ಬಂಧನ
(ಸಾಂದರ್ಭಿಕ ಚಿತ್ರ)
ಚಿತ್ರದುರ್ಗ: ಬಾಂಗ್ಲಾದೇಶದಿಂದ ಅಕ್ರಮವಾಗಿ ಭಾರತಕ್ಕೆ ಬಂದು ನಗರದಲ್ಲಿನ ಖಾಸಗಿ ಸಿದ್ಧ ಉಡುಪುಗಳ ಕಾರ್ಖಾನೆ (ಗಾರ್ಮೆಂಟ್ಸ್)ಗಳಲ್ಲಿ ಕೆಲಸಕ್ಕಿದ್ದ ಮತ್ತೆ ನಾಲ್ವರನ್ನು ಪೊಲೀಸರು ಪತ್ತೆ ಬಂಧಿಸಿದ್ದು, ಬಂಧಿತರ ಸಂಖ್ಯೆ 6ಕ್ಕೇರಿದೆ.
ಸೋಮವಾರ ಸಂಜೆಯವರೆಗೆ ಒಟ್ಟು 15 ಜನ ಕಾರ್ಮಿಕರ ಹಿನ್ನೆಲೆ ಪರಿಶೀಲಿಸಿದ ಸಂದರ್ಭ ಬಾಂಗ್ಲಾದ ಇಬ್ಬರು ಅಕ್ರಮ ವಲಸಿಗರು ಪತ್ತೆಯಾಗಿದ್ದರು. ರಾತ್ರಿ ಮತ್ತೆ ಐವರನ್ನು ವಶಕ್ಕೆ ಪಡೆದು ಪರಿಶೀಲಿಸಿದಾಗ ಮತ್ತೆ ನಾಲ್ವರು ಪತ್ತೆಯಾದರು ಎಂದು ಪೊಲೀಸರು ತಿಳಿಸಿದ್ದಾರೆ.
ಶೇಖ್ ಸೈಫೂರ್ ರೆಹಮಾನ್, ಮೊಹಮ್ಮದ್ ಹುಸೇನ್ ಅಲಿ, ಮಹರೂಲ್, ಅಜೀಜ್ ಶೇಖ್, ಮೊಹಮ್ಮದ್ ಸಾಕಿಬ್, ಸೊನಾವರ್ ಹುಸೇನ್ ಬಂಧಿತರು.
‘ಸಿಇಎನ್ ಅಪರಾಧ ಠಾಣೆ, ಕೋಟೆ, ಗ್ರಾಮಾಂತರ ಠಾಣೆ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ 20 ಮಂದಿ ಶಂಕಿತರನ್ನು ಗುರುತಿಸಲಾಗಿತ್ತು. ಎಲ್ಲರ ದಾಖಲೆಗಳನ್ನು ಪರಿಶೀಲಿಸಿದಾಗ ಒಟ್ಟು 6 ಮಂದಿ ಬಾಂಗ್ಲಾದೇಶ ಪ್ರಜೆಗಳಿರುವ ವಿಷಯ ಗೊತ್ತಾಯಿತು. ಈ ಕುರಿತ ವರದಿಯನ್ನು ಬೆಂಗಳೂರಿನ ವಿದೇಶಿಗರ ಪ್ರಾದೇಶಿಕ ನೋಂದಣಿ ಕಚೇರಿ (ಎಫ್‌ಆರ್‌ಆರ್‌ಒ)ಗೆ ಕಳುಹಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘ಅರವಿಂದ್ ಗಾರ್ಮೆಂಟ್ಸ್, ವೈಟ್‌ವಾಷ್ ಗಾರ್ಮೆಂಟ್ಸ್ ಸೇರಿ ವಿವಿಧೆಡೆ ಕೆಲಸ ಮಾಡುತ್ತಿದ್ದ ಕಾರ್ಮಿಕರ ವಿವಿರ ಪರಿಶೀಲಿಸಲಾಗಿದೆ. ಬಂಧಿತರೆಲ್ಲರೂ ಪಶ್ಚಿಮ ಬಂಗಾಳ, ಜಾರ್ಖಂಡ್ ರಾಜ್ಯಗಳ ನಕಲಿ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಕಾರ್ಮಿಕರ ಗುರುತಿನ ಚೀಟಿ, ಮತದಾರರ ಗುರುತಿನ ಚೀಟಿ, ಶೈಕ್ಷಣಿಕ ಪ್ರಮಾಣ ಪತ್ರ ನೀಡಿ ಕೆಲಸ ಪಡೆದಿದ್ದರು’ ಎಂದು ಅವರು ಹೇಳಿದರು.
‘ಇವರು ಬಾಂಗ್ಲಾದೇಶ– ಭಾರೆತ ಗಡಿಯಲ್ಲಿ ನುಸುಳಿ ಮೊದಲು ಕೋಲ್ಕತ್ತಾಗೆ ಬಂದಿದ್ದಾರೆ. ನಂತರ ನಕಲಿ ದಾಖಲೆಗಳನ್ನು ಸೃಷ್ಟಿಸಿ ಬೆಂಗಳೂರು, ಮುಂಬೈ, ಚೆನ್ನೈ ಮುಂತಾದ ನಗರಗಳಿಗೆ ಬಂದಿದ್ದಾರೆ. ಬಂಧಿತರಾಗಿರುವ 6 ಮಂದಿ ಇತ್ತೀಚೆಗಷ್ಟೇ ಚಿತ್ರದುರ್ಗಕ್ಕೆ ಬಂದಿದ್ದು, ಇವರಿಗೆ ನಕಲಿ ಪ್ರಮಾಣಪತ್ರ ಮಾಡಿಸಿಕೊಟ್ಟಿರುವ ವ್ಯಕ್ತಿ ಕೂಡ ಬಾಂಗ್ಲಾದೇಶದ ಪ್ರಜೆ ಎಂದು ಗೊತ್ತಾಗಿದೆ. ಈ ಕುರಿತು ಬೆಂಗಳೂರು ಪೊಲೀಸರಿಗೆ ಮಾಹಿತಿ ನೀಡಲಾಗಿದೆ’ ಎಂದರು.
‘ಬಂಧಿತರೆಲ್ಲರೂ 20ರಿಂದ 30 ವರ್ಷ ವಯಸ್ಸಿನವರಾಗಿದ್ದಾರೆ. ಅವರ ಮಾಹಿತಿ ಪರಿಶೀಲಿಸಿದಾಗ ಯಾವುದೇ ಅಪರಾಧ ಹಿನ್ನೆಲೆ ಕಂಡುಬಂದಿಲ್ಲ. ಜೀವನ ನಿರ್ವಹಣೆಗಾಗಿ ಬಂದಿದ್ದಾರೆ. ಇವರೊಂದಿಗೆ ಇನ್ನಷ್ಟು ಜನರು ಬಂದಿರುವ ಬಗ್ಗೆ ಶಂಕೆ ಇದ್ದು, ಪತ್ತೆ ಕಾರ್ಯಾಚರಣೆ ಮುಂದುವರಿದಿದೆ’ ಎಂದು ಅವರು ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.