ಚಿತ್ರದುರ್ಗ: ನಗರದ ಹೊರವಲಯದ ಕುಂಚಿಗನಾಳ್ ಕಣಿವೆಯಲ್ಲಿ ಜಿಲ್ಲಾಡಳಿತ ಭವನಕ್ಕಾಗಿ ನಿರ್ಮಿಸಿರುವ ನೂತನ ಕಟ್ಟಡಕ್ಕೆ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಸ್ಥಳಾಂತರಗೊಳ್ಳುವ ಸಮಯ ಸನ್ನಿಹಿತವಾಗಿದೆ. ಕಾಲೇಜು ಅಧಿಕಾರಿಗಳು, ಜಿಲ್ಲಾ ಆರೋಗ್ಯಾಧಿಕಾರಿ, ಜಿಲ್ಲಾ ಶಸ್ತ್ರಚಿಕಿತ್ಸಕರ ತಂಡ ನೂತನ ಕಟ್ಟಡ ಪರಿಶೀಲಿಸಿದ್ದು ಅಲ್ಲಿಗೆ ಸ್ಥಳಾಂತರಗೊಳ್ಳುವ ಸಹಮತ ವ್ಯಕ್ತಪಡಿಸಿದ್ದಾರೆ.
ಶಾಸಕ ಕೆ.ಸಿ. ವೀರೇಂದ್ರ ಅವರು ನೂತನ ಕಟ್ಟಡಕ್ಕೆ ವೈದ್ಯಕೀಯ ಕಾಲೇಜು ಸ್ಥಳಾಂತರಗೊಳಿಸುವ ಪ್ರಸ್ತಾವವನ್ನು ಮುಖ್ಯಮಂತ್ರಿಗಳ ಮುಂದೆ ಮಂಡಿಸಿದ ನಂತರ ಜಿಲ್ಲಾಡಳಿತದಲ್ಲಿ ಚಟುವಟಿಕೆಗಳು ಬಿರುಸುಗೊಂಡಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿರುವುದು ಚಟುವಟಿಕೆ ವೇಗ ಪಡೆದುಕೊಳ್ಳಲು ಕಾರಣವಾಗಿದೆ.
ಕಾಲೇಜು ಸ್ಥಳಾಂತರದ ಸಾಧಕ– ಬಾಧಕ ಚರ್ಚಿಸಲು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅವರು ಆ. 13ರಂದು ಸಭೆ ಕರೆದಿದ್ದರು. ವೈದ್ಯಕೀಯ ಕಾಲೇಜು ಹಾಗೂ ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಯುವರಾಜ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಜಿ.ಪಿ.ರೇಣುಪ್ರಸಾದ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ರವೀಂದ್ರ ಸಭೆಯಲ್ಲಿ ಹಾಜರಿದ್ದರು. ಸಭೆ ಮುಗಿದ ನಂತರವೇ ಕುಂಚಿಗನಾಳ್ ಕಣಿವೆಯಲ್ಲಿರುವ ನೂತನ ಭವನಕ್ಕೆ ತೆರಳಿ ಕಟ್ಟಡವನ್ನೂ ಪರಿಶೀಲಿಸಿದರು.
ವೈದ್ಯಕೀಯ ಕಾಲೇಜು ಹಾಗೂ ಜಿಲ್ಲಾ ಆಸ್ಪತ್ರೆ ಬೇರೆಬೇರೆ ಇರುವ ಬಗ್ಗೆ, ಅದರಿಂದಾಗುವ ಅನುಕೂಲ, ಅನನುಕೂಲಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದೆ. ಕೆಲ ಜಿಲ್ಲೆಗಳಲ್ಲಿ ಇವೆರಡೂ ಬೇರೆಬೇರೆಯೇ ಇದ್ದು ಅದರಿಂದ ಯಾವುದೇ ತೊಂದರೆ ಆಗಿಲ್ಲ ಎಂಬುದನ್ನು ಪರಿಗಣಿಸಲಾಗಿದೆ. ಜಿಲ್ಲಾಧಿಕಾರಿ ಕೂಡ ನೂತನ ಕಟ್ಟಡಕ್ಕೆ ಕಾಲೇಜು ಸ್ಥಳಾಂತರಗೊಳಿಸುವ ಪ್ರಸ್ತಾವದ ಪರವಾಗಿಯೇ ಇದ್ದಾರೆ. ಇದಕ್ಕೆ ವೈದ್ಯಕೀಯ ತಂಡವೂ ಸಹಮತ ವ್ಯಕ್ತಪಡಿಸಿದ್ದು, ಕಾಲೇಜು ಸ್ಥಳಾಂತರಗೊಳ್ಳುವುದು ಬಹುತೇಕ ಖಚಿತವಾಗಿದೆ ಎಂದು ಮೂಲಗಳು ತಿಳಿಸಿವೆ.
