ADVERTISEMENT

ಕಾಂಗ್ರೆಸ್‌ ಅಧಿಕಾರಕ್ಕೆ ಬರುವುದು ನಿಶ್ಚಿತ: ಸತೀಶ ಜಾರಕಿಹೊಳಿ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2022, 9:40 IST
Last Updated 2 ಫೆಬ್ರುವರಿ 2022, 9:40 IST
ಸತೀಶ ಜಾರಕಿಹೊಳಿ
ಸತೀಶ ಜಾರಕಿಹೊಳಿ   

ಚಿತ್ರದುರ್ಗ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆದ್ದು ಅಧಿಕಾರ ಹಿಡಿಯುವುದು ಸತ್ಯ. ಇಂತಹ ಮುನ್ಸೂಚನೆ ಈಗಲೇ ಸಿಕ್ಕಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ವಿಶ್ವಾಸ ವ್ಯಕ್ತಪಡಿಸಿದರು.

ಇಲ್ಲಿನ ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಬುಧವಾರ ಕಾರ್ಯಕರ್ತರೊಂದಿಗೆ ಸಭೆ ನಡೆಸುವುದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

‘ಬಿಜೆಪಿ ನೇತೃತ್ವದ ಸರ್ಕಾರದ ಆಡಳಿತ ವೈಫಲ್ಯಕ್ಕೆ ಸಂಬಂಧಿಸಿದಂತೆ ಸರ್ಕಾರಿ ಅಧಿಕಾರಿಗಳು, ಗುತ್ತಿಗೆದಾರರು ಹಾಗೂ ಟೀ ಅಂಗಡಿಯ ಬಳಿ ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ. ಬಿಜೆಪಿ ಸರ್ಕಾರದಲ್ಲಿ ರೋಗ ಉಲ್ಬಣಿಸುವ ಲಕ್ಷಣಗಳು ಈ ಮೂಲಕ ಗೋಚರಿಸುತ್ತಿವೆ. ಕಾಂಗ್ರೆಸ್‌ ಅಧಿಕಾರಕ್ಕೆ ಬರುವಂತೆ ಜನರು ಬಯಸುತ್ತಿದ್ದಾರೆ’ ಎಂದು ಹೇಳಿದರು.

ADVERTISEMENT

‘ಬಿಜೆಪಿಯ ಹಲವರು ಕಾಂಗ್ರೆಸ್‌ ಸಂಪರ್ಕದಲ್ಲಿದ್ದಾರೆ. ಯಾರು ಹೀಗೆ ಬರಲು ಸಿದ್ಧರಿದ್ದಾರೆ ಎಂಬುದನ್ನು ಸಂದರ್ಭ ಬಂದಾಗ ಬಹಿರಂಗ ಮಾಡಲಾಗುವುದು. ಇದಕ್ಕೆ ಇನ್ನೂ ಕಾಲಾವಕಾಶವಿದೆ. ಬಿಜೆಪಿ ಸಚಿವರೇ ಒಬ್ಬೊಬ್ಬರಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರನ್ನು ಭೇಟಿ ಮಾಡುತ್ತಿದ್ದಾರೆ. ಸಂಪರ್ಕದಲ್ಲಿರುವವರು ಕಾಂಗ್ರೆಸ್‌ಗೆ ಬರುವುದು ನಿಶ್ಚಿತ’ ಎಂದರು.

‘ಬೇರೆ ಪಕ್ಷದಿಂದ ಬರುವುದರಿಂದ ಸ್ವಪಕ್ಷೀಯರಿಗೆ ತೊಂದರೆ ಆಗದು. ಪಕ್ಷನಿಷ್ಠೆ, ಪಕ್ಷಕ್ಕೆ ಮಾಡಿದ ಸೇವೆಯನ್ನು ಪರಿಗಣಿಸಲಾಗುವುದು. ಪಕ್ಷನಿಷ್ಠೆ ಹೊಂದಿದ ಕಾರ್ಯಕರ್ತರನ್ನು ಕಡೆಗಣನೆ ಮಾಡುವುದಿಲ್ಲ. ಚುನಾವಣೆಯಲ್ಲಿ ವಿಜೇತರಾಗುವ ಸಾಮರ್ಥ್ಯ ಹೊಂದಿದವರು ಹಾಗೂ ಬೇರೆ ಪಕ್ಷದಿಂದ ಬರುವವರನ್ನು ಗಮನಿಸಿ ಟಿಕೆಟ್‌ ನೀಡಲಾಗುವುದು. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ಈ ಹೊಣೆಯನ್ನು ನಿಭಾಯಿಸಲಿದ್ದಾರೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು.

