ಚಿತ್ರದುರ್ಗ: ಹಳೇ ರಾಷ್ಟ್ರೀಯ ಹೆದ್ದಾರಿ ಬದಿಯ ಕುಂಚಿಗನಾಳ್ ಕಣಿವೆಯಲ್ಲಿ (ಗುಡ್ಡ) ನೂತನ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ ನಿರ್ಮಾಣ ಕಾಮಗಾರಿ ಅಂತಿಮ ಹಂತಕ್ಕೆ ಬಂದಿದೆ. ಆದರೆ ನಗರದಿಂದ 2 ಕಿ.ಮೀ ದೂರದಲ್ಲಿರುವ, ನೀರು–ನೆರಳಿಲ್ಲದ ಗುಡ್ಡದ ಮೇಲೆ ಜಿಲ್ಲೆಯ ಇಡೀ ಆಡಳಿತ ಯಂತ್ರ ಸ್ಥಳಾಂತರಗೊಳ್ಳುತ್ತಿರುವುದು ಸಾರ್ವಜನಿಕರಲ್ಲಿ ಗೊಂದಲ ಮೂಡಿಸಿದೆ.
ಹೆಸರೇ ಹೇಳುವಂತೆ ಅದೊಂದು ಕಣಿವೆ. ಕಾಲಿಟ್ಟರೆ ಕಲ್ಲು, ಮುಳ್ಳುಗಳ ದುರ್ಗಮ ಹಾದಿ. ಇದು ನಗರದಿಂದ 2 ಕಿ.ಮೀ ದೂರ ಇದ್ದರೆ, ಹೆದ್ದಾರಿಯಿಂದ ಅರ್ಧ ಕಿ.ಮೀ ದೂರವನ್ನು ಗುಡ್ಡದ ಮೇಲೆ ಸಾಗಬೇಕು. ಮೇಲೆ ನಿಂತರೆ ಸುತ್ತಲಿನ ಹಸಿರು ಪರಿಸರ ಕಣ್ಣಿಗೆ ಕಟ್ಟುತ್ತದೆ. ನೋಡಲು ಪ್ರವಾಸಿ ತಾಣದಂತೆಯೇ ಇದೆ. ಆದರೆ ಇಡೀ ಜಿಲ್ಲಾಡಳಿತವನ್ನು ಕಣಿವೆಯೊಂದಕ್ಕೆ ಸ್ಥಳಾಂತರ ಮಾಡುತ್ತಿರುವುದರಿಂದ ಜಿಲ್ಲೆಯ ಆಡಳಿತ ಯಂತ್ರ ಸಾಮಾನ್ಯ ಜನರ ಕೈಗೆ ಎಟುಕುವುದೇ ಎಂಬ ಅನುಮಾನ ಸೃಷ್ಟಿಯಾಗಿದೆ.
ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿ ಕಚೇರಿಗಳು ನಗರದ ಹೊರವಲಯದಲ್ಲಿವೆ. ನಗರದೊಳಗೆ ವಿಶಾಲವಾದ ಜಾಗ ಸಿಗದು ಎನ್ನುವ ಕಾರಣಕ್ಕೆ ಕೊಂಚ ದೂರದಲ್ಲೇ ಕಚೇರಿ ನಿರ್ಮಾಣ ಮಾಡಿದ್ದಾರೆ. ಆದರೆ ಕಣಿವೆಯಲ್ಲಿ, ಕುರುಚಲು ಕಾಡಿನಲ್ಲಿ, ಗುಡ್ಡದ ಮೇಲೆ ಜಿಲ್ಲಾಧಿಕಾರಿ ಕಚೇರಿ ನಿರ್ಮಾಣ ಮಾಡಿರುವುದು ಚಿತ್ರದುರ್ಗದಲ್ಲಿ ಮಾತ್ರ ಎಂದು ಜನರು ಆರೋಪಿಸುತ್ತಾರೆ.
