ADVERTISEMENT

ಕೋಟೆ ಅಭಿವೃದ್ಧಿಗೆ ₹ 8 ಕೋಟಿ: ತ್ವರಿತ ಕಾಮಗಾರಿಗೆ ಶಾಸಕ ತಿಪ್ಪಾರೆಡ್ಡಿ ಸೂಚನೆ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2021, 6:50 IST
Last Updated 26 ಸೆಪ್ಟೆಂಬರ್ 2021, 6:50 IST
ಜಿ.ಎಚ್‌.ತಿಪ್ಪಾರೆಡ್ಡಿ
ಜಿ.ಎಚ್‌.ತಿಪ್ಪಾರೆಡ್ಡಿ   

ಚಿತ್ರದುರ್ಗ: ಐತಿಹಾಸಿಕ ಕಲ್ಲಿನ ಕೋಟೆಯನ್ನು ಪ್ರವಾಸಿ ಸ್ನೇಹಿಯಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ₹ 8.11 ಕೋಟಿ ವೆಚ್ಚದ ಹಲವು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಇದರಿಂದ ಕೋಟೆ ಇನ್ನಷ್ಟು ಮೆರುಗು ಪಡೆಯಲಿದೆ ಎಂದು ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ ತಿಳಿಸಿದರು.

ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೋಟೆಗೆ ಭೇಟಿ ನೀಡುವ ಪ್ರವಾಸಿಗರಿಗೆ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಹಲವು ಕಾಮಗಾರಿ ಕೈಗೊಳ್ಳುವ ಅಗತ್ಯವಿದೆ ಎಂಬುದನ್ನು ಕರ್ನಾಟಕ ಪ್ರವಾಸೋದ್ಯಮ ಮಿಷನ್‌ ಸರ್ಕಾರದ ಗಮನಕ್ಕೆ ತಂದಿತ್ತು. ಸುಮಾರು ₹ 4 ಕೋಟಿ ವೆಚ್ಚದ ಯೋಜನೆಯ ರೂಪುರೇಷೆ ಸಿದ್ಧಪಡಿಸಲಾಗಿತ್ತು. ಸ್ಥಳ ಪರಿಶೀಲನೆಯ ಬಳಿಕ ಯೋಜನಾ ವೆಚ್ಚವನ್ನು ₹ 8.15 ಕೋಟಿಗೆ ಹೆಚ್ಚಿಸಲಾಗಿತ್ತು’ ಎಂದು ಮಾಹಿತಿ ನೀಡಿದರು.

‘₹ 3.35 ಕೋಟಿ ವೆಚ್ಚದಲ್ಲಿ ಪಾದಚಾರಿ ಮಾರ್ಗ, ₹ 94 ಲಕ್ಷ ವೆಚ್ಚದಲ್ಲಿ ಶೌಚಾಲಯ, ಕುಡಿಯುವ ನೀರಿನ ಬ್ಲಾಕ್‌ಗೆ ₹ 60 ಲಕ್ಷ, ಕುಡಿಯುವ ನೀರಿನ ಘಟಕಕ್ಕೆ ₹ 36 ಲಕ್ಷ, ಸೂಚನಾ ಫಲಕಕ್ಕೆ ₹ 35 ಲಕ್ಷ ಹೀಗೆ ಹಲವು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಈ ಪೈಕಿ ₹ 1.43 ಕೋಟಿ ಅನುದಾನ ಈಗಾಗಲೇ ಬಿಡುಗಡೆ ಆಗಿದೆ. ಟೆಂಡರ್‌ ಪ್ರಕ್ರಿಯೆ ನಡೆಯುತ್ತಿದೆ’ ಎಂದು ಮಾಹಿತಿ ನೀಡಿದರು.

ADVERTISEMENT

‘ಚಿತ್ರದುರ್ಗ ಕೋಟೆಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ, ಪ್ರವಾಸಿಗರಿಗೆ ಪೂರಕವಾದ ಸೌಲಭ್ಯ ಬೆಟ್ಟದಲ್ಲಿ ಇಲ್ಲ ಎಂಬ ದೂರು ಬಂದಿದ್ದವು. ಕುಡಿಯುವ ನೀರು, ಶೌಚಾಲಯ ಸೌಲಭ್ಯ ಕಲ್ಪಿಸಲು ರಾಜ್ಯ ಸರ್ಕಾರ ಮುಂದಾಗಿತ್ತು. ಭಾರತೀಯ ಪುರಾತತ್ವ ಮತ್ತು ಸರ್ವೇಕ್ಷಣಾ ಇಲಾಖೆ ವ್ಯಾಪ್ತಿಗೆ ಒಳಪಟ್ಟಿರುವ ಕೋಟೆಯ ಅಭಿವೃದ್ಧಿಗೆ ಕೇಂದ್ರ ಸರ್ಕಾರದ ಅನುಮತಿ ಸಿಗುವುದು ಕೊಂಚ ವಿಳಂಬವಾಯಿತು’ ಎಂದು ಹೇಳಿದರು.

