ADVERTISEMENT

ಚಿತ್ರದುರ್ಗ | ಬೀದಿ ದೀಪ ಬೆಳಗುತ್ತಿಲ್ಲ...ಕಗ್ಗತ್ತಲ ಸಂಚಾರ ತಪ್ಪಿಲ್ಲ...

ಕೆ.ಪಿ.ಓಂಕಾರಮೂರ್ತಿ
Published 10 ಮಾರ್ಚ್ 2025, 8:28 IST
Last Updated 10 ಮಾರ್ಚ್ 2025, 8:28 IST
<div class="paragraphs"><p>ಚಿತ್ರದುರ್ಗದ ಕೆಳಗೋಟೆಯ ಸರ್ವಿಸ್ ರಸ್ತೆಯಲ್ಲಿ ಬೀದಿ ದೀಪಗಳು ಇಲ್ಲದಿರುವುದು &nbsp; ಪ್ರಜಾವಾಣಿ ಚಿತ್ರ/ ವಿ.ಚಂದ್ರಪ್ಪ</p></div>

ಚಿತ್ರದುರ್ಗದ ಕೆಳಗೋಟೆಯ ಸರ್ವಿಸ್ ರಸ್ತೆಯಲ್ಲಿ ಬೀದಿ ದೀಪಗಳು ಇಲ್ಲದಿರುವುದು   ಪ್ರಜಾವಾಣಿ ಚಿತ್ರ/ ವಿ.ಚಂದ್ರಪ್ಪ

   

ಚಿತ್ರದುರ್ಗ: ಏಳುಸುತ್ತಿನ ಕೋಟೆ ಹೊಂದಿರುವ ಐತಿಹಾಸಿಕ ನಗರಿ ಚಿತ್ರದುರ್ಗದಲ್ಲಿ ರಾತ್ರಿಯಾಗು ತ್ತಲೇ ಕತ್ತಲಲ್ಲಿ ಬೆಳಕು ಹುಡುಕುವ ಆಟ ಶುರುವಾಗಲಿದೆ! ಸೂರ್ಯ ಮುಳುಗುತ್ತಲೇ ಬೀದಿ ದೀಪಗಳು ನಿತ್ರಾಣಗೊಂಡಿವೆಯೇನೋ ಎಂಬಂತೆ ಮಂದ ಬೆಳಕು ಚೆಲ್ಲುತ್ತವೆ.

ಪ್ರತಿ ಬಜೆಟ್‌ನಲ್ಲೂ ವಿದ್ಯುತ್‌ ಕಂಬ ಅಳವಡಿಕೆ, ದುರಸ್ತಿ ಕಾರ್ಯಕ್ಕೆ ಕೋಟಿಗಟ್ಟಲೆ ಅನುದಾನ ಮೀಸಲಿಟ್ಟರೂ ನಾಗರಿಕರು ಕತ್ತಲಲ್ಲೇ ಹೆಜ್ಜೆ ಹಾಕುವುದು ತಪ್ಪಿಲ್ಲ. ಬೀದಿ ದೀಪ ನಿರ್ವಹಣೆ ಬಗ್ಗೆ ದೂರು ಸಲ್ಲಿಸಲು ನಗರಸಭೆಯಲ್ಲಿ ತೆರೆದಿದ್ದ ಕೇಂದ್ರಕ್ಕೂ ಈಗ ಬೀಗ ಬಿದ್ದಿದೆ. 

ADVERTISEMENT

ನಗರದಲ್ಲಿ ಬೀದಿ ದೀಪಗಳ ನಿರ್ವಹಣೆ ಸಮಸ್ಯೆ ಜನರನ್ನು ಕಾಡುತ್ತಿದೆ. ಬೀದಿ ದೀಪಗಳೇ ಇಲ್ಲದ ರಸ್ತೆಗಳ ಸಂಖ್ಯೆ ಲೆಕ್ಕಕ್ಕೆ ಸಿಗದಷ್ಟಿವೆ. ನಾಮ್ಕಲ್‌ ಗ್ಯಾರೇಜ್‌ನಿಂದ ಭೋವಿ ಗುರುಪೀಠದವರೆಗಿನ ಸರ್ವಿಸ್‌ ರಸ್ತೆಯ ಇಬ್ಬದಿಯಲ್ಲೂ ರಾತ್ರಿ ಕಗ್ಗತ್ತಲು ಕವಿದಿರುತ್ತದೆ. 

