ADVERTISEMENT

ಚಿತ್ರದುರ್ಗ | ನೇಮಕಾತಿಯಲ್ಲಿ ಅಕ್ರಮ; ಪ್ರಾಧ್ಯಾಪಕ ಹುದ್ದೆಗೆ ₹ 50 ಲಕ್ಷ ಲಂಚ?

ಚಿತ್ರದುರ್ಗ ಸರ್ಕಾರಿ ವೈದ್ಯಕೀಯ ಕಾಲೇಜು ನೇಮಕಾತಿಯಲ್ಲಿ ಅಕ್ರಮ, ದೂರುಗಳ ಸುರಿಮಳೆ

ಎಂ.ಎನ್.ಯೋಗೇಶ್‌
Published 21 ಏಪ್ರಿಲ್ 2025, 23:30 IST
Last Updated 21 ಏಪ್ರಿಲ್ 2025, 23:30 IST
ದಾವಣಗೆರೆ ವಿವಿ ಜ್ಞಾನಗಂಗೋತ್ರಿ ಅಧ್ಯಯನ ಕೇಂದ್ರದ ಕನ್ನಡ ವಿಭಾಗದಲ್ಲಿ ಚಿತ್ರದುರ್ಗ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ನಡೆಯುತ್ತಿದೆ
ದಾವಣಗೆರೆ ವಿವಿ ಜ್ಞಾನಗಂಗೋತ್ರಿ ಅಧ್ಯಯನ ಕೇಂದ್ರದ ಕನ್ನಡ ವಿಭಾಗದಲ್ಲಿ ಚಿತ್ರದುರ್ಗ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ನಡೆಯುತ್ತಿದೆ   

ಚಿತ್ರದುರ್ಗ: ನಗರದ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಪ್ರಾಧ್ಯಾಪಕ ಹುದ್ದೆಗಳಿಗೆ ₹ 50 ಲಕ್ಷ ಲಂಚ ಪಡೆಯಲಾಗಿದೆ ಎಂಬ ಆರೋಪ ರಾಜ್ಯದ ವೈದ್ಯಕೀಯ ಕಾಲೇಜು ವಲಯದಲ್ಲಿ ಸಂಚಲನ ಸೃಷ್ಟಿಸಿದೆ. ಈ ಕುರಿತು ಜಿಲ್ಲಾಧಿಕಾರಿ, ಪ್ರಾದೇಶಿಕ ಆಯುಕ್ತರ (ಆರ್‌.ಸಿ) ಕಚೇರಿಗಳಿಗೆ ದೂರುಗಳ ಸುರಿಮಳೆಯೇ ದಾಖಲಾಗಿದೆ.

2023–24ನೇ ಸಾಲಿನಲ್ಲಿ ಆರಂಭವಾದ ವೈದ್ಯಕೀಯ ಕಾಲೇಜಿಗೆ 58 ಬೋಧಕ ಹುದ್ದೆಗಳ ಮಂಜೂರಾತಿ ಇದೆ. ಅದರಲ್ಲಿ 36 ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಪೂರ್ಣಗೊಂಡಿದ್ದು, ತಾತ್ಕಾಲಿಕ ಪಟ್ಟಿ ಪ್ರಕಟಿಸಲಾಗಿದೆ. ಪ್ರಾಧ್ಯಾಪಕ ಹುದ್ದೆಗೆ ₹ 50 ಲಕ್ಷ, ಸಹ ಪ್ರಾಧ್ಯಾಪಕ ಹುದ್ದೆಗೆ ₹ 40 ಲಕ್ಷ, ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ₹ 25 ಲಕ್ಷದಿಂದ ₹ 30 ಲಕ್ಷದವರೆಗೂ ಲಂಚ ಪಡೆಯಲಾಗಿದೆ ಎಂಬ ದೂರುಗಳು ದಾಖಲಾಗಿವೆ.

