ಚಳ್ಳಕೆರೆ: ತಾಲ್ಲೂಕಿನಲ್ಲಿ ಭಾನುವಾರ ತಡರಾತ್ರಿ ಸುರಿದ ಗುಡುಗು ಸಹಿತ ಮಳೆ ಹಾಗೂ ಬಿರುಗಾಳಿಗೆ ಗಂಜಿಗುಂಟೆ, ಚಿಕ್ಕೇನಹಳ್ಳಿ ಹಾಗೂ ಸಾಣಿಕೆರೆ ಗ್ರಾಮದಲ್ಲಿ ಫಲಕ್ಕೆ ಬಂದಿದ್ದ 30 ಎಕರೆ ಬಾಳೆ, 5 ಎಕರೆ ಪಪ್ಪಾಯ ಬೆಳೆ ನಷ್ಟವಾಗಿದೆ.
ತಾಲ್ಲೂಕಿನಲ್ಲಿ ಒಟ್ಟು ₹ 60 ಲಕ್ಷಕ್ಕೂ ಹೆಚ್ಚು ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.
ತಂಪೆರೆದ ಮಳೆ: ತಾಲ್ಲೂಕಿನ ಕ್ಯಾತಗೊಂಡನಹಳ್ಳಿ, ಹಾಲಗೊಂಡನಹಳ್ಳಿ, ಕಾಲುವೆಹಳ್ಳಿ, ಯಾದಲಗಟ್ಟೆ, ವಡೇರಹಳ್ಳಿ, ಬೊಂಬೇರಹಳ್ಳಿ, ದೇವರಮರಿಕುಂಟೆ, ಗೋಪನಹಳ್ಳಿ, ಸಾಣಿಕೆರೆ, ರೆಡ್ಡಿಹಳ್ಳಿ, ಚಿಕ್ಕಹಳ್ಳಿ, ದುರ್ಗಾವರ, ಬುಡ್ನಹಟ್ಟಿ, ನನ್ನಿವಾಳ, ರಾಮಜೋಗಿಹಳ್ಳಿ, ದೊಡ್ಡೇರಿ, ಡಿ.ಉಪ್ಪಾರಹಟ್ಟಿ, ಸಿದ್ದಾಪುರ ಮುಂತಾದ ಗ್ರಾಮಗಳಲ್ಲಿ ಸೋಮವಾರ ತಡರಾತ್ರಿ ಮುಕ್ಕಾಲು ಗಂಟೆ ನಿರಂತರವಾಗಿ ಮಳೆ ಸುರಿದಿದ್ದು, ರೈತರಲ್ಲಿ ಮಂದಹಾಸ ಮೂಡಿಸಿದೆ.
ಮಳೆಯಿಂದ ಜನ, ಜಾನುವಾರುಗಳ ಕುಡಿಯುವ ನೀರಿನ ಸಮಸ್ಯೆ ನೀಗಲಿದೆ. ಅಲ್ಲದೇ ಮುಂಗಾರು ಹಂಗಾಮಿನ ಶೇಂಗಾ ಬಿತ್ತನೆಗೆ ಭೂಮಿ ಸಿದ್ಧಗೊಳಿಸಲು ಅನುಕೂಲವಾಗಿದೆ ಎಂದು ರೈತ ಮುಖಂಡ ಚಿಕ್ಕಣ್ಣ ಸಂತಸ ವ್ಯಕ್ತಪಡಿಸಿದರು.
ತೋಟಗಾರಿಕಾ ಹಿರಿಯ ಸಹಾಯಕ ನಿರ್ದೇಶಕ ವಿರೂಪಾಕ್ಷಪ್ಪ ಅವರು ಸೋಮವಾರ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಬೆಳೆ ಪರಿಶೀಲನೆ ನಡೆಸಿದರು.
ಮಳೆ ವರದಿ: ತಾಲ್ಲೂಕಿನ ತಳಕು 27.2 ಮಿ.ಮೀ., ನಾಯಕನಹಟ್ಟಿ ಹೋಬಳಿ 8.2, ಪರಶುರಾಂಪು ಹೋಬಳಿ 31.8, ದೇವರಮರಿಕುಂಟೆ 51.6 ಹಾಗೂ ಚಳ್ಳಕೆರೆ ಕಸಬಾ ಹೋಬಳಿಯಲ್ಲಿ 29.6 ಮಿ.ಮೀ ಸೇರಿ ತಾಲ್ಲೂಕಿನಲ್ಲಿ ಭಾನುವಾರ ರಾತ್ರಿ ಒಟ್ಟು 146.24 ಮಿ.ಮೀ ಮಳೆಯಾಗಿರುವುದು ಮಳೆ ಮಾಪನ ಕೇಂದ್ರದಲ್ಲಿ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.