ಚಿತ್ರದುರ್ಗ: ಹೆಚ್ಚುತ್ತಿರುವ ಬಿಸಿಲಿನಲ್ಲಿ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡ ಸಿಬ್ಬಂದಿಗೆ ಚೆಕ್‌ಪೋಸ್ಟ್‌ಗಳಲ್ಲಿ ಬಿಸಿಲ ಧಗೆಯಿಂದ ರಕ್ಷಣೆ ನೀಡಲು ಜಿಲ್ಲೆಯಾದ್ಯಂತ ‘ಪರಿಸರ ಸ್ನೇಹಿ’ ಚಪ್ಪರ ನಿರ್ಮಿಸಲಾಗಿದೆ.
ಪ್ರತಿ ಬಾರಿಯಂತೆ ಶಾಮಿಯಾನದ ಬದಲಿಗೆ ತೆಂಗಿನ ಗರಿಯ ಚಪ್ಪರ ಹಾಕಿ ನೆರಳಿನ ವ್ಯವಸ್ಥೆ ಕಲ್ಪಿಸಲಾಗಿದೆ.
ಚುನಾವಣಾ ಅಕ್ರಮ ತಡೆ ಉದ್ದೇಶದಿಂದ ಜಿಲ್ಲೆಯಲ್ಲಿ 36 ಚೆಕ್‌ಪೋಸ್ಟ್ ಸ್ಥಾಪಿಸಲಾಗಿದೆ. ನೀತಿ ಸಂಹಿತೆ ಜಾರಿಯಾದ ದಿನದಿಂದ ಈ ಚೆಕ್‌ಪೋಸ್ಟ್‌ಗಳು ಕಾರ್ಯ ನಿರ್ವಹಿಸುತ್ತಿವೆ. ಪ್ರತಿ ಚುನಾವಣೆಯಲ್ಲಿ ಬಿಸಿಲಿನ ರಕ್ಷಣೆಗೆ ಶಾಮಿಯಾನ ಹಾಕಲಾಗುತ್ತಿತ್ತು. ಇದೇ ಮೊದಲ ಬಾರಿಗೆ ಸ್ಥಳೀಯವಾಗಿ ಸಿಗುವ ತೆಂಗಿನ ಗರಿಗಳನ್ನು ಬಳಸಿಕೊಂಡು ದೇಸಿ ಮಾದರಿಯಲ್ಲಿ ಚಪ್ಪರ ನಿರ್ಮಿಸಲಾಗಿದೆ.
ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ, ನಗರದ ಆಯಕಟ್ಟಿನ ಸ್ಥಳ ಸೇರಿ ಜಿಲ್ಲೆಯ ವಿವಿಧೆಡೆ ಚೆಕ್‌ಪೋಸ್ಟ್‌ಗಳಿವೆ. ಹಿರಿಯೂರು, ಚಳ್ಳಕೆರೆ ಹಾಗೂ ಮೊಳಕಾಲ್ಮುರು ತಾಲ್ಲೂಕಿನ ಆಂಧ್ರಪ್ರದೇಶದ ಗಡಿಯಲ್ಲಿ 8 ಚೆಕ್‌ಪೋಸ್ಟ್ ಕಾರ್ಯ ನಿರ್ವಹಿಸುತ್ತಿವೆ.
ಬರದಲ್ಲಿ ಬಿಸಿಲಿನ ಝಳ ಹೆಚ್ಚಾಗುತ್ತಿದ್ದು, ಸಿಬ್ಬಂದಿಯ ಕಾರ್ಯ ನಿರ್ವಹಣೆಗೂ ತೊಂದರೆ ಉಂಟಾಗುತ್ತಿತ್ತು. ಇದನ್ನು ಮನಗಂಡ ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ವಿನೂತನ ಮಾದರಿಗೆ ನಾಂದಿ ಹಾಡಿದ್ದಾರೆ.
