
ಚಿತ್ರದುರ್ಗ: ವಿದ್ಯಾರ್ಹತೆಗೆ ತಕ್ಕಂತೆ ಕೆಲಸ ಹುಡುಕಿ ದುಡಿಮೆಯ ಜೀವನ ಪ್ರಾರಂಭಿಸುವ ನಿರೀಕ್ಷೆಯಲ್ಲಿರುವ ಉದ್ಯೋಗಾಕಾಂಕ್ಷಿಗಳ ಕನಸು ನನಸಾಗುವ ಕ್ಷಣಕ್ಕೆ ಕ್ಷಣಗಣನೆ ಶುರುವಾಗಿದೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕೌಶಲಭಿವೃದ್ಧಿ ಮತ್ತು ಜೀವನೋಪಾಯ ಇಲಾಖೆಯಿಂದ ಫೆ. 1ರಂದು ನಗರದ ಸರ್ಕಾರಿ ಕಲಾ ಕಾಲೇಜು ಆವರಣದಲ್ಲಿ ಬೃಹತ್ ಉದ್ಯೋಗ ಮೇಳಕ್ಕೆ ವೇದಿಕೆ ಸಜ್ಜುಗೊಂಡಿದೆ.
ಉದ್ಯೋಗ ಮೇಳವನ್ನು ಅಚ್ಚುಕಟ್ಟಾಗಿ ಆಯೋಜಿಸಲು ಸಕಲ ಸಿದ್ಧತೆ ನಡೆಸಲಾಗಿದೆ. ವಿವಿಧ ಕಂಪನಿಗಳು ಅಭ್ಯರ್ಥಿಗಳ ಸಂದರ್ಶನ ಇತ್ಯಾದಿ ನಡೆಸಲು ಅನುಕೂಲವಾಗುವಂತೆ ಕೊಠಡಿಗಳನ್ನು ಸಜ್ಜುಗೊಳಿಸಲಾಗಿದೆ. ಅಭ್ಯರ್ಥಿಗಳಿಗೆ ಗೊಂದಲವಾಗದಂತೆ ಮಾಹಿತಿ ನೀಡುವ ಸಲುವಾಗಿ ಕೌಂಟರ್‌ಗಳನ್ನು ಸ್ಥಾಪಿಸಲಾಗಿದೆ.
ಬಿಇ ಪದವೀಧರರಿಗೆ ಪ್ರತಿಷ್ಠಿತ ಐಟಿ ಕಂಪನಿಗಳು ಸಹ ಈ ಬಾರಿ ಪಾಲ್ಗೊಳ್ಳುತ್ತಿರುವುದು ವಿಶೇಷವಾಗಿದೆ. ಎಸ್‌ಎಸ್‌ಎಲ್‍ಸಿ, ಪಿಯುಸಿ, ಐಟಿಐ, ಡಿಪ್ಲೋಮಾ, ಬಿಇ ಹಾಗೂ ಇತರೆ ಯಾವುದೇ ವಿದ್ಯಾರ್ಹತೆ ಹೊಂದಿರುವ 18ರಿಂದ 35 ವರ್ಷ ವಯೋಮಿತಿಯ ಯುವಕ– ಯುವತಿಯರು ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಬಹುದಾಗಿದೆ.
ಜಿಲ್ಲಾ ಮಟ್ಟದಲ್ಲಿ ಆಯೋಜಿಸಲಾಗಿರುವ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಗೂಗಲ್ ಫಾರಂ ಬಳಸಿ ಈಗಾಗಲೇ 6,250ಕ್ಕೂ ಅಧಿಕ ಅಭ್ಯರ್ಥಿಗಳು ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಲು ನೋಂದಣಿ ಮಾಡಿಕೊಂಡಿದ್ದಾರೆ. ಇದರಲ್ಲಿ 3,110ಕ್ಕೂ ಹೆಚ್ಚು ಪುರುಷ ಹಾಗೂ 3,100ಕ್ಕೂ ಹೆಚ್ಚು ಮಹಿಳಾ ಅಭ್ಯರ್ಥಿಗಳಿದ್ದಾರೆ.
