ADVERTISEMENT

ಏ.18ಕ್ಕೆ ಈಶ್ವರಪ್ಪ ವಿರುದ್ಧ ಕಾಂಗ್ರೆಸ್‌ ಹೋರಾಟ

ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಕೆ.ತಾಜ್‌ಪೀರ್ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2022, 12:46 IST
Last Updated 17 ಏಪ್ರಿಲ್ 2022, 12:46 IST
ಎಂ.ಕೆ.ತಾಜ್‌ಪೀರ್‌
ಎಂ.ಕೆ.ತಾಜ್‌ಪೀರ್‌   

ಚಿತ್ರದುರ್ಗ: ಗುತ್ತಿಗೆದಾರ ಸಂತೋಷ್‌ ಪಾಟೀಲ ಆತ್ಮಹತ್ಯೆಗೆ ಕಾರಣರಾದ ಆರೋಪ ಎದುರಿಸುತ್ತಿರುವ ಶಾಸಕ ಕೆ.ಎಸ್‌.ಈಶ್ವರಪ್ಪ ವಿರುದ್ಧ ಕೂಡಲೇ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಏ.18ರಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಕೆ.ತಾಜ್‌ಪೀರ್ ತಿಳಿಸಿದರು.

ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಗುತ್ತಿಗೆದಾರರು ಪ್ರಧಾನಿಗೆ ದೂರು ನೀಡಿದ್ದರು. ‘ನಾನು ತಿನ್ನುವುದಿಲ್ಲ, ತಿನ್ನಲು ಬಿಡುವುದಿಲ್ಲ’ ಎಂದಿದ್ದ ಪ್ರಧಾನಿ ನರೇಂದ್ರ ಮೋದಿ ತಮ್ಮದೇ ಪಕ್ಷದ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವಲ್ಲಿ ವಿಫಲರಾಗಿದ್ದಾರೆ. ಭ್ರಷ್ಟ ಸಚಿವರಿಂದ ಸಣ್ಣ ಗುತ್ತಿಗೆದಾರರು ಬದುಕುವುದು ಕಷ್ಟವಾಗಿದೆ’ ಎಂದು ಆರೋಪಿಸಿದರು.

‘ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಾಚಾರ ಮತ್ತು ಬೆಲೆ ಏರಿಕೆ ಮಿತಿಮೀರಿದೆ. ಜನಸಾಮಾನ್ಯರು ಬದುಕುವುದು ಕಷ್ಟವಾಗಿದೆ. ಶಾಸಕರು, ಸಚಿವರೇ ತಮ್ಮ ಮಕ್ಕಳು, ಸಂಬಂಧಿಕರ ಹೆಸರಿನಲ್ಲಿ ಗುತ್ತಿಗೆ ಪಡೆದು ಕಾಮಗಾರಿ ನಡೆಸುತ್ತಿದ್ದಾರೆ. ಇದರ ವಿರುದ್ಧ ಕಾಂಗ್ರೆಸ್‌ ಹೋರಾಟ ರೂಪಿಸಿದೆ. ಸೋಮವಾರ ಬೆಳಿಗ್ಗೆ 11 ಗಂಟೆಗೆ ಗಾಂಧಿ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಆರಂಭವಾಗಲಿದೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್ ನೇತೃತ್ವ ವಹಿಸಲಿದ್ದಾರೆ’ ಎಂದರು.

ADVERTISEMENT

ಕಾಂಗ್ರೆಸ್‌ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ಹಾಲೇಶ್‌ ಮಾತನಾಡಿ, ‘ಪ್ರತಿ ಚುನಾವಣೆಯಲ್ಲಿ ಭ್ರಷ್ಟಾಚಾರದ ವಿರುದ್ಧ ಘೋಷಣೆ ಕೂಗುವ ಬಿಜೆಪಿ ಅನೈತಿಕ ಮಾರ್ಗದಲ್ಲಿ ಸರ್ಕಾರ ರಚಿಸುತ್ತದೆ. ಬಡವರು, ರೈತರು ಸೇರಿ ದೇಶದ ಯಾವ ಪ್ರಜೆಗಳ ಮೇಲೂ ಇವರಿಗೆ ಕಾಳಜಿ ಇಲ್ಲ. ಯಾವ ರಾಜ್ಯದಲ್ಲಿಯೂ ಜನಪರ ಆಡಳಿತ ನೀಡುತ್ತಿಲ್ಲ’ ಎಂದು ದೂರಿದರು.

ಕಾಂಗ್ರೆಸ್‌ ಜಿಲ್ಲಾ ಘಟಕದ ಮುಖಂಡರಾದ ಸಂಪತ್‌ಕುಮಾರ್, ಮೈಲಾರಪ್ಪ, ಲಕ್ಷ್ಮೀಕಾಂತ್, ರಘು ಇದ್ದರು.

***

ಕಾಂಗ್ರೆಸ್‌ಗೆ ಜಿಲ್ಲೆಯಲ್ಲಿ 3.16 ಲಕ್ಷ ಸದಸ್ಯರು ನೋಂದಣಿ ಆಗಿದ್ದಾರೆ. ಹಿರಿಯೂರು ಕ್ಷೇತ್ರವೊಂದರಲ್ಲೇ 90 ಸಾವಿರ ನೋಂದಣಿಯಾಗಿದೆ. ಭಾರಿ ಸಂಖ್ಯೆಯ ಸದಸ್ಯರು ನೋಂದಣಿಯಾದ ರಾಜ್ಯದ ಮೊದಲ ಕ್ಷೇತ್ರ ಹಿರಿಯೂರು.

ಎಂ.ಕೆ.ತಾಜ್‌ಪೀರ್‌,ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.