ADVERTISEMENT

ತುಂಬಿ ಹರಿದ ಕರ್ಲಳ್ಳದ ಚೆಕ್‌ ಡ್ಯಾಂಗಳು

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2021, 6:50 IST
Last Updated 25 ಅಕ್ಟೋಬರ್ 2021, 6:50 IST
ಮಳೆಯಿಂದಾಗಿ ಚಿಕ್ಕಜಾಜೂರಿನ ಜಮೀನಿನಲ್ಲಿ ಬೆಳೆದು ನಿಂತಿದ್ದ ರಾಗಿಯ ಪೈರು ನೀರಿನಿಂದ ಆವೃತ್ತವಾಗಿರುವುದು.
ಮಳೆಯಿಂದಾಗಿ ಚಿಕ್ಕಜಾಜೂರಿನ ಜಮೀನಿನಲ್ಲಿ ಬೆಳೆದು ನಿಂತಿದ್ದ ರಾಗಿಯ ಪೈರು ನೀರಿನಿಂದ ಆವೃತ್ತವಾಗಿರುವುದು.   

ಚಿಕ್ಕಜಾಜೂರು: ಶನಿವಾರ ರಾತ್ರಿ ಹಾಗೂ ಭಾನುವಾರ ಮುಂಜಾನೆವರೆಗೆ ಸುರಿದ ಮಳೆಗೆ ಚಿಕ್ಕಜಾಜೂರಿನ ಕರ್ಲಳ್ಳದಲ್ಲಿನ ಚೆಕ್‌ ಡ್ಯಾಂಗಳು ಭರ್ತಿಯಾಗಿದ್ದು, ಸಮೀಪದ ಗುಂಜಿಗನೂರು ಕೆರೆಯೂ ತುಂಬಿದೆ.

ಚಿಕ್ಕಜಾಜೂರು ಸಮೀಪದ ಹನುಮನಕಟ್ಟೆ ಕೆರೆಗೆ ಸಾಕಷ್ಟು ನೀರು ಹರಿದು ಬಂದಿದ್ದು, ಕೆರೆಯಲ್ಲಿನ ತೂಬು ಸಂಪೂರ್ಣವಾಗಿ ಮುಳುಗಡೆಯಾಗಿದೆ. ಕಳೆದ ವಾರ ಸುರಿದ ಮಳೆಗೆ 8 ಅಡಿಗಳಷ್ಟು ನೀರು ಹರಿದು ಬಂದಿತ್ತು. ಈಗ ಕೆರೆ ಸಂಪೂರ್ಣವಾಗಿ ಭರ್ತಿಯಾಗಿದ್ದು, ಗ್ರಾಮಸ್ಥರಲ್ಲಿ ಸಂತಸ ಕಂಡು ಬಂದಿದೆ. ಸಮೀಪದ ಕೇಶವಾಪುರದ ದೊಡ್ಡ ಕೆರೆಗೂ ಸಾಕಷ್ಟು ನೀರು ಹರಿದು ಬಂದಿದೆ.

ತೋಟ ಮತ್ತು ಪೈರುಗಳು ಜಲಾವೃತ:

ADVERTISEMENT

ಮಳೆಯಿಂದಾಗಿ ಸಮೀಪದ ಹನುಮನಕಟ್ಟೆ, ಕೇಶವಾಪುರ, ಚಿಕ್ಕಂದವಾಡಿ, ಚಿಕ್ಕಜಾಜೂರು, ರಂಗವ್ವನಹಳ್ಳಿ, ಕಡೂರು ಮೊದಲಾದ ಗ್ರಾಮಗಳಲ್ಲಿನ ಅಡಿಕೆ, ತೆಂಗಿನ ತೋಟಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರು ನಿಂತಿದೆ. ಬೆಳೆದು ನಿಂತಿರುವ ರಾಗಿ ತೆನೆಗಳು ಸಂಪೂರ್ಣವಾಗಿ ಮುಳುಗಡೆಯಾಗಿದೆ. ಮೆಕ್ಕೆಜೋಳದ ತೆನೆಗಳು ನೆಲಕ್ಕೆ ಬಿದ್ದಿದ್ದು ಮೊಳಕೆಯೊಡೆಯುವ ಭೀತಿ ಎದುರಾಗಿದೆ.

ವ್ಯರ್ಥವಾಗಿ ಹರಿಯುವ ಮಳೆ ನೀರು:

ಚಿಕ್ಕಜಾಜೂರಿನ ಮಾರುತಿ ನಗರ ಬಡಾವಣೆಗಳಲ್ಲಿ ಬಿದ್ದ ಮಳೆಯ ನೀರು ಕೆರೆ ಸೇರಲೆಂದು ಗ್ರಾಮ ಪಂಚಾಯಿತಿಯಿಂದ ಏಳೆಂಟು ವರ್ಷಗಳ ಹಿಂದೆ ರಸ್ತೆಯ ಎರಡೂ ಬದಿಗಳಲ್ಲಿ ನಿರ್ಮಿಸಿದ್ದ ಕಾಲುವೆಯನ್ನು ಮುಚ್ಚಿರುವುದರಿಂದ ನೀರು ವ್ಯರ್ಥವಾಗಿ ಹರಿದುಹೋಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಗ್ರಾಮ ಪಂಚಾಯಿತಿ ಎಚ್ಚೆತ್ತುಕೊಂಡು ಕೆರೆಗೆ ನೀರು ಹರಿಯುವಂತೆ ಮಾಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.