ADVERTISEMENT

ಒಣಗುತ್ತಿದೆ ರೈಲು ನಿಲ್ದಾಣದ ಮಕ್ಕಳ ಉದ್ಯಾನ

ಸೂಕ್ತ ನಿರ್ವಹಣೆಗೆ ತಾಯಂದಿರು, ಗ್ರಾಮಸ್ಥರ ಮನವಿ

ಜೆ.ತಿಮ್ಮಪ್ಪ
Published 25 ಜೂನ್ 2021, 2:59 IST
Last Updated 25 ಜೂನ್ 2021, 2:59 IST
ಚಿಕ್ಕಜಾಜೂರಿನ ರೈಲುನಿಲ್ದಾಣದ ಬಳಿಯಲ್ಲಿ ಸಿಬ್ಬಂದಿಯ ಮಕ್ಕಳ ಆಟಕ್ಕಾಗಿ ನಿರ್ಮಿಸಿರುವ ಉದ್ಯಾನ ನಿರ್ವಹಣೆ ಇಲ್ಲದೆ ಪಾಳು ಬಿದ್ದಿದೆ (ಎಡಚಿತ್ರ).
ಚಿಕ್ಕಜಾಜೂರಿನ ರೈಲುನಿಲ್ದಾಣದ ಬಳಿಯಲ್ಲಿ ಸಿಬ್ಬಂದಿಯ ಮಕ್ಕಳ ಆಟಕ್ಕಾಗಿ ನಿರ್ಮಿಸಿರುವ ಉದ್ಯಾನ ನಿರ್ವಹಣೆ ಇಲ್ಲದೆ ಪಾಳು ಬಿದ್ದಿದೆ (ಎಡಚಿತ್ರ).   

ಚಿಕ್ಕಜಾಜೂರು: ರೈಲ್ವೆ ವಸತಿ ಗೃಹಗಳಲ್ಲಿ ವಾಸಿಸುವ ಸಿಬ್ಬಂದಿಯ ಮಕ್ಕಳು ಆಟವಾಡಲು ನಿರ್ಮಿಸಿರುವ ಉದ್ಯಾನ ಹಾಗೂ ರೈಲು ನಿಲ್ದಾಣದ ಮುಂಭಾಗದಲ್ಲಿರುವ ಉದ್ಯಾನವು ಸಮರ್ಪಕ ನಿರ್ವಹಣೆ ಇಲ್ಲದೇ ಒಣಗುತ್ತಿವೆ.

ಇಲ್ಲಿನ ರೈಲು ನಿಲ್ದಾಣವು ಚಿತ್ರದುರ್ಗ ಜಿಲ್ಲೆಯ ಏಕೈಕ ಜಂಕ್ಷನ್‌ ಆಗಿದ್ದು, 500ಕ್ಕೂ ಹೆಚ್ಚು ಮಂದಿ ಕೆಲಸ ಮಾಡುತ್ತಿದ್ದಾರೆ. ನಿಲ್ದಾಣದ ಮುಂಭಾಗದಲ್ಲಿ ವಿಶಾಲವಾದ ಉದ್ಯಾನವನ್ನು ಹಾಗೂ ಇಲಾಖೆಯ ಸಿಬ್ಬಂದಿ ವಸತಿ ಗೃಹಗಳ ಪಕ್ಕದಲ್ಲಿ ಸಿಬ್ಬಂದಿಯ ಮಕ್ಕಳು ಆಟವಾಡಲು ಉದ್ಯಾನವನ್ನು ನಿರ್ಮಿಸಲಾಗಿತ್ತು. ಮಕ್ಕಳ ಉದ್ಯಾನದಲ್ಲಿ ಜಾರುಬಂಡೆ, ತೂಗೂಯ್ಯಾಲೆ ಮತ್ತಿತರ ವ್ಯ‌ವಸ್ಥೆಯನ್ನು ಮಾಡಲಾಗಿತ್ತು.

