ADVERTISEMENT

ಚಿತ್ರದುರ್ಗ: ಕೋಟೆನಗರಿಯಲ್ಲಿಲ್ಲ ಸಿಸಿಟಿವಿ ಕ್ಯಾಮೆರಾ ಕಣ್ಗಾವಲು!

ಭಯದಲ್ಲೇ ಓಡಾಡುವ ಹೆಣ್ಣು ಮಕ್ಕಳು, ಕಾನೂನು– ಸುವ್ಯವಸ್ಥೆ ಕಾಪಾಡಲು ಪರದಾಡುತ್ತಿರುವ ಪೊಲೀಸರು

ಎಂ.ಎನ್.ಯೋಗೇಶ್‌
Published 21 ಏಪ್ರಿಲ್ 2025, 7:25 IST
Last Updated 21 ಏಪ್ರಿಲ್ 2025, 7:25 IST
ಕೋಟೆನಗರಿಯ ಹೃದಯದಂತಿರುವ ಗಾಂಧಿ ವೃತ್ತದಲ್ಲಿ ಸಿ.ಸಿ.ಟಿವಿ ಕಣ್ಗಾವಲು ಇಲ್ಲದಿರುವುದು
ಪ್ರಜಾವಾಣಿ ಚಿತ್ರ; ಚಂದ್ರಪ್ಪ ವಿ
ಕೋಟೆನಗರಿಯ ಹೃದಯದಂತಿರುವ ಗಾಂಧಿ ವೃತ್ತದಲ್ಲಿ ಸಿ.ಸಿ.ಟಿವಿ ಕಣ್ಗಾವಲು ಇಲ್ಲದಿರುವುದು ಪ್ರಜಾವಾಣಿ ಚಿತ್ರ; ಚಂದ್ರಪ್ಪ ವಿ   

ಚಿತ್ರದುರ್ಗ: ‘ಸಂಜೆ 5.15ರ ಹೊತ್ತು, ಮಠದ ಕುರುಬರಹಟ್ಟಿ ಸರ್ಕಲ್‌ ಬಳಿ ತಿರುವು ತೆಗೆದುಕೊಳ್ಳಲು ರಸ್ತೆ ಬದಿಯಲ್ಲಿ ಸ್ಕೂಟರ್‌ ನಿಲ್ಲಿಸಿದ್ದೆ. ಅಲ್ಲಿಯೇ ನಿಂತಿದ್ದ ವ್ಯಕ್ತಿಯೊಬ್ಬ ನನ್ನ ಬಳಿ ಬಂದು ಕೆಟ್ಟದಾಗಿ ವರ್ತಿಸಿದ. ಮಧ್ಯ ಬೆರಳು ತೋರಿಸುತ್ತಾ ಚುಂಬಿಸುವ ಸಂಜ್ಞೆ ಮಾಡಿದ. ನಾನು ಭಯದಿಂದ ನಡುಗುತ್ತಾ ಬೆಂಡಾಗಿ ಹೋದೆ. ಜೋರಾಗಿ ಸ್ಕೂಟರ್‌ ಓಡಿಸಿಕೊಂಡು ಬಂದು ಮನೆ ಸೇರಿಕೊಂಡೆ. ದುರ್ಗದಾದ್ಯಂತ ಇಂತಹ ಕಿಡಿಗೇಡಿಗಳ ಹಾವಳಿ ಹೆಚ್ಚಾಗಿದ್ದು ಒಂಟಿ ಹೆಣ್ಣುಮಕ್ಕಳು ಓಡಾಡಲು ಭಯಪಡುತ್ತಿದ್ದಾರೆ...’

ಖಾಸಗಿ ಶಾಲೆಯ ಶಿಕ್ಷಕಿಯೊಬ್ಬರ ನೋವಿನ ನುಡಿಗಳಿವು. 

