ADVERTISEMENT

ಕೆಪಿಟಿಸಿಎಲ್ ಸಿಬ್ಬಂದಿ ಆತ್ಮಹತ್ಯೆ: ಬೆಸ್ಕಾಂ ಇಲಾಖೆ ವಿರುದ್ಧ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 11 ಜೂನ್ 2023, 16:36 IST
Last Updated 11 ಜೂನ್ 2023, 16:36 IST
ಹೊಸದುರ್ಗದ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರತಿಭಟನೆಯಲ್ಲಿ ತೊಡಗಿರುವ ಮೃತ ಜಯಣ್ಣ ಅವರ ಕಡೆಯವರು
ಹೊಸದುರ್ಗದ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರತಿಭಟನೆಯಲ್ಲಿ ತೊಡಗಿರುವ ಮೃತ ಜಯಣ್ಣ ಅವರ ಕಡೆಯವರು   

ಹೊಸದುರ್ಗ: ತಾಲೂಕಿನ ನೀರಗುಂದ ವಿದ್ಯುತ್ ವಿತರಣಾ ಕೇಂದ್ರದ ಸಹಾಯಕ ಎಂಜಿನಿಯರ್ ಜಯಣ್ಣ ಅವರ ಆತ್ಮಹತ್ಯೆಗೆ ಬೆಸ್ಕಾಂ ಅಧಿಕಾರಿಗಳು ಕಾರಣ ಎಂದು ಆರೋಪಿಸಿರುವ ಮೃತರ ಸಂಬಂಧಿಕರು, ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.

ನೀರಗುಂದ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಜಯಣ್ಣ (55) ಅವರು ತಾಲ್ಲೂಕಿನ ಗಡಿ ಗ್ರಾಮ ದಾಸೇನಹಳ್ಳಿ ತೋಟದ ಮನೆಯಲ್ಲಿ ಶನಿವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಚಿಕಿತ್ಸೆಗಾಗಿ ಹೊಸದುರ್ಗ ಆಸ್ಪತ್ರೆಗೆ ಕರೆದುಕೊಂಡು ಬರುವ ವೇಳೆ ಅವರು ಸಾವನ್ನಪ್ಪಿದ್ದಾರೆ. 

‘ಬೆಸ್ಕಾಂನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅವರು, ಕಳೆದ ಒಂದೂವರೆ ವರ್ಷದ ಹಿಂದೆ ಕೆಪಿಟಿಸಿಎಲ್‌ಗೆ ಬಂದಿದ್ದರು. ಬೆಸ್ಕಾಂನಿಂದ ವೇತನ ಪಡೆದ ವಿವರ ನೀಡುವ ಎಲ್.ಪಿ.ಎಸ್ ಅನ್ನು ಕೆಪಿಟಿಸಿಎಲ್‌ಗೆ ಅವರು ಸಲ್ಲಿಸಿರಲಿಲ್ಲ ಎಂಬ ಕಾರಣಕ್ಕೆ, ಕಳೆದ 18 ತಿಂಗಳಿಂದ ಅವರಿಗೆ ವೇತನ ಪಾವತಿಯಾಗಿಲ್ಲ.ಈ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತಂದರೂ ಸಮಸ್ಯೆ ಬಗೆಹರಿದಿರಲಿಲ್ಲ. ವೇತನವಿಲ್ಲದೇ ಜೀವನ ನಡೆಸಲು ಕಷ್ಟಪಡುತ್ತಿದ್ದ ನಮ್ಮ ತಂದೆಯವರು ಸಮಸ್ಯೆಗೆ ಪರಿಹಾರ ಕಾಣದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ಮೃತರ ಮಗ ರಕ್ಷಿತ್ ಆರೋಪಿಸಿದ್ದಾರೆ.

ADVERTISEMENT

ಬೆಸ್ಕಾಂ ಅಧಿಕಾರಿಗಳು ಆಸ್ಪತ್ರೆಗೆ ಈವರೆಗೂ ಭೇಟಿ ನೀಡಿಲ್ಲ ಅವರು ಬರುವವರೆಗೂ ಪ್ರತಿಭಟನೆ ಹಿಂಪಡೆಯಲ್ಲ ಎಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಸ್ಥಳಕ್ಕೆ ಬಂದ ಶಾಸಕ ಬಿ.ಜಿ.ಗೋವಿಂದಪ್ಪ ಅವರು  ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು. ಕುಟುಂಬಕ್ಕೆ ಪರಿಹಾರ ನೀಡಿ ನ್ಯಾಯ ಒದಗಿಸಿಕೊಡಬೇಕು ಎಂದು ಶಾಸಕರು ಬೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.