ವ್ಯಾಪಕ ದೂರುಗಳ ಕಾರಣ ಪ್ರಾದೇಶಿಕ ಆಯುಕ್ತ ಆದಿತ್ಯ ಆಮ್ಲಾನ್‌ ಬಿಸ್ವಾಸ್‌, ಜಿಲ್ಲಾಧಿಕಾರಿ ಟಿ.ವೆಂಕಟೇಶ್‌ ಅವರು ವೈದ್ಯಕೀಯ ಕಾಲೇಜು ಹಾಗೂ ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಯುವರಾಜ್‌ ಅವರಿಗೆ ನೋಟಿಸ್‌ ಜಾರಿಗೊಳಿಸಿದ್ದಾರೆ. ಜೊತೆಗೆ ವೈದ್ಯಕೀಯ ಶಿಕ್ಷಣ ಇಲಾಖೆಗೂ ಹಲವರು ಪತ್ರ ಬರೆದಿದ್ದು ಸಮಗ್ರ ತನಿಖೆಗೆ ಒತ್ತಾಯಿಸಿದ್ದಾರೆ. ಹೀಗಾಗಿ ತಾತ್ಕಾಲಿಕ ಪಟ್ಟಿ ತೂಗುಯ್ಯಾಲೆಯಲ್ಲಿ ನೇತಾಡುವಂತಾಗಿದೆ.

ADVERTISEMENT

ದೂರುಗಳೇನು?:

‘ನೇಮಕಾತಿ ಅಧಿಸೂಚನೆ ಪ್ರಕಟಗೊಂಡ ನಂತರ ಕೇವಲ 2 ದಿನ ಸಮಯ ನೀಡಿದ್ದು ಏಕೆ’ ಎಂದು ದೂರಿನಲ್ಲಿ ಪ್ರಶ್ನಿಸಲಾಗಿದೆ. ನೇಮಕಾತಿಯಲ್ಲಿ ಮೀಸಲಾತಿಯ ರೋಸ್ಟರ್‌, ಜ್ಯೇಷ್ಠತೆಯನ್ನು ಪರಿಗಣಿಸಿಲ್ಲ ಎಂದೂ ಆರೋಪಿಸಲಾಗಿದೆ. ಜೊತೆಗೆ ಸಂದರ್ಶನ ಪ್ರಕ್ರಿಯೆಯನ್ನು ಚಿತ್ರದುರ್ಗದಲ್ಲಿ ನಡೆಸದೇ ಬೆಂಗಳೂರಿನಲ್ಲಿ ನಡೆಸಿರುವುದು ಅನುಮಾನಾಸ್ಪದ ಎಂದು ದೂರಲಾಗಿದೆ.

‘ಟಿ.ಎ, ಡಿ.ಎ ನೀಡದೇ ಬೆಂಗಳೂರಿಗೆ ಕರೆಸಿ ಕೆಲವೇ ನಿಮಿಷದಲ್ಲಿ ಸಂದರ್ಶನ ಮುಗಿಸಲಾಯಿತು. ಹಣ ಕೇಳುವುದಕ್ಕಾಗಿಯೇ ಪ್ರತ್ಯೇಕವಾಗಿ ಮತ್ತೆ ಬೆಂಗಳೂರಿಗೆ ಕರೆಸಿದ್ದರು. ವೈದ್ಯಕೀಯ ಕಾಲೇಜು ನಿರ್ದೇಶಕ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಅಧಿಕಾರಿಗಳು ಅಕ್ರಮದಲ್ಲಿ ನೇರವಾಗಿ ಪಾಲ್ಗೊಂಡಿದ್ದಾರೆ’ ಎಂದು ಪ್ರಾದೇಶಿಕ ಆಯುಕ್ತರಿಗೆ ದೂರು ನೀಡಿರುವ ವೈದ್ಯರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಕೇವಲ 6 ಅಧ್ಯಾಪಕರು

ದಾವಣಗೆರೆ ವಿ.ವಿ.ಕ್ಯಾಂಪಸ್‌, ಜಿ.ಆರ್‌. ಹಳ್ಳಿ ಜ್ಞಾನಗಂಗೋತ್ರಿ ಆವರಣದಲ್ಲಿ ವೈದ್ಯಕೀಯ ಕಾಲೇಜು ನಡೆಯುತ್ತಿದ್ದು, ಮೂಲ ಸೌಲಭ್ಯಗಳಿಲ್ಲ. ಮೊದಲ ಹಾಗೂ 2ನೇ ವರ್ಷದ 300 ಎಂಬಿಬಿಎಸ್‌ ವಿದ್ಯಾರ್ಥಿಗಳಿಗೆ ಕೇವಲ 6 ಮಂದಿ ಅಧ್ಯಾಪಕರಿದ್ದಾರೆ. ವಾರಕ್ಕೊಮ್ಮೆ ಹೊರ ಜಿಲ್ಲೆಗಳಿಂದ ಬರುವ ಅಧ್ಯಾಪಕರೇ ವಿದ್ಯಾರ್ಥಿಗಳಿಗೆ ಆಧಾರವಾಗಿದ್ದಾರೆ.

‘ಕನ್ನಡ ಅಧ್ಯಯನ ಕೇಂದ್ರದ ಸಭಾಂಗಣವೇ ತರಗತಿಯಾಗಿದೆ. ಪರೀಕ್ಷೆಗಳು ಸಮೀಪಿಸುತ್ತಿದ್ದರೂ ಇಲ್ಲಿಯವರೆಗೆ ಒಂದೇ ಒಂದು ಪ್ರಾಯೋಗಿಕ ತರಗತಿ ನಡೆದಿಲ್ಲ. ಪ್ರಯೋಗಾಲಯವೇ ಇಲ್ಲದ ಕಾರಣ ತರಗತಿಗಳು ನಡೆಯುತ್ತಿಲ್ಲ. ನಾವು ವೈದ್ಯರಾಗುವುದು ಹೇಗೆ ಎಂಬ ಪ್ರಶ್ನೆ ಸೃಷ್ಟಿಯಾಗಿದೆ’ ಎಂದು 2ನೇ ವರ್ಷದ ಎಂಬಿಬಿಎಸ್‌ ವಿದ್ಯಾರ್ಥಿಯೊಬ್ಬರು ಆತಂಕ ವ್ಯಕ್ತಪಡಿಸಿದರು.

ಚಿತ್ರದುರ್ಗ ಬಿಟ್ಟು ಬೆಂಗಳೂರಿನಲ್ಲಿ ಸಂದರ್ಶನ ನಡೆಸಿರುವುದೇ ಅನುಮಾನಾಸ್ಪದ. ದೂರುಗಳ ಗಾಂಭೀರ್ಯ ಗಮನಿಸಿದರೆ ನೇಮಕಾತಿ ಪ್ರಕ್ರಿಯೆ ಬಗ್ಗೆ ಸಮಗ್ರ ತನಿಖೆಯ ಅವಶ್ಯಕತೆ ಇದೆ
ಆದಿತ್ಯ ಆಮ್ಲಾನ್‌ ಬಿಸ್ವಾಸ್‌ ಪ್ರಾದೇಶಿಕ ಆಯುಕ್ತ ಬೆಂಗಳೂರು
ನಿಯಮ ಉಲ್ಲಂಘಿಸಿ ಆಯ್ಕೆ ಪ್ರಕ್ರಿಯೆ ನಡೆಸಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ತಾತ್ಕಾಲಿಕ ಆಯ್ಕೆ ಪಟ್ಟಿ ರದ್ದತಿ ಬಗ್ಗೆ ಮುಂದಿನ ಕ್ರಮ ವಹಿಸುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆಯಲಾಗುವುದು
ಟಿ.ವೆಂಕಟೇಶ್‌ ಜಿಲ್ಲಾಧಿಕಾರಿ ಚಿತ್ರದುರ್ಗ
ಆರ್‌.ಸಿ ಡಿ.ಸಿ ನೋಟಿಸ್‌ಗೆ ಉತ್ತರ ನೀಡಿದ್ದೇನೆ. ತಾತ್ಕಾಲಿಕ ಆಯ್ಕೆ ಪಟ್ಟಿಗೆ ಆಕ್ಷೇಪಣೆಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದಿರುವ ಕಾರಣ ಮುಂದಿನ ಆದೇಶಕ್ಕಾಗಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ
ಡಾ.ಯುವರಾಜ್‌ ನಿರ್ದೇಶಕ ಚಿತ್ರದುರ್ಗ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.