ದುರಸ್ತಿ ಕಾರ್ಯ ಕೈಗೊಳ್ಳಲು ಹಿಂದೇಟು ಹಾಕುತ್ತಿರುವ ಅಧಿಕಾರಿಗಳು ಹೊಣೆಗಾರಿಕೆಯಿಂದ ನುಣುಚಿಕೊ ಳ್ಳುವುದೂ ಸಾಮಾನ್ಯವಾಗಿದೆ. ನಗರಸಭೆ ಸಿಬ್ಬಂದಿ, ಇದು ತಮ್ಮ ವ್ಯಾಪ್ತಿಗೆ ಬರುವುದಿಲ್ಲ, ಇಲಾಖೆ ಇನ್ನೂ ಹಸ್ತಾಂತರ ಮಾಡಿಲ್ಲ ಎಂಬ ಸಿದ್ಧ ಉತ್ತರಗಳನ್ನು ನೀಡುವುದು ಮಾಮೂಲಿಯಾಗಿದೆ. ಸಮಸ್ಯೆ ಬಿಗಡಾಯಿಸುತ್ತಿರುವುದಕ್ಕೆ ಈ ಮನೋಧೋರಣೆಯೇ ಮುಖ್ಯ ಕಾರಣ. ನಗರಸಭೆ ವ್ಯಾಪ್ತಿಯ 35 ವಾರ್ಡ್‌ಗಳಲ್ಲೂ ಇದೇ ಪರಿಸ್ಥಿತಿ ಇದೆ. ಎಲ್ಲಾ ಬಡಾವಣೆಗಳಲ್ಲೂ ಬೀದಿ ದೀಪಗಳು ನಾಮಕಾವಾಸ್ಥೆಗೆ ಇದ್ದಂತಿವೆ.

ನಗರದಲ್ಲಿ 10,421 ಬೀದಿ ದೀಪಗಳಿದ್ದು, ಈ ಪೈಕಿ ನಿತ್ಯ 80 ರಿಂದ 100 ದೀಪಗಳು ಹಾಳಾಗುವುದು ಸಾಮಾನ್ಯವಾಗಿದೆ. ನಗರಸಭೆಗೆ ದೂರು ನೀಡಿದರೆ ಸಮಸ್ಯೆ ಪರಿಹಾರವಾಗಲಿದೆ ಎಂಬ ಭರವಸೆ ಜನರಿಗೂ ಇಲ್ಲ.

ಬಾರ್‌ಲೈನ್, ಜಿಲ್ಲಾಧಿಕಾರಿ ಕಚೇರಿ ಸುತ್ತಮುತ್ತಲಿನ ರಸ್ತೆಗಳು, ಕೆಳಗೋಟೆ, ಸಿ.ಕೆ.ಪುರ, ಬ್ಯಾಂಕ್‌ ಕಾಲೊನಿ, ಕೋಟೆ ಮುಂಭಾಗ, ಕಾಮನಬಾವಿ ಬಡಾವಣೆ, ಜೋಗಿಮಟ್ಟಿ ರಸ್ತೆ, ಜಿಲ್ಲಾ ಪಂಚಾಯಿತಿ ಮುಂಭಾಗ, ಗಾರೇಹಟ್ಟಿ, ಜಯಲಕ್ಷ್ಮೀ ಬಡಾವಣೆ, ಕಲಾ ಕಾಲೇಜು ರಸ್ತೆ, ಕೆಎಸ್‌ಆರ್‌ಟಿಸಿ, ಮಾಸ್ತಮ್ಮ ಬಡಾವಣೆ, ಐಯುಡಿಪಿ ಬಡಾವಣೆ, ತುರುವನೂರು ರಸ್ತೆ ಸೇರಿದಂತೆ ಹಲವೆಡೆ ದೀಪಗಳು ಕಣ್ಮುಚ್ಚಿವೆ!