ನೂತನ ಕಟ್ಟಡ ಪರಿಶೀಲಿಸಿದ ವೈದ್ಯಕೀಯ ತಂಡ ಅಲ್ಲಿಗೆ ಕಾಲೇಜು ಸ್ಥಳಾಂತರಗೊಂಡರೆ ಯಾವ ತೊಂದರೆಯೂ ಆಗುವುದಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದೆ. ಸಣ್ಣಪುಟ್ಟ ಬದಲಾವಣೆಗಳೊಂದಿಗೆ ಜಿಲ್ಲಾಡಳಿತ ಭವನದ ಉದ್ದೇಶಕ್ಕಾಗಿ ಕಟ್ಟಿದ ಕಟ್ಟಡವನ್ನು ವೈದ್ಯಕೀಯ ಕಾಲೇಜಾಗಿ ಬಳಸಬಹುದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದೆ. ಈ ಕುರಿತ ವರದಿಯನ್ನೂ ಕಾಲೇಜು ಹಾಗೂ ಸಂಶೋಧನಾ ಸಂಸ್ಥೆಯ ನಿರ್ದೇಶಕರು ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ್ದಾರೆ. ಹೀಗಾಗಿ ಕಾಲೇಜು ಸ್ಥಳಾಂತರ ಪ್ರಕ್ರಿಯೆ ವೇಗ ಪಡೆದುಕೊಂಡಿದೆ.
ನಿರ್ದೇಶಕರ ಅಭಿಪ್ರಾಯ ಏನು?
ಗುಡ್ಡದರಂಗವ್ವನ ಹಳ್ಳಿಯಲ್ಲಿನ ದಾವಣಗೆರೆ ವಿವಿ ಕಟ್ಟಡದಲ್ಲಿರುವ ವೈದ್ಯಕೀಯ ಕಾಲೇಜು ಕುಂಚಿಗನಾಳ್ ಕಟ್ಟಡಕ್ಕೆ ಸ್ಥಳಾಂತರಗೊಳ್ಳುವುದಕ್ಕೆ ವೈದ್ಯಕೀಯ ತಂಡ ಒಪ್ಪಿಗೆ ಸೂಚಿಸಿದೆ.
ಮುಂದಿನ ವರ್ಷದಿಂದ ಕಾಲೇಜು ದೊಡ್ಡ ಮಟ್ಟದಲ್ಲಿ ಬೆಳೆಯುತ್ತದೆ. ಎಂಬಿಬಿಎಸ್, ಎಂ.ಡಿ ಮಾತ್ರವಲ್ಲದೇ ಬಿಎಸ್.ಸಿ ನರ್ಸಿಂಗ್, ವೈದ್ಯಕೀಯ ಸಂಬಂಧಿತ ತರಬೇತಿಗಳು, ಫಿಸಿಯೋ ಥೆರಪಿ, ಪ್ಯಾರಾ ಮೆಡಿಕಲ್ ತರಬೇತಿ ಕೋರ್ಸ್‌ಗಳಿಗಾಗಿ 3,000ಕ್ಕೂ ಅಧಿಕ ವಿದ್ಯಾರ್ಥಿಗಳು ದಾಖಲಾಗುತ್ತಾರೆ. ಜೊತೆಗೆ ಪುರುಷ– ಮಹಿಳೆಯರ ಹಾಸ್ಟೆಲ್‌ಗಳು, ಪ್ರಾಧ್ಯಾಪಕರ ವಸತಿ ನಿಲಯಗಳು, ವಿದ್ಯಾರ್ಥಿಗಳ ಆಟದ ಮೈದಾನ ಅಭಿವೃದ್ಧಿಗೊಳ್ಳಬೇಕಾಗಿದೆ.
ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ನಿರ್ಮಾಣ ಹಂತದಲ್ಲಿರುವ ಕಾಲೇಜು ಕಟ್ಟಡದಲ್ಲಿ ಇಷ್ಟೆಲ್ಲಾ ಸೌಲಭ್ಯಗಳನ್ನು ಒದಗಿಸುವುದು ಬಲು ಕಷ್ಟವಾಗಲಿದೆ. ಜಿಲ್ಲಾ ಆಸ್ಪತ್ರೆಯೂ ಕಿಷ್ಕಂಧೆಯಂತಾಗಿ ರೋಗಿಗಳಿಗೂ ತೊಂದರೆ ಉಂಟಾಗಲಿದೆ. ಜಿಲ್ಲಾ ಆಸ್ಪತ್ರೆಯಲ್ಲಿ ಹೃದ್ರೋಗ ವಿಭಾಗ, ಶ್ವಾಸಕೋಶ ಚಿಕಿತ್ಸೆ, ಕ್ಯಾನ್ಸರ್ ಕೇಂದ್ರ, ಮನೋರೋಗ ವಿಭಾಗ ಬರುವ ನಿರೀಕ್ಷೆ ಇರುವ ಕಾರಣ ಜಿಲ್ಲಾ ಆಸ್ಪತ್ರೆಯನ್ನು ಚಿಕಿತ್ಸೆಯ ಉದ್ದೇಶಕ್ಕೆ ಮಾತ್ರ ಬಿಟ್ಟು ಅಲ್ಲಿಗೆ ಕಾಲೇಜು ಬರುವುದು ಬೇಡ ಎಂಬ ಅಭಿಪ್ರಾಯಕ್ಕೆ ವೈದ್ಯಕೀಯ ತಂಡ ಬಂದಿದೆ.
‘ನೂತನ ಕಟ್ಟಡಕ್ಕೆ ವೈದ್ಯಕೀಯ ಕಾಲೇಜು ಸ್ಥಳಾಂತರಗೊಂಡರೆ ಆಗುವ ಅನುಕೂಲಗಳ ಬಗ್ಗೆ ಜಿಲ್ಲಾಧಿಕಾರಿಯವರು ಸವಿವರವಾಗಿ ತಿಳಿಸಿದ್ದಾರೆ. ಅದು ನಮಗೂ ಸರಿ ಎನಿಸಿದೆ. ನೂತನ ಕಟ್ಟಡವನ್ನು ನಾವು ನೋಡಿದ್ದು ಕಾಲೇಜಿಗೆ ಬಳಸಿಕೊಳ್ಳಲು ಯಾವುದೇ ಅಡ್ಡಿ ಇಲ್ಲ. ಜೊತೆಗೆ ಕಾಲೇಜು ಅಭಿವೃದ್ಧಿಗೆ ಅಲ್ಲಿ ಸಾಕಷ್ಟು ಜಾಗ ಇರುವ ಕಾರಣ ಒಳ್ಳೆಯ ನಿರ್ಧಾರ ಎಂದು ನಮಗೂ ಅನ್ನಿಸಿದೆ. ಸರ್ಕಾರಿ ಆದೇಶ ಬಂದ ಕೂಡಲೇ ಕಾಲೇಜು ಸ್ಥಳಾಂತರದ ದಿನಾಂಕದ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ಸರ್ಕಾರಿ ವೈದ್ಯಕೀಯ ಕಾಲೇಜು ಹಾಗೂ ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಯುವರಾಜ್ ತಿಳಿಸಿದರು.
