ಚಿತ್ರದುರ್ಗ: 10ನೇ ತರಗತಿ ಐಸಿಎಸ್‌ಇ ಫಲಿತಾಂಶ ಬುಧವಾರ ಪ್ರಕಟವಾಗಿದ್ದು, ನಗರದ ಎಸ್‌ಆರ್‌ಎಸ್ ಹೆರಿಟೇಜ್ ಶಾಲೆ ಶೇ 100ರಷ್ಟು ಫಲಿತಾಂಶ ದಾಖಲು ಮಾಡಿದೆ. ದಾವಣಗೆರೆ, ಚಿತ್ರದುರ್ಗ ವಿಭಾಗೀಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿದೆ.
ಆರ್ಯನ್ ವೀರ್ ಶೇ 98ರಷ್ಟು ಫಲಿತಾಂಶ ಪಡೆದಿದ್ದು, ವಿಭಾಗೀಯ ಹಾಗೂ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ಶಾಲೆ, ಜಿಲ್ಲೆ ಹಾಗೂ ವಿಭಾಗಕ್ಕೆ ಕೀರ್ತಿ ತಂದಿದ್ದಾರೆ. ಜೀವನ್ ಸಿ. ಗೌಡ ಶೇ 97 ಫಲಿತಾಂಶ ಪಡೆದು ಕೀರ್ತಿ ತಂದಿದ್ದಾರೆ. ಪರೀಕ್ಷೆ ಬರೆದ ಒಟ್ಟು 16 ವಿದ್ಯಾರ್ಥಿಗಳಲ್ಲಿ ಎಲ್ಲರೂ ತೇರ್ಗಡೆ ಹೊಂದಿದ್ದಾರೆ. 9 ವಿದ್ಯಾರ್ಥಿಗಳು ಶೇ 90ಕ್ಕಿಂತಲೂ ಹೆಚ್ಚು ಅಂಕ ಪಡೆದಿದ್ದಾರೆ.
‘ಎಸ್ಆರ್‌ಎಸ್ ಹೆರಿಟೇಜ್ ಕುಟುಂಬವು 2024–25ರ ಶೈಕ್ಷಣಿಕ ವರ್ಷದಲ್ಲಿ ಚೊಚ್ಚಲ 10ನೇ ತರಗತಿಯ ಐಸಿಎಸ್‌ಇ ಫಲಿತಾಂಶ ಪಡೆದಿದೆ. ನಮ್ಮ ಎಲ್ಲ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಕಠಿಣ ಪರಿಶ್ರಮ ಮತ್ತು ಸಮರ್ಪಣೆಯ ಮನೋಭಾವದಿಂದ ವಿಭಾಗೀಯ ಮಟ್ಟದಲ್ಲಿ ಉನ್ನತ ಫಲಿತಾಂಶ ಬಂದಿದೆ. ನಮ್ಮ ವಿದ್ಯಾರ್ಥಿಗಳು ಶಾಲೆ, ಜಿಲ್ಲೆ ಹಾಗೂ ವಿಭಾಗದ ಘನತೆಯನ್ನು ಹೆಚ್ಚಿಸಿದ್ದಾರೆ’ ಎಂದು ಎಸ್‌ಆರ್‌ಎಸ್ ಆಡಳಿತ ಮಂಡಳಿಯ ಅಧ್ಯಕ್ಷ ಬಿ.ಎ. ಲಿಂಗಾರೆಡ್ಡಿ ಹರ್ಷ ವ್ಯಕ್ತಪಡಿಸಿದ್ದಾರೆ.
ಸಂಸ್ಥೆಯ ಕಾರ್ಯದರ್ಶಿ ಸುಜಾತಾ ಲಿಂಗಾರೆಡ್ಡಿ, ಉಪಾಧ್ಯಕ್ಷರಾದ ಅಮೋಘ್ ಬಿ.ಎಲ್, ಆಡಳಿತಾಧಿಕಾರಿ ಟಿ.ಎಸ್. ರವಿ, ಪ್ರಾಂಶುಪಾಲರಾದ ಎಂ.ಎಸ್. ಅರ್ಪಿತಾ ಅವರು ಉನ್ನತ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.