ದೂರದ ಊರುಗಳಿಂದ ಬರುವ ಜನರು ಜಿಲ್ಲಾಧಿಕಾರಿ ಕಚೇರಿಗೆ ಹೋಗಲು ಪ್ರತ್ಯೇಕವಾಗಿ ಹೆಚ್ಚುವರಿ ಪ್ರಯಾಣ ಮಾಡಬೇಕಾದ ಅನಿವಾರ್ಯತೆ ಇದೆ. ಹೆದ್ದಾರಿ ಬದಿಯಿಂದ ಮತ್ತೆ ಅರ್ಧ ಕಿ.ಮೀ ಕಣಿವೆ ಹತ್ತಿ ಸಾಗಬೇಕು. ಹಿರಿಯ ನಾಗರಿಕರಿಗೆ ಕಚೇರಿ ತಲುಪುವುದು ಸಾಹಸದ ಕೆಲಸವೇ ಆಗಿದೆ. ಸದ್ಯ ನೂತನ ಕಚೇರಿ ಸಂಕೀರ್ಣಕ್ಕೆ ಕುಡಿಯುವ ನೀರಿನ ಸರಬರಾಜು ಇಲ್ಲ. ಜೊತೆಗೆ ಇದ್ದ ಮರಗಳು, ಕುರುಚಲು ಸಸ್ಯಗಳನ್ನೆಲ್ಲಾ ಕಟ್ಟಡ ಕಾಮಗಾರಿಗಾಗಿ ಕಡಿದು ಹಾಕಲಾಗಿದೆ. ಹೀಗಾಗಿ ಕಚೇರಿ ಸ್ಥಳಕ್ಕೆ ಭೇಟಿ ನೀಡಿದರೆ ನೀರು, ನೆರಳು ದೊರೆಯದ ಭಾವನೆ ಮನಸ್ಸಿನಲ್ಲಿ ಮೂಡುತ್ತದೆ.
ನೂತನ ಕಚೇರಿ ಸಂಕೀರ್ಣಕ್ಕೆ ವಾಣಿವಿಲಾಸ ಸಾಗರ ಜಲಾಶಯದಿಂದ ಕುಡಿಯುವ ನೀರು ಪೂರೈಸಲು ಯೋಜನೆ ರೂಪಿಸಲಾಗಿದೆ. ಜೊತೆಗೆ ರಸ್ತೆಗಳು, ಚರಂಡಿ, ಮಾರಾಟ ಮಳಿಗೆಗಳು, ನೆರಳಿನ ವ್ಯವಸ್ಥೆಗಾಗಿ ಹೆಚ್ಚು ಹಣ ಖರ್ಚು ಮಾಡಬೇಕಾಗಿದೆ. ಸದ್ಯಕ್ಕೆ 100X 150 ಅಡಿ ಅಳತೆಯಲ್ಲಿ ಜಿ ಪ್ಲಸ್–2 ಕಟ್ಟಡ ಕಾಮಗಾರಿ ಪೂರ್ಣಗೊಳ್ಳುವ ಹಂತಕ್ಕೆ ತಲುಪಿದೆ. ಮೂಲಸೌಲಭ್ಯ ಒದಗಿಸುವ ಕಾಮಗಾರಿಗಳು ಇನ್ನೂ ಆರಂಭಗೊಳ್ಳಬೇಕಿವೆ.
ಬಿಜೆಪಿ ಸರ್ಕಾರದ ಅವಧಿಯಲ್ಲಿ (2021) ನೂತನ ಜಿಲ್ಲಾಧಿಕಾರಿ ಕಚೇರಿ ಕಾಮಗಾರಿ ಆರಂಭವಾಯಿತು. ಅದೇ ಸಂದರ್ಭದಲ್ಲಿ ಕ್ಯಾದಿಗೆರೆ ಬಳಿ ರಾಷ್ಟ್ರೀಯ ಹೆದ್ದಾರಿಯ ಬೈಪಾಸ್ ಕಾಮಗಾರಿಯೂ ಆರಂಭಗೊಂಡಿತ್ತು. ಹೆದ್ದಾರಿ ಕಾಮಗಾರಿ ನಡೆಸುತ್ತಿದ್ದ ಕಂಪನಿ ಕುಂಚಿಗನಾಳ್ ಕಣಿವೆಯಲ್ಲಿ ಕಲ್ಲು ಗಣಿಗಾರಿಕೆ ನಡೆಸಿ ಮಣ್ಣು, ಕಲ್ಲು ಸಾಗಿಸಿತ್ತು. ಇದು ಅಕ್ರಮ ಗಣಿಗಾರಿಕೆಯಾಗಿದ್ದ ಕಾರಣ ಗಣಿ ಮತ್ತು ಭೂವಿಜ್ಞಾನ ಇಲಾಖೆಯು ಕಂಪನಿಗೆ ₹ 1.50 ಕೋಟಿ ದಂಡ ವಿಧಿಸಿತ್ತು.
