ಚಿತ್ರದುರ್ಗ: ‘ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿರುವ ಪೌರಕಾರ್ಮಿಕರಿಗೆ ಸರ್ಕಾರಿ ನೌಕರರಿಗೆ ಸಿಗುವ ಎಲ್ಲಾ ಸೌಭ್ಯಗಳು ದೊರೆಯಬೇಕು. ನಾನು ಸದಾ ಸ್ವಚ್ಛತಾ ಸಿಬ್ಬಂದಿಯ ಪರವಾಗಿ ನಿಲ್ಲುತ್ತೇನೆ. ಪೌರ ಕಾರ್ಮಿಕರು ಅನುಭವಿಸುತ್ತಿರುವ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುವಂತೆ ನಮ್ಮ ಪಕ್ಷದ ಶಾಸಕರಿಗೆ ತಿಳಿಸುತ್ತೇನೆ’ ಎಂದು ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಹೇಳಿದರು.
ನಗರಸಭೆ ಕಚೇರಿ ಮುಂದೆ ಪೌರಕಾರ್ಮಿಕರು ನಡೆಸುತ್ತಿರುವ ಅನಿರ್ಧಿಷ್ಟ ಮುಷ್ಕರ ಸ್ಥಳಕ್ಕೆ ಶುಕ್ರವಾರ ಭೇಟಿ ನೀಡಿ, ಅವರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ ಅವರು ಮಾತನಾಡಿದರು.
‘ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕೆಲಸ ಮಾಡುವ ಪೌರ ಕಾರ್ಮಿಕರ ಬೇಡಿಕೆಗಳು ಈಡೇರಬೇಕು. ಅವರು ಮಾಡುವ ಸೇವೆಗೆ ತಕ್ಕ ಪ್ರತಿಫಲ ದೊರೆಯಬೇಕು. ಅವರ ಸಮಸ್ಯೆಗಳ ಬಗ್ಗೆ ಸದನದಲ್ಲಿ ಮಾತನಾಡಿ ಮುಖ್ಯಮಂತ್ರಿಗಳ ಮೂಲಕ ಸಮಸ್ಯೆ ಬಗೆಹರಿಸುವಂತೆ ತಿಳಿಸುತ್ತೇನೆ. ಪೌರ ಕಾರ್ಮಿಕರ ಬೇಡಿಕೆಗಳನ್ನು ತಕ್ಷಣವೇ ಈಡೇರಿಸಬೇಕು ಎಂದು ನಾನು ಕೂಡ ಒತ್ತಾಯ ಮಾಡುತ್ತೇನೆ’ ಎಂದರು.
‘ಕೋವಿಡ್ ಸಮಯದಲ್ಲಿ ಪೌರ ಕಾರ್ಮಿಕರು ಮಾಡಿದ ಸೇವೆಯನ್ನು ಯಾರೂ ಮರೆಯಲು ಸಾಧ್ಯವಿಲ್ಲ. ಕೋವಿಡ್ ಸೋಂಕಿನ ಜೊತೆಯಲ್ಲೇ ಅವರು ಕೆಲಸ ಮಾಡಿದ್ದಾರೆ. ಆ ಮೂಲಕ ಅವರು ನಮ್ಮೆಲ್ಲರ ಆರೋಗ್ಯ ಕಾಪಾಡಿದ್ದಾರೆ. ಇಂತಹ ಸ್ವಚ್ಛತಾ ಸಿಬ್ಬಂದಿಗೆ ಮೂಲ ಸೌಕರ್ಯ ಒದಗಿಸುವುದು ಸರ್ಕಾರದ ಆದ್ಯ ಕರ್ತವ್ಯವಾಗಿದೆ. ಬೇರೆ ನೌಕರಿಗಿಂತ ಪೌರ ಕಾರ್ಮಿಕರ ಕೆಲಸ ಕಷ್ಟದ ಕೆಲಸವಾಗಿದೆ. ಇದನ್ನು ಅರಿತು ಅವರಿಗೆ ಎಲ್ಲಾ ರೀತಿಯ ಸೌಕರ್ಯಗಳನ್ನು ನೀಡಬೇಕಿದೆ’ ಎಂದರು.
‘ಪೌರ ಕಾರ್ಮಿಕರನ್ನು ಸರ್ಕಾರಿ ನೌಕರರೆಂದು ಘೋಷಿಸಬೇಕು ಎಂಬ ಬೇಡಿಕೆ ಸರಿಯಾಗಿದೆ. ಸುಮಾರು 30 ವರ್ಷಗಳಿಂದ ಹೊರಗುತ್ತಿಗೆ ಮೇಲೆಯೇ ಕೆಲಸ ಮಾಡುತ್ತಿದ್ದಾರೆ. ವಾಹನ ಚಾಲಕರು, ನೀರು ಸರಬರಾಜು ಸಿಬ್ಬಂದಿ, ಲೋಡರ್ಸ್, ಗುತ್ತಿಗೆ ಲೆಕ್ಕಿಗರು, ಕ್ಲೀನರ್, ಸೂಪರ್ ವೈಸರ್ಸ್, ಕಂಪ್ಯೂಟರ್ ಆಪರೇಟರ್‌ಗಳನ್ನು ಕಾಯಂ ಮಾಡಬೇಕು ಎಂಬ ಬೇಡಿಕೆ ಈಡೇರಿಸಬೇಕು. ಕೆಜಿಐಡಿ, ಜಿಪಿಎಸ್, ಜ್ಯೋತಿ ಸಂಜೀವಿನಿ ಸೇರಿದಂತೆ ಸರ್ಕಾರಿ ನೌಕರರಿಗೆ ಸಿಗುವ ಸೌಲಭ್ಯವನ್ನು ಪೌರ ನೌಕರರಿಗೂ ಜಾರಿ ಮಾಡಬೇಕು’ ಎಂದು ಒತ್ತಾಯಿಸಿದರು.
‘ನಾನು ಅಧಿಕಾರದಲ್ಲಿ ಇದ್ದಾಗ ಪೌರ ಕಾರ್ಮಿಕರಿಗೆ, ಅವರ ಮಕ್ಕಳ ವಿದ್ಯಾಭ್ಯಾಸಕ್ಕೆ, ಅವರಿಗೆ ವಿವಿಧ ರೀತಿಯ ಸೌಲಭ್ಯ ನೀಡುವಲ್ಲಿ ಸಾಕಷ್ಟು ಕೆಲಸ ಮಾಡಿದ್ದೇನೆ. ನಾನು ಈಗ ಅಧಿಕಾರದಲ್ಲಿ ಇಲ್ಲದಿದ್ದರೂ ನಮ್ಮ ಮುಖಂಡರಿಗೆ, ಶಾಸಕರ ಮೂಲಕ ಬೇಡಿಕೆ ಈಡೇರಿಸುವಂತೆ ತಿಳಿಸುತ್ತೇನೆ. ಪೌರ ಕಾರ್ಮಿಕರ ಪರವಾಗಿ ನಾನು ಯಾವಾಗಲೂ ನಿಲ್ಲುತ್ತೇನೆ’ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ನಗರಸಭಾ ಸದಸ್ಯರಾದ ಶ್ರೀನಿವಾಸ್, ಹರೀಶ್, ದೀಪು, ಮಾಜಿ ಸದಸ್ಯರಾದ ಕೃಷ್ಣಮೂರ್ತಿ, ರವಿಶಂಕರ್, ಪೌರಕಾರ್ಮಿಕರ ಸಂಘದ ಸಿ.ರೇಣುಕಾ, ಎಸ್.ಪಿ.ಲವ, ಪುಟ್ಟಸ್ವಾಮಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.