10X15 ಅಡಿ ಸುತ್ತಳತೆಯ ಚೆಕ್‌ಪೋಸ್ಟ್‌ಗಳನ್ನು ಮರ ಹಾಗೂ ತೆಂಗಿನ ಗರಿ ಬಳಸಿ ನಿರ್ಮಿಸಲಾಗಿದೆ. ಚೆಕ್‌ಪೋಸ್ಟ್‌ನ ಮೂರು ಬದಿಗೂ ತೆಂಗಿನ ಗರಿಗಳನ್ನು ಕಟ್ಟಲಾಗಿದೆ. ಇದರಲ್ಲಿ ಗಾಳಿ ಸರಾಗವಾಗಿ ಬರುತ್ತದೆ. ಮಳೆಯ ರಕ್ಷಣೆಗಾಗಿ ತಗಡಿನ ಚಾವಣಿ ನಿರ್ಮಿಸಲಾಗಿದೆ. ತಗಡಿನ ಶೀಟ್ ಮೇಲೆ ಮತ್ತೆ ತೆಂಗಿನ ಗರಿಗಳನ್ನು ಹಾಕಲಾಗಿದೆ. ಬಿಸಿಲು, ಗಾಳಿ ಹಾಗೂ ಮಳೆಯಿಂದ ಇದು ರಕ್ಷಣೆ ಒದಗಿಸುತ್ತಿದೆ’ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಮಾಹಿತಿ ನೀಡಿದರು.
ಚಪ್ಪರ ನಿರ್ಮಿಸಲು ಹೆದ್ದಾರಿ, ರಸ್ತೆಗಳಲ್ಲಿ ಗುಂಡಿ ತೆಗೆದಿಲ್ಲ. ದೊಡ್ಡ ಡ್ರಮ್‌ಗಳಲ್ಲಿ ಮರಳು, ಮಣ್ಣು ತುಂಬಿಸಿ ಮರದ ಗೂಟ ಅಳವಡಿಸಲಾಗಿದೆ. ಸುತ್ತ ತೆಂಗಿನ ಗರಿಗಳೊಂದಿಗೆ ಶೆಡ್ ನೆಟ್ ಕೂಡ ಕಟ್ಟಲಾಗಿದೆ. ಇದರಿಂದ ಬಿಸಿಲಿನ ಧಗೆ ಕಡಿಮೆಯಾಗಿದ್ದು, ಚೆಕ್‌ಪೋಸ್ಟ್‌ಗಳಲ್ಲಿ ಕುಳಿತು ಕೆಲಸ ಮಾಡಲು ಸಾಧ್ಯವಾಗುತ್ತಿದೆ ಎನ್ನುತ್ತಾರೆ ಸಿಬ್ಬಂದಿ.
ತರಬೇತಿ ಪಡೆದ ಅಧಿಕಾರಿ, ಪೊಲೀಸ್ ಕಾನ್‌ಸ್ಟೆಬಲ್ ಹಾಗೂ ವಿಡಿಯೊಗ್ರಾಫರ್ ಪ್ರತಿ ಪಾಳಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. 24 ಗಂಟೆ ಕಾರ್ಯ ನಿರ್ವಹಿಸುವ ಚೆಕ್‌ಪೋಸ್ಟ್‌ಗಳಿಗೆ ಮೂರು ಪಾಳಿಯಲ್ಲಿ ಸಿಬ್ಬಂದಿ ನಿಯೋಜಿಸಲಾಗಿದೆ. ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸಲಾಗಿದ್ದು, ಜಿಲ್ಲಾಧಿಕಾರಿ ಕಚೇರಿಯಲ್ಲಿ ಸ್ಥಾಪಿಸಿದ ನಿಯಂತ್ರಣಾ ಕೊಠಡಿಯಿಂದ ನಿಗಾ ಇಡಲಾಗುತ್ತಿದೆ. ಅನುಮಾನಾಸ್ಪದ ವಾಹನ, ವ್ಯಕ್ತಿಗಳನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ.
ಬಿಸಿಲಿನ ಝಳಕ್ಕೆ ಶಾಮಿಯಾನ ರಕ್ಷಣೆ ನೀಡದು. ಸ್ಥಳೀಯವಾಗಿ ಲಭ್ಯ ಇರುವ ತೆಂಗಿನ ಗರಿ ಬಳಸಿದರೆ ಅಧಿಕ ತಾಪಮಾನದಲ್ಲಿ ಉತ್ತಮ. ಅಂತೆಯೇ ಚಪ್ಪರದ ಮಾದರಿಯಲ್ಲಿ ಚೆಕ್‌ಪೋಸ್ಟ್ ನಿರ್ಮಿಸಲಾಗಿದೆಟಿ.ವೆಂಕಟೇಶ್ ಜಿಲ್ಲಾಧಿಕಾರಿ ಚಿತ್ರದುರ್ಗ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.