‘ಬಿಜೆಪಿ, ಜೆಡಿಎಸ್‌ನಲ್ಲಿ ಇರುವಂತೆ ಕಾಂಗ್ರೆಸ್‌ನಲ್ಲಿಯೂ ಗುಂಪುಗಾರಿಕೆ, ಜಗಳ ಇರಬಹುದು. ಆದರೆ, ಇದರಿಂದ ಪಕ್ಷ ಸಂಘಟನೆಗೆ ತೊಂದರೆ ಉಂಟಾಗಿಲ್ಲ. ಕಾಂಗ್ರೆಸ್‌ ಕಾರ್ಯಕರ್ತರು ಗುಂಪಿನ ನಾಯಕರಿಗೆ ಮತ ಚಲಾವಣೆ ಮಾಡುವುದಿಲ್ಲ. ಅವರು ಮತ ಹಾಕುವುದು ಪಕ್ಷದ ಗುರುತಿಗೆ. ಚುನಾವಣೆಯಲ್ಲಿ 113 ಶಾಸಕರು ಗೆದ್ದ ಬಳಿಕ ಮುಖ್ಯಮಂತ್ರಿ ಯಾರಾಗಬೇಕು ಎಂಬ ಬಗ್ಗೆ ಚರ್ಚೆ ನಡೆಯುತ್ತದೆ. ಶಾಸಕರ ಅಭಿಪ್ರಾಯ ಪಡೆದು ಹೈಕಮಾಂಡ್‌ ತೀರ್ಮಾನ ಕೈಗೊಳ್ಳಲಿದೆ’ ಎಂದರು.

‘ಕಾಂಗ್ರೆಸ್‌ನ ಯಾವೊಬ್ಬ ಶಾಸಕರೂ ಪಕ್ಷ ತೊರೆಯುವುದಿಲ್ಲ. ಬಿಜೆಪಿಗೆ ಈಗ ಶಾಸಕರ ಅಗತ್ಯವಿಲ್ಲ. ಪಕ್ಷಾಂತರ ಮಾಡುವವರು ಸುಮ್ಮನೆ ಹೋಗುವುದಿಲ್ಲ. ಅವರಿಗೆ ಮತ್ತೆ ಅಧಿಕಾರ ನೀಡಬೇಕಾಗುತ್ತದೆ. ಇಂತಹ ಸ್ಥಿತಿಯಲ್ಲಿ ಬಿಜೆಪಿ ಇಲ್ಲ. ಮುಂಬರುವ ಚುನಾವಣೆಯ ಬಳಿಕ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ ಎಂಬ ವಾಸನೆ ಎಲ್ಲರಿಗೂ ಸಿಕ್ಕಿದೆ’ ಎಂದು ಹೇಳಿದರು.

ಬಿ.ಸಿ.ಪಾಟೀಲ ವಿರುದ್ಧ ಕಿಡಿ

ಪಕ್ಷಾಂತರ ಮಾಡಿ ಕೃಷಿ ಸಚಿವರಾಗಿರುವ ಬಿ.ಸಿ.ಪಾಟೀಲ ಮುಂಬರುವ ಚುನಾವಣೆಯ ಹೊತ್ತಿಗೆ ಬಿಜೆಪಿಯಲ್ಲಿ ಇರುತ್ತಾರಾ ಎಂಬ ಅನುಮಾನವಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ತಿಳಿಸಿದರು. ಸಿದ್ದರಾಮಯ್ಯ ಅವರ ಪಕ್ಷನಿಷ್ಠೆಯ ಬಗ್ಗೆ ಮಾಡಿದ ಟೀಕೆಗೆ ಜಾರಕಿಹೊಳಿ ತಿರುಗೇಟು ನೀಡಿದರು.

‘ವಿಧಾನಪರಿಷತ್‌ ಹಾಗೂ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಸಮಬಲದ ಪೈಪೋಟಿ ನೀಡಿದೆ. ಅಧಿಕಾರಕ್ಕೆ ಬರುವ ನೈಜ ಕನಸು ಕಾಣುತ್ತಿದ್ದೇವೆ. ಕಾಂಗ್ರೆಸ್‌ನ ಆಂತರಿಕ ವಿಚಾರದ ಬಗ್ಗೆ ಮಾತನಾಡಲು ಬಿ.ಸಿ.ಪಾಟೀಲ ಯಾರು’ ಎಂದು ಪ್ರಶ್ನಿಸಿದರು.

ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ, ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಕೆ.ತಾಕ್‍ಪೀರ್, ಕಾರ್ಯಾಧ್ಯಕ್ಷ ಕೆ.ಎಂ.ಹಾಲಸ್ವಾಮಿ, ಪ್ರಧಾನ ಕಾರ್ಯದರ್ಶಿ ಡಿ.ಎನ್‌.ಮೈಲಾರಪ್ಪ, ಸಂಪತ್‍ಕುಮಾರ್ ಇದ್ದರು.

ಸಾಮಾಜಿಕ ನ್ಯಾಯ ಕೊಡಲು ಕಾಂಗ್ರೆಸ್‌ ಬದ್ಧವಿದೆ. 2023ರಲ್ಲಿ ಮತದಾರರು ಕಾಂಗ್ರೆಸ್‌ ಆಯ್ಕೆ ಮಾಡುತ್ತಾರೆ ಎಂಬ ದೃಢವಾದ ವಿಶ್ವಾಸವಿದೆ. ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್‌ ನೇತೃತ್ವದಲ್ಲಿ ಪಕ್ಷ ಮುನ್ನೆಡೆಯಲಿದೆ.

- ಸತೀಶ ಜಾರಕಿಹೊಳಿ,ಕಾಂಗ್ರೆಸ್‌ ಕಾರ್ಯಾಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.