ಚಿತ್ರದುರ್ಗ: ಜಿಲ್ಲೆಯ ಸರ್ಕಾರಿ ಶಾಲಾ ಮಕ್ಕಳ ಕ್ರೀಡಾ ಚಟುವಟಿಕೆಗೆ ಬಳಕೆಯಾಗಬೇಕಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಕ್ರೀಡಾ ಪರಿಕರಗಳು ನಗರದ ಕ್ರೀಡಾ ಸಂಕೀರ್ಣ ಕಟ್ಟಡದಲ್ಲಿ ಕೊಳೆಯುವ ಸ್ಥಿತಿಯಲ್ಲಿವೆ. ಆಡುವ ಮಕ್ಕಳ ಕೈಸೇರಬೇಕಾಗಿದ್ದ ವಸ್ತುಗಳು ಅಧಿಕಾರಿಗಳು ಹಾಗೂ ಇತರ ಸಿಬ್ಬಂದಿಯ ನಿರ್ಲಕ್ಷ್ಯದಿಂದ ಕೊಠಡಿಯೊಳಗೆ ಬಂಧಿಯಾಗಿವೆ.
ಜಿಲ್ಲಾ ಪಂಚಾಯಿತಿ ಕಚೇರಿ ಕಡೆಯಿಂದ ಜಿಲ್ಲಾ ಕ್ರೀಡಾಂಗಣ ಪ್ರವೇಶಿಸುವ ಪ್ರವೇಶ ದ್ವಾರದಲ್ಲೇ ಕ್ರೀಡಾ ಸಂಕೀರ್ಣ ಕಟ್ಟಡವಿದೆ. ಅಲ್ಲಿ ಕ್ರೀಡಾ ವಸತಿ ನಿಲಯ, ಸಭಾಂಗಣವಿದೆ. ಕಟ್ಟಡ ಪ್ರವೇಶಿಸುತ್ತಿದ್ದಂತೆ ಎಡಭಾಗದಲ್ಲಿ ದೊಡ್ಡದೊಂದು ಕೊಠಡಿಯಿದ್ದು ಅಲ್ಲಿ ಹಲವು ವರ್ಷಗಳಿಂದ ಮಕ್ಕಳಿಗಾಗಿ ಖರೀದಿ ಮಾಡಿರುವ ಅಪಾರ ಕ್ರೀಡಾ ಪರಿಕರವನ್ನು ಕಸದಂತೆ ತುಂಬಿಡಲಾಗಿದೆ.
ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಆಟಕ್ಕೆ ನೀಡಬೇಕಿದ್ದ ವಸ್ತುಗಳನ್ನು ಹೀಗೇಕೆ ತುಂಬಿ ಇಟ್ಟಿದ್ದೀರಿ ಎಂದು ಪ್ರಶ್ನಿಸಿದರೆ ಅಲ್ಲಿಯ ಸಿಬ್ಬಂದಿಯಿಂದ ಸಮರ್ಪಕ ಉತ್ತರ ದೊರೆಯುವುದಿಲ್ಲ. ಕೊಠಡಿಯೊಳಗೆ ತುಂಬಿಟ್ಟಿರುವ ವಸ್ತುಗಳನ್ನು ನೋಡಿದರೆ ಹಲವು ಅನುಮಾನಗಳು ಕಾಡುತ್ತವೆ. ಈ ಕುರಿತು ಕ್ರೀಡಾಪಟುಗಳನ್ನು ವಿಚಾರಿಸಿದರೆ ದಶಕದಿಂದಲೂ ಕ್ರೀಡಾ ಇಲಾಖೆಯಲ್ಲಿ ನಡೆಯುತ್ತಿರುವ ಗೊಂದಲಗಳ ಬಗ್ಗೆ ಎಳೆಎಳೆಯಾಗಿ ಬಿಚ್ಚಿಡುತ್ತಾರೆ.