ಬ್ಯಾಂಕ್‌ ಕಾಲೊನಿಯಿಂದ ಆರ್‌ಟಿಒ ರಸ್ತೆ ಮೂಲಕ ನಗರ ಪ್ರವೇಶಿಸಿದರೆ ಕತ್ತಲು ಸ್ವಾಗತಿಸುತ್ತಿದೆ. ಚಳ್ಳಕೆರೆ ಗೇಟ್‌, ತುರುವನೂರು ಗೇಟ್‌, ಹೊಸಪೇಟೆ ರಸ್ತೆ, ಮೆದೇಹಳ್ಳಿ ಸಮೀಪದ ಸರ್ವಿಸ್‌ ರಸ್ತೆಯಲ್ಲಿ ಅತಿ ಹೆಚ್ಚು ವಾಹನಗಳು ಸಂಚರಿಸುತ್ತವೆ. ಅಕ್ಕಪಕ್ಕದಲ್ಲಿ ಬಡಾವಣೆಗಳು ಇರುವುದರಿಂದ ಸಾರ್ವಜನಿಕರೂ ಓಡಾಡುತ್ತಾರೆ. ಸಂಜೆಯ ಬಳಿಕ ಕತ್ತಲು ಆವರಿಸುವುದರಿಂದ ಪಾದಚಾರಿಗಳಿಗೆ ತೊಂದರೆಯಾಗುತ್ತಿದೆ.

ಗಾಂಧಿ ವೃತ್ತ, ಬಿ.ಡಿ.ರಸ್ತೆ, ಡಿಸಿಸಿ ಬ್ಯಾಂಕ್‌ ರಸ್ತೆ, ತುರುವನೂರು ರಸ್ತೆ, ಜೋಗಿಮಟ್ಟಿ ರಸ್ತೆಯಲ್ಲಿ ಅಳವಡಿಸಿರುವ ಆಧುನಿಕ ಬೀದಿ ದೀಪಗಳು ಉದ್ಘಾಟನೆಗೆ ಮಾತ್ರ ಸಿಮೀತವಾಗಿವೆ. ಬೀದಿ ದೀಪದ ವಿಚಾರದಲ್ಲಿ ನಗರಸಭೆ, ಲೋಕೋಪಯೋಗಿ ಇಲಾಖೆ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಡುವೆ ತಿಕ್ಕಾಟ ಶುರುವಾಗಿದ್ದು, ಈಗ ತಲೆದೋರಿರುವ ಸಮಸ್ಯೆಯಿಂದ ಜನರು ಹೈರಾಣಾಗುತ್ತಿದ್ದಾರೆ.

ಬೀದಿ ದೀಪಗಳ ವಿವರ

ದೀಪದ ಮಾದರಿ;ಸಂಖ್ಯೆ

40 ವಾಟ್‌ ಟ್ಯೂಬ್‌;4,000

250 ವಾಟ್‌ ಸೋಡಿಯಂ;4,400

8 ವಾಟ್‌ ಸಿಎಫ್‌ಎಲ್‌;950

60 ವಾಟ್‌ ಎಲ್‌ಇಡಿ;576

150 ವಾಟ್‌ ಇಂಡಕ್ಷನ್‌;145

400 ವಾಟ್‌ ಎಂಎಚ್‌;190

18 ವಾಟ್‌ ಎಲ್‌ಇಡಿ;160

ಒಟ್ಟು;10,421

(ಮಾಹಿತಿ– ನಗರಸಭೆ)

