೆ. ತೇವಾಂಶ ಹೆಚ್ಚಳದಿಂದ ಈರುಳ್ಳಿ ಬೆಳೆ ವಿಫಲವಾಗಿದೆ. ತೋಟಗಾರಿಕೆ, ಕೃಷಿ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಜಂಟಿ ಬೆಳೆ ಸಮೀಕ್ಷೆ ನಡೆಸಿ, ಸರ್ಕಾರಕ್ಕೆ ವರದಿ ಕಳುಹಿಸಿ ಪರಿಹಾರ ಕೊಡಿಸಬೇಕು ಎಂದು ರಾಜ್ಯ ಘಟಕದ ಉಪಾಧ್ಯಕ್ಷ ಕೆ.ಪಿ.ಭೂತಯ್ಯ ಒತ್ತಾಯಿಸಿದರು.
ಬೆಳೆನಷ್ಟ ಪರಿಹಾರಕ್ಕೆ ವಿಶೇಷ ಪ್ಯಾಕೇಜ್ ಘೋಷಿಸುವುದಲ್ಲದೇ ಕೂಡಲೇ ಬೆಳೆವಿಮೆ ಪರಿಹಾರದ ಹಣವನ್ನು ಮಂಜೂರು ಮಾಡಿಸಬೇಕು ಎಂದು ತಾಲ್ಲೂಕು ಘಟಕದ ಅಧ್ಯಕ್ಷ ಟಿ.ಹಂಪಣ್ಣ ಮನವಿ ಮಾಡಿದರು.
ಪ್ರತಿ ಹೆಕ್ಟೇರ್ ಈರುಳ್ಳಿಗೆ ₹50,000 ಮತ್ತು ಶೇಂಗಾಕ್ಕೆ ₹25,000 ತಾತ್ಕಾಲಿಕ ಪರಿಹಾರ ನೀಡಬೇಕು. ಬ್ಯಾಂಕ್‌ಗಳು ರೈತರ ಸಾಲ ವಸೂಲಿ ಮಾಡದಂತೆ ತಡೆದು ಅವರ ಹಿತ ಕಾಪಾಡಬೇಕು ಎಂದು ರೈತ ಮುಖಂಡ ಬಿ.ಟಿ.ನಾರಾಯಣಪ್ಪ ಒತ್ತಾಯಿಸಿದರು.
ರೈತ ಮುಖಂಡ ಟಿ.ಹನುಮಂತರೆಡ್ಡಿ, ಆರ್.ರಾಜಣ್ಣ, ರುದ್ರಪ್ಪ, ರಾಮಣ್ಣ, ವಿ.ಶ್ರೀನಿವಾಸರೆಡ್ಡಿ, ಎಚ್.ರಾಚಂದ್ರಪ್ಪ, ತಿಮ್ಮಣ್ಣ, ಕೆ.ಪಿ.ಹನುಮಂತರಾಯ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.