ದಶಕದಿಂದ ವಿತರಣೆ ಇಲ್ಲ: ಕ್ರೀಡಾ ಪರಿಕರಗಳ ಖರೀದಿಗಾಗಿ ಇಲಾಖೆ ಪ್ರತಿ ವರ್ಷ ಲಕ್ಷಾಂತರ ರೂಪಾಯಿ ಅನುದಾನ ನೀಡುತ್ತದೆ. ಕೋವಿಡ್‌ಗೂ ಮೊದಲು ₹50 ಲಕ್ಷಕ್ಕೂ ಹೆಚ್ಚು ಅನುದಾನ ಬರುತ್ತಿತ್ತು. ಸದ್ಯ ಕಡಿಮೆಯಾಗಿದ್ದರೂ ನಿಯಮಿತವಾಗಿ ಅನುದಾನ ಬರುತ್ತದೆ. ಪ್ರತಿ ವರ್ಷ ಕ್ರೀಡಾ ಪರಿಕರ ಖರೀದಿ ಮಾಡಿ ಸರ್ಕಾರಿ ಶಾಲೆಗಳ ವಿತರಣೆ ಮಾಡುವುದು ಕ್ರೀಡಾ ಮತ್ತು ಯುವಜನ ಸೇವೆ ಇಲಾಖೆಯ ಕರ್ತವ್ಯವಾಗಿದೆ.
2010ರಿಂದ 2023ರ ವರೆಗೆ ಜಿಲ್ಲೆಯ ವಿದ್ಯಾರ್ಥಿಗಳಿಗಾಗಿ ಖರೀದಿ ಮಾಡಿದ ಅಪಾರ ಕ್ರೀಡಾ ಪರಿಕರವನ್ನು ಆಗಿನ ಅಧಿಕಾರಿಗಳು ವಿತರಣೆ ಮಾಡಿಲ್ಲ. ಆದರೆ, ಪರಿಕರ ಖರೀದಿಯ ಬಿಲ್ ನೀಡಿದ್ದಾರೆ. ವಾಸ್ತವವಾಗಿ ಶಾಲೆಗಳಿಗೆ ವಿತರಣೆ ಮಾಡದೇ ಕೊಠಡಿಯಲ್ಲಿ ತುಂಬಿಟ್ಟಿದ್ದಾರೆ. 2010ರಿಂದ ಕ್ರೀಡಾ ಇಲಾಖೆಗೆ 4 ಮಂದಿ ಸಹಾಯಕ ನಿರ್ದೇಶಕರು ಬಂದು ಹೋಗಿದ್ದಾರೆ. ಯಾರೂ ಪರಿಕರ ವಿತರಣೆ ಮಾಡದಿರುವುದು ಅನುಮಾನ ಹುಟ್ಟಿಸುತ್ತದೆ. ಆಶ್ಚರ್ಯವೆಂದರೆ ನಾಲ್ಕು ಅಧಿಕಾರಿಗಳ ಪೈಕಿ ಇಬ್ಬರು ಅವ್ಯವಹಾರ ಆರೋಪದ ಕಾರಣಕ್ಕೆ ಅಮಾನತುಗೊಂಡು ಇಲಾಖಾ ವಿಚಾರಣೆ ಎದುರಿಸುತ್ತಿದ್ದಾರೆ.
‘ಕ್ರೀಡಾ ಇಲಾಖೆಗೆ ಯಾವುದೇ ಅಧಿಕಾರಿ ಬಂದರೂ ಸ್ಥಳೀಯವಾಗಿ ಬೇರುಬಿಟ್ಟಿರುವ ಕೆಲ ಕಿಡಿಗೇಡಿಗಳು ಕೆಲಸ ಮಾಡಲು ಬಿಡುವುದಿಲ್ಲ. ಅಧಿಕಾರಿಗಳ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿ ಕೆಲಸ ಮಾಡದಂತೆ ನೋಡಿಕೊಳ್ಳುತ್ತಾರೆ, ಅವರಿಗೆ ಕಿರುಕುಳ ನೀಡುತ್ತಾರೆ. ಅವರೇ ಪರಿಕರ ವಿತರಣೆಯಾಗದಂತೆ ನೋಡಿಕೊಂಡಿದ್ದಾರೆ. ಜಿಲ್ಲಾಧಿಕಾರಿಗಳು ಮಧ್ಯ ಪ್ರವೇಶ ಮಾಡಿ ಕ್ರೀಡಾ ಇಲಾಖೆ ಅಧಿಕಾರಿಗಳನ್ನು ನಿಯಂತ್ರಿಸುತ್ತಿರುವ ದುಷ್ಕರ್ಮಿಗಳನ್ನು ಹೊರ ಹಾಕಬೇಕು’ ಎಂದು ಅಥ್ಲೆಟಿಕ್ಸ್‌ನಲ್ಲಿ ರಾಜ್ಯ ಪ್ರತಿನಿಧಿಸಿರುವ ಕ್ರೀಡಾಪಟುವೊಬ್ಬರು ಒತ್ತಾಯಿಸಿದರು.