‘ಕೋಟೆಯ ಪ್ರವೇಶದ್ವಾರದ ಬಳಿ ನಡೆಯುತ್ತಿದ್ದ ಕಾಮಗಾರಿ ಪೂರ್ಣಗೊಳ್ಳುವ ಹಂತಕ್ಕೆ ಬಂದಿದೆ. ಶೌಚಾಲಯ, ಟಿಕೆಟ್‌ ಕೌಂಟರ್‌, ಕುಡಿಯುವ ನೀರು, ಪುಸ್ತಕ ಮಳಿಗೆ, ಲಗೇಜ್‌ ರೂಂ ಸಿದ್ಧವಾಗುತ್ತಿವೆ. ಟಿಕೆಟ್‌ ಕೌಂಟರ್‌ ಮತ್ತೊಂದು ಬದಿ ವಸತಿಗೃಹ ನಿರ್ಮಿಸಲಾಗುತ್ತಿದೆ. ಪ್ರವಾಸಿಗರ ವಾಸ್ತವ್ಯ, ಶೌಚಾಲಯದ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ’ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

‘ಕೋಟೆಗೆ ಸಾಕಷ್ಟು ಪ್ರವಾಸಿಗರು ಭೇಟಿ ನೀಡಿದರೂ ಟಿಕೆಟ್‌ನಿಂದ ಸಂಗ್ರಹವಾಗುವ ಹಣ ಕಡಿಮೆಯಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಆನ್‌ಲೈನ್‌ ಟಿಕೆಟ್‌ ಬುಕ್ಕಿಂಗ್‌ ವ್ಯವಸ್ಥೆಯೂ ಸರಿ ಇಲ್ಲ ಎಂಬ ದೂರುಗಳು ಬರುತ್ತಿವೆ. ವಾಹನ ಸಂಚಾರ ಸುಗಮಗೊಳಿಸಲು ಹಾಗೂ ಪಾರ್ಕಿಂಗ್‌ಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲು ಚಿಂತಿಸಲಾಗಿದೆ. ಈ ಬಗ್ಗೆ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು.

ಚಿನ್ನದ ಮುಖಪದ್ಮ ಹಸ್ತಾಂತರ ನಾಳೆ

ಏಕನಾಥೇಶ್ವರಿ ದೇವಿಗೆ ಭಕ್ತರ ನೆರವಿನಿಂದ ಏಕಾನಾಥೇಶ್ವರಿ ಜೀರ್ಣೋದ್ಧಾರ ಸಮಿತಿ ನಿರ್ಮಿಸಿದ 1.5 ಕೆ.ಜಿ. ಚಿನ್ನದ ಮುಖಪದ್ಮವನ್ನು ಸೆ.28ರಂದು ಸರ್ಕಾರಕ್ಕೆ ಹಸ್ತಾಂತರ ಮಾಡಲಾಗುತ್ತದೆ ಎಂದು ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ ಮಾಹಿತಿ ನೀಡಿದರು.

‘300ಕ್ಕೂ ಹೆಚ್ಚು ಭಕ್ತರು ದಾನ ಕೊಟ್ಟಿರುವುದು ಸುಮಾರು ₹ 94 ಲಕ್ಷವಾಗಿದೆ. ಇದರಲ್ಲಿ 1.5 ಕೆ.ಜಿ ಚಿನ್ನದ ಆಭರಣ ಹಾಗೂ 8 ಕೆ.ಜಿ. ಬೆಳ್ಳಿಯ ಆಭರಣಗಳನ್ನು ತಯಾರಿಸಲಾಗಿದೆ. ಇವನ್ನು ತಹಶೀಲ್ದಾರ್‌ ಸತ್ಯನಾರಾಯಣ ಅವರ ಸುಪರ್ದಿಗೆ ನೀಡಲಾಗುತ್ತದೆ. ಉತ್ಸವ, ಜಾತ್ರೆ, ಪೂಜೆಯ ಸಂದರ್ಭದಲ್ಲಿ ಖಜಾನೆಯಿಂದ ತೆಗೆದು ಬಳಸಲಾಗುತ್ತದೆ’ ಎಂದು ವಿವರಿಸಿದರು.

ನಗರಸಭೆ ಸದಸ್ಯ ಶಶಿಧರ್‌, ಜಮೀನ್ದಾರ್‌ ದೊರೆಸ್ವಾಮಿ ಇದ್ದರು.


***

ರಾಜೀವಗಾಂಧಿ ವಸತಿ ನಿಗಮ ಗೃಹ ನಿರ್ಮಾಣಕ್ಕೆ ಅವಕಾಶ ಕಲ್ಪಿಸಿದೆ. ಗ್ರಾಮ ಸಭೆಯ ಮೂಲಕ ಫಲಾನುಭವಿ ಆಯ್ಕೆ ನಡೆಯಲಿದೆ. ನೈಜ ಫಲಾನುಭವಿ ಆಯ್ಕೆಯಲ್ಲಿ ಲೋಪ ಕಂಡುಬಂದರೆ ಸರಿಪಡಿಸಲಾಗುವುದು.

-ಜಿ.ಎಚ್‌.ತಿಪ್ಪಾರೆಡ್ಡಿ, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.