ಅಲ್ಲದೇ, ಸಂಜೆ ವೇಳೆಯಲ್ಲಿ ಸಿಬ್ಬಂದಿಯ ಕುಟುಂಬದವರು ಕುಳಿತು
ಕೊಳ್ಳಲು ಆಸನದ ವ್ಯವಸ್ಥೆಯನ್ನೂ ಮಾಡಲಾಗಿದೆ. ಉದ್ಯಾನದ ಸುತ್ತ ವಿಶಾಲವಾದ ಮರಗಳು ಇದ್ದು, ಅದರ ನೆರಳು ಬೀಳುವುದರಿಂದ ಉತ್ತಮ ಗಾಳಿ ಬೀಸುತ್ತದೆ. ನಿಲ್ದಾಣದ ಮುಂಭಾಗದಲ್ಲಿ ನಿರ್ಮಿಸಲಾದ ಉದ್ಯಾನದಲ್ಲಿ ಹುಲ್ಲು ಹಾಸನ್ನು ಹಾಕಿ, ನಾಲ್ಕೂ ದಿಕ್ಕುಗಳಿಗೆ ದಾರಿಯನ್ನು ಮಾಡಿ, ದಾರಿ ಪಕ್ಕದಲ್ಲಿ ಮತ್ತು ಉದ್ಯಾನದ ಮಧ್ಯದಲ್ಲಿ ಅಲಂಕಾರಿಕ ಗಿಡಗಳನ್ನು ಹಾಕಲಾಗಿತ್ತು. ಕಾರಂಜಿಯನ್ನೂ ನಿರ್ಮಿಸಲಾಗಿದೆ. ಆದರೆ, ಸರಿಯಾದ ನಿರ್ವಹಣೆ ಕೊರತೆ ಹಾಗೂ ನೀರನ್ನು ಹಾಕದೇ ಇರುವುದರಿಂದ ಎರಡೂ ಉದ್ಯಾನಗಳು ಹಾಳಾಗುತ್ತಿವೆ.

ADVERTISEMENT

ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಅರುಣ್‌ಕುಮಾರ್‌ ಸಿಂಗ್‌ ಹಾಗೂ ಅವರ ಪತ್ನಿ ಸುಜಾತಾ ಸಿಂಗ್‌ ಅವರು 2020ರ ಜನವರಿ 10ರಂದು ಉದ್ಯಾನಗಳನ್ನು ಉದ್ಘಾಟನೆ ಮಾಡಿದ್ದರು. ಕೆಲ ತಿಂಗಳು ಮಾತ್ರವೇ ನಿರ್ವಹಣೆ ಮಾಡಲಾಯಿತು. ನಂತರದಲ್ಲಿ ನಿರ್ಲಕ್ಷಿಸಿದ್ದು ಉದ್ಯಾನಗಳು ಹಾಳಾಗುತ್ತಿವೆ. ಮಕ್ಕಳ ಉದ್ಯಾನದಲ್ಲಿ ಎಲೆಗಳು ನಿತ್ಯ ಉದುರುವುದರಿಂದ ಸ್ವಚ್ಛತೆ ಇಲ್ಲದಂತಾಗಿದೆ. ಪರಿಣಾಮ ಮಧ್ಯಾಹ್ನದ ವೇಳೆಯಲ್ಲಿ ವಿಷ ಜಂತುಗಳು ಹರಿದಾಡುವುದನ್ನು ನೋಡಿ ರುವ ಮಹಿಳೆಯರು, ಮಕ್ಕಳನ್ನು ಉದ್ಯಾನಕ್ಕೆ ಕಳುಹಿಸಲು ಹಿಂಜರಿಯು ತ್ತಿದ್ದಾರೆ. ಮಕ್ಕಳ ಹಿತದೃಷ್ಟಿಯಿಂದ ಉದ್ಯಾನವನ್ನು ಸ್ವಚ್ಛಗೊಳಿಸಿ, ಮುರಿದಿರುವ ಆಟಿಕೆಗಳನ್ನು ಸಿದ್ಧಪಡಿಸಿ, ಮಕ್ಕಳ ಆಟಕ್ಕೆ ಅನುಕೂಲ ಮಾಡುವಂತೆ ತಾಯಂದಿರು ಮನವಿ ಮಾಡಿದ್ದಾರೆ.

ನಿಲ್ದಾಣದ ಮುಂಭಾಗದಲ್ಲಿರುವ ಉದ್ಯಾನವನ್ನು ಸೂಕ್ತವಾಗಿ ನಿರ್ವಹಣೆ ಮಾಡಿದರೆ ಪ್ರಯಾಣಿಕರೂ ಇಲ್ಲಿಯ ತಣ್ಣನೆ ಗಾಳಿಯಲ್ಲಿ ಕುಳಿತುಕೊಳ್ಳಲು ಅನುಕೂಲ ಆಗಲಿದೆ ಎಂಬುದು ಗ್ರಾಮಸ್ಥರ ಅಭಿಪ್ರಾಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.