ಜಿಲ್ಲಾ ಕ್ರೀಡಾಂಗಣದಲ್ಲಿ ಹಲವರು ವಿವಿಧ ಸಂಘಟನೆಗಳ ಹೆಸರಿನಲ್ಲಿ ವಿವಿಧ ಚಟುವಟಿಕೆ ನಡೆಸುತ್ತಾರೆ. ತಮ್ಮ ರಾಜಕೀಯ ಪ್ರಭಾವ ಬಳಸಿ ಕ್ರೀಡಾ ಅಧಿಕಾರಿಗಳನ್ನು ಬೆದರಿಸುತ್ತಾರೆ ಎಂಬ ಆರೋಪ ಮೊದಲಿನಿಂದಲೂ ಇದೆ. ಕ್ರೀಡಾ ಇಲಾಖೆ ಕಚೇರಿಯೇ ಗೊಂದಲಗಳ ಗೂಡಾಗಿದ್ದು ಅಲ್ಲಿ ಯಾವುದೂ ಸರಿ ಇಲ್ಲ ಎಂಬ ಭಾವನೆ ಮೂಡುತ್ತದೆ. ಕಚೇರಿ ಸಿಬ್ಬಂದಿ, ತರಬೇತುದಾರರು ಒಬ್ಬರಿಗೊಬ್ಬರು ಆರೋಪ, ಪ್ರತ್ಯಾರೋಪ ಮಾಡುತ್ತಾರೆ.
‘ಹಿಂದಿನ ಅಧಿಕಾರಿಗಳ ವಿರುದ್ಧ ಇಲಾಖಾ ವಿಚಾರಣೆ ನಡೆಯುತ್ತಿರುವ ಕಾರಣ ನನಗೆ ಕ್ರೀಡಾ ಪರಿಕರಗಳು ಹಸ್ತಾಂತರವಾಗಿಲ್ಲ. 2023ರ ನಂತರ ಖರೀದಿ ಮಾಡಿರುವ ಎಲ್ಲಾ ಪರಿಕರಗಳನ್ನು ಸರ್ಕಾರಿ ಶಾಲೆಗಳಿಗೆ ವಿತರಣೆ ಮಾಡಲಾಗಿದೆ. ತುಂಬಿಟ್ಟಿರುವ ಪರಿಕರಗಳನ್ನು ಹಸ್ತಾಂತರ ಮಾಡಿದರೆ ಅವುಗಳನ್ನೂ ವಿತರಣೆ ಮಾಡಲಾಗುವುದು’ ಎಂದು ಕ್ರೀಡಾ ಮತ್ತು ಯುವಜನ ಸೇವೆ ಇಲಾಖೆ ಸಹಾಯಕ ನಿರ್ದೇಶಕಿ ಸುಚೇತಾ ಎಂ. ನೆವಲಗಿ ತಿಳಿಸಿದರು.
ಶೀಘ್ರ ನಾನು ಕ್ರೀಡಾ ಸಂಕೀರ್ಣಕ್ಕೆ ಭೇಟಿ ನೀಡಿ ಪರಿಕರ ವಿತರಣೆಯ ಮಾಹಿತಿ ಪಡೆಯುತ್ತೇನೆ. ಮಕ್ಕಳಿಗೆ ಪ್ರತಿ ವರ್ಷ ಸಮರ್ಪಕವಾಗಿ ಪರಿಕರ ವಿತರಣೆಗೆ ಕ್ರಮ ವಹಿಸಲಾಗುವುದುಟಿ.ವೆಂಕಟೇಶ್ ಜಿಲ್ಲಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.