ADVERTISEMENT

ಕೊರೊನಾ ಸಂಕಷ್ಟ: ಕೂಲಿಯತ್ತ ಎಂಜಿನಿಯರ್‌, ಅತಿಥಿ ಉಪನ್ಯಾಸಕರು

ಪದವೀಧರರ ಕೈಹಿಡಿದ ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆ

ಚಂದ್ರಶೇಖರ ಆರ್‌.
Published 3 ಆಗಸ್ಟ್ 2020, 20:15 IST
Last Updated 3 ಆಗಸ್ಟ್ 2020, 20:15 IST
ಚನ್ನಗಿರಿ ತಾಲ್ಲೂಕಿನ ರುದ್ರಪುರ ಗ್ರಾಮ‌ ಪಂಚಾಯಿತಿ ವ್ಯಾಪ್ತಿಯ ಸೂಳೆಕೆರೆಗುಡ್ಡದಲ್ಲಿ ಉದ್ಯೋಗ ಖಾತ್ರಿ ಅಡಿ ಕೆಲಸ ಮಾಡುತ್ತಿರುವ ಕಾರ್ಮಿಕರು
ಚನ್ನಗಿರಿ ತಾಲ್ಲೂಕಿನ ರುದ್ರಪುರ ಗ್ರಾಮ‌ ಪಂಚಾಯಿತಿ ವ್ಯಾಪ್ತಿಯ ಸೂಳೆಕೆರೆಗುಡ್ಡದಲ್ಲಿ ಉದ್ಯೋಗ ಖಾತ್ರಿ ಅಡಿ ಕೆಲಸ ಮಾಡುತ್ತಿರುವ ಕಾರ್ಮಿಕರು   

ದಾವಣಗೆರೆ: ‘ಬೆಂಗಳೂರಿನ ಕಂಪನಿಯೊಂದರಲ್ಲಿ ಸಿವಿಲ್‌ ಎಂಜಿನಿಯರಿಂಗ್‌ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೆ. ಕೊರೊನಾ ತಂದ ಸಂಕಷ್ಟದಿಂದ ಕಂಪನಿ ಮನೆಗೆ ಕಳುಹಿಸಿತು. ಕುಟುಂಬ ನಿರ್ವಹಣೆಗೆ ಅನಿವಾರ್ಯವಾಗಿ ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ಕೆಲಸಕ್ಕೆ ಹೋಗುತ್ತಿದ್ದೇನೆ...’

ಇದು ಹೊನ್ನಾಳಿ ತಾಲ್ಲೂಕಿನ ಎಚ್‌.ಜಿ. ಹಳ್ಳಿ ತಾಂಡಾದ ಸಿವಿಲ್‌ ಎಂಜಿನಿಯರ್‌ ಗಿರೀಶ್‌ ನಾಯ್ಕ್ ಅವರ ಮಾತು.

ಅವರಂತೆ ನೂರಾರು ಮಂದಿಪಿಯುಸಿ ಓದಿದವರು, ಪದವೀಧರರು, ಅತಿಥಿ ಉಪನ್ಯಾಸಕರು, ಸಿವಿಲ್‌ ಎಂಜಿನಿಯರಿಂಗ್‌ ಮಾಡಿದವರು ಕೆಲಸವಿಲ್ಲದೇ ಜಿಲ್ಲೆಯಲ್ಲಿ ಈಗ ಉದ್ಯೋಗ ಖಾತ್ರಿ ಅಡಿ ಕೂಲಿ ಮಾಡಲು ಮುಂದಾಗಿದ್ದಾರೆ.

ADVERTISEMENT

ಬೆಂಗಳೂರು, ತುಮಕೂರು ಸೇರಿ ಹಲವು ಜಿಲ್ಲೆಗಳಲ್ಲಿ ಕೆಲಸ ಮಾಡುತ್ತಿದ್ದ ಇಲ್ಲಿನವರು ಕೆಲಸ ಕಳೆದುಕೊಂಡು ಊರಿಗೆ ಮರಳಿದ್ದರೆ, ಇನ್ನು ಕೆಲವರು ನಗರ ಪ್ರದೇಶಗಳಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ವಾಪಸ್ಸಾಗದೇ ಕೂಲಿ ಕೆಲಸಕ್ಕೆ ಹೋಗುತ್ತಿದ್ದಾರೆ. ಜಿಲ್ಲೆಯಲ್ಲಿ 400ಕ್ಕೂ ಅಧಿಕ ಪದವೀಧರರು ಖಾತ್ರಿ ಅಡಿ ಕೆಲಸ ಮಾಡುತ್ತಿರುವುದು ಗಮನಾರ್ಹ.

