ADVERTISEMENT

ಚಿತ್ರದುರ್ಗ: ಗೋಶಾಲೆ ಪುನರಾರಂಭ

‘ಪ್ರಜಾವಾಣಿ’ ವರದಿ ಫಲಶ್ರುತಿ...

​ಪ್ರಜಾವಾಣಿ ವಾರ್ತೆ
Published 19 ಜೂನ್ 2019, 19:18 IST
Last Updated 19 ಜೂನ್ 2019, 19:18 IST
ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮುರು ತಾಲ್ಲೂಕಿನ ಮುತ್ತಿಗಾರಹಳ್ಳಿಯಲ್ಲಿ ಬುಧವಾರ ಪುನರಾರಂಭಗೊಂಡ ಗೋಶಾಲೆಗೆ ಬಂದ ನೂರಾರು ಜಾನುವಾರು
ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮುರು ತಾಲ್ಲೂಕಿನ ಮುತ್ತಿಗಾರಹಳ್ಳಿಯಲ್ಲಿ ಬುಧವಾರ ಪುನರಾರಂಭಗೊಂಡ ಗೋಶಾಲೆಗೆ ಬಂದ ನೂರಾರು ಜಾನುವಾರು   

ಮೊಳಕಾಲ್ಮುರು (ಚಿತ್ರದುರ್ಗ ಜಿಲ್ಲೆ): ಜಿಲ್ಲೆಯಲ್ಲಿ ಏಕಾಏಕಿ ಮುಚ್ಚಿದ್ದ ಗೋಶಾಲೆಗಳು ಬುಧವಾರ ಮತ್ತೆ ಆರಂಭಗೊಂಡಿದ್ದು, ಜಾನುವಾರು ಮಾಲೀಕರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ಮಳೆ ಕೊರತೆಯಿಂದಾಗಿ ಮೇವಿನ ಲಭ್ಯತೆ ಇಲ್ಲದಿದ್ದರೂ ರಾಷ್ಟ್ರೀಯ ಪ್ರಕೃತಿ ವಿಕೋಪ ನಿರ್ವಹಣೆ ನಿಧಿ (ಎನ್‌.ಡಿ.ಆರ್‌.ಎಫ್‌) ನಿಯಮಾವಳಿ ನೆಪವೊಡ್ಡಿ ಜಿಲ್ಲೆಯಲ್ಲಿ 90 ದಿನಗಳನ್ನು ಪೂರೈಸಿದ ಗೋಶಾಲೆಗಳನ್ನು ಮುಚ್ಚಲು ಜಿಲ್ಲಾಡಳಿತ ಆದೇಶಿಸಿತ್ತು. ಅದರಂತೆ ಮೊಳಕಾಲ್ಮುರು, ಹಿರಿಯೂರು ತಾಲ್ಲೂಕುಗಳ ಗೋಶಾಲೆಗಳನ್ನು ಮುಚ್ಚಲಾಗಿತ್ತು. ಜಾನುವಾರು ಬೀದಿಗೆ ಬಂದ ಬಗ್ಗೆ ಜೂನ್‌ 18ರಂದು ‘ಪ್ರಜಾವಾಣಿ’ಯಲ್ಲಿ ವಿಶೇಷ ವರದಿ ಪ್ರಕಟಗೊಂಡಿತ್ತು. ಇದಕ್ಕೆ ಸ್ಪಂದಿಸಿದ ರಾಜ್ಯ ಸರ್ಕಾರ, ಗೋಶಾಲೆಗಳನ್ನು ಮುಂದುವರಿಸುವಂತೆ ಆದೇಶಿಸಿದ ಹಿನ್ನೆಲೆಯಲ್ಲಿ ಬುಧವಾರದಿಂದ ಗೋಶಾಲೆ ಪುನರಾರಂಭ ಮಾಡಲಾಗಿದೆ.

ಮೊಳಕಾಲ್ಮುರು ತಾಲ್ಲೂಕಿನ ರಾಂಪುರ ಮತ್ತು ಮುತ್ತಿಗಾರಹಳ್ಳಿಯಲ್ಲಿ ಗೋಶಾಲೆಗಳನ್ನು ಆರಂಭಿಸಲಾಗಿದೆ. ಮುತ್ತಿಗಾರಹಳ್ಳಿ ಗೋಶಾಲೆಯಲ್ಲಿ ಬುಧವಾರ 1,458 ಜಾನುವಾರು ಇವೆ ಎಂದು ತಹಶೀಲ್ದಾರ್ ಅನಿತಲಕ್ಷ್ಮೀ ಮಾಹಿತಿ ನೀಡಿದರು.

ADVERTISEMENT

‘ಗೋಶಾಲೆ ಪುನರಾರಂಭಗೊಂಡಿರುವುದು ಸಂತಸ ತಂದಿದೆ. ಗೋಶಾಲೆ ಮುಚ್ಚಿದ ಸುದ್ದಿ ತಿಳಿದಾಗ ದಿಕ್ಕು ತೋಚದಂತಾಗಿತ್ತು. ದೇವರ ಎತ್ತುಗಳ ಪಾಡು ಹೇಳತೀರದಾಗಿತ್ತು. ‘ಪ್ರಜಾವಾಣಿ’ ಕಾರ್ಯ ಶ್ಲಾಘನೀಯ. ಗೋಶಾಲೆಯಲ್ಲಿ ಜಾನುವಾರಿಗೆ ನೆರಳಿನ ವ್ಯವಸ್ಥೆ ಮಾಡಿದರೆ ಇನ್ನಷ್ಟು ಅನುಕೂಲವಾಗಲಿದೆ’ ಎಂದು ಜಾನುವಾರು ಮಾಲೀಕರಾದ ಬಸವರಾಜ್, ತಿಪ್ಪಯ್ಯ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.