ಇದು ಕೇವಲ ಶಿಕ್ಷಕಿಯೊಬ್ಬರ ಕತೆಯಲ್ಲ. ನಗರದಾದ್ಯಂತ ಹಗಲು ವೇಳೆಯಲ್ಲೂ ಒಬ್ಬಂಟಿ ಮಹಿಳೆಯರು ಓಡಾಡಲು ಭಯಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಎಲ್ಲೆಡೆ ಕಿಡಿಗೇಡಿಗಳ ದುರ್ನಡತೆ, ಸರಗಳ್ಳತನ, ಮನೆಗಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದೆ. ಕಾನೂನು– ಸುವ್ಯವಸ್ಥೆ ಕಾಪಾಡುವುದು ಪೊಲೀಸರಿಗೆ ಸವಾಲಾಗಿ ಪರಿಣಮಿಸಿದೆ. ನಗರದ ಸೂಕ್ಷ್ಮ ವೃತ್ತ, ರಸ್ತೆ, ಪ್ರದೇಶಗಳಲ್ಲಿ ಸಿ.ಸಿ.ಟಿವಿ ಕ್ಯಾಮೆರಾ ಕಣ್ಗಾವಲು ಇಲ್ಲವಾಗಿದೆ. ಇದರಿಂದ ಕಿಡಿಗೇಡಿಗಳ ಕೃತ್ಯ ಪತ್ತೆ ಹಚ್ಚಲು ಸಾಧ್ಯವಾಗುತ್ತಿಲ್ಲ.

ADVERTISEMENT

ನಗರದಾದ್ಯಂತ ಕಾನೂನು ಸುವ್ಯವಸ್ಥೆಗಾಗಿ ಒಂದೇ ಒಂದು ಸಿ.ಸಿ.ಟಿವಿ ಕ್ಯಾಮೆರಾ ಇಲ್ಲ. ಹಾದಿ, ಬೀದಿಯಲ್ಲಿ ಕಸ ಹಾಕುವುದನ್ನು ತಡೆಯುವುದಕ್ಕಾಗಿ ನಗರಸಭೆ 32 ಸಿ.ಸಿ.ಟಿವಿ ಕ್ಯಾಮೆರಾ ಅಳವಡಿಸಿತ್ತು. ಅವುಗಳಲ್ಲಿ 20 ಕ್ಯಾಮೆರಾಗಳು ಕೆಟ್ಟು ಹೋಗಿ ವರ್ಷಗಳೇ ಕಳೆದಿವೆ. ಖಾಸಗಿ ಕಂಪನಿಯೊಂದು ಈ 32 ಕ್ಯಾಮೆರಾ ಅಳವಡಿಸಿ ನಿರ್ವಹಣೆ ಮಾಡುತ್ತಿತ್ತು. ನಿರ್ವಹಣಾ ಅವಧಿ ಮುಗಿದೇ 3 ವರ್ಷವಾಗಿದ್ದು, ನಗರಸಭೆಯೇ ನಿರ್ವಹಣೆಯ ಹೊಣೆ ಹೊತ್ತಿದೆ. ಆದರೆ ಕೆಟ್ಟುಹೋದ ಕ್ಯಾಮೆರಾಗಳನ್ನು ದುರಸ್ತಿ ಮಾಡಿಸಲು ಅಧಿಕಾರಿಗಳು ಮುಂದಾಗಿಲ್ಲ. ಹೀಗಾಗಿ ನಗರದಾದ್ಯಂತ ಸಿ.ಸಿ.ಟಿವಿ ಕ್ಯಾಮೆರಾ ಕಣ್ಗಾವಲು ಇಲ್ಲದಾಗಿದೆ.

