ADVERTISEMENT

ಚಿತ್ರದುರ್ಗ | ‘ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಸಲ್ಲದು’

ಅಭಿಮಾನಿ ವೇದಿಕೆಯಿಂದ ಮೆರವಣಿಗೆ, ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2025, 7:26 IST
Last Updated 13 ಆಗಸ್ಟ್ 2025, 7:26 IST
ಚಿತ್ರದುರ್ಗದಲ್ಲಿ ಧರ್ಮಸ್ಥಳ ಅಭಿಮಾನಿಗಳ ವೇದಿಕೆ ಸದಸ್ಯರು ಪ್ರತಿಭಟನಾ ಮೆರವಣಿಗೆ ನಡೆಸಿದರು
ಚಿತ್ರದುರ್ಗದಲ್ಲಿ ಧರ್ಮಸ್ಥಳ ಅಭಿಮಾನಿಗಳ ವೇದಿಕೆ ಸದಸ್ಯರು ಪ್ರತಿಭಟನಾ ಮೆರವಣಿಗೆ ನಡೆಸಿದರು   

ಚಿತ್ರದುರ್ಗ: ‘ಶ್ರೀಕ್ಷೇತ್ರ ಧರ್ಮಸ್ಥಳ ಹಾಗೂ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಅವರ ಕುಟುಂಬವನ್ನು ಅವಹೇಳನ ಮಾಡುತ್ತಿರುವ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿ ಧರ್ಮಸ್ಥಳ ಅಭಿಮಾನಿಗಳ ವೇದಿಕೆಯ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು. 

ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ಸೇರಿದ ಸದಸ್ಯರು ಜಿಲ್ಲಾಧಿಕಾರಿ ಕಚೇರಿವರೆಗೂ ಮೆರವಣಿಗೆ ನಡೆಸಿದರು. ‘ನಮ್ಮ ಪೂಜ್ಯರು ನಮ್ಮ ಹೆಮ್ಮೆ, ಪೂಜ್ಯ ಹೆಗ್ಗಡೆ ಅವರ ಜೊತೆ ನಾವಿದ್ದೇವೆ, ತಪ್ಪು ಸಂದೇಶ ನೀಡುತ್ತಿರುವ ಯೂಟ್ಯೂಬರ್‌ಗಳಿಗೆ ಧಿಕ್ಕಾರ, ಜೈ ಧರ್ಮಸ್ಥಳ, ಧರ್ಮೋ ರಕ್ಷತಿ ರಕ್ಷಿತಃ ಘೋಷಣೆ ಕೂಗಿದರು. 

‘ನೂರಾರು ವರ್ಷಗಳಿಂದ ಧರ್ಮಸ್ಥಳದಲ್ಲಿ ಧಾರ್ಮಿಕ ಭಾವನೆ ಇದೆ. ಧರ್ಮಾಧಿಕಾರಿಗಳು ಬಡವರ ಉದ್ಧಾರಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ರಾಜ್ಯದಾದ್ಯಂತ ನಿರ್ಮಾಣಗೊಂಡಿರುವ ದೇವಾಲಯಗಳಿಗೆ ಧನ ಸಹಾಯ ಮಾಡಿದ್ದಾರೆ. ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನರ ಸೇವೆ ಮಾಡುತ್ತಿದ್ದಾರೆ. ಇದನ್ನು ಸಹಿಸದ ಧರ್ಮವಿರೋಧಿಗಳ ಗುಂಪು ಷಡ್ಯಂತ್ರ ರೂಪಿಸಿ ಅವರಿಗೆ ಸಂಬಂಧವೇ ಇಲ್ಲದ ಯಾವುದೋ ಪ್ರಕರಣಗಳನ್ನು ಕೆದಕುತ್ತಿದ್ದಾರೆ’ ಎಂದು ಪ್ರತಿಭಟನಕಾರರು ಆರೋಪಿಸಿದರು. 

ADVERTISEMENT

‘ಧರ್ಮಸ್ಥಳ ಹಾಗೂ ವೀರೇಂದ್ರ ಹೆಗ್ಗಡೆ ಅವರ ವಿರುದ್ಧ ಅಪಪ್ರಚಾರ ನಡೆಸುತ್ತಿರುವ ಕಾರಣ ಭಕ್ತರಿಗೆ ಅಪಾರವಾದ ನೋವು ಉಂಟಾಗಿದೆ. ಹಿಂದೂಗಳ ಶ್ರದ್ಧಾ ಕೇಂದ್ರ ಧರ್ಮಸ್ಥಳದಲ್ಲಿ ತನಿಖೆಯ ಹೆಸರಲ್ಲಿ ನಡೆಯುತ್ತಿರುವ ಧರ್ಮ ದ್ರೋಹಿ ಚಟುವಟಿಕೆಗಳು ಕೂಡಲೇ ನಿಲ್ಲಬೇಕು. ಎಸ್‍ಐಟಿ ನಡೆಸುತ್ತಿರುವ ತನಿಖೆ ಧರ್ಮಸ್ಥಳ ಕ್ಷೇತ್ರದ ಧಾರ್ಮಿಕ ಶ್ರದ್ಧೆಗೆ ಅಪಚಾರ ಮಾಡುವಂತಿದೆ. ಕೂಡಲೇ ಎಸ್‌ಐಟಿ ಅಧಿಕಾರಿಗಳು ಮಧ್ಯಂತರ ವರದಿ ಸಲ್ಲಿಸಬೇಕು’ ಎಂದು ಒತ್ತಾಯಿಸಿದರು.  

