ADVERTISEMENT

ಕುಸಿದು ಬಿದ್ದ ಮನೆಗಳು: ಶೇಂಗಾ ಬೆಳೆ ಜಲಾವೃತ

​ಪ್ರಜಾವಾಣಿ ವಾರ್ತೆ
Published 19 ಜುಲೈ 2021, 6:13 IST
Last Updated 19 ಜುಲೈ 2021, 6:13 IST
ಚಳ್ಳಕೆರೆ ತಾಲ್ಲೂಕಿನ ಕಸವಿಗೊಂಡನಹಳ್ಳಿ ಗ್ರಾಮದಲ್ಲಿ ಬೆಳೆದ ಈರುಳ್ಳಿ ಬೆಳೆಗೆ ನುಗ್ಗಿದ ಮಳೆ ನೀರು
ಚಳ್ಳಕೆರೆ ತಾಲ್ಲೂಕಿನ ಕಸವಿಗೊಂಡನಹಳ್ಳಿ ಗ್ರಾಮದಲ್ಲಿ ಬೆಳೆದ ಈರುಳ್ಳಿ ಬೆಳೆಗೆ ನುಗ್ಗಿದ ಮಳೆ ನೀರು   

ಚಳ್ಳಕೆರೆ: ಶನಿವಾರ ರಾತ್ರಿ ಇಡೀ ನಿರಂತವಾಗಿ ಸುರಿದ ಮಳೆಗೆ ತಾಲ್ಲೂಕಿನ ತಪ್ಪಗೊಂಡನಹಳ್ಳಿ ಗ್ರಾಮದ ಕೆರೆ ಭರ್ತಿಯಾಗಿದ್ದು, ರೈತರ ಹೊಲದ ಚೆಕ್‍ಡ್ಯಾಂ, ಕಟ್ಟೆಗಳು ಹಾಗೂ ಹಳ್ಳಗಳು ತುಂಬಿ ಹರಿಯುತ್ತಿವೆ.

ತಳಕು ಹೋಬಳಿ ವ್ಯಾಪ್ತಿಯ ಕಸವಿಗೊಂಡನಹಳ್ಳಿ ಹಾಗೂ ತಪ್ಪಗೊಂಡನಹಳ್ಳಿ ಗ್ರಾಮದ ಸುರೇಶ, ಮಂಜುನಾಥ, ಪಾಲಯ್ಯ, ಕೆ.ಎನ್.ಓಬಯ್ಯ, ಭೀಮಯ್ಯ, ಕಮಲಮ್ಮ, ಪಾರ್ವತಮ್ಮ, ನರಸಪ್ಪ, ಹನುಮಕ್ಕ, ಕದ್ರಣ್ಣ, ಲಸುಮಕ್ಕ ಮತ್ತು ತಪ್ಪಗೊಂಡನಹಳ್ಳಿ ಗ್ರಾಮದ ಚಿಕ್ಕಣ್ಣ, ಈರಣ್ಣ, ಜಯಮ್ಮ ಎಂಬುವರ ಜಮೀನಿಗೆ ಮಳೆನೀರು ನುಗ್ಗಿ ಮೊಳಕೆ ಒಡೆದ ಶೇಂಗಾ ಬೆಳೆ ಸಂಪೂರ್ಣವಾಗಿ ಮಳೆ ನೀರಿನಲ್ಲಿ ಕೊಚ್ಚಿಹೋಗಿದೆ.

ತಪ್ಪಗೊಂಡನಹಳ್ಳಿ ಒಂದೇ ಗ್ರಾಮದಲ್ಲಿ 35 ಎಕರೆಗೂ ಹೆಚ್ಚು ಶೇಂಗಾ ಬೆಳೆ ಹಾನಿಯಾಗಿದ್ದು, ₹ 8 ಲಕ್ಷ ನಷ್ಟವಾಗಿದೆ.

ADVERTISEMENT

ರೈತ ಓಬಯ್ಯ ಅವರು ಎರಡು ಎಕರೆ ಪ್ರದೇಶದಲ್ಲಿ ಬೆಳೆದ ಈರುಳ್ಳಿ ಬೆಳೆಯಲ್ಲಿ ನೀರು ನಿಂತಿದೆ. ಗೋವಿಂದ ಎಂಬುವರ 5 ಎಕರೆಯಲ್ಲಿ ಬಿತ್ತನೆ ಮಾಡಿದ ಶೇಂಗಾ ಹೊಲಕ್ಕೆ ಮಳೆ ನೀರು ನುಗ್ಗಿ, ಬೆಳೆ ಸಂಪೂರ್ಣವಾಗಿ ನೀರು ಪಾಲಾಗಿವೆ.
₹ 4 ಲಕ್ಷ ನಷ್ಟ ಉಂಟಾಗಿದೆ.

