ADVERTISEMENT

ಚಿತ್ರದುರ್ಗ | ಬಿಸಿಲ ಆರ್ಭಟ; ಈಜುಕೊಳ, ಹೊಂಡಗಳಲ್ಲಿ ನೀರಿನಾಟ

ಸ್ವಿಮ್ಮಿಂಗ್‌ ಪೂಲ್‌ಗಳಲ್ಲಿ ಮಕ್ಕಳ ಕಲರವ, ರಜೆಯ ಮಜಾ ಅನುಭವಿಸುತ್ತಿರುವ ವಿದ್ಯಾರ್ಥಿಗಳು

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2025, 6:46 IST
Last Updated 8 ಏಪ್ರಿಲ್ 2025, 6:46 IST
ಮಂದಾರ ಹೋಟೆಲ್‌ ಹಿಂಭಾಗದಲ್ಲಿರುವ ವಿಘ್ನೇಶ್ವರ ಈಜುಕೊಳದಲ್ಲಿ ಮಕ್ಕಳ ಕಲರವ
ಮಂದಾರ ಹೋಟೆಲ್‌ ಹಿಂಭಾಗದಲ್ಲಿರುವ ವಿಘ್ನೇಶ್ವರ ಈಜುಕೊಳದಲ್ಲಿ ಮಕ್ಕಳ ಕಲರವ   

ಚಿತ್ರದುರ್ಗ: ಬೇಸಿಗೆಯ ಉರಿಬಿಸಿಲು ದಿನೇದಿನೇ ಹೆಚ್ಚಾಗುತ್ತಿದ್ದು, ಸಾರ್ವಜನಿಕರು ದಗೆಯಿಂದ ರಕ್ಷಿಸಿಕೊಳ್ಳಲು ಹಲವು ಮಾರ್ಗ ಅನುಸರಿಸುತ್ತಿದ್ದಾರೆ. ಆದರೆ, ಬೇಸಿಗೆ ರಜೆಯಲ್ಲಿರುವ ಶಾಲಾ ವಿದ್ಯಾರ್ಥಿಗಳು ಮಜಾ ಅನುಭವಿಸಲು ಈಜುಕೊಳ, ಹೊಂಡ, ಕೆರೆ, ಕಟ್ಟೆಗಳಲ್ಲಿ ನೀರಿನಾಟವಾಡಿ ಸಂಭ್ರಮಿಸುತ್ತಿದ್ದಾರೆ.

ಕಳೆದೊಂದು ವಾರದಿಂದ ಆಗಾಗ ಮಳೆ ಸುರಿದಿದ್ದು, ಉಷ್ಣಾಂಶ ಕೊಂಚ ಕಡಿಮೆಯಾಗಿದೆ. ಆದರೂ ಗರಿಷ್ಠ ಉಷ್ಣಾಂಶ 36 ಡಿಗ್ರಿ ಸೆಲ್ಸಿಯಸ್‌ನಷ್ಟು ದಾಖಲಾಗಿದ್ದು, ಸೆಖೆ ಸಹಿಸಲಸಾಧ್ಯವಾಗಿದೆ. ಬೆಳಿಗ್ಗೆ 10ರ ನಂತರ ಮನೆಯಿಂದ ಹೊರಗೆ ಬರಲು ಜನರು ಆತಂಕಪಡುವಂತಾಗಿದೆ. ತಂಪು ಪಾನೀಯ, ಎಳನೀರು, ಐಸ್‌ಕ್ರೀಂಗೆ ವಿಪರೀತ ಬೇಡಿಕೆ ಸೃಷ್ಟಿಯಾಗಿದೆ.