‘ಮತಾಂಧ ಶಕ್ತಿಗಳು ಧರ್ಮಸ್ಥಳದ ವಿರುದ್ಧ ವ್ಯವಸ್ಥಿತ ಅಪಪ್ರಚಾರದಲ್ಲಿ ತೊಡಗಿವೆ. ಸದ್ಯ ನಡೆಯುತ್ತಿರುವ ತನಿಖೆ ಕೂಡ ಅದಕ್ಕೆ ಪುಷ್ಟಿ ಕೊಡುವಂತಿದೆ. ಅನಾಮಿಕ ದೂರುದಾರನ ಹೆಸರಲ್ಲಿ ಕಳೆದ 15 ದಿನಗಳಿಂದ ನಿರಂತರವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದ ತೇಜೋವಧೆ ಮಾಡಲಾಗುತ್ತಿದೆ. ಕಿಡಿಗೇಡಿಯೊಬ್ಬನು ನೀಡಿದ ದೂರನ್ನು ಪರಿಗಣಿಸಿ ಅವನು ತೋರಿಸಿದ ಜಾಗವನ್ನು ಅಗೆಯಲಾಗುತ್ತಿದೆ. ಈ ಬಗ್ಗೆ ಸರ್ಕಾರ ಸ್ಪಷ್ಟ ಉತ್ತರ ನೀಡಬೇಕು’ ಎಂದು ಒತ್ತಾಯಿಸಿದರು. 

‘ಎಲ್ಲರಿಗೂ ಒಳಿತನ್ನು ಬಯಸುವ ವೀರೇಂದ್ರ ಹೆಗ್ಗಡೆಯವರ ಕುಟುಂಬಕ್ಕೆ ನೋವುಂಟು ಮಾಡುವ ರೀತಿಯಲ್ಲಿ ನಡೆದುಕೊಳ್ಳಲಾಗುತ್ತಿದೆ. ಎಲ್ಲಾ ದುಷ್ಟಶಕ್ತಿಗಳಿಗೂ ತಕ್ಕ ಉತ್ತರ ನೀಡಬೇಕಾಗಿದೆ. ಧಾರ್ಮಿಕ ಕೇಂದ್ರಗಳ ಶಕ್ತಿ ಕುಗ್ಗಿಸುವ ಕೆಲಸ ಎಲ್ಲಿ ನಡೆಯುತ್ತಿದೆಯೋ ಅಲ್ಲಿ ಜಾಗೃತಿ ಸಮಾವೇಶ ಹಮ್ಮಿಕೊಂಡು ಹಿಂದೂ ಧಾರ್ಮಿಕ ಕ್ಷೇತ್ರಗಳ ಸಂರಕ್ಷಣೆ ಮಾಡಬೇಕಾಗಿದೆ. ಮತಾಂಧ ಶಕ್ತಿಗಳನ್ನು ಮಟ್ಟ ಹಾಕಲು ನಾವು ಸಿದ್ಧರಾಗಿದ್ದೇವೆ’ ಎಂದರು. 

ಶ್ರೀ ಧರ್ಮಸ್ಥಳ ಅಭಿಮಾನಿ ವೇದಿಕೆಯ ಸಿ.ಬಿ.ನಾಗರಾಜ್, ದೇವರಾಜು ಅರಸು ವಿದ್ಯಾ ಸಂಸ್ಥೆಯ ಆಡಳಿತಾಧಿಕಾರಿ ರಘು ಚಂದನ್, ವೀರಶೈವ ಮುಖಂಡರಾದ ಕೆಇಬಿ ಷಣ್ಮುಖಪ್ಪ, ಜಿತೇಂದ್ರ ಹುಲಿಕುಂಟೆ, ಲೀಲಾಧರ್ ಠಾಕೂರ್, ತಿಮ್ಮಣ್ಣ, ನಾಗರಾಜ್ ಸಂಗಮ್, ರೂಪಾ ಜನಾರ್ಧನ್ ಇದ್ದರು.

ಅನಾಮಿಕನ ದೂರಿಗೆ ಮಹತ್ವ ಕೊಡುತ್ತಿರುವುದೇಕೆ? ಎಸ್‌ಐಟಿಯು ಮಧ್ಯಂತರ ವರದಿ ಸಲ್ಲಿಸಲು ಒತ್ತಾಯ ರಾಜ್ಯದಾದ್ಯಂತ ಉಗ್ರ ಹೋರಾಟ ನಡೆಸುವ ಎಚ್ಚರಿಕೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.