ಪರಶುರಾಂಪುರ ಹೋಬಳಿ ವ್ಯಾಪ್ತಿಯ ಪಿ.ಮಹದೇವಪುರ ಗ್ರಾಮದ ನಾಗೇಂದ್ರಪ್ಪ ಎಂಬುವರ ಮಾಳಿಗೆ ಮನೆ, ತಿಪ್ಪರೆಡ್ಡಿಹಳ್ಳಿ ಗ್ರಾಮದ ನಿಂಗಮ್ಮ ಎಂಬುವರ ವಾಸದ ಗುಡಿಸಲು ಸೇರಿ ತಾಲ್ಲೂಕಿನಲ್ಲಿ ಒಟ್ಟು 10 ಮನೆಗಳು ಭಾಗಶಃ ಕುಸಿದು ಬಿದ್ದಿವೆ.

ಶೇಂಗಾ, ಈರುಳ್ಳಿ ಬೆಳೆ ಹಾಗೂ ಮನೆ ಹಾನಿ ಸೇರಿದಂತೆ ಮಳೆಯಿಂದ ತಾಲ್ಲೂಕಿನಲ್ಲಿ ₹ 13 ಲಕ್ಷಕ್ಕೂ ಹೆಚ್ಚು ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ ಎಂದು ತಹಶೀಲ್ದಾರ್ ಎಂ. ಮಲ್ಲಿಕಾರ್ಜುನ ತಿಳಿಸಿದರು.

ಶಿಥಿಲಗೊಂಡ ಕೆರೆ ತೂಬು: ಶನಿವಾರ ರಾತ್ರಿ ಒಂದೇ ದಿನ ಸುರಿದ ಮಳೆಗೆ ತಾಲ್ಲೂಕಿನ ತಪ್ಪಗೊಂಡನಹಳ್ಳಿ ಗ್ರಾಮದ ಕೆರೆ ಭರ್ತಿಯಾಗಿದ್ದು,ರೈತರ ಜಮೀನಿಗೆ ನೀರು ಹರಿದು ಹೋಗಲು ಕೆರೆ ಏರಿಗೆ ಅಳವಡಿಸಿದ್ದ ತೂಬು ಶಿಥಿಲಗೊಂಡಿದೆ. ಹೀಗಾಗಿ ಕೆರೆಯಲ್ಲಿ ಸಂಗ್ರಹವಾಗಿರುವ ನೀರು ಸೋರಿಕೆಯಾಗುತ್ತಿದೆ. ನೀರು ಹೀಗೆ ಸೋರಿಕೆಯಾದರೆ 3–4 ದಿನದಲ್ಲಿ ಕೆರೆಯಲ್ಲಿನ ನೀರು ಸಂಪೂರ್ಣವಾಗಿ ಖಾಲಿಯಾಗುತ್ತದೆ ಎಂಬ ಆತಂಕ ಗ್ರಾಮದ ಜನರಲ್ಲಿ
ಕಾಡುತ್ತಿದೆ.

ಸಣ್ಣ ನೀರಾವರಿ ಇಲಾಖೆ ಎಂಜಿನಿಯರ್‌ಗಳು ಭಾನುವಾರ ಸಂಜೆ ಭೇಟಿ ನೀಡಿ ಶಿಥಿಲಗೊಂಡ ತೂಬನ್ನು ಪರಿಶೀಲಿಸಿದರು.

ತಳಕು ಹೋಬಳಿಯಲ್ಲಿ–36.2 ಮಿ.ಮೀ., ನಾಯಕನಹಟ್ಟಿ–44.8 ಮಿ.ಮೀ, ದೇವರಮರಿಕುಂಟೆ–22.3 ಮಿ.ಮೀ, ಪರಶುರಾಂಪುರ– 20 ಮಿ.ಮೀ ಹಾಗೂ ಚಳ್ಳಕೆರೆ ಕಸಬಾ –17 ಮಿ.ಮೀ ಮಳೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.