ADVERTISEMENT

ಒಂದೇ ವಾರ್ಡ್‌ನಲ್ಲಿ ಹಲವರ ‘ಕ್ವಾರಂಟೈನ್‌’

‘ಕೋವಿಡ್‌–19’ ಪೀಡಿತರಿಗೆ ನಿರ್ಮಿಸಿದ ಆಸ್ಪತ್ರೆಯಲ್ಲಿ ಅವ್ಯವಸ್ಥೆ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2020, 14:01 IST
Last Updated 29 ಮಾರ್ಚ್ 2020, 14:01 IST

ಚಿತ್ರದುರ್ಗ: ಕೊರೊನಾ ಸೋಂಕು ತಗುಲಿದ ಶಂಕೆ ಇರುವವರನ್ನು ಪ್ರತ್ಯೇಕವಾಗಿಡಲು ಹಾಗೂ ಕೋವಿಡ್‌–19 ಪೀಡಿತರ ಚಿಕಿತ್ಸೆಗೆ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ಸ್ಥಾಪಿಸಿದ ವಾರ್ಡ್‌ ಅವ್ಯವಸ್ಥೆಯ ಆಗರವಾಗಿದೆ. ಆರೋಗ್ಯವಂತರಿಗೂ ಸೋಂಕು ಹರಡುವ ತಾಣವಾಗಿ ಪರಿವರ್ತನೆ ಹೊಂದಿದೆ ಎಂಬ ಆರೋಪ ಕೇಳಿ ಬಂದಿದೆ.

ಆಸ್ಪತ್ರೆಯಲ್ಲಿ ದಾಖಲಾಗಿರುವವರು ಅವ್ಯವಸ್ಥೆಯ ವಿರುದ್ಧ ಧ್ವನಿ ಎತ್ತಿದ್ದಾರೆ. ಮೊಬೈಲ್‌ ವಿಡಿಯೊ ನಿರ್ಮಿಸಿ ಸಂಬಂಧಿಕರಿಗೆ ಕಳುಹಿಸಿ ಅಳಲು ತೋಡಿಕೊಂಡಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿವೆ.

ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ನೂತನವಾಗಿ ನಿರ್ಮಿಸಿದ ತಾಯಿ ಮತ್ತು ಮಗುವಿನ ಆಸ್ಪತ್ರೆಯ ಕಟ್ಟಡದಲ್ಲಿ ‘ಕೋವಿಡ್‌–19’ ಪೀಡಿತರ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ. ಸೋಂಕು ತಗುಲಿದ ಅನುಮಾನ ಇರುವವರನ್ನು ಇಲ್ಲಿ ಪ್ರತ್ಯೇಕವಾಗಿಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಸೋಂಕು ಅಂಟಿರುವ ಶಂಕೆಯ ