ಚಿತ್ರದುರ್ಗ: ಜಿಲ್ಲೆಯ ವಿವಿಧೆಡೆ ವಿತರಣೆ ಮಾಡಿರುವ ರಸಗೊಬ್ಬರ ಅತ್ಯಂತ ಕಳಪೆಯಾಗಿವೆ. ಜೊತೆಗೆ ಅವಧಿ ಮೀರಿದ ರಸರೊಬ್ಬರ ವಿತರಣೆ ಮಾಡಿ ವಂಚಿಸಲಾಗಿದೆ. ಕೃಷಿ ಇಲಾಖೆ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ಮುಳುಗಿದ್ದು ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ರೈತ ಸಂಘ ಹಾಗೂ ಹಸಿರುಸೇನೆ ಸದಸ್ಯರು ಕೃಷಿ ಜಂಟಿ ನರ್ದೇಶಕರ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು.
ಸಹಕಾರ ಸಂಘಗಳ ಮೂಲಕ ಜಿಲ್ಲೆಯ ಆರೂ ತಾಲ್ಲೂಕುಗಳ ರೈತರಿಗೆ 20–20–0-13 ರಸಗೊಬ್ಬರ ವಿತರಣೆ ಮಾಡಲಾಗಿದೆ. ಚೀಲದ ಮೇಲಿರುವ ದಿನಾಂಕ ನೋಡಿದಾಗ ಇದು ಅವಧಿ ಮೀರಿದ ರಸಗೊಬ್ಬರ ಎಂದು ತಿಳಿದು ಬಂದಿದೆ. ಈ ಕುರಿತು ಕೃಷಿ ಜಂಟಿ ನಿರ್ದೇಶಕರನ್ನು ವಿಚಾರಿಸಲು ಕಚೇರಿಗೆ ತೆರಳಿದಾಗ ಅವರು ರೈತರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಪ್ರತಿಭಟನಕಾರರು ಆರೋಪಿಸಿದರು.
ದೂರು ನೀಡಿದ ನಂತರ ಸೊಸೈಟಿಯಿಂದ ರಸಗೊಬ್ಬರವನ್ನು ವಾಪಸ್ ಪಡೆದಿದ್ದಾರೆ. ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ಮುಳುಗಿದ್ದು ರೈತರಿಗೆ ಕಳಪೆ ರಸಗೊಬ್ಬರ ಮಾರಾಟ ಮಾಡುತ್ತಿದ್ದಾರೆ. ಅಕ್ರಮವನ್ನು ತಡೆಯಲು ವಿಫಲವಾಗಿರುವ ಅಧಿಕಾರಿಗಳನ್ನು ಕೂಡಲೇ ಅಮಾನತು ಮಾಡಬೇಕು ಎಂದು ಒತ್ತಾಯಿಸಿದರು.
‘ಭರಮಸಾಗರ ಹೋಬಳಿ, ಚಿಕ್ಕಬೆನ್ನೂರು, ಕೋಗುಂಡೆ, ಕೊಡಿಹಳ್ಳಿ, ಬಹದ್ದೂರುಘಟ್ಟ ವ್ಯಾಪ್ತಿಯಲ್ಲಿ ಬಿತ್ತನೆ ಮಾಡಿದ ಮೆಕ್ಕೆಜೋಳ ಹುಟ್ಟಿಯೇ ಇಲ್ಲ. ಉತ್ತಮ ಮಳೆಯಾಗಿದ್ದರೂ ಬೀಜ ಮೊಳಕೆಯೊಡೆದಿಲ್ಲ. ಡಿಎಪಿ ಗೊಬ್ಬರ ಕೇಳಿದರೆ, ಬಿತ್ತನೆ ಬೀಜ ತೆಗೆದುಕೊಂಡರೆ ಮಾತ್ರ ಡಿಎಪಿ ಕೊಡುತ್ತೇವೆ ಎಂದು ಷರತ್ತು ಹಾಕುತ್ತಾರೆ. ರಸಗೊಬ್ಬರಕ್ಕಾಗಿ ರೈತರು ಅನಿವಾರ್ಯವಾಗಿ ಕಳಪೆ ಬಿತ್ತನೆಬೀಜ ಖರೀದಿ ಮಾಡಬೇಕಾಗಿದೆ’ ಎಂದರು.
