ADVERTISEMENT

ಆರ್ಥಿಕ ಸದೃಢತೆಗೆ ಉದ್ಯೋಗ ಸೃಷ್ಟಿಸಿ

ಪ್ರಧಾನಮಂತ್ರಿ ಕೌಶಲ ವಿಕಾಸ ಯೋಜನೆ ಅನುಷ್ಠಾನಕ್ಕೆ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಸೂಚನೆ

​ಪ್ರಜಾವಾಣಿ ವಾರ್ತೆ
Published 8 ಜನವರಿ 2021, 12:47 IST
Last Updated 8 ಜನವರಿ 2021, 12:47 IST
ಪ್ರಧಾನಮಂತ್ರಿ ಕೌಶಲ ವಿಕಾಸ ಯೋಜನೆ ಅನುಷ್ಠಾನ ಕುರಿತು ಚಿತ್ರದುರ್ಗದಲ್ಲಿ ಗುರುವಾರ ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು
ಪ್ರಧಾನಮಂತ್ರಿ ಕೌಶಲ ವಿಕಾಸ ಯೋಜನೆ ಅನುಷ್ಠಾನ ಕುರಿತು ಚಿತ್ರದುರ್ಗದಲ್ಲಿ ಗುರುವಾರ ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು   

ಚಿತ್ರದುರ್ಗ: ‘ಉದ್ಯೋಗಾಕಾಂಕ್ಷಿಗಳ ಬೇಡಿಕೆಯಂತೆ ತರಬೇತಿ ನೀಡಿ ಉದ್ಯೋಗ ಸೃಷ್ಟಿಸಬೇಕು. ಇದರಿಂದ ನಿರುದ್ಯೋಗ ಸಮಸ್ಯೆ ಬಗೆಹರಿಯುವುದರ ಜತೆಗೆ ಆರ್ಥಿಕವಾಗಿ ಅವರನ್ನು ಸದೃಢರನ್ನಾಗಿ ಮಾಡಬಹುದು’ ಎಂದು ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಹೇಳಿದರು.

ಇಲ್ಲಿ ಗುರುವಾರ ಪ್ರಧಾನಮಂತ್ರಿ ಕೌಶಲ ವಿಕಾಸ ಯೋಜನೆ ಕುರಿತು ಜಿಲ್ಲಾಮಟ್ಟದ ಕಾರ್ಯದಕ್ಷತೆ ಹಾಗೂ ಕೌಶಲ ಮಿಷನ್ ಅನುಷ್ಠಾನಗೊಳಿಸಲು ನಡೆದ ಸಭೆಯಲ್ಲಿ ಅವರು ಮಾತನಾಡಿದರು.

‘ಪ್ರಧಾನಮಂತ್ರಿ ಕೌಶಲಾಭಿವೃದ್ಧಿ ಯೋಜನೆ ಹಾಗೂ ಕೌಶಲ ಕರ್ನಾಟಕ ಯೋಜನೆಯ ಮಾರ್ಗಸೂಚಿ ಅನ್ವಯ ಅರ್ಹ ನಿರುದ್ಯೋಗ ಯುವಕ ಮತ್ತು ಯುವತಿಯರಿಗೆ ಕೌಶಲ ತರಬೇತಿ ನೀಡಲು ಮುಂದಾಗಿ’ ಎಂದ ಅವರು, ‘ಉದ್ಯೋಗ ದೊರಕಿಸಿಕೊಡುವ ನಿಟ್ಟಿನಲ್ಲಿ ಯೋಜನೆಯ ಅನುಷ್ಠಾನದ ಗುಣಮಟ್ಟ, ತರಬೇತಿ, ಮೂಲಸೌಕರ್ಯ ಒದಗಿಸಲು ಹಾಗೂ ಮೇಲ್ವಿಚಾರಣೆ ಮಾಡಲು ಕೌಶಲ ಮಿಷನ್ ರಚಿಸಲಾಗಿದೆ’ ಎಂದು ತಿಳಿಸಿದರು.

ADVERTISEMENT

ಜಿಲ್ಲಾ ಕೌಶಲಾಭಿವೃದ್ಧಿ ಅಧಿಕಾರಿ ವಿ.ಸುರೇಶ, ‘ಈ ಯೋಜನೆಗಳ ಅನುಷ್ಠಾನಕ್ಕೆ ವಿವಿಧ ಇಲಾಖೆ ಅಧಿಕಾರಿಗಳನ್ನು ಒಳಗೊಂಡ ಎಂಟು ಉಪಸಮಿತಿ ರಚಿಸಲಾಗಿದೆ. ತರಬೇತಿ ಪಡೆಯುವ ಅಭ್ಯರ್ಥಿಗಳ ಗುರುತಿಸುವಿಕೆ, ಸಮಾಲೋಚನಾ ಉಪಸಮಿತಿ, ಕೈಗಾರಿಕಾ ಸಂಪರ್ಕ, ಸ್ವಯಂ ಉದ್ಯೋಗ, ಗ್ರಾಮ ಪಂಚಾಯಿತಿ ಸಮನ್ವಯ, ಕೃಷಿ ಉಪಸಮಿತಿ, ಸಾಮರ್ಥ್ಯಾಭಿವೃದ್ಧಿ, ಮೇಲ್ವಿಚಾರಣೆ ಕಾರ್ಯಾಗಾರ ಹೀಗೆ ವಿವಿಧ ವಿಷಯಗಳಿಗೆ ಜವಾಬ್ದಾರಿ ಹಂಚಿಕೆ ಮಾಡಲಾಗಿದೆ’ ಎಂದು ಹೇಳಿದರು.

‘ಉಪಸಮಿತಿಗಳು ನೀಡುವ ವರದಿ ಅನ್ವಯ ಯೋಜನೆ ಸಿದ್ಧಗೊಳಿಸಿ, ವಿವರವನ್ನು ಸರ್ಕಾರಕ್ಕೆ ಕಳುಹಿಸಲಾಗುವುದು. ಇದರಿಂದ ಜಿಲ್ಲೆಗೆ ಅಗತ್ಯವಿರುವ ಕೌಶಲಗಳ ತರಬೇತಿ ನೀಡಲು ಸರ್ಕಾರ ಸೌಕರ್ಯ ಒದಗಿಸಲಿದೆ. ತರಬೇತಿ ಪಡೆದವರಿಗೆ ಇದರಿಂದ ಜಿಲ್ಲೆಯಲ್ಲಿಯೇ ಉದ್ಯೋಗಾವಕಾಶ ದೊರೆಯಲಿವೆ’ ಎಂದು ತಿಳಿಸಿದರು.

ನಗರಾಭಿವೃದ್ಧಿ ಕೋಶ ಯೋಜನಾಧಿಕಾರಿ ಸತೀಶ್ ರೆಡ್ಡಿ, ಕೃಷಿ ಇಲಾಖೆ ಜಂಟಿ ನಿರ್ದೇಶಕ ವಿ.ಸದಾಶಿವ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ರಾಜಾನಾಯ್ಕ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.