ಡಿ.ಸಿ ಕಚೇರಿಗೆ ಹೊಸ ರೂಪ
ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ಈಗಿನ ಜಿಲ್ಲಾಧಿಕಾರಿ ಕಚೇರಿಯನ್ನು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ನವೀಕರಣಗೊಳಿಸಲಾಗಿದೆ. ಜಿಲ್ಲಾಧಿಕಾರಿ ಹೆಚ್ಚುವರಿ ಜಿಲ್ಲಾಧಿಕಾರಿ ಕೊಠಡಿಗಳು ಹೊಸ ರೂಪ ಪಡೆದಿವೆ. ಜೊತೆಗೆ ಇಡೀ ಆವರಣಕ್ಕೆ ಡಾಂಬರ್ ಹಾಕಲಾಗಿದೆ. ಪಾರ್ಕಿಂಗ್ ಜಾಗ ಕಬ್ಬಿಣದ ಕಾಂಪೌಂಡ್‌ಗಳನ್ನು ಹೊಸದಾಗಿ ನಿರ್ಮಿಸಲಾಗಿದೆ. ಜೊತೆಗೆ ಸುಂದರ ಉದ್ಯಾನವನ್ನೂ ಅಭಿವೃದ್ಧಿಗೊಳಿಸಲಾಗಿದೆ. ಆ. 15ರೊಳಗೆ ಎಲ್ಲಾ ಕೆಲಸಗಳನ್ನು ನಿರಂತರವಾಗಿ ಮಾಡಿ ಮುಗಿಸಲಾಗಿದೆ. ಹೀಗಾಗಿ ಕುಂಚಿಗನಾಳ್ ಕಣಿವೆ ಪ್ರದೇಶದ ನೂತನ ಕಟ್ಟಡಕ್ಕೆ ಜಿಲ್ಲಾಧಿಕಾರಿ ಕಚೇರಿ ಇತರ 16 ಇಲಾಖೆಗಳು ಸ್ಥಳಾಂತರಗೊಳ್ಳುವುದು ಮುಗಿದ ಅಧ್ಯಾಯವಾಗಿದೆ.
ನಿವೇಶನಗಳ ಬೆಲೆ ಕುಸಿತ
ಕುಂಚಿಗನಾಳ್ ಕಣಿವೆಯ ನೂತನ ಕಟ್ಟಡದಲ್ಲಿ ಜಿಲ್ಲಾಡಳಿತ ಭವನ ನಿರ್ಮಾಣ ಕಾಮಗಾರಿ ಆರಂಭಗೊಳ್ಳುತ್ತಿದ್ದಂತೆ ಸುತ್ತಮುತ್ತಲಿನ ಖಾಸಗಿ ಲೇಔಟ್‌ಗಳಲ್ಲಿ ನಿವೇಶನಗಳ ಬೆಲೆ ಗಗನಕ್ಕೇರಿತ್ತು. ಕೃಷಿ ಜಮೀನು ಬೆಲೆಯೂ ತೀವ್ರಗತಿಯಲ್ಲಿ ಹೆಚ್ಚಾಗಿತ್ತು. ಈಗ ಜಿಲ್ಲಾಧಿಕಾರಿ ಕಚೇರಿ ಅಲ್ಲಿಗೆ ಸ್ಥಳಾಂತರವಾಗುವುದಿಲ್ಲ ಎಂಬ ಸುದ್ದಿ ಹರಡುತ್ತಿದ್ದಂತೆ ಅಲ್ಲಿಯ ನಿವೇಶನ ಜಮೀನು ಬೆಲೆಯ ಕುಸಿತ ಆರಂಭವಾಗಿದೆ ಎಂದು ಮೂಲಗಳು ತಿಳಿಸಿವೆ. ‘ಹಲವು ಖಾಸಗಿ ಲೇಔಟ್ ಮಾಲೀಕರು ಹೆಚ್ಚು ದರ ನೀಡಿ ಜಮೀನು ಖರೀದಿ ಮಾಡಿದ್ದರು. ಲೇಔಟ್‌ಗಳಲ್ಲಿ ಚದರ ಅಡಿ ಬೆಲೆ ₹ 2000ದವರೆಗೂ ತಲುಪಿತ್ತು. ಈಗ ಅಲ್ಲಿ ಮೆಡಿಕಲ್ ಕಾಲೇಜು ಬಂದರೆ ನಿವೇಶನ ಜಮೀನಿಗೆ ಬೆಲೆ ಕುಸಿಯುವುದು ಖಚಿತ’ ಎಂದು ರಿಯಲ್ ಎಸ್ಟೇಟ್ ಏಜೆಂಟರೊಬ್ಬರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.