ಶಾಲೆಗಳಿಗೆ ಬೇಸಿಗೆ ರಜೆ ಇರುವ ಕಾರಣ ಮಕ್ಕಳು ಮನೆಯಲ್ಲೇ ಇದ್ದಾರೆ. ಕೆಲವು ಪಾಲಕರು ಮಕ್ಕಳನ್ನು ಬೇಸಿಗೆ ಶಿಬಿರಗಳಿಗೆ ಸೇರಿಸಿದ್ದಾರೆ. ಇನ್ನು ಕೆಲವರು ಈಜುಕೊಳಕ್ಕೆ ಕರೆದೊಯ್ಯುತ್ತಿದ್ದಾರೆ. ಕೋಟೆನಗರಿಯಲ್ಲಿ 2 ಈಜುಕೊಳಗಳಿದ್ದು, ಅಲ್ಲಿ ಮಕ್ಕಳ ಜಾತ್ರೆಯೇ ಸೃಷ್ಟಿಯಾಗಿದೆ. ಬೆಳಿಗ್ಗೆಯಿಂದ ಸಂಜೆವರೆಗೂ ವಿವಿಧ ಬ್ಯಾಚ್‌ಗಳಲ್ಲಿ ಮಕ್ಕಳು ಈಜಾಡುತ್ತಾ ರಜೆಯ ಮಜಾ ಅನುಭವಿಸುತ್ತಿದ್ದಾರೆ.

ADVERTISEMENT

ಒನಕೆ ಓಬವ್ವ ಈಜುಕೊಳ

ಜಿಲ್ಲಾ ಕ್ರೀಡಾಂಗಣದ ಆವರಣದಲ್ಲಿರುವ ಒನಕೆ ಓಬವ್ವ ಈಜುಕೊಳಕ್ಕೆ ಅಪಾರ ಬೇಡಿಕೆ ಸೃಷ್ಟಿಯಾಗಿದೆ. ಖಾಸಗಿ ಈಜುಕೊಳಗಳು ಕೂಡ ನಾಚಿಸುವಷ್ಟು ಅತ್ಯಂತ ಸುಸಜ್ಜಿತ, ಶುದ್ಧ ಈಜುಕೊಳ ನಗರದಲ್ಲಿರುವುದು ಸ್ಥಳೀಯರಿಗೆ ಹೆಮ್ಮೆಯ ವಿಷಯವಾಗಿದೆ. ಗೂಳಿಹಟ್ಟಿ ಶೇಖರ್‌ ಕ್ರೀಡಾ ಸಚಿವರಾಗಿದ್ದಾಗ ನಿರ್ಮಾಣಗೊಂಡ ಈ ಈಜುಕೊಳದಲ್ಲಿ ನಿತ್ಯ ನೂರಾರು ಮಂದಿ ಈಜಾಡುತ್ತಾರೆ.

ಮಕ್ಕಳಿಂದ ಈ ಈಜುಕೊಳಕ್ಕೆ ಅಪಾರ ಬೇಡಿಕೆ ಸೃಷ್ಟಿಯಾಗಿದ್ದು, ತಂಡೋಪತಂಡವಾಗಿ ಬರುತ್ತಿದ್ದಾರೆ. 6ರಿಂದ 15 ವರ್ಷ ವಯೋಮಿತಿಯ ಮಕ್ಕಳಿಗೆ ಪ್ರತಿ ತಿಂಗಳು ₹ 600 ಶುಲ್ಕ ನಿಗದಿ ಮಾಡಲಾಗಿದೆ. 15 ವರ್ಷ ಮೇಲ್ಪಟ್ಟವರಿಗೆ ₹ 1,200 ಇದೆ. ಈಜು ತರಬೇತಿಯ ಅವಶ್ಯಕತೆ ಇರುವ ಮಕ್ಕಳಿಗೆ ₹ 1,800 ದರವಿದೆ. ಒಂದು ಗಂಟೆಯ ಈಜಿಗೆ ₹ 100 ಶುಲ್ಕವಿದೆ.

ಮಾಜಿ ಸೈನಿಕ ಸತ್ಯನಾರಾಯಣ ನಾಯ್ಡು ಅವರು ಈಜುಕೊಳ ನಿರ್ವಹಿಸುತ್ತಿದ್ದು, ಇಡೀ ಕೊಳದ ಆವರಣವನ್ನು ಶಿಸ್ತಿನಿಂದ ನೋಡಿಕೊಂಡಿದ್ದಾರೆ. ನಗರದಲ್ಲಿರುವ ಉದ್ಯಮಿಗಳು, ವೈದ್ಯರು, ಕಲಾವಿದರು, ಕ್ರೀಡಾಪಟುಗಳು ಇಲ್ಲಿ ನಿತ್ಯ ಈಜಾಡುತ್ತಾರೆ. ಬೇಸಿಗೆ ರಜೆಯ ಅಂಗವಾಗಿ ಇಲ್ಲಿ ಮಕ್ಕಳ ಜಾತ್ರೆ ಆರಂಭಗೊಂಡಿದೆ.