ನಿಯಂತ್ರಣಕ್ಕೆ ‘ಟೈಮರ್‌’ ಅಳವಡಿಕೆ

-ಕೊಂಡ್ಲಹಳ್ಳಿ ಜಯಪ್ರಕಾಶ

ಮೊಳಕಾಲ್ಮುರು: ತಾಲ್ಲೂಕಿನ ಹಳ್ಳಿಗಳಲ್ಲಿ ಹಗಲು ವೇಳೆ ಬೀದಿ ದೀಪಗಳು ಉರಿಯುತ್ತಿವೆ ಎಂಬ ಆರೋಪ ಹಲವು ವರ್ಷಗಳಿಂದ ಕೇಳಿ ಬರುತ್ತಿದ್ದರೂ ಕಠಿಣ ಕ್ರಮ ಮಾತ್ರ ಜರುಗಿಸಿಲ್ಲ ಎಂಬ ಆರೋಪವಿದೆ. ಈ ಬಗ್ಗೆ ರೈತ ಸಂಘ, ಸಿಪಿಐ ಸೇರಿದಂತೆ ಹಲವು ಸಂಘಟನೆಗಳು ಸಾಕಷ್ಟು ಪ್ರತಿಭಟನೆ ಮಾಡಿ ಮನವಿ ಸಲ್ಲಿಸಿದ್ದರೂ ಸಂಬಂಧಪಟ್ಟವರು ಕ್ರಮ ಕೈಗೊಂಡಿಲ್ಲ. ಒಂದೆರಡು ದಿನ ಈ ಬಗ್ಗೆ ನಿಗಾ ವಹಿಸಿ ಮತ್ತೆ ನಿರ್ಲಕ್ಷ್ಯ ಮಾಡುವುದು ಸಾಮಾನ್ಯವಾಗಿದೆ.

ಶಾಸಕ ಎನ್‌.ವೈ.ಗೋಪಾಲಕೃಷ್ಣ ಅಧ್ಯಕ್ಷತೆಯಲ್ಲಿ ಈಚೆಗೆ ನಡೆದಿದ್ದ ಕೆಡಿಪಿ ಸಭೆಯಲ್ಲಿ ಈ ಬಗ್ಗೆ ವ್ಯಾಪಕ ಚರ್ಚೆಯಾಗಿತ್ತು. ‘ಚಿತ್ರದುರ್ಗ ತಾಲ್ಲೂಕಿನಲ್ಲಿ ಈ ಹಿಂದೆ ಈ ಸಮಸ್ಯೆ ಹೆಚ್ಚಾಗಿತ್ತು. ಅಲ್ಲಿ ಟೈಮರ್‌ ಅಳವಡಿಕೆ ನಂತರ ಸಮಸ್ಯೆ ಕಡಿಮೆಯಾಗಿದೆ. ಆದ್ದರಿಂದ ಇಲ್ಲಿನ ಎಲ್ಲ ಹಳ್ಳಿಗಳಲ್ಲಿ ಟೈಮರ್‌ ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಂ.ಹನುಮಂತಪ್ಪ ತಿಳಿಸಿದ್ದರು.

ಪ್ರಸ್ತುತ ಎಲ್ಲ 16 ಗ್ರಾಮ ಪಂಚಾಯಿತಿಗಳಲ್ಲಿಯೂ 15ನೇ ಹಣಕಾಸು ಯೋಜನೆಯ ಅನುದಾನ ಲಭ್ಯವಿದೆ. ಇದನ್ನು ಮಾರ್ಚ್‌ ಅಂತ್ಯದ ಒಳಗಾಗಿ ಖರ್ಚು ಮಾಡಬೇಕಿದೆ. ಆದ್ದರಿಂದ ಕ್ರಿಯಾಯೋಜನೆ ಸಿದ್ಧಪಡಿಸುವ ಕಾರ್ಯ ನಡೆಯುತ್ತಿದ್ದು, ಕಡ್ಡಾಯವಾಗಿ ಎಲ್ಲಾ ಪಂಚಾಯಿತಿಯವರು ಟೈಮರ್‌ ಖರೀದಿಸಿ ಅಳವಡಿಸಬೇಕು. ಟೈಮರ್‌ ಸೇರ್ಪಡೆ ಮಾಡದಿದ್ದಲ್ಲಿ ಕ್ರಿಯಾಯೋಜನೆಗೆ ಅನುಮತಿಯನ್ನೇ ನೀಡುವುದಿಲ್ಲ ಎಂದು ಎಚ್ಚರಿಕೆ ನೀಡಲಾಗಿದೆ.

ಟೈಮರ್‌ ಅಳವಡಿಕೆ ಪ್ರಕ್ರಿಯೆ ಇನ್ನು 2-3 ತಿಂಗಳಿನಲ್ಲಿ ಪೂರ್ಣವಾಗುವ ನಿರೀಕ್ಷೆಯಿದ್ದು ನಂತರವಾದರೂ ತಾಲ್ಲೂಕಿನ ಹಳ್ಳಿಗಳಲ್ಲಿ ಹಗಲು ವೇಳೆ ಬೀದಿ ದೀಪಗಳು ಉರಿಯುವುದನ್ನು ನಿಯಂತ್ರಿಸುವ ನಿರೀಕ್ಷೆ ಇದೆ ಎನ್ನುತ್ತಾರೆ ರೈತ ಸಂಘದ ಮುಖಂಡರಾದ ಬೇಡರೆಡ್ಡಿಹಳ್ಳಿ ಬಸವರೆಡ್ಡಿ ಹಾಗೂ ಮರ್ಲಹಳ್ಳಿ ರವಿಕುಮಾರ್.‌

