ಧರ್ಮಪುರ: ಆಂಧ್ರಪ್ರದೇಶ, ಕರ್ನಾಟಕ ಮತ್ತು ತಮಿಳುನಾಡಿನ ಲಕ್ಷಾಂತರ ಜನರ ಆರಾಧ್ಯ ದೈವ, ಸಮೀಪದ ಹೇಮಾವತಿ ಹೆಂಜೇರು ಸಿದ್ದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಫೆ.26ರಂದು ಆರಂಭವಾಗಲಿದ್ದು, ಸಿದ್ಧತೆಗಳು ಪೂರ್ಣಗೊಂಡಿವೆ.
ಚಿತ್ರದುರ್ಗ ಜಿಲ್ಲೆಯ ಗಡಿಗ್ರಾಮ ಧರ್ಮಪುರದಿಂದ ಆನತಿ ದೂರದಲ್ಲಿರುವ ಆಂಧ್ರಪ್ರದೇಶದ ಅಮರಾಪುರಂ ಮಂಡಲ್‌ನ ಹೇಮಾವತಿಯಲ್ಲಿ ನೊಳಂಬ ವಂಶಸ್ಥರು ಕ್ರಿ.ಶ. 7ನೇ ಶತಮಾನದಲ್ಲಿ ರಾಜ್ಯ ಪ್ರತಿಷ್ಠಾಪಿಸಿ, ಹೆಂಜೇರನ್ನು ರಾಜಧಾನಿಯಾಗಿ ಮಾಡಿಕೊಂಡಿದ್ದರು. ಅದೇ ಇಂದು ‘ಹೇಮಾವತಿ’ (ಬಂಗಾರ) ಪಟ್ಟಣವಾಗಿದೆ. ಇದು ಐತಿಹಾಸಿಕವಾಗಿ ‘ನೊಳಂಬವಾಡಿ–32,000’ ಎಂದೂ ಪ್ರಚಲಿತವಾಗಿದೆ.
ಇಲ್ಲಿನ 15 ಎಕರೆ ವಿಸ್ತೀರ್ಣದಲ್ಲಿ ಸಿದ್ದೇಶ್ವರಸ್ವಾಮಿ, ದೊಡ್ಡೇಶ್ವರ, ಮತ್ತೀಶ್ವರ, ಚಿತ್ತೇಶ್ವರ ಹಾಗೂ ವಿರೂಪಾಕ್ಷೇಶ್ವರ ಪಂಚ ದೇವಾಲಯಗಳಿವೆ. ಭಾರತೀಯ ಪ್ರಾಚ್ಯವಸ್ತು ಸರ್ವೇಕ್ಷಣಾ ಇಲಾಖೆ ಸಿಬ್ಬಂದಿ ಹೇಮಾವತಿಯಲ್ಲಿ 30 ವರ್ಷಗಳಿಂದ ಉತ್ಖನನ ನಡೆಸಿ ನೂರಾರು ಶಿವಲಿಂಗಗಳು, ನಂದಿ ವಿಗ್ರಹಗಳು, ಏಕ ಶಿಲಾಮೂರ್ತಿಗಳು ಹಾಗೂ ಪ್ರಾಚ್ಯವಸ್ತುಗಳನ್ನು ಸಂಗ್ರಹಿಸಿ ಇಲ್ಲಿನ ಮ್ಯೂಸಿಯಂನಲ್ಲಿ ಸಂಗ್ರಹಿಸಿ ಇಟ್ಟಿದ್ದು, ಪ್ರತಿನಿತ್ಯ ನೂರಾರು ಪ್ರವಾಸಿಗರು ವೀಕ್ಷಿಸಲು ಬರುತ್ತಾರೆ.
ಕರ್ನಾಟಕ ವಾಸ್ತುಶಿಲ್ಪ ಪರಂಪರೆಯಲ್ಲಿ ನೊಳಂಬ ವಂಶಸ್ಥರ ಕೊಡುಗೆ ವಿಶಿಷ್ಟವಾಗಿದ್ದು, ಚಾಲುಕ್ಯ ಮಾದರಿಯ ಶಿಲ್ಪ ಶೈಲಿ ಮತ್ತು ಪಲ್ಲವರ ಶೈಲಿಗಳಿಂದ ಕೂಡಿದ ವಾಸ್ತುಶಿಲ್ಪಗಳ ಸುಂದರ ನಗರ ಹೇಮಾವತಿಯಾಗಿದೆ.
ಜಾನಪದ ಸಂಸ್ಕೃತಿಯ ವಿಶಿಷ್ಟ ಪ್ರಕಾರದ ಜಾತ್ರೆಯು ಬಡವ–ಶ್ರೀಮಂತ, ಮೇಲು–ಕೀಳೆಂಬ ಮಡಿ ಮೈಲಿಗೆಯನ್ನು ಮೀರಿ ಎಂಟು ದಿನಗಳವರೆಗೆ ನಡೆಯಲಿದೆ. ಫೆ.26ರ ಮಹಾಶಿವರಾತ್ರಿ ದಿನದಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಜಾತ್ರೆ ಪ್ರಾರಂಭವಾಗಲಿದೆ. ಫೆ.27ರಂದು ಭಾನುಪಲ್ಲಕ್ಕಿ, ಫೆ.28ರಂದು ಅಗ್ನಿಗುಂಡ, ಮಾರ್ಚ್ 1ರಂದು ಸಿಡಿಮಾನು ಉತ್ಸವ, 2ರಂದು ಚಿಕ್ಕರಥೋತ್ಸವ, 3ರಂದು ಬ್ರಹ್ಮರಥೋತ್ಸವ, 4ರಂದು ವಸಂತೋತ್ಸವ, 5ರಂದು ಶಯನೋತ್ಸವ ಜರುಗಲಿದೆ.
ಜಾತ್ರೆಯ ಸಂದರ್ಭ ತಂಬಿಟ್ಟಿನ ಆರತಿ, ಸೂರು ಬೆಲ್ಲ, ಸೂರು ಮೆಣಸು, ಬೇವಿನ ಸೀರೆಯುಟ್ಟು ಹರಕೆ ತೀರಿಸುವುದು, ಅಗ್ನಿಕುಂಡ ಹಾಯುವುದು, ಆರತಿ ಬೆಳಗುವುದು, ಬಾಯಿಗೆ ಬೀಗ ಮುಂತಾದ ಆಚರಣೆಗಳು ನಡೆಯುತ್ತವೆ. ರಥೋತ್ಸವದ ದಿನ ಭಕ್ತರು ರಥಕ್ಕೆ ತೆಂಗಿನಕಾಯಿ ಸಮರ್ಪಿಸಿ, ಬಾಳೆಹಣ್ಣು ಎಸೆಯುವುದು, ಉರುಳು ಸೇವೆ ಮಾಡುವುದು ಮತ್ತು ಸಿ.ಡಿ ಮರ ಏರುವ ಕಾರ್ಯಕ್ರಮಗಳು ಜರುಗುತ್ತವೆ. ವಿವಿಧ ಜಾನಪದ ಕಲಾ ತಂಡಗಳಿಂದ ಕೋಲಾಟ, ಡೊಳ್ಳುಕುಣಿತ, ವೀರಗಾಸೆ ಸೇರಿದಂತೆ ಅನೇಕ ಕಲೆಗಳ ಪ್ರದರ್ಶನ ನೋಡುಗರ ಗಮನ ಸೆಳೆಯುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.