‘ಗಣಿಗಾರಿಕೆಯಿಂದ ಕಣಿವೆ ಜಾಗ ತನ್ನ ಮೂಲ ಸ್ವರೂಪ ಕಳೆದುಕೊಂಡಿತ್ತು. ರಸ್ತೆಗಳು ನಿರ್ಮಾಣವಾಗಿದ್ದವು. ಜಾಗ ಕೊಂಚ ಮಟ್ಟವಾದಂತಾಗಿತ್ತು. ಯಾರೋ ಪುಣ್ಯಾತ್ಮರು ಅದನ್ನು ನೋಡಿ ಜಿಲ್ಲಾಡಳಿತ ಭವನಕ್ಕೆ ಇದೇ ಸೂಕ್ತ ಸ್ಥಳ ಎಂದು ನಿಗದಿ ಮಾಡಿದರು. ಸರ್ಕಾರವೂ ಒಪ್ಪಿತು. ಕಡೆಗೆ ನೀರು, ನೆರಳಿಲ್ಲದ ಗುಡ್ಡದ ಮೇಲೆ ಕಾಮಗಾರಿಯೂ ಆರಂಭಗೊಂಡಿತು. ಈಗ ಜನರು ಅದರ ಫಲವನ್ನು ಅನುಭವಿಸಬೇಕಿದೆ’ ಎಂದು ವಕೀಲ ಪ್ರತಾಪ್ ಜೋಗಿ ಆರೋಪಿಸಿದರು.
ಕಂದಾಯ ಸಚಿವರಿಗೆ ದಿಗ್ಭ್ರಾಂತಿ: ನೂತನ ಜಿಲ್ಲಾಧಿಕಾರಿ ಕಚೇರಿ ಪರಿಶೀಲನೆಗಾಗಿ ಈಚೆಗೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಸ್ಥಳಕ್ಕೆ ಭೇಟಿ ನೀಡಿದ್ದರು. ಗುಡ್ಡದ ಮೇಲೆ ಬಂದ ಅವರು ಕಚೇರಿ ಕಟ್ಟಡ ನಿರ್ಮಾಣಕ್ಕಾಗಿ ಆಯ್ಕೆ ಮಾಡಿಕೊಂಡ ಸ್ಥಳದ ಬಗ್ಗೆ ದಿಗ್ಭ್ರಾಂತಿ ವ್ಯಕ್ತಪಡಿಸಿದ್ದರು. ‘ಕಚೇರಿ ನಗರದಿಂದ ತುಂಬಾ ದೂರ ಇದೆ. ಗುಡ್ಡದಲ್ಲಿ ಕಚೇರಿ ನಿರ್ಮಾಣ ಮಾಡಲು ಮುಂದಾಗಿರುವುದು ಸರಿಯಲ್ಲ. ಇಲ್ಲಿ ನೀರಿನ ಸೌಲಭ್ಯವೂ ಇಲ್ಲ. ಆಗಿನ ಸರ್ಕಾರ ಏಕೆ ಇಂತಹ ಸ್ಥಳ ಆಯ್ಕೆ ಮಾಡಿಕೊಂಡಿತು ಎಂಬ ಪ್ರಶ್ನೆ ನನ್ನನ್ನು ಕಾಡುತ್ತಿದೆ’ ಎಂದು ತಿಳಿಸಿದ್ದರು.