ನಗರದ ವಿವಿಧ ಬಡಾವಣೆಯ ಮನೆ, ಅಂಗಡಿ, ಶಾಲೆಗಳಲ್ಲಿ ಅಳವಡಿಸಿರುವ ಸಿ.ಸಿ.ಟಿವಿ ಕ್ಯಾಮೆರಾಗಳೇ ಪೊಲೀಸರಿಗೆ ಆಧಾರವಾಗಿವೆ. ಸಾರ್ವಜನಿಕರ ಸುರಕ್ಷತೆ ಕಾಯ್ದೆಯಡಿ ಕ್ಯಾಮೆರಾ ಅಳವಡಿಸುವುದು ಕಡ್ಡಾಯವಾಗಿದ್ದು, ನಗರದಾದ್ಯಂತ 430 ಕ್ಯಾಮೆರಾಗಳಿವೆ. ಈ ವೈಯಕ್ತಿಕ ಸಿ.ಸಿ.ಟಿವಿ ಕ್ಯಾಮೆರಾ ಕಣ್ಗಾವಲಿನಲ್ಲೇ ಪೊಲೀಸರು ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಅನಿವಾರ್ಯತೆ ನಿರ್ಮಾಣವಾಗಿದೆ. ನಗರಸಭೆಯಾಗಲೀ, ಪೊಲೀಸ್‌ ಇಲಾಖೆಯಾಗಲೀ ಪ್ರಮುಖ ಪ್ರದೇಶದಲ್ಲಿ ಕ್ಯಾಮೆರಾ ಅಳವಡಿಸದ ಕಾರಣ ಕಿಡಿಗೇಡಿಗಳ ಕೃತ್ಯ ತಡೆಯಲು ಸಾಧ್ಯವಾಗದ ಪರಿಸ್ಥಿತಿ ಇದೆ.

ನಗರದ ಪ್ರಮುಖ ಜನನಿಬಿಡ ಪ್ರದೇಶವಾದ ಗಾಂಧಿವೃತ್ತದಲ್ಲಿ ಸಿ.ಸಿ.ಟಿವಿ ಕ್ಯಾಮೆರಾ ಇಲ್ಲದಿರುವುದು ಸಂಚಾರ ದಟ್ಟಣೆ ನಿರ್ವಹಣೆಗೂ ಸವಾಲಾಗಿದೆ. ಐದು ರಸ್ತೆಗಳು ಕೂಡುವ ಈ ಸರ್ಕಲ್‌ನ ಮೂಲೆಯೊಂದರಲ್ಲಿ ಟ್ರಾಫಿಕ್‌ ಪೊಲೀಸರು ನಿಲ್ಲುತ್ತಾರೆ. ಹೀಗಾಗಿ ಸಿಗ್ನಲ್ ಉಲ್ಲಂಘಿಸುವವರು ಹೆಚ್ಚಾಗಿದ್ದಾರೆ. ನಿಯಮ ಉಲ್ಲಂಘಿಸುವವರನ್ನು ಪತ್ತೆ ಮಾಡುವುದಕ್ಕಾದರೂ ಕ್ಯಾಮೆರಾ ಇಲ್ಲವಾಗಿದೆ. ಕನಕ ವೃತ್ತ, ಮಾರಮ್ಮ ಸರ್ಕಲ್‌, ಸಂಗೊಳ್ಳಿ ರಾಯಣ್ಣ ವೃತ್ತ, ಎಸ್‌ಜೆಎಂ ವೃತ್ತ, ಮದಕರಿ ಸರ್ಕಲ್‌, ಅಂಬೇಡ್ಕರ್‌ ಸರ್ಕಲ್‌ನಲ್ಲಿ ಕ್ಯಾಮೆರಾ ಇಲ್ಲದ ಕಾರಣ ಕಿಡಿಗೇಡಿಗಳ ಓಡಾಟಕ್ಕೆ ಕಡಿವಾಣ ಹಾಕಲು ಸಾಧ್ಯವಾಗಿಲ್ಲ. 