ನಗರದ ಮಂದಾರ ಹೋಟೆಲ್‌ ಹಿಂಭಾಗದಲ್ಲಿರುವ ವಿಘ್ನೇಶ್ವರ (ಮಂದಾರ) ಈಜುಕೊಳದಲ್ಲೂ ಬೇಡಿಕೆ ಸೃಷ್ಟಿಯಾಗಿದೆ. ಗಂಟೆಗೆ ₹ 50 ದರ ನಿಗದಿ ಮಾಡಲಾಗಿದ್ದು, ಬೆಳಿಗ್ಗೆ 8 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿವಿಧ ಬ್ಯಾಚ್‌ಗಳಲ್ಲಿ ಚಿಕ್ಕವರು, ಯುವಕರು ಈಜಾಡುತ್ತಾರೆ. ಈ ಈಜುಕೊಳಕ್ಕೆ ನಗರದಿಂದ ಮಾತ್ರವಲ್ಲದೇ ನಗರದ ಆಸುಪಾಸಿನಲ್ಲಿರುವ ಹಳ್ಳಿಗಳ ಮಕ್ಕಳು, ಯುವಕರೂ ಬರುತ್ತಾರೆ. ಜೊತೆಗೆ ನಗರದ ಹೊರವಲಯದ ಪಿಳ್ಳೆಕೇರನಹಳ್ಳಿ ಹಾಲೂ ಮಲ್ಲಾಪುರದಲ್ಲಿ ತಲಾ ಒಂದು ಈಜುಕೊಳವಿದ್ದು, ಅಲ್ಲೂ ಮಕ್ಕಳಿಂದ ಅಪಾರ ಬೇಡಿಕೆ ಸೃಷ್ಟಿಯಾಗಿದೆ.

ಹೊಂಡಗಳಲ್ಲೂ ಮಕ್ಕಳ ಕಲರವ

ಚಿತ್ರದುರ್ಗದಲ್ಲಿ ಹೊಂಡಗಳಲ್ಲಿ ಈಜಾಡುವುದು ಕೂಡ ಐತಿಹಾಸಿಕ ಮಹತ್ವ ಪಡೆದುಕೊಂಡಿದೆ. ಒಂದು ಕಾಲದಲ್ಲಿ ‘ಗರಡಿ ಮನೆಯಲ್ಲಿ ವ್ಯಾಯಾಮ ಮಾಡು, ಹೊಂಡಗಳಲ್ಲಿ ಈಜಾಡು’ ಎನ್ನುವುದು ಯುವಕರ ಧ್ಯೇಯವಾಗಿತ್ತು. ಈಗ ಗರಡಿಮನೆಗಳು ನೇಪಥ್ಯಕ್ಕೆ ಸರಿದಿವೆ. ಆದರೆ, ಹೊಂಡಗಳಲ್ಲಿ ಈಗಲೂ ನೀರು ತುಂಬಿದ್ದು ಮಕ್ಕಳು, ಯುವಕರು ಈಜಾಡುತ್ತಾರೆ.

ಕೋಟೆಯಲ್ಲಿರುವ ಗೋಪಾಲಸ್ವಾಮಿ ಹೊಂಡ ಎಂದರೆ ಸ್ಥಳೀಯರ ಈಜಾಟಕ್ಕೆ ಪ್ರಸಿದ್ಧಿ ಪಡೆದಿತ್ತು. ಆದರೆ ಅಲ್ಲಿ ಸಾವು–ನೋವು ಹೆಚ್ಚಾದ ನಂತರ ಈಜು ನಿಷೇಧಿಸಲಾಗಿದೆ. ನಗರದ ವಿವಿಧೆಡೆಯಿರುವ ಹೊಂಡಗಳಲ್ಲಿ ಕೂಡ ಈಜಾಡುವುದನ್ನು ನಿಷೇಧಿಸಿದ್ದರೂ ಮಕ್ಕಳು, ಯುವಕರು ಕದ್ದು ಮುಚ್ಚಿ ಈಜಾಡುತ್ತಿದ್ದಾರೆ. ಕೆಳಗೋಟೆಯ ಆಕಾಶವಾಣಿ ಸಮೀಪದ ಚನ್ನಕೇಶ್ವರ ಹೊಂಡಕ್ಕೆ ಐತಿಹಾಸಿಕ ಹಿನ್ನೆಲೆಯಿದ್ದು ಇಲ್ಲಿ ಮಕ್ಕಳು, ಯುವಕರು ನಿತ್ಯ ಈಜಾಡುತ್ತಿದ್ದಾರೆ.