ಅಂಗಡಿಗಳ ಮುಂದೆ ಗೊಬ್ಬರದ ವಿವರ, ದರ ಪ್ರದರ್ಶನ ಮಾಡಿಲ್ಲ. ಇದರ ವಿರುದ್ಧ ಇಲಾಖೆಯವರು ಯಾವುದೇ ಕ್ರಮ ಕೈಗೊಂಡಿಲ್ಲ. ಕೃಷಿ ಜಂಟಿ ನಿರ್ದೇಶಕರು ರೈತರ ಯಾವುದೇ ಮನವಿಗೆ ಸ್ಪಂದಿಸುತ್ತಿಲ್ಲ. ಅವರನ್ನು ಕೂಡಲೇ ಅಮಾನತು ಮಾಡಬೇಕು, ಇಲ್ಲದಿದ್ದರೆ ಬೇರೆಡೆ ವರ್ಗಾವಣೆ ಮಾಡಬೇಕು ಎಂದು ಒತ್ತಾಯಿಸಿದರು.
‘ಕೃಷಿ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಹಿಂದೆ ಕೂಡ ಹಲವು ಬಾರಿ ರೈತರಿಗೆ ಬೆಳೆ ನಷ್ಟ ಪರಿಹಾರ ಬಂದಿಲ್ಲ. ಅವೈಜ್ಞಾನಿಕ ಸಮೀಕ್ಷೆಯಿಂದ ರೈತರ ನಷ್ಟಕ್ಕೆ ವಿಮಾ ಹಣ ಕೂಡ ದೊರೆತಿಲ್ಲ. ಕಾನೂನುಗಳೆಲ್ಲವೂ ಬೆಳೆ ವಿಮೆ ಕಂಪನಿಗಳ ಪರವಾಗಿದ್ದು ಸರ್ಕಾರಗಳು ಮತ್ತು ಅಧಿಕಾರಿಗಳು ಕಂಪನಿಯೊಂದಿಗೆ ಶಾಮೀಲಾಗಿ ಕಮಿಷನ್ ಪಡೆಯುತ್ತಿದ್ದಾರೆ. ಕಂಪನಿಗೆ ಸಾವಿರಾರು ಕೋಟಿ ರೂಪಾಯಿ ಲಾಭ ಮಾಡಿಕೊಡುತ್ತಿದ್ದಾರೆ’ ಎಂದು ಆರೋಪಿಸಿದರು.
ರೈತರು ವಿಮೆ ಕಂತು ಪಾವತಿಸಿ ಪ್ರತಿ ವರ್ಷ ಕಟ್ಟಿ ಮೋಸ ಹೋಗುತ್ತಿದ್ದಾರೆ. ಕೃಷಿ ಇಲಾಖೆ ರೈತರ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಲು ಸಭೆ ಕೆರೆಯಲು ವಿಫಲವಾಗಿದೆ. 5-6 ಬಾರಿ ಸಭೆ ಕರೆದರೂ ಅಧಿಕಾರಿಗಳು ಗೈರಾಗಿ ರೈತರನ್ನು ಕರೆಸಿ ಅವಮಾನ ಮಾಡಿದ್ದಾರೆ. ಕೃಷಿ ಇಲಾಖೆ ಅಧಿಕಾರಿಗಳಿಗೆ ರೈತರ ಬಗ್ಗೆ ಕಾಳಜಿಯಿಲ್ಲ. ಬರೀ ಪತ್ರಿಕಾ ಹೇಳಿಕೆ ಮೂಲಕ ತಪ್ಪು ಮುಚ್ಚಿಕೊಳ್ಳುತ್ತಿದ್ದಾರೆ. ಅಧಿಕಾರಿಗಳ ಸಭೆ ಮಾಡಿ ಸರ್ಕಾರಕ್ಕೆ ಸುಳ್ಳು ವರದಿ ನೀಡುತ್ತಾ ಹಣ ನುಂಗುತ್ತಿದ್ದಾರೆ ಎಂದು ದೂರಿದರು.