ನಗರದ ಸಾರಿಗೆ ಸಂಸ್ಥೆ ಬಸ್‌ ನಿಲ್ದಾಣದ ಬಳಿ ಹಿಂದೆ ಸಿ.ಸಿ.ಟಿವಿ ಕ್ಯಾಮೆರಾ ಇತ್ತು. ಆದರೆ ಅದು ಕೆಟ್ಟು ಹೋಗಿ ಹಲವು ವರ್ಷಗಳು ಉರುಳಿವೆ. ಸುತ್ತಲೂ ಬಾರ್‌ ಮತ್ತು ರೆಸ್ಟೋರೆಂಟ್‌ಗಳೇ ಹೆಚ್ಚಾಗಿದ್ದು, ಕುಡುಕರ ಹಾವಳಿ ತೀವ್ರವಾಗಿದೆ. ಸರಗಳ್ಳತನ, ಪರ್ಸ್‌ ಕಳ್ಳರಿಗೆ ಕಡಿವಾಣ ಹಾಕಲು ಸಹಾಯಕ್ಕೆ ಬರುವ ಕ್ಯಾಮೆರಾಗಳು ಇಲ್ಲದ ಕಾರಣ ಜನರು ಪರದಾಡುವ ಪರಿಸ್ಥಿತಿ ಇದೆ. ಖಾಸಗಿ ಬಸ್‌ ನಿಲ್ದಾಣದ ಬಳಿ ಕಿಡಿಗೇಡಿಗಳ ಹಾವಳಿ ವಿಪರೀತವಾಗಿದ್ದು, ಅವರ ಮೇಲೆ ಕ್ಯಾಮೆರಾ ಕಣ್ಗಾವಲು ಇಲ್ಲವಾಗಿದೆ.

ಕೆಳ ಸೇತುವೆ ಬಳಿ ಆತಂಕ: ನಗರದೊಳಗಿನ ಹಳೇ ರಾಷ್ಟ್ರೀಯ ಹೆದ್ದಾರಿಯ ಕೆಳಸೇತುವೆಗಳ ಬಳಿ ಕಿಡಿಗೇಡಿಗಳ ಹಾವಳಿ ಹೆಚ್ಚಿದೆ. ಇಲ್ಲಿ ದೀಪದ ವ್ಯವಸ್ಥೆಯೂ ಇಲ್ಲದ ಕಾರಣ ಸರಗಳ್ಳತನದ ಹಾವಳಿ ವಿಪರೀತವಾಗಿದೆ. ಜೆ.ಸಿ.ಆರ್‌ ರಸ್ತೆ, ಮದೇಹಳ್ಳಿ ಬಳಿಯ ಕೆಳಸೇತುವೆ, ಸರ್ವೀಸ್‌ ರಸ್ತೆಯಲ್ಲಿ ಸಂಜೆಯ ವೇಳೆ ಹೆಚ್ಚು ಮಹಿಳೆಯರು ಓಡಾಡುತ್ತಾರೆ. ಸಮೀಪದಲ್ಲೇ ಗಾರ್ಮೆಂಟ್‌ ಕಾರ್ಖಾನೆಗಳಿದ್ದು, ಮಹಿಳೆಯರು ಕೆಲಸಕ್ಕೆ ಹೋಗುತ್ತಾರೆ. ಜೊತೆಗೆ ಎಪಿಎಂಸಿ ಮಾರುಕಟ್ಟೆಗೆ ಕೆಲಸಕ್ಕೆ ಹೋಗುವ ಮಹಿಳೆಯರೂ ಓಡಾಡುತ್ತಾರೆ. ಈ ಭಾಗದಲ್ಲಿ ಬೆಳಕು, ಸಿ.ಸಿ.ಟಿವಿ ಕ್ಯಾಮೆರಾಗಳು ಇಲ್ಲದ ಕಾರಣ ಕಿಡಿಗೇಡಿಗಳ ಹಾವಳಿ ತಡೆಯಲು ಸಾಧ್ಯವಿಲ್ಲದಂತಹ ಪರಿಸ್ಥಿತಿ ಇದೆ.

