ADVERTISEMENT

ಸೌಲಭ್ಯ ಮರೀಚಿಕೆ: ಸೊರಗುತ್ತಿದೆ ಚಳ್ಳಕೆರೆ ಹೈಟೆಕ್‌ ಬಸ್‌ ನಿಲ್ದಾಣ

ನಿರ್ವಹಣೆಯ ಕೊರತೆಯಿಂದ ಸೊರಗಿದ ಚಳ್ಳಕೆರೆ ನಿಲ್ದಾಣ

ಶಿವಗಂಗಾ ಚಿತ್ತಯ್ಯ
Published 30 ಆಗಸ್ಟ್ 2022, 4:18 IST
Last Updated 30 ಆಗಸ್ಟ್ 2022, 4:18 IST
ಮೂಲ ಸೌಲಭ್ಯದಿಂದ ವಂಚಿತವಾದ ಚಳ್ಳಕೆರೆಯ ಕೆಎಸ್ಆರ್‌ಟಿಸಿ ಹೈಟೆಕ್ ಬಸ್ ನಿಲ್ದಾಣ
ಮೂಲ ಸೌಲಭ್ಯದಿಂದ ವಂಚಿತವಾದ ಚಳ್ಳಕೆರೆಯ ಕೆಎಸ್ಆರ್‌ಟಿಸಿ ಹೈಟೆಕ್ ಬಸ್ ನಿಲ್ದಾಣ   

ಚಳ್ಳಕೆರೆ: ಪ್ರಯಾಣಿಕರ ಅನುಕೂಲ ಕ್ಕಾಗಿ 2017ನೇ ಸಾಲಿನಲ್ಲಿ ನಗರದ ಬೆಂಗಳೂರು ರಸ್ತೆಯ ಹಳೇ ಸಂತೆ ಮೈದಾನದ 5 ಎಕರೆ ಪ್ರದೇಶದಲ್ಲಿ ₹ 9 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಹೈಟೆಕ್ ಸರ್ಕಾರಿ ಬಸ್ ನಿಲ್ದಾಣ ನಿರ್ವಹಣೆ ಇಲ್ಲದೆ ಸೊರಗಿದೆ.

ಹಲವು ವರ್ಷಗಳ ಸಮಸ್ಯೆಯನ್ನು ಮನಗಂಡು ಶಾಸಕ ಟಿ. ರಘುಮೂರ್ತಿ ಬಸ್ ನಿಲ್ದಾಣ ಕಲ್ಪಿಸಲು ಮುಂದಾದರು.

ನಗರ ಕ್ಷಿಪ್ರಗತಿಯಲ್ಲಿ ಬೆಳೆಯುತ್ತಿದೆ. ಹೀಗಾಗಿ ದಿನ ದಿನಕ್ಕೂ ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಿದೆ. ಪ್ರಯಾಣಿಕರ ಸಂಖ್ಯೆಗನುಗುಣವಾಗಿ ನಿಲ್ದಾಣದಲ್ಲಿ ಶುದ್ಧ ಕುಡಿಯುವ ನೀರು, ಶೌಚಾಲಯದ ಸೌಲಭ್ಯ ಕಲ್ಪಿಸಿಲ್ಲ. ದೂರದ ಊರುಗಳಿಂದ ಬರುವ ಪ್ರಯಾಣಿಕರು ಶೌಚಕ್ಕೆ ಹೋಗಲು ಚಡಪಡಿಸುತ್ತಿರುತ್ತಾರೆ.

ADVERTISEMENT

ಪ್ರಯಾಣಿಕರಿಗೆ ಕುಡಿಯುವ ನೀರು ಪೂರೈಸಲು ಮಾಜಿ ಸಂಸದ ಬಿ.ಎನ್. ಚಂದ್ರಪ್ಪ ಅವರ ₹ 7 ಲಕ್ಷ ಅನುದಾನದಲ್ಲಿ ನಿರ್ಮಿಸಿದ್ದ ಶುದ್ಧ ಕುಡಿಯುವ ನೀರಿನ ಘಟಕ ನಿರ್ವಹಣೆ ಇಲ್ಲದೇ ಸದಾ ಕೆಟ್ಟು ನಿಲ್ಲುತ್ತದೆ. ದುರಸ್ತಿ ಮಾಡಿಸಿದರೂ ಪ್ರಯಾಣಿಕರಿಗೆ ಪ್ರಯೋಜನವಾಗುವುದಿಲ್ಲ. ಬಾಕ್ಸ್‌ನಲ್ಲಿ ₹ 5 ಕಾಯಿನ್ ಹಾಕಿ ಒಂದು ಕೊಡ ನೀರು ಬಳಸಬಹುದು. ಆದರೆ ಇದು ಪ್ರಯಾಣಿಕರಿಗೆ ಉಪಯೋಗವಾಗುತ್ತಿಲ್ಲ. ಹಣವಂತರು ಕಿರಾಣಿ ಅಂಗಡಿ, ಬೇಕರಿಗಳಲ್ಲಿ ನೀರಿನ ಬಾಟೆಲ್ ಖರೀದಿಸಿ ನೀರು ಕುಡಿಯುತ್ತಾರೆ. ಇಲ್ಲದವರ ಸ್ಥಿತಿಯನ್ನು ಕೇಳುವವರು ಯಾರೂ ಇಲ್ಲ ಎಂಬಂತಾಗಿದೆ.