ಜಿಲ್ಲಾ ಘಟಕದ ಅಧ್ಯಕ್ಷ ಡಿ.ಎಸ್.ಹಳ್ಳಿ ಮಲ್ಲಿಕಾರ್ಜನ್, ಮುಖಂಡರಾದ ಚಿಕ್ಕಹಳ್ಳಿ ತಿಪ್ಪೇಸ್ವಾಮಿ, ರವಿಕೊಗುಂಡೆ, ಸೂರಪ್ಪ ನಾಯಕ, ಮಾಲಮ್ಮ, ಉಮ್ಮಕ್ಕ, ಸರೋಜಮ್ಮ, ಜಯ್ಯಮ್ಮ, ಪೆದ್ದಮ್ಮ, ಅಂಜಿನಮ್ಮ, ಕುಶಲಮ್ಮ, ಬೇಡರೆಡ್ಡಿಹಳ್ಳಿ ಬಸವರೆಡ್ಡಿ, ಚಂದ್ರೇಶೇಖರ್ ನಾಯ್ಕ್, ಮಲಸಮುದ್ರ ಗಂಗಾಧರ, ಪ್ರಶಾಂತ ರೆಡ್ಡಿ, ತಿಮ್ಮಯ್ಯ, ಚಂದ್ರಣ್ಣ, ಕೋಡಿಹಳ್ಳಿ ಹನುಮಂತಪ್ಪ, ಕೆಂಚವೀರಮ್ಮ ಈಶ್ವರಮ್ಮ, ರವಿಕುಮಾರ್ ಇದ್ದರು.
‘ರೈತರ ಆರೋಪದ ಅನುಸಾರ ಬಹದ್ದೂರ್‌ಘಟ್ಟ ಸಹಕಾರ ಸಂಘಕ್ಕೆ ಜಿಲ್ಲಾ ಸಹಕಾರ ಮಂಡಳಿ ಸರಬರಾಜು ಮಾಡಿದ 20–20–0–23 ರಸಗೊಬ್ಬರದ ಗುಣಮಟ್ಟ ಪರಿಶೀಲನೆ ಮಾಡಲಾಗಿದೆ. ಪ್ರಯೋಗಾಲಯದ ವರದಿಯಲ್ಲಿ ಕಳಪೆ ಎಂದು ಕಂಡುಬಂದಿಲ್ಲ. ಜೊತೆಗೆ ರಸಗೊಬ್ಬರಕ್ಕೆ ಯಾವುದೇ ಮುಕ್ತಾಯದ ಅವಧಿ ಇರುವುದಿಲ್ಲ’ ಎಂದು ಕೃಷಿ ಜಂಟಿ ನಿರ್ದೇಶಕ ಬಿ.ಮಂಜುನಾಥ್ ಸ್ಪಷ್ಟನೆ ನೀಡಿದ್ದಾರೆ. ‘ಅರಳು ರೂಪದ ಬದಲಾಗಿ ಪೌಡರ್ ರೂಪದಲ್ಲಿರುವ ರಸಗೊಬ್ಬರವನ್ನು ಟ್ರ್ಯಾಕ್ಟರ್ ಚಾಲಿತ ಬಿತ್ತನೆ ಯಂತ್ರದ ಮೂಲಕ ಬಿತ್ತನೆ ಮಾಡಲು ಸಾಧ್ಯವಿಲ್ಲ ಎಂದು ರೈತರು ದೂರಿದ್ದಾರೆ. ಹೀಗಾಗಿ ಪೌಡರ್ ರೂಪದಲ್ಲಿರುವ ರಸಗೊಬ್ಬರವನ್ನು ವಾಪಸ್ ಪಡೆಯಲಾಗಿದೆ’ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.