ಜೊತೆಗೆ ಸರಗಳ್ಳರ ಹಾವಳಿ ಹೆಚ್ಚಾಗಿದ್ದು, ಮಧ್ಯಮ ವರ್ಗದ ಮಹಿಳೆಯರು ಕಷ್ಟಪಟ್ಟು ಕೂಡಿಟ್ಟಿದ್ದ ಚಿನ್ನ ಕಳ್ಳರ ಪಾಲಾಗುತ್ತಿದೆ. ಸರಗಳ್ಳರ ಕಾಟದಿಂದಾಗಿ ಬಹುತೇಕ ಮಹಿಳೆಯರು ಮನೆಯಿಂದ ಹೊರಗೆ ಬರುವಾಗ ಮಾಂಗಲ್ಯ ಸರವನ್ನೇ ಬಿಚ್ಚಿಟ್ಟು ಬರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

‘ನಗರದ ಪ್ರಮುಖ ಸ್ಥಳಗಳಲ್ಲಿ ಸಿ.ಸಿ.ಟಿವಿ ಕ್ಯಾಮೆರಾ ಅಳವಡಿಸಬೇಕು ಎಂದು ಒತ್ತಾಯಿಸಿ ನಗರಸಭೆಗೆ ಪ್ರಸ್ತಾವ ಕಳುಹಿಸಿಯೇ 3 ವರ್ಷವಾಗಿದೆ. ಕ್ಯಾಮೆರಾ ಅಳವಡಿಸಬೇಕಾದ ಸ್ಥಳಗಳ ಪಟ್ಟಿಯನ್ನೂ ನೀಡಲಾಗಿದೆ. ಆದರೆ ನಗರಸಭೆ ಆಡಳಿತ ಮಂಡಳಿ ಕ್ಯಾಮೆರಾ ಅಳವಡಿಸದ ಕಾರಣ ಕಿಡಿಗೇಡಿಗಳ ಕೃತ್ಯಗಳಿಗೆ ಕಡಿವಾಣ ಹಾಕುವುದು ಕಷ್ಟವಾಗುತ್ತಿದೆ’ ಎಂದು ಪೊಲೀಸ್‌ ಸಿಬ್ಬಂದಿಯೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.

ಎಸ್‌ಬಿಐ ವೃತ್ತದ ಬಳಿ ಅಳವಡಿಸಿರುವ ಸಿ.ಸಿ.ಟಿವಿ ಕ್ಯಾಮೆರಾ ಕೆಲಸ ಮಾಡುತ್ತಿಲ್ಲ

ಚಿತ್ರದುರ್ಗ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಪಟ್ಟಣ ಪ್ರದೇಶದ ಪ್ರಮುಖ ಸ್ಥಳಗಳಲ್ಲಿ ಸಿ.ಸಿ.ಟಿವಿ ಕ್ಯಾಮೆರಾ ಅಳವಡಿಸಲು ಜಿಲ್ಲಾ ಖನಿಜ ನಿಧಿ (ಡಿಎಂಎಫ್‌)ಯಿಂದ ಅನುದಾನ ಪಡೆಯಲಾಗುವುದು.

– ರಂಜಿತ್‌ ಕುಮಾರ್‌ ಬಂಡಾರು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

ಚಿತ್ರದುರ್ಗದಲ್ಲಿ ಸಿ.ಸಿ.ಟಿವಿ ಕ್ಯಾಮೆರಾ ಇಲ್ಲದ ಕಾರಣ ಅಂಗಡಿ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿವೆ. ಇರುವ ಕ್ಯಾಮೆರಾಗಳನ್ನು ನಗರಸಭೆ ಪೊಲೀಸ್‌ ಇಲಾಖೆ ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ.

– ಇರ್ಫಾನ್‌ ಉಲ್ಲಾ ಬೇಗ್‌ ಚಿತ್ರದುರ್ಗ

ರಸ್ತೆಗಳಲ್ಲಿ ಅಡ್ಡಾದಿಡ್ಡಿ ವಾಹನ ಓಡಿಸುವವರು ಪರವಾನಗಿ ರಹಿತರು ವ್ಹೀಲಿ ಮಾಡುವವರು ಮಿತಿಮೀರಿದ ವೇಗದಲ್ಲಿ ವಾಹನ ಚಲಾಯಿಸುವವರ ಸಂಖ್ಯೆ ಹೆಚ್ಚಾಗಿದೆ. ರಸ್ತೆಗಳಲ್ಲಿ ಸಿ.ಸಿ.ಟಿವಿ ಕ್ಯಾಮೆರಾ ಇದ್ದರೆ ಅವರನ್ನು ಪತ್ತೆ ಹಚ್ಚಬಹುದು.

