ADVERTISEMENT

ಚಿತ್ರದುರ್ಗ: ಹೆದ್ದಾರಿ ಬದಿಯಲ್ಲಿ ಕಸ ಸುರಿಯುವ ಕಿಡಿಗೇಡಿಗಳು

ಕಸದ ತೊಟ್ಟಿಯಾದ ಹಳೇ ರಾಷ್ಟ್ರೀಯ ಹೆದ್ದಾರಿ, ದುರ್ವಾಸನೆಯಿಂದ ನಿವಾಸಿಗಳು ಕಂಗಾಲು

​ಪ್ರಜಾವಾಣಿ ವಾರ್ತೆ
Published 3 ಜನವರಿ 2026, 7:12 IST
Last Updated 3 ಜನವರಿ 2026, 7:12 IST
ವಿದ್ಯಾನಗರ ಸಮೀದ ಹಳೇ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಆಟೊದಲ್ಲಿ ಕಸ ತುಂಬಿಕೊಂಡು ಬಂದು ಸುರಿದಿರುವುದು
ವಿದ್ಯಾನಗರ ಸಮೀದ ಹಳೇ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಆಟೊದಲ್ಲಿ ಕಸ ತುಂಬಿಕೊಂಡು ಬಂದು ಸುರಿದಿರುವುದು   

ಚಿತ್ರದುರ್ಗ: ಕಸ ಸಂಗ್ರಹಣೆಗಾಗಿ ನಗರಸಭೆ ವಾಹನಗಳು ಪ್ರತಿ ಬಡಾವಣೆಗೆ ಬಂದರೂ ಸಾರ್ವಜನಿಕರು, ಅಂಗಡಿಗಳ ಮಾಲೀಕರು ಕಸವನ್ನು ರಸ್ತೆಬದಿ ಸುರಿದು ಹೋಗುವ ಪರಿಪಾಠ ಮುಂದುವರಿಸಿದ್ದಾರೆ. ವಿದ್ಯಾನಗರ ಭಾಗದಲ್ಲಿ ಕಿಡಿಗೇಡಿಗಳು ಹಳೇ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಕಸ ಸುರಿಯುತ್ತಿರುವ ಕಾರಣ ಆ ಭಾಗ ಕಸದ ತೊಟ್ಟಿಯಂತಾಗಿದೆ.

ಹೊಸ ಬೈಪಾಸ್‌ ನಿರ್ಮಾಣವಾದ ನಂತರ ನಗರದೊಳಗೆ ಹಾದುಹೋಗಿರುವ ಹಳೇ ರಾಷ್ಟ್ರೀಯ ಹೆದ್ದಾರಿಯನ್ನು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ನಿರ್ಲಕ್ಷಿಸಿದ್ದಾರೆ. ಇಡೀ ರಸ್ತೆಯಲ್ಲಿ ಸ್ವಚ್ಛತೆ ಮಾಯವಾಗಿದೆ. ಇದನ್ನೇ ವರವನ್ನಾಗಿಸಿಕೊಂಡಿರುವ ಕೆಲ ಕಿಡಿಗೇಡಿಗಳು ರಸ್ತೆ ಬದಿಗೆ ಕಸ ತಂದು ಸರಿಯುತ್ತಿದ್ದಾರೆ. ವಿದ್ಯಾನಗರ ಸಮೀಪದ ರೈಲ್ವೆ ಬ್ರಿಜ್‌ ಕೆಳಗಿನ ರಸ್ತೆ ಬದಿಯಲ್ಲಿ ಕಸ ಬಿದ್ದು ಚೆಲ್ಲಾಡುತ್ತಿದ್ದು, ದುರ್ವಾಸನೆ ಮೂಗಿಗೆ ಬಡಿಯುತ್ತಿದೆ.

‘ಸ್ಥಳೀಯ ನಾಗರಿಕರು, ಅಂಗಡಿ ಮಾಲೀಕರು ಆಪೆ ಆಟೊಗಳಲ್ಲಿ ಕಸ ತಂದು ಬ್ರಿಡ್ಜ್ ಕೆಳಗಿನ ರಸ್ತೆ ಬಳಿ ಸುರಿದು ಹೋಗುತ್ತಿದ್ದಾರೆ. ಈಚೆಗೆ ಆಪೆ ಆಟೊದಲ್ಲಿ (ಕೆಎ–16ಎ ಎ–5090) ಬಂದ ವ್ಯಕ್ತಿಯೊಬ್ಬರು ಒಂದು ಗಾಡಿ ಕಸವನ್ನು ರಸ್ತೆ ಬದಿ ಸುರಿದರು. ಇದನ್ನು ಸ್ಥಳೀಯರು ಪ್ರಶ್ನೆ ಮಾಡಿದರು. ಪ್ರಶ್ನೆಗೆ ಉತ್ತರ ನೀಡದ ಅವರು ಕಸ ಸುರಿದು ಹೊರಟು ಹೋದರು. ಈ ಬಗ್ಗೆ ನಗರಸಭೆ ಅಧಿಕಾರಿಗಳಿಗೆ ದೂರು ನೀಡಿದ್ದೇವೆ’ ಎಂದು ವಿದ್ಯಾನಗರ ನಿವಾಸಿಗಳು ತಿಳಿಸಿದರು.