‘ಕಟ್ಟಡದ ಕಾಮಗಾರಿ ಆರಂಭವಾದ ಸಂದರ್ಭದಲ್ಲಿ ₹ 25 ಕೋಟಿ ವೆಚ್ಚಕ್ಕೆ ಯೋಜನೆ ರೂಪಿಸಲಾಗಿತ್ತು. ಆದರೆ ಯೋಜನೆಯಲ್ಲಿ ಸಾಕಷ್ಟು ಬದಲಾವಣೆಗಳು ಆದ ಕಾರಣ ಸದ್ಯ ಯೋಜನಾ ವೆಚ್ಚ ₹ 47 ಕೋಟಿಗೆ ತಲುಪಿದೆ. ಇನ್ನೂ ₹ 15 ಕೋಟಿ ಅವಶ್ಯಕತೆ ಇದೆ ಎಂದು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಎಲ್ಲವೂ ಅಂದಕೊಂಡಂತೆ ನಡೆದರೆ ಇನ್ನು 6 ತಿಂಗಳಲ್ಲಿ ಕಾಮಗಾರಿ ಮುಗಿಯಲಿದೆ’ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.
ಕಚೇರಿ ಕಟ್ಟಡ ಕಾಮಗಾರಿಯು ಲೋಕೋಪಯೋಗಿ ಇಲಾಖೆ ಉಸ್ತುವಾರಿಯಲ್ಲಿ ನಡೆಯುತ್ತಿದೆ. ಅಪೂರ್ವ ನಿರ್ಮಾಣ ಕಂಪನಿಯು ನಿರ್ಮಾಣದ ಜವಾಬ್ದಾರಿ ಹೊತ್ತುಕೊಂಡಿದೆ. ಸರ್ಕಾರ ₹ 15 ಕೋಟಿ ಬಿಡುಗಡೆ ಮಾಡಿದರೆ ಮಾತ್ರ 6 ತಿಂಗಳೊಳಗೆ ಕಾಮಗಾರಿ ಮುಗಿಯುತ್ತದೆ. ಆದಷ್ಟು ಬೇಗ ಹಣ ಬಿಡುಗಡೆ ಮಾಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಅವರು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
‘ನೂತನ ಜಿಲ್ಲಾಡಳಿತ ಭವನದಲ್ಲಿ 16 ಇಲಾಖೆಗಳು ಒಂದೇ ಸೂರಿನಡಿ ಬರಲಿವೆ. ಬಹುತೇಕ ಮುಖ್ಯ ಕಚೇರಿಗಳು ಇದೇ ಭವನದಲ್ಲಿ ಬರುವ ಕಾರಣ ಇಡೀ ಜಿಲ್ಲೆಯ ಜನರು ಕುಂಚಿಗನಾಳ್ ಕಣಿವೆಗೆ ಬರಬೇಕಾದ ಅನಿವಾರ್ಯತೆ ಇದೆ. ಈಗಿರುವ ಚಿತ್ರದುರ್ಗದ ಜಿಲ್ಲಾಧಿಕಾರಿ ಕಚೇರಿ ಕಟ್ಟಡ ಸುಮಾರು 150 ವರ್ಷ ಹಳೆಯದು. ಪುರಾತನ ಕಟ್ಟಡವಾಗಿರುವ ಕಾರಣಕ್ಕೆ ನಿತ್ಯದ ಚಟುವಟಿಕೆಗೆ ಸ್ಥಳಾವಕಾಶದ ಕೊರತೆ ಉಂಟಾಗುತ್ತಿದೆ. ಹೀಗಾಗಿ ಕಚೇರಿ ಸ್ಥಳಾಂತರ ನಡೆಯಲೇಬೇಕಾದ ಅನಿವಾರ್ಯತೆ ಇದೆ. ನೂತನ ಕಚೇರಿ ತಲುಪಲು ಸಕಲ ಸೌಲಭ್ಯ ಒದಗಿಸಬೇಕು’ ಎಂದು ಸ್ಥಳೀಯರು ಆಗ್ರಹಿಸುತ್ತಾರೆ.