ಕೆಳಗೋಟೆಯ ಮತ್ತೊಂದು ಗಣಪತಿ ದೇವಾಲಯದ ಹಿಂಭಾಗದಲ್ಲಿರುವ ಹೊಂಡ, ಬುರುಜನ ಹಟ್ಟಿಯ ಸಿಹಿನೀರು ಹೊಂಡ, ಎಲ್‌ಐಸಿ ಕಚೇರಿ ಬಳಿಯ ಹೊಂಡದಲ್ಲೂ ಈಜಾಡುತ್ತಿದ್ದು ಮಕ್ಕಳು, ಯುವಕರು ಸಂಭ್ರಮಿಸುತ್ತಿದ್ದಾರೆ.

ಕೆಳಗೋಟೆಯ ಚನ್ನಕೇಶ್ವರ ಹೊಂಡದಲ್ಲಿ ಮಕ್ಕಳ ನೀರಿನಾಟ

ಕೆರೆ ಕಟ್ಟೆ ಬಳಿ ಜೀವಕ್ಕೆ ಅಪಾಯ ನಗರ ವ್ಯಾಪ್ತಿಯ ಹೊಂಡಗಳು ಹೊರವಲದಲ್ಲಿರುವ ಕೆರೆ ಕಟ್ಟೆ ಬಾವಿಗಳಲ್ಲಿ ಮಕ್ಕಳು ನೀರಿಗೆ ಇಳಿಯುತ್ತಿದ್ದಾರೆ. ಪಾಲಕರಿಗೆ ಗೊತ್ತಾಗದಂತೆ ಸ್ನೇಹಿತರ ಜೊತೆಗೆ ಬಂದು ಈಜಾಡುತ್ತಿದ್ದಾರೆ. ಹಲವೆಡೆ ಈಜು ನಿಷೇಧಿಸಿದ್ದರೂ ಅದನ್ನು ಲೆಕ್ಕಿಸದೇ ನೀರಿಗೆ ಬೀಳುತ್ತಿದ್ದಾರೆ. ಅಲ್ಲಿ ಪೊಲೀಸರ ನಿಗಾ ವ್ಯವಸ್ಥೆಯೂ ಇಲ್ಲದ ಕಾರಣ ಅಪಾಯದ ಪರಿಸ್ಥಿತಿ ನಿರ್ಮಾಣವಾಗಿದೆ. ‘ಬೇಸಿಗೆ ರಜೆ ಮುಗಿಯುವವರೆಗೆ ಹೊಂಡ ಕೆರೆ ಕಟ್ಟೆ ಬಾವಿಗಳಲ್ಲಿ ಮಕ್ಕಳು ಇಳಿಯದಂತೆ ನೋಡಿಕೊಳ್ಳಬೇಕು. ಅಲ್ಲಿ ಪೊಲೀಸ್‌ ಸಿಬ್ಬಂದಿಯನ್ನು ನೇಮಿಸಿ ನಿಗಾ ವಹಿಸಬೇಕು. ಹುಡುಗಾಟದಿಂದ ಪ್ರಾಣ ಕಳೆದುಕೊಳ್ಳುವ ಅಪಾಯವಿದೆ. ಅನಾಹುತ ಸಂಭವಿಸುವ ಮೊದಲೇ ಪೊಲೀಸರು ಮಕ್ಕಳ ಜೀವ ರಕ್ಷಿಸಬೇಕು’ ಎಂದು ಕೆಳಗೋಟೆಯ ನಿವಾಸಿ ಮಹಾಂತೇಶ ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.