ಶಿವಮೊಗ್ಗ: ಕರ್ನಾಟಕ ಮತ್ತು ಮುಂಬೈ ನಡುವಣ ಕೂಚ್ ಬೆಹಾರ್ ಟ್ರೋಫಿ ಫೈನಲ್ ಪಂದ್ಯ ಜ.12ರಿಂದ 15ರವರೆಗೆ ನಗರದ ಕೆಎಸ್‌ಸಿಎ ನವುಲೆ ಕ್ರೀಡಾಂಗಣದಲ್ಲಿ ನಡೆಯಲಿದೆ.
‘ಪ್ರತಿದಿನ ಬೆಳಿಗ್ಗೆ 9.30ಕ್ಕೆ ಪಂದ್ಯ ಆರಂಭವಾಗಲಿದೆ. ಸಂಜೆ 4.30ಕ್ಕೆ ದಿನದಾಟ ಕೊನೆಗೊಳ್ಳಲಿದೆ. ಪ್ರತಿದಿನ ಸರಾಸರಿ 90 ಓವರ್‌ಗಳ ಆಟ ನಡೆಯಲಿದೆ. ಈ ಪಂದ್ಯ ಶಿವಮೊಗ್ಗದಲ್ಲಿ ನಡೆಯುತ್ತಿರುವುದು ಅತ್ಯಂತ ಗೌರವ ತರುವ ವಿಷಯ’ ಎಂದು ಕೆಎಸ್‌ಸಿಎ ಶಿವಮೊಗ್ಗ ವಲಯದ ಸಂಚಾಲಕ ಎಚ್.ಎಸ್.ಸದಾನಂದ, ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
‘19 ವರ್ಷದೊಳಗಿನವರ ತಂಡಗಳು ಈ ಟೂರ್ನಿಯಲ್ಲಿ ಪಾಲ್ಗೊಳ್ಳಲಿವೆ. 1945ರಿಂದಲೂ ಇದನ್ನು ಆಯೋಜಿಸುತ್ತಾ ಬರಲಾಗಿದೆ’ ಎಂದರು.
‘ಬಿಸಿಸಿಐ ಇದರ ಸಂಪೂರ್ಣ ಜವಾಬ್ದಾರಿ ಹೊತ್ತುಕೊಂಡಿದ್ದು, ಉದಯೋನ್ಮುಖ ಆಟಗಾರರಿಗೆ ವೇದಿಕೆ ಕಲ್ಪಿಸುವಲ್ಲಿ ಈ ಟೂರ್ನಿ ಪ್ರಮುಖ ಪಾತ್ರ ವಹಿಸುತ್ತದೆ. ಪಂದ್ಯದ ವೀಕ್ಷಣೆಗೆ ಸಾರ್ವಜನಿಕರಿಗೆ ಉಚಿತ ಪ್ರವೇಶ ಇದೆ’ ಎಂದು ತಿಳಿಸಿದರು.
ಪ್ರಮುಖರಾದ ರಾಜೇಂದ್ರ ಕುಮಾರ್, ಕೆ.ಎಸ್. ಸುಬ್ರಹ್ಮಣ್ಯ, ಐಡಿಯಲ್ ಗೋಪಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.