ADVERTISEMENT

ಗುರುತಿಪ್ಪೇರುದ್ರಸ್ವಾಮಿ ದೊಡ್ಡ ಕಾರ್ತಿಕೋತ್ಸವ

ರಥಕ್ಕೆ ಚೂರುಬೆಲ್ಲ, ಮೆಣಸು ತೂರಿ ಭಕ್ತಿ ಅರ್ಪಿಸಿದ ಭಕ್ತರು

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2021, 2:16 IST
Last Updated 11 ಡಿಸೆಂಬರ್ 2021, 2:16 IST
ನಾಯಕನಹಟ್ಟಿ ಪಟ್ಟಣದಲ್ಲಿ ಶುಕ್ರವಾರ ಗುರುತಿಪ್ಪೇರುದ್ರಸ್ವಾಮಿ ದೊಡ್ಡ ಕಾರ್ತಿಕೋತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಂಭ್ರಮ, ಸಡಗರದಿಂದ ಜರುಗಿತು.
ನಾಯಕನಹಟ್ಟಿ ಪಟ್ಟಣದಲ್ಲಿ ಶುಕ್ರವಾರ ಗುರುತಿಪ್ಪೇರುದ್ರಸ್ವಾಮಿ ದೊಡ್ಡ ಕಾರ್ತಿಕೋತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಂಭ್ರಮ, ಸಡಗರದಿಂದ ಜರುಗಿತು.   

ನಾಯಕನಹಟ್ಟಿ: ಐತಿಹಾಸಿಕ ಶ್ರೀಗುರು ತಿಪ್ಪೇರುದ್ರಸ್ವಾಮಿ ದೊಡ್ಡ ಕಾರ್ತಿಕೋತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ಶುಕ್ರವಾರ ಸಂಭ್ರಮ, ಸಡಗರದಿಂದ ಜರುಗಿತು.

ಮಧ್ಯಾಹ್ನ 3 ಗಂಟೆಗೆ ಸರಿಯಾಗಿ ರಥೋತ್ಸವ ಆರಂಭವಾಯಿತು. ಸಂಪ್ರದಾಯದಂತೆ ಉತ್ಸವ ಮೂರ್ತಿಯನ್ನು ಬಂಗಾರದ ಕಿರೀಟ, ಚಿನ್ನದ ಸರಗಳು ಸೇರಿ ನಾನಾ ಆಭರಣ
ಗಳಿಂದ ಸಿಂಗರಿಸಲಾಗಿತ್ತು. ಸೇವಂತಿ, ಮಲ್ಲಿಗೆ, ಕನಕಾಂಬರ ಸೇರಿ ಹೂವಿನ ಹಾರಗಳ ಅಲಂಕಾರ ವಿಶೇಷವಾಗಿತ್ತು. ರಥಕ್ಕೆ ಮೂರು ಸುತ್ತು ಬಣ್ಣದ ಪಟಗಳನ್ನು ಅಳವಡಿಸಲಾಗಿತ್ತು. ಅಲಂಕಾರ ಮುಕ್ತಾಯಗೊಂಡ ನಂತರ ಮಹಾಮಂಗಳಾರತಿ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಒಳಮಠದಿಂದ ದಾಸೋಹ ಭವನದ ದಾರಿಯಲ್ಲಿ ರಥವು ಸಾಗಿತು. ಕರಡಿ ಮಜಲು, ನಂದಿಧ್ವಜ ಕುಣಿತ ರಥದ ಮುಂಭಾಗ ಸಾಗಿದವು.

ದಾರಿಯುದ್ದಕ್ಕೂ ಮಹಿಳೆಯರು, ಮಕ್ಕಳು ರಥಕ್ಕೆ ಹಣ್ಣು ಕಾಯಿ ಕೊಟ್ಟು ಹರಕೆ ಸಲ್ಲಿಸಿದರು. ಚೂರು ಬೆಲ್ಲ ಮೆಣಸು, ಬಾಳೆಹಣ್ಣನ್ನು ರಥಕ್ಕೆ ಹಾಕಿ ಭಕ್ತಿ ಸಮರ್ಪಿಸಿದರು. ರಥವು ಆಂಜನೇಯ ದೇವಸ್ಥಾನದ ಮುಂಭಾಗದಿಂದ ಮತ್ತೆ ಒಳಮಠದತ್ತ ಸಾಗಿತು. ಸ್ವಾಮಿಯನ್ನು ಗುಡಿತುಂಬಿಸಲಾಯಿತು.

ADVERTISEMENT

ಕಳೆದ ಶುಕ್ರವಾರ ಜರುಗಿದ ಚಿಕ್ಕ ಕಾರ್ತಿಕೋತ್ಸವವು ನಾಯಕನಹಟ್ಟಿಯ ಗ್ರಾಮಸ್ಥರು ಆಚರಿಸಿದರು. ದೊಡ್ಡ ಕಾರ್ತಿಕೋತ್ಸವದಲ್ಲಿ ದೂರದೂರಿನಿಂದ ಬಂದ ನೂರಾರು ಭಕ್ತರು ರಥೋತ್ಸವಕ್ಕೆ ಸಾಕ್ಷಿಯಾದರು. ತವರು ಮನೆಗೆ ಬಂದಂತಹ ಹೆಣ್ಣುಮಕ್ಕಳಿಗೆ ಬಳೆ ಕೊಡಿಸುವ ಸಂಪ್ರದಾಯವಿರುವುದರಿಂದ ತೇರು ಬೀದಿಯಲ್ಲಿ ಬಳೆ ವ್ಯಾಪಾರ ಜೋರಾಗಿತ್ತು.

ದೇವಾಲಯದ ಇಒ ಮಂಜುನಾಥ್ ಬಿ. ವಾಲಿ, ದೇವಾಲಯ ಸಿಬ್ಬಂದಿ ಸತೀಶ್ ಹಾಗೂ ಪಟ್ಟಣದ ಪ್ರಮುಖರು, ಸ್ಥಳೀಯ ಜನಪ್ರತಿನಿಧಿಗಳು ಈ ಸಂದರ್ಭದಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.