ಅಧಿಕಾರಿಗಳು, ಇಲಾಖೆಗಳ ನಿರ್ಲಕ್ಷ್ಯ

-ಜೆ.ತಿಮ್ಮಪ್ಪ

ಚಿಕ್ಕಜಾಜೂರು: ಇಲಾಖೆಗಳ ನಿರ್ಲಕ್ಷ್ಯದಿಂದ ಇಂದಿಗೂ ಜನರು ಕತ್ತಲೆಯಲ್ಲೇ ಓಡಾಡುವ ಸ್ಥಿತಿ ಎದುರಾಗಿದೆ.

ಚಿಕ್ಕಜಾಜೂರು ಸೇರಿದಂತೆ ಬಿ.ದುರ್ಗ ಹೋಬಳಿಯ ಅನೇಕ ಗ್ರಾಮಗಳಲ್ಲಿ ಬೀದಿ ದೀಪಗಳು ಇದ್ದೂ ಇಲ್ಲದಂತಾಗಿವೆ. ಕೆಲವು ಗ್ರಾಮಗಳಲ್ಲಿ ಒಂದು ಕಡೆ ಬೆಳಕಿದ್ದರೆ, ಮತ್ತೊಂದೆಡೆ ದೀಪಗಳೇ ಇಲ್ಲದ ಪರಿಸ್ಥಿತಿ ಇದೆ. ಇನ್ನೂ ಕೆಲವೆಡೆ ಹಗಲಿನಲ್ಲೂ ದೀಪಗಳು ಬೆಳಗುವುದು ಸಾಮಾನ್ಯವಾಗಿದೆ. ಗ್ರಾಮ ಪಂಚಾಯಿತಿ ಮತ್ತು ಬೆಸ್ಕಾಂ ಸಿಬ್ಬಂದಿಯ ನಿರ್ಲಕ್ಷ್ಯವೇ ಈ ಎಲ್ಲದಕ್ಕೂ ಕಾರಣ ಎನ್ನುತ್ತಾರೆ ಸಾರ್ವಜನಿಕರು.

ಚಿಕ್ಕಜಾಜೂರಿನ ರೈಲ್ವೆ ಮೇಲ್ಸೇತುವೆ ನಿರ್ಮಾಣವಾಗಿ 9 ವರ್ಷಗಳು ಕಳೆದಿವೆ. ಸೇತುವೆ ಮೇಲ್ಭಾಗದಲ್ಲಿ ದೀಪ ಅಳವಡಿಸಿದ್ದರೂ, ಅವುಗಳು ಬೆಳಗಿರುವುದು ಕಡಿಮೆಯೇ. ಸಂಜೆ ಹಾಗೂ ಮುಂಜಾನೆ ಸಮಯದಲ್ಲಿ ಮಹಿಳೆಯರು, ವಯಸ್ಕರು ಈ ರಸ್ತೆಯಲ್ಲಿ ವಾಯುವಿಹಾರ ಮಾಡುತ್ತಾರೆ. ಈ ವೇಳೆ ಕಳ್ಳರು ಮಹಿಳೆಯರ ಮಾಂಗಲ್ಯ ಸರ ಕಿತ್ತುಕೊಂಡು ಹೋಗಿರುವ ಪ್ರಕರಣಗಳು ನಡೆದಿವೆ.

ಮುತ್ತುಗದೂರಿನ ಪರಿಶಿಷ್ಟರ ಕಾಲೊನಿಯ ಮೊದಲನೇ ಬೀದಿ ಯಲ್ಲಿ ವಿದ್ಯುತ್ ಕಂಬಗಳೇ ಇಲ್ಲ. ಜನರು ಕತ್ತಲೆಯಲ್ಲೇ ಓಡಾಡುವುದು ಅನಿವಾರ್ಯವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.