ಚಿತ್ರದುರ್ಗ: ‘ಜಿಲ್ಲೆಯಲ್ಲಿ ಪೂರ್ವ ಮುಂಗಾರು ಮಳೆ ಉತ್ತಮವಾಗಿದೆ. ಬಿರುಗಾಳಿ, ಮಳೆಯಿಂದಾಗಿ ಜಿಲ್ಲೆಯ ವಿವಿಧೆಡೆ ಬೆಳೆ, ಮನೆಗಳಿಗೆ ಹಾನಿಯಾಗಿದೆ, ಜಾನುವಾರು ಮೃತಪಟ್ಟಿವೆ. ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಸಮೀಕ್ಷೆ ನಡೆಸಿ ಪರಿಹಾರ ವಿತರಣೆಗೆ ಕ್ರಮ ಕೈಗೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಬೆಳೆಹಾನಿ ಹಾಗೂ ಕುಡಿಯುವ ನೀರಿಗೆ ಸಂಬಂಧಿಸಿದಂತೆ ಅಧಿಕಾರಿಗಳ ಸಭೆ ನಡೆಸಿ ಅವರು ಮಾತನಾಡಿದರು.
‘ಕೃಷಿ ಮತ್ತು ತೋಟಗಾರಿಕೆ ಅಧಿಕಾರಿಗಳು ಮಳೆಹಾನಿ ಪ್ರದೇಶಗಳ ಸ್ಥಳ ಪರಿಶೀಲನೆ ನಡೆಸುತ್ತಿಲ್ಲ ಎಂದು ರೈತರು ದೂರುತ್ತಿದ್ದಾರೆ. ಬೆಳೆಹಾನಿ ಪ್ರದೇಶಗಳ ಸ್ಥಳ ಪರಿಶೀಲನೆ ನಡೆಸದ ಅಧಿಕಾರಿಗಳ ಅಮಾನತಿಗೆ ಕ್ರಮ ವಹಿಸಲಾಗುವುದು. ರೈತರಿಂದ ದೂರು ಬಾರದಂತೆ ಕ್ರಮ ವಹಿಸಬೇಕು. ರೈತರ ಸಮಸ್ಯೆಗಳಿಗೆ ಸ್ಪಂದಿಸಬೇಕು. ರೈತರಿಗೆ ಸ್ಪಂದಿಸದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.
‘ಹೊಳಲ್ಕೆರೆ ತಾಲ್ಲೂಕಿನಲ್ಲಿ 25 ಹೆಕ್ಟೇರ್ ಅಡಿಕೆ ಬೆಳೆ, 15 ಹೆಕ್ಟೇರ್ ಮಾವು, 3 ಹೆಕ್ಟೇರ್ ಬಾಳೆ ಬೆಳೆ ಹಾನಿಯಾಗಿವೆ. ಚಳ್ಳಕೆರೆ ತಾಲ್ಲೂಕಿನಲ್ಲಿ 120 ಹೆಕ್ಟೇರ್ ಪಪ್ಪಾಯ ಬೆಳೆ, 8.30 ಹೆಕ್ಟೇರ್ ಕೃಷಿ ಬೆಳೆಗಳು ಹಾನಿಯಾಗಿವೆ. ಚಿತ್ರದುರ್ಗ ತಾಲ್ಲೂಕಿನ ವಿ.ಪಾಳ್ಯ, ನಲ್ಲೆಕಟ್ಟೆ ಗ್ರಾಮಗಳಲ್ಲಿ ಅಡಿಕೆ ಬೆಳೆ ಹಾಗೂ ಪಪ್ಪಾಯ ಬೆಳೆ ಹಾನಿಯಾಗಿದೆ’ ಎಂದು ತಹಶೀಲ್ದಾರ್‌ಗಳು ಮಾಹಿತಿ ನೀಡಿದರು.