– ಸರ್ವಮಂಗಳಾ ರಮೇಶ್‌ ಹಿರಿಯೂರು

ಚಳ್ಳಕೆರೆಯಲ್ಲಿ ನಡೆಯುತ್ತಿರುವ ಸರಣಿ ಕಳ್ಳತನ ಪ್ರಕರಣಗಳಿಂದ ಸಾರ್ವಜನಿಕರು ಭಯ ಭೀತರಾಗಿದ್ದಾರೆ. ಸರ್ಕಾರಿ ಕಚೇರಿ ಮುಖ್ಯರಸ್ತೆ ಹಾಗೂ ಪ್ರಮುಖ ವೃತ್ತಗಳ ಬಳಿ ಸಿ.ಸಿ.ಟಿವಿ ಕ್ಯಾಮೆರಾ ಅಳವಡಿಸಬೇಕು.

– ಆರ್.ಎ.ದಯಾನಂದಮೂರ್ತಿ ಚಳ್ಳಕೆರೆ

ಹಿರಿಯೂರು: 60 ಕಡೆ ಅಳವಡಿಕೆ

– ಸುರ್ವಣಾ ಬಸವರಾಜ್‌

ಹಿರಿಯೂರು: ನಗರದ 60 ಕಡೆ ನಗರಸಭೆ ಸಹಯೋಗದೊಂದಿಗೆ ಸಿ.ಸಿ.ಟಿವಿ ಕ್ಯಾಮೆರಾಗಳನ್ನು ಅಳವಡಿಸಿದ್ದು ಒಂದು ವರ್ಷದಿಂದ ಈಚೆಗೆ 8 ಅಪರಾಧ ಪ್ರಕರಣಗಳನ್ನು ಪತ್ತೆ ಮಾಡಲಾಗಿದೆ ಎನ್ನುತ್ತಾರೆ ನಗರ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ರಾಘವೇಂದ್ರ ಕಾಂಡಕಿ.

4 ಮನೆಗಳ್ಳತನ 3 ಲ್ಯಾಪ್‌ಟಾಪ್ ಕಳವು ಹಾಗೂ ಗೋದಾಮಿನಲ್ಲಿ ನಡೆದಿದ್ದ ಕಡ್ಲೆಕಾಯಿ ಕಳವು ಪ್ರಕರಣಗಳನ್ನು ಸಿ.ಸಿ.ಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದ್ದ ದೃಶ್ಯಗಳ ಸಹಾಯದಿಂದ ಪತ್ತೆ ಮಾಡಲಾಗಿದೆ. ಇನ್ನೂ 30 ಸೂಕ್ಷ್ಮ ಸ್ಥಳಗಳನ್ನು ಗುರುತಿಸಿದ್ದು ಅಲ್ಲೂ ಕ್ಯಾಮೆರಾ ಅಳವಡಿಕೆಗೆ ಪ್ರಸ್ತಾವ ಸಲ್ಲಿಸಿದ್ದೇವೆ. ನಗರ ಠಾಣೆಯಲ್ಲಿ ಒಂದು ಕಡೆ ನಗರಸಭೆಯಲ್ಲಿ ಮತ್ತೊಂದು ಕಡೆ ಕ್ಯಾಮೆರಾ ದೃಶ್ಯಾವಳಿ ವೀಕ್ಷಿಸಬಹುದು’ ಎಂದು ಮಾಹಿತಿ ನೀಡಿದ್ದಾರೆ. ‘ಕೆಲವರು ಕಸವನ್ನು ಬೀದಿಯಲ್ಲಿ ಬಿಸಾಡುತ್ತಾರೆ. ಆ ಮೂಲಕ ನಗರದ ಅಂದ ಹಾಳು ಮಾಡುತ್ತಾರೆ. ಇಂತಹವರನ್ನು ಪತ್ತೆ ಹೆಚ್ಚಿ ದಂಡ ಹಾಕಲು ಸಿ.ಸಿ.ಟಿವಿ ಕ್ಯಾಮೆರಾ ಅಳವಡಿಸಬೇಕು’ ಎಂಬುದು ಸ್ಥಳೀಯರ ಒತ್ತಾಯ.