ತುಮಕೂರಿನ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ತೋಳಹುಣಸೆಯ ಸಿವಿಲ್‌ ಎಂಜಿನಿಯರ್‌ ಗಣೇಶ್ ಅವರೂ ಇದೇ ಮಾತು ಹೇಳುತ್ತಾರೆ.ಕೆಲಸ ಕಳೆದುಕೊಂಡಿದ್ದರಿಂದ ಕುಟುಂಬದ ಆರ್ಥಿಕ ಸ್ಥಿತಿ ಸುಧಾರಿಸಲು ಅನಿವಾರ್ಯವಾಗಿ ಖಾತ್ರಿ ಅಡಿ ಕೂಲಿಗೆ ಹೋಗುತ್ತಿದ್ದಾರೆ. ಮಳೆ ಬಂದಿದ್ದರಿಂದ ಈಗ ಖಾತ್ರಿ ಕೆಲಸವೂ ನಿಂತಿದೆ.

ಚನ್ನಗಿರಿ ತಾಲ್ಲೂಕಿನ ಜಯಂತಿನಗರದ ರವಿನಾಯ್ಕ ಅತಿಥಿ ಉಪನ್ಯಾಸಕರಾಗಿದ್ದವರು. ಕೆಲಸ ಇಲ್ಲದೆ ಈ ಯೋಜನೆಯಡಿ ಕೂಲಿ ಕೆಲಸ ಮಾಡುತ್ತಿದ್ದಾರೆ.

‘ಭದ್ರಾವತಿಯ ಖಾಸಗಿ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕನಾಗಿದ್ದೆ. ಲಾಕ್‌ಡೌನ್‌ ಆದಾಗಿನಿಂದ ಕೆಲಸ ಇರಲಿಲ್ಲ. ಕುಟುಂಬದ ಆರ್ಥಿಕ ಪರಿಸ್ಥಿತಿ ಸ್ವಲ್ಪಮಟ್ಟಿಗಾದರೂ ಸುಧಾರಿಸಲಿ ಎಂದು ಕೂಲಿಗೆ ಹೋಗುತ್ತಿದ್ದೇನೆ. ನಮ್ಮಂತಹ ಯುವಕರಿಗೆ ಉದ್ಯೋಗ ಖಾತ್ರಿ ನೆರವಾಗಿದೆ’ ಎಂದು ‘ಪ್ರಜಾವಾಣಿ’ ಜೊತೆ ಅವರು ಅನುಭವ ಹಂಚಿಕೊಂಡರು.

‘ದಾವಣಗೆರೆ ಜಿಲ್ಲೆಯಲ್ಲಿ 400ಕ್ಕೂ ಹೆಚ್ಚು ಮಂದಿ ಪಿಯುಸಿ ಓದಿದವರು, ಪದವೀಧರರು, ವಿವಿಧ ವೃತ್ತಿಪರ ಕೋರ್ಸ್ ಮಾಡಿದವರು ಕೆಲಸ ಕಳೆದುಕೊಂಡಿದ್ದರಿಂದ ಖಾತ್ರಿ ಯೋಜನೆಯಡಿ ಕೆಲಸ ಮಾಡುತ್ತಿದ್ದಾರೆ. ಯೋಜನೆ ಹಲವರಿಗೆ ನೆರವಾಗಿದೆ’ ಎಂದು ಜಿಲ್ಲಾ ಐಇಸಿ ಸಂಯೋಜಕ ಚಂದನ್ ತಿಳಿಸಿದರು.

ಖಾತ್ರಿ ಅಡಿ ಪದವೀಧರರು ಕೆಲಸ ಮಾಡುತ್ತಿರುವುದರಿಂದ ಯೋಜನೆಯ ಪ್ರಾಮುಖ್ಯದ ಅರಿವು ಅನೇಕರಲ್ಲಿ ಮೂಡಿ
ದಂತಾಗಿದೆ. ಖಾತ್ರಿ ಬಗ್ಗೆ ಹಳ್ಳಿಗಳಲ್ಲಿ ಅವರು ಪ್ರಚಾರ ಮಾಡಿದ್ದರಿಂದ ಹೆಚ್ಚಿನವರು ಹೆಸರು ನೋಂದಾಯಿಸಿಕೊಂಡಿದ್ದರು. ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಪದವೀಧರರು ಕೆಲಸ ಮಾಡುತ್ತಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

ಏನೇನು ಬೇಕು

ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡಲು ಜಾಬ್‌ ಕಾರ್ಡ್‌ ಬೇಕು. ಕುಟುಂಬದ ಸದಸ್ಯರಲ್ಲಿ ಯಾರಾದರೊಬ್ಬರುಕಾರ್ಡ್‌ ಹೊಂದಿದ್ದರೆ ಸಾಕು. ಅದಕ್ಕೆ ಇತರರನ್ನು ಸೇರ್ಪಡೆ ಮಾಡಲು ಅವಕಾಶ ಇದೆ. ಬ್ಯಾಂಕ್‌ ಪಾಸ್‌ ಪುಸ್ತಕ, ಆಧಾರ್‌ ಕಾರ್ಡ್‌ ಇದ್ದರೆ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಯೋಜನೆಗೆ ಹೆಸರು ನೋಂದಾಯಿಸಿ ಕೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.