‘ಹಿರಿಯೂರು ತಾಲ್ಲೂಕಿನಲ್ಲಿ ಒಂದು ಜಾನುವಾರು ಮೃತಪಟ್ಟಿದೆ. ತೋಟಗಾರಿಕೆ ಬೆಳೆ ಹಾನಿಯಾಗಿದ್ದು, ಮನೆಯೊಂದರ ಚಾವಣಿ ಹಾನಿಯಾಗಿದೆ. ಹೊಸದುರ್ಗ ತಾಲ್ಲೂಕಿನಲ್ಲಿ 4.20 ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿಯಾಗಿದೆ. ಮೊಳಕಾಲ್ಮುರು ತಾಲ್ಲೂಕಿನಲ್ಲಿ 1 ಹೆಕ್ಟೇರ್ ಕೃಷಿ ಹಾಗೂ 1 ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿ ಹಾಗೂ ಒಂದು ಜಾನುವಾರು ಮೃತಪಟ್ಟಿದೆ, 6 ಮನೆಗಳು ಭಾಗಶಃ ಹಾನಿಗೊಳಗಾಗಿವೆ’ ಎಂದು ವಿವರಿಸಿದರು.
‘ಬೆಳೆಹಾನಿಗೆ ಸಂಬಂಧಿಸಿದಂತೆ ಎಲ್ಲ ವರದಿಯನ್ನು ಸಿದ್ಧತೆ ಮಾಡಿ ಇಟ್ಟುಕೊಳ್ಳಬೇಕು. ಹಾನಿಯಾದ ಜಮೀನಿಗೆ ಅಧಿಕಾರಿಗಳು ಬರಲಿಲ್ಲ, ಸಮೀಕ್ಷೆ ನಡೆಸಲಿಲ್ಲ ಎಂಬ ದೂರುಗಳು ಬಾರದಂತೆ ನೋಡಿಕೊಳ್ಳಬೇಕು. ಸಮಗ್ರ ವರದಿಯನ್ನು ಸಿದ್ಧ ಮಾಡಿ ಇಟ್ಟುಕೊಂಡಿರಬೇಕು. ಪರಿಹಾರ ಸಾಫ್ಟ್‌ವೇರ್ ತೆರೆದುಕೊಂಡ ತಕ್ಷಣ ನಮೂದು ಮಾಡಬೇಕು. ನಿಯಮಾನುಸಾರ ಪರಿಹಾರ ವಿತರಣೆಗೆ ಕ್ರಮವಹಿಸಬೇಕು’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ತಿಳಿಸಿದರು.
‘ಹಿರಿಯೂರು ತಾಲ್ಲೂಕು ವ್ಯಾಪ್ತಿಯಲ್ಲಿ ಪ್ರಸ್ತುತ 7 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಪರ್ಯಾಯವಾಗಿ ಕುಡಿಯುವ ನೀರು ಪೂರೈಸುವ, ಕೊಳವೆಬಾವಿ ಕೊರೆಸುವ ಯೋಜನೆಗಳನ್ನೂ ಹಾಕಿಕೊಳ್ಳಲಾಗಿದೆ’ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಬಸನಗೌಡ ಪಾಟೀಲ್ ಹೇಳಿದರು.
‘ಬೇಸಿಗೆಯ ಬಿಸಿಲು ತೀವ್ರಗೊಳ್ಳುತ್ತಿದ್ದು, ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರು ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು. ನೀರು ಇದ್ದರೂ ಸರಬರಾಜು ವ್ಯತ್ಯಯವಾದರೆ ಜನರು ಸಮಸ್ಯೆ ಅನುಭವಿಸಬೇಕಾಗುತ್ತದೆ. ಕುಡಿಯುವ ನೀರಿಗಾಗಿ ಪ್ರತಿಭಟನೆಗಳು ನಡೆಯದಂತೆ ಎಚ್ಚರ ವಹಿಸಬೇಕು. ನೀರಿನ ಸಮಸ್ಯೆ ಉದ್ಭವಿಸುವ ಸಮಸ್ಯೆಯಾತ್ಮಕ ಗ್ರಾಮಗಳ ನಿಖರ ಮಾಹಿತಿ ನೀಡಬೇಕು’ ಎಂದು ಸೂಚಿಸಿದರು.
ಉಪವಿಭಾಗಾಧಿಕಾರಿ ಮೆಹಬೂಬ್ ಜಿಲಾನ್ ಖುರೇಷಿ, ತಹಶೀಲ್ದಾರ್‌ಗಳು ಸಭೆಯಲ್ಲಿದ್ದರು.
ವೆಬ್‌ಸೈಟ್‌ನಲ್ಲಿ ವಿವರ ನಮೂದು ಮಾಡಲು ಸಲಹೆ ಬೆಳೆ ಹಾನಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಕುಡಿಯುವ ನೀರಿಗೆ ಕೊರತೆ ಆಗದಂತೆ ಕ್ರಮ ವಹಿಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.