‘ಜಿಲ್ಲೆಯ ಯುವಕ– ಯುವತಿಯರಿಗೆ ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತದಿಂದ ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗಿದೆ. ಸರ್ಕಾರ ಯುವನಿಧಿ ಯೋಜನೆ ಮೂಲಕ ನಿರುದ್ಯೋಗಿಗಳಿಗೆ ಭತ್ಯೆ ನೀಡುತ್ತಿದ್ದು, ಈ ಯೋಜನೆಯ ಎಲ್ಲ ಫಲಾನುಭವಿಗಳು ತಪ್ಪದೆ ಉದ್ಯೋಗಮೇಳದಲ್ಲಿ ಪಾಲ್ಗೊಂಡು, ಕೆಲಸ ಪಡೆದುಕೊಳ್ಳುವ ಮೂಲಕ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಮುಂದಾಗಬೇಕು’ ಎಂದು ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಶಿವಣ್ಣ ತಿಳಿಸಿದ್ದಾರೆ.
ಉದ್ಯೋಗ ಮೇಳವು ಅವಕಾಶ ವಂಚಿತ ಸಮುದಾಯಗಳ ಪಾಲಿಗೆ ವರದಾನವಾಗಿದೆ. 1,739ಕ್ಕೂ ಹೆಚ್ಚು ಪರಿಶಿಷ್ಟ ಜಾತಿ, 1,042ಕ್ಕೂ ಹೆಚ್ಚು ಪರಿಶಿಷ್ಟ ಪಂಗಡ, 2,326ಕ್ಕೂ ಹೆಚ್ಚು ಹಿಂದುಳಿದ ವರ್ಗ, 129 ಅಲ್ಪಸಂಖ್ಯಾತ, 977 ಸಾಮಾನ್ಯ ವರ್ಗಕ್ಕೆ ಸೇರಿದ ಅಭ್ಯರ್ಥಿಗಳು ನೋಂದಣಿಯಾಗಿದ್ದಾರೆ.
6,250 ಅಭ್ಯರ್ಥಿಗಳಲ್ಲಿ ಬಿಎಎಂಎಸ್, ಬಿಇ, ಕೃಷಿ ಹಾಗೂ ತೋಟಗಾರಿಕೆ ಸ್ನಾತಕೋತ್ತರ ಪದವಿ, ಎಂಎಸ್ಸಿ, ಎಂಎ,ಬಿ.ಎಡ್, ಪದವಿ, ಬಿ.ಫಾರ್ಮಸಿ, ನರ್ಸಿಂಗ್ ಸೇರಿದಂತೆ ವಿವಿಧ ವಿದ್ಯಾರ್ಹತೆ ಹೊಂದಿರುವವರು ಇದ್ದಾರೆ.
ಐಟಿ, ಬಿಟಿ, ಮೆಕ್ಯಾನಿಕಲ್, ಆಟೋಮೊಬೈಲ್ ಸೇರಿ ವಿವಿಧ ಕ್ಷೇತ್ರಗಳ 100ಕ್ಕೂ ಹೆಚ್ಚು ಕಂಪನಿಗಳು ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಲಿವೆ. ಜಿಲ್ಲಾ ಕೈಗಾರಿಕಾ ತರಬೇತಿ ಸಂಸ್ಥೆಯಿಂದ ಚಿತ್ರದುರ್ಗ ಮಾತ್ರವಲ್ಲದೆ ಬೆಂಗಳೂರು, ತುಮಕೂರು, ಶಿವಮೊಗ್ಗ, ಬಳ್ಳಾರಿ ಮತ್ತು ದಾವಣಗೆರೆ ಜಿಲ್ಲೆ ಸೇರಿದಂತೆ ವಿವಿಧ ಜಿಲ್ಲೆಗಳ ಪ್ರಮುಖ ಕಂಪನಿಗಳನ್ನು ಆಹ್ವಾನಿಸಲಾಗಿದೆ.
ಪ್ರತಿ ಅಭ್ಯರ್ಥಿ ಕನಿಷ್ಠ 5ರಿಂದ 6 ಸ್ವವಿವರದ ಪ್ರತಿ ಹಾಗೂ ಪೂರಕ ದಾಖಲೆಗಳೊಂದಿಗೆ ಹಾಜರಾಗಬೇಕು. ಉದ್ಯೋಗ ಮೇಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅಭ್ಯರ್ಥಿಗಳು ಪಾಲ್ಗೊಂಡು ಉದ್ಯೋಗ ಪಡೆದುಕೊಳ್ಳಲು ಮುಂದಾಗಬೇಕುಟಿ.ವೆಂಕಟೇಶ್ ಜಿಲ್ಲಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.