ಜಿಲ್ಲಾಡಳಿತ ಭವನಕ್ಕೆ ಕುಡಿಯುವ ನೀರು ಸೇರಿದಂತೆ ಸಕಲ ಮೂಲ ಸೌಲಭ್ಯ ಒದಗಿಸಲು ಯೋಜನೆ ರೂಪಿಸಲಾಗಿದೆ. ಕಂದಾಯ ಸಚಿವರೂ ಪರಿಶೀಲನೆ ನಡೆಸಿದ್ದು ಶೀಘ್ರ ಕಾಮಗಾರಿ ಮುಗಿಯಲಿದೆಟಿ.ವೆಂಕಟೇಶ್ ಜಿಲ್ಲಾಧಿಕಾರಿ
ಹೊಸ ಜಿಲ್ಲಾಧಿಕಾರಿ ಕಚೇರಿಯನ್ನು ನಗರದಿಂದ 2 ಕಿ.ಮೀ. ದೂರದಲ್ಲಿ ನಿರ್ಮಿಸಿರುವುದರಿಂದ ಜನಸಾಮಾನ್ಯರಿಗೆ ತುಂಬಾ ತೊಂದರೆಯಾಗುತ್ತದೆ. ಅಲ್ಲದೆ ಇದೇ ನೆಪ ಮಾಡಿಕೊಂಡು ಆಟೊದವರು ಹೆಚ್ಚು ಹಣ ವಸೂಲಿ ಮಾಡಲು ಮುಂದಾಗುತ್ತಾರೆ. ಬಡವರಿಗೆ ಆರ್ಥಿಕ ಹೊರೆಯಾಗುತ್ತದೆಜಿ. ನಟರಾಜ್ ಚಿಕ್ಕಜಾಜೂರು ನಿವಾಸಿ
ಜಿಲ್ಲಾಧಿಕಾರಿ ಕಚೇರಿಯ ನೂತನ ಕಟ್ಟಡ ದಶಕದ ಕನಸು. ಈ ಕಟ್ಟಡವನ್ನು ಚಿತ್ರದುರ್ಗ ನಗರದೊಳಗೆ ನಿರ್ಮಿಸಿದ್ದರೆ ತುಂಬಾ ಅನುಕೂಲವಾಗುತ್ತಿತ್ತು. ನಾಯಕನಹಟ್ಟಿ ಹೋಬಳಿಯಿಂದ ಜಿಲ್ಲಾಧಿಕಾರಿ ಕಚೇರಿಗೆ ತೆರಳಲು ಅಂದಾಜು 45 ಕಿ.ಮೀ. ಕ್ರಮಿಸಬೇಕಿದೆಎನ್.ಸಿ.ತಿಪ್ಪೇಸ್ವಾಮಿ ನಾಯಕನಹಟ್ಟಿ ನಿವಾಸಿ
- ಸಮತಟ್ಟು ಕೆಲಸಕ್ಕೆ ₹ 10 ಕೋಟಿ; ಕಳಪೆ ಕಾಮಗಾರಿ ಗುಡ್ಡಗಾಡು ಪ್ರದೇಶವನ್ನು ಮಟ್ಟ ಮಾಡುವುದಕ್ಕಾಗಿ ₹ 10 ಕೋಟಿ ಖರ್ಚಾಗಿದೆ ಎಂದು ಲೋಕೋಪಯೋಗಿ ಇಲಾಖೆ ಮಾಹಿತಿ ನೀಡಿದೆ. ಕಾಮಗಾರಿ ಆರಂಭವಾಗುವುದಕ್ಕೆ ಮೊದಲೇ ಬೈಪಾಸ್ ಕಾಮಗಾರಿಗೆ ಮಣ್ಣು ತೆಗೆಯಲು ಇದನ್ನು ಅಗೆಯಲಾಗಿತ್ತು. ಆದರೂ ಭೂಮಿ ಸಮತಟ್ಟು ಮಾಡಲು ₹ 10 ಕೋಟಿ ಖರ್ಚಾಗಿದೆ ಎನ್ನುವ ವಿಷಯ ಚರ್ಚೆಗೆ ಕಾರಣವಾಗಿದೆ. ಜೊತೆಗೆ ಕಟ್ಟಡ ಕಾಮಗಾರಿ ಕಳಪೆ ಗುಣಮಟ್ಟದಿಂದ ಕೂಡಿದೆ ಎಂಬ ಆರೋಪಗಳೂ ಕೇಳಿಬಂದಿವೆ. ಗುಡ್ಡದ ಮೇಲೆ ವೈಜ್ಞಾನಿಕ ರೀತಿಯಲ್ಲಿ ಕಾಮಗಾರಿ ನಡೆಸಿಲ್ಲ ಅಕ್ರಮ ಗಣಿಗಾರಿಕೆ ನಡೆಸಿದ ಜಾಗದಲ್ಲಿ ಕಟ್ಟಡ ನಿರ್ಮಿಸಲಾಗಿದೆ. ಸಾವಿರಾರು ಮರ ಕತ್ತರಿಸಲಾಗಿದೆ ಎಂದು ಆರೋಪಿಸಿ ಹೈಕೋರ್ಟ್‌ನಲ್ಲಿ ಪ್ರಕರಣ ದಾಖಲು ಮಾಡಲಾಗಿತ್ತು. ಕಾಮಗಾರಿ ಮುಂದುವರಿಸದಂತೆ ತಡೆಯಾಜ್ಞೆಯನ್ನೂ ತರಲಾಗಿತ್ತು. ತಡೆಯಾಜ್ಞೆ ತೆರವುಗೊಂಡ ನಂತರ ಕಾಮಗಾರಿ ಮುಂದುವರಿಸಲಾಗಿದೆ. ‘ಕಟ್ಟಡದ ಸುತ್ತಲೂ ಗುಡ್ಡ ಕೊರೆಯಲಾಗಿದ್ದು ಭಾರಿ ಮಳೆ ಸುರಿದರೆ ಕಟ್ಟಡದ ಮೇಲೆಯೇ ಗುಡ್ಡ ಕುಸಿಯುವ ಭೀತಿ ಇದೆ. ವೈಜ್ಞಾನಿಕ ರೀತಿಯಲ್ಲಿ ಸಮರ್ಪಕ ಕಾಮಗಾರಿ ನಡೆದ ನಂತರವಷ್ಟೇ ಕಟ್ಟಡವನ್ನು ಲೋಕಾರ್ಪಣೆ ಮಾಡಬೇಕು’ ಎಂದು ರೈತ ಸಂಘದ ಮುಖಂಡರೊಬ್ಬರು ಹೇಳಿದರು.
ಗಗನಕ್ಕೇರಿದ ಭೂಮಿಯ ಬೆಲೆ ಕುಂಚಿಗನಾಳ್ ಕಣಿವೆ ಪ್ರದೇಶದಲ್ಲಿ ಜಿಲ್ಲಾಧಿಕಾರಿ ಕಚೇರಿ ತಲೆ ಎತ್ತಲಿದೆ ಎಂಬ ಸುದ್ದಿ ಹರಿದಾಡಿದ ನಂತರ ಸುತ್ತಮುತ್ತಲಿನ ಭಾಗದ ಜಮೀನಿನ ದರ ಗಗನಕ್ಕೇರಿದೆ. ಕಳೆದ ಮೂರು ವರ್ಷಗಳ ಹಿಂದೆ ಎಕರೆ ಭೂಮಿಯ ಬೆಲೆ ಲಕ್ಷಗಳಲ್ಲಿತ್ತು. ಆದರೆ ಈಗ ಕೋಟಿ ಮೀರಿದ್ದು ಭೂಮಿಗೆ ಬಲು ಬೇಡಿಕೆ ಸೃಷ್ಟಿಯಾಗಿದೆ. ಕಣಿವೆ ಪ್ರದೇಶದಿಂದ ಕ್ಯಾದಿಗೆರೆ ಬೈಪಾಸ್‌ವರೆಗೂ ಹತ್ತಾರು ಖಾಸಗಿ ಲೇಔಟ್‌ಗಳು ತಲೆ ಎತ್ತಿವೆ. ಕೆಲವರು ಗುಡ್ಡವನ್ನೇ ಕೊರೆದು ಅಕ್ರಮವಾಗಿ ಲೇಔಟ್ ಮಾಡಿದ್ದಾರೆ. ಕುಂಚಿಗನಾಳ್ ಕಣಿವೆ ಸುತ್ತಲೂ ರಿಯಲ್ ಎಸ್ಟೇಟ್ ಚಟುವಟಿಕೆಗಳು ಗರಿಗೆದರಿವೆ. ಈಗಾಗಲೇ ಹಲವು ಹೋಟೆಲ್ ಡಾಬಾಗಳು ತಲೆ ಎತ್ತಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.