ನಿರ್ವಹಣೆ ಇಲ್ಲದ ಕ್ಯಾಮೆರಾಗಳು

– ಶಿವಗಂಗಾ ಚಿತ್ತಯ್ಯ

ಚಳ್ಳಕೆರೆ: ನಿರ್ವಹಣೆ ಕೊರತೆಯಿಂದಾಗಿ ಇಲ್ಲಿನ ಪಾವಗಡ ಚಿತ್ರದುರ್ಗ ಬಳ್ಳಾರಿ ಬೆಂಗಳೂರು ಮುಖ್ಯರಸ್ತೆ ಮತ್ತು ಸಾರ್ವಜನಿಕ ಸ್ಥಳದಲ್ಲಿ ಅಳವಡಿಸಿದ್ದ ಸಿ.ಸಿ.ಟಿವಿ ಕ್ಯಾಮೆರಾಗಳು ದುಃಸ್ಥಿತಿಯಲ್ಲಿವೆ. ನಗರದಲ್ಲಿ ಮನೆ ದರೋಡೆ ಬೈಕ್ ಮೊಬೈಲ್ ಮನೆಯ ಮುಂದಿನ ಕುರ್ಚಿ ಟೇಬಲ್ ವಿದ್ಯುತ್‌ ವೈರ್‌ ಸರಗಳ್ಳತನ ಹೀಗೆ ಹಗಲು– ರಾತ್ರಿ ಸರಣಿ ಅಪರಾಧ ಪ್ರಕರಣಗಳು ನಡೆಯುತ್ತಲೇ ಇವೆ. ನಗರದ ಅಂಗಡಿ ಮನೆಯ ಕೆಲ ಮಾಲೀಕರು ಹೊರತುಪಡಿಸಿದರೆ ಸಾರ್ವಜನಿಕ ಸ್ಥಳದಲ್ಲಿ ಎಲ್ಲಿಯೂ ಸಿ.ಸಿ.ಟಿವಿ ಕ್ಯಾಮೆರಾಗಳನ್ನು ಅಳವಡಿಸಿಲ್ಲ.

ಚಿತ್ರದುರ್ಗ ರಸ್ತೆಯ ಜ್ಯೋತಿ ಪ್ರಕಾಶ್‌ ಹೋಟೆಲ್ ತಾಲ್ಲೂಕು ಕಚೇರಿ ನೆಹರೂ ಸರ್ಕಲ್ ಸೇರಿ ನಗರದಲ್ಲಿ 5-6 ಕಡೆ ಅಳವಡಿಸಿದ್ದ ಸಿ.ಸಿ.ಟಿವಿ ಕ್ಯಾಮೆರಾ ನಿರ್ವಹಣೆ ಇಲ್ಲದ ಕಾರಣ ಕೆಲಸ ಮಾಡುತ್ತಿಲ್ಲ. ಇಡೀ ನಗರದ ಪ್ರಮುಖ ಸ್ಥಳದಲ್ಲಿ ₹ 80 ಲಕ್ಷ ವೆಚ್ಚದಲ್ಲಿ ಸಿ.ಸಿ.ಟಿವಿ ಕ್ಯಾಮೆರಾ ಅಳಡಿಸಲು ಮುಂದಾಗಿದ್ದ ಪೊಲೀಸ್ ಇಲಾಖೆ ಈಗ ಮೌನವಹಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.