ಚಿತ್ರದುರ್ಗ: ‘ವೈಚಾರಿಕ ಚಿಂತನೆಯ ನೆಲೆಗಟ್ಟಿನಲ್ಲಿ ರೂಪಿತಗೊಂಡ ದಿನಗಳನ್ನು ಕೆಲವರು ಭಯಪಡಿಸಲು ಬಳಸಿಕೊಂಡಿದ್ದಾರೆ. ಶ್ರೀಮಠವು ಎಲ್ಲಾ ದಿನಗಳಿಗೂ ಮಹತ್ವ ನೀಡಿದೆ’ ಎಂದು ಎಸ್‌ಜೆಎಂ ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯ ಬಸವಕುಮಾರ ಸ್ವಾಮೀಜಿ ತಿಳಿಸಿದರು.
ನಗರದ ಮುರುಘಾ ಮಠದಲ್ಲಿ ಬುಧವಾರ ಆಯೋಜಿಸಿದ್ದ ಕುಂಬಾರ ಗುಂಡಯ್ಯ ಶರಣೋತ್ಸವದಲ್ಲಿ ಮಾತನಾಡಿದ ಅವರು, ‘ಕುಂಬಾರ ಗುಂಡಯ್ಯನವರಿಗೂ ಮಣ್ಣಿಗೂ ಅವಿನಾಭಾವ ಸಂಬಂಧವಿದೆ. ಆ ಕಾರಣ ಈ ವಿಶೇಷ ದಿನದಂದು ಅವರ ಜಯಂತಿ ಆಚರಿಸಲಾಗುತ್ತಿದೆ’ ಎಂದರು.
‘ತನ್ನ ಕಸುಬಿನ ಜತೆಗೆ ಬಸವಣ್ಣನವರ ಆಶಯಕ್ಕೆ ಒತ್ತುಕೊಟ್ಟು ನಡೆದವರು ಕುಂಬಾರ ಗುಂಡಯ್ಯ. ನಮ್ಮ ಹಿರಿಯರು ಹುಣ್ಣಿಮೆ, ಅಮಾವಾಸ್ಯೆಗಳನ್ನು ವೈಜ್ಞಾನಿಕವಾಗಿ ನಿರೂಪಿಸಿದ್ದಾರೆ. ಇಂದು ಮಣ್ಣೆತ್ತಿನ ಅಮಾವಾಸ್ಯೆ. ಇದಕ್ಕೂ ವೈಜ್ಞಾನಿಕ ಮತು ತಾತ್ವಿಕ ನೆಲೆಗಟ್ಟು ಇದೆ’ ಎಂದು ತಿಳಿಸಿದರು.
‘ಬಸವಣ್ಣನವರು ಸಮಸಮಾಜ ನಿರ್ಮಾಣದ ಹಿನ್ನೆಲೆಯಲ್ಲಿ ಶೋಷಿತ ವರ್ಗಗಳನ್ನು ಮುಖ್ಯವಾಹಿನಿಗೆ ತರಲು ಅನುಭವ ಮಂಟಪ ಸ್ಥಾಪಿಸಿದರು. ಅದರ ಮುಂದುವರಿದ ಭಾಗವಾಗಿ ಮುರುಘಾ ಮಠದಲ್ಲಿ ಅಲಕ್ಷಿತ ಸಮುದಾಯಗಳಿಗೆ ಸರಿಯಾದ ದಿಕ್ಕನ್ನು ತೋರಿಸುವ ಕಾರ್ಯವಾಗುತ್ತಿದೆ’ ಎಂದು ಕುಂಬಾರ ಗುರುಪೀಠದ ಬಸವಮೂರ್ತಿ ಕುಂಬಾರ ಗುಂಡಯ್ಯ ಸ್ವಾಮೀಜಿ ಹೇಳಿದರು.
‘ನಮ್ಮದು ಸಣ್ಣ ಸಮಾಜ. ನಾವು ಸಹ ಎಲ್ಲರಂತೆ ಸಮಾಜದ ಮುಖ್ಯವಾಹಿನಿಯಲ್ಲಿ ತಮ್ಮ ಅಸ್ತಿತ್ವ ಉಳಿಸಿಕೊಳ್ಳಬೇಕಾದರೆ ಎಲ್ಲರ ಸಹಕಾರದ ಅಗತ್ಯವಿದೆ’ ಎಂದರು.
ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ಮಹಡಿ ಶಿವಮೂರ್ತಿ, ಮಠದ ಪದಾಧಿಕಾರಿಗಳಾದ ತಿಪ್ಪೇಸ್ವಾಮಿ, ವೈ.ಮೃತ್ಯುಂಜಯ, ತಿಪ್ಪೇರುದ್ರಪ್ಪ, ಪೈಲ್ವಾನ್ ತಿಪ್ಪೇಸ್ವಾಮಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.