ADVERTISEMENT

ಹಳೇ ರಾಷ್ಟ್ರೀಯ ಹೆದ್ದಾರಿ ಬದಿ ಬಿದ್ದಿರುವ ಕಸವನ್ನು ನಗರಸಭೆ ಸಿಬ್ಬಂದಿ ಸ್ವಚ್ಛ ಮಾಡುವುದಿಲ್ಲ. ಇದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ವ್ಯಾಪ್ತಿಯಲ್ಲಿ ಬರುವ ಕಾರಣ ಪ್ರಾಧಿಕಾರದ ಅಧಿಕಾರಿಗಳೇ ನಿರ್ವಹಣೆ ಮಾಡಬೇಕು. ಆದರೆ, ಪ್ರಾಧಿಕಾರದ ಅಧಿಕಾರಿಗಳು ಈ ಕಡೆ ತಿರುಗಿ ನೋಡದ ಕಾರಣ ಕಸದ ಸಮಸ್ಯೆ ತೀವ್ರಗೊಳ್ಳುತ್ತಿದೆ. ಕಸ ಕೊಳೆತು ನೀರಾಗಿ ರಸ್ತೆ ತುಂಬೆಲ್ಲಾ ಹರಿಯುತ್ತಿದೆ. ಅದೇ ಕೊಳಚೆ ರಾಡಿಯ ಮೇಲೆ ವಾಹನಗಳು ಓಡಾಡುತ್ತಿವೆ.

‘ರೈಲ್ವೆ ಬ್ರಿಜ್‌ ಪ್ರದೇಶದಲ್ಲಿ ರಸ್ತೆ ಕೊಂಚ ಇಳಿಜಾರಿನಲ್ಲಿದ್ದು ಯಾರಿಗೂ ಕಾಣಿಸುವುದಿಲ್ಲ ಎಂಬ ಕಾರಣಕ್ಕೆ ಕೆಲವರು ಅಲ್ಲಿಗೆ ಕಸ ತಂದು ಸುರಿಯುತ್ತಾರೆ. ಹಲವು ವರ್ಷಗಳಿಂದಲೂ ಆ ಪ್ರದೇಶ ತಿಪ್ಪೆಯಾಗಿದೆ. ಕೆಟ್ಟ ವಾಸನೆ ಬರುತ್ತಿದ್ದರೂ ಸ್ವಚ್ಛಗೊಳಿಸಿಲ್ಲ. ಆ ಭಾಗದಲ್ಲಿ ಓಡಾಡಲು ಅಸಹ್ಯ ಎನಿಸುತ್ತದೆ’ ಎಂದು ಸಮೀಪದಲ್ಲೇ ಇರುವ ಎಸ್‌ಜೆಎಂ ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿ ಶ್ರೀವಿದ್ಯಾ ಬೇಸರ ವ್ಯಕ್ತಪಡಿಸಿದರು.

ಯಾರೂ ತಿರುಗಿ ನೋಡುತ್ತಿಲ್ಲ: ನಗರ ವ್ಯಾಪ್ತಿಯ 4–5 ಕಿ.ಮೀ.ವರೆಗೆ ಹಳೇ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಸ ತುಂಬಿ ಹೋಗಿದೆ. ರಸ್ತೆಯಲ್ಲಿ ವಾಹನಗಳು ತೆರಳುತ್ತಿದ್ದರೆ ಕಸ ಚಕ್ರಕ್ಕೆ ಸಿಲುಕಿ ಹಾರುತ್ತದೆ. ಕೊಳಚೆ ನೀರು ಬೈಕ್‌ ಸವಾರರ ಮೇಲೂ ಬೀಳುತ್ತಿದೆ. ಆದರೂ ಈಈಡೆ ಯಾರೂ ತಿರುಗಿ ನೋಡುತ್ತಿಲ್ಲ. ಜಿಲ್ಲಾಧಿಕಾರಿ ಮಧ್ಯ ಪ್ರವೇಶ ಮಾಡಿ ರಸ್ತೆ ಸ್ವಚ್ಛತೆ ಮಾಡಲು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚಿಸಬೇಕು. ಇಲ್ಲದಿದ್ದರೆ ನಗರಸಭೆ ಅಧಿಕಾರಿಗಳಾದರೂ ರಸ್ತೆ ಸ್ವಚ್ಛಗೊಳಿಸಬೇಕು. ಕಸ ಸುರಿಯುವ ಕಿಡಿಗೇಡಿಗಳಿಗೆ ದಂಡ ವಿಧಿಸಬೇಕು ಎಂದು ಸ್ಥಳೀಯ ನಿವಾಸಿಗಳು ಒತ್ತಾಯಿಸಿದರು.