ಬಸ್‌ ನಿಲ್ದಾಣದಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿಲ್ಲ, ‘ಖಾಸಗಿ ವಾಹನಗಳಿಗೆ ಪ್ರವೇಶವಿಲ್ಲ’ ಎಂಬ ನಾಮಫಲಕ ಕೇವಲ ನೆಪ ಮಾತ್ರವಾಗಿದೆ. ಇಲ್ಲಿ ಖಾಸಗಿ ಬಸ್‌ಗಳು ಬಂದು ನಿಲ್ಲುತ್ತವೆ. ಪೊಲೀಸರನ್ನು ನಿಯೋಜಿಸದ ಕಾರಣ ಕಳ್ಳಕಾಕರ ಹಾವಳಿಯೂ ಹೆಚ್ಚಾಗಿದೆ. ಬಸ್ ನಿಲ್ದಾಣದಲ್ಲೇ ಕಾಲಹರಣ ಮಾಡುವ ಪಡ್ಡೆ ಹುಡುಗರು ವಿದ್ಯಾರ್ಥಿನಿಯರನ್ನು ಹಿಂಬಾಲಿಸುತ್ತಿರುತ್ತಾರೆ. ಹಗಲು ವೇಳೆಯೇ ಪ್ರಯಾಣಿಕರ ಬ್ಯಾಗ್, ಮೊಬೈಲ್, ಹಣ ಕಳವಿನ ಪ್ರಕರಣಗಳು ನಡೆದಿವೆ.

‘ಸ್ವಚ್ಛ ಮಾಡುವವರು ಇಲ್ಲದೇ ನಿಲ್ದಾಣದ ಒಳಗಡೆ ಎಲ್ಲಿ ನೋಡಿದರೂ ಗುಟ್ಕಾ, ಎಲೆ, ಅಡಿಕೆ ಜಗಿದು ಉಗುಳಿರುವುದು ಕಣ್ಣಿಗೆ ರಾಚುತ್ತಿದೆ.
ಪ್ರಯಾಣಿಕರಿಗೆ ಗೊಂದಲವಾಗುವ ಹಾಗೆ ಬಸ್‍ಗಳನ್ನು ಎಲ್ಲೆಂದರಲ್ಲೇ ನಿಲ್ಲಿಸಿರುತ್ತಾರೆ. ಬೆಂಗಳೂರು, ಬಳ್ಳಾರಿ, ಪಾವಗಡ, ಶಿವಮೊಗ್ಗ ಹಾಗೂ ಚಿತ್ರದುರ್ಗ ಮಾರ್ಗದ ಕಡೆಗೆ ಹೋಗುವ ಬಸ್‍ಗಳು ನಿಲ್ದಾಣದ ಒಳಗೆ ಬರುವುದಿಲ್ಲ. ಇದರಿಂದಾಗಿ ಈ ಮಾರ್ಗಗಳ ಕಡೆಗೆ ಹೋಗಲು 2ರಿಂದ 3 ಗಂಟೆ ಕಾದು ಕುಳಿತ ಪ್ರಯಾಣಿಕರು ಸಾರಿಗೆ ಇಲಾಖೆ ಅಧಿಕಾರಿಗಳನ್ನು ಶಪಿಸುತ್ತಿದ್ದಾರೆ.

‘ತಿರುಪತಿ, ಮೈಸೂರು, ಹೈದರಾಬಾದ್, ದಾರವಾಡ, ಹೊಸಪೇಟೆ, ಶಿವಮೊಗ್ಗ ಮುಂತಾದ ನಗರಗಳಿಗೆ ಬಸ್ ಓಡಿಸಬೇಕು. ಬೆಂಗಳೂರು -ಬಳ್ಳಾರಿ ಮಾರ್ಗದ ಎಲ್ಲಾ ಬಸ್‍ಗಳು ಬರುವಂತಾಗಬೇಕಾದರೆ ಬಸ್ ನಿಲ್ದಾಣದಲ್ಲಿ ಸಿಸಿಟಿವಿ ಕ್ಯಾಮೆರಾ, ಒಬ್ಬರು ಕಾನ್ಸ್‌ಟೆಬಲ್‌ ಅನ್ನು ನಿಯೋಜಿಸಬೇಕು’ಎಂದು ರೈತ ಮುಖಂಡ ಕೆ.ಪಿ. ಭೂತಯ್ಯ ಮನವಿ ಮಾಡುತ್ತಾರೆ.

‘ನಿಲ್ದಾಣದ ಸುತ್ತ ಹಾಗೂ ಒಳಗಡೆ ಗುಟ್ಕಾ, ಪಾನ್‍ಪರಾಗ್ ತ್ಯಾಜ್ಯದ ರಾಶಿಯೇ ಬಿದ್ದಿದ್ದು, ಸ್ವಚ್ಛತೆ ಹಾಗೂ ನಿರ್ವಹಣೆಯ ಕಡೆಗೆ ಹೆಚ್ಚು ಗಮನ ಹರಿಸಬೇಕು’ ಎಂಬುದು ಆರ್. ಪ್ರಸನ್ನಕುಮಾರ್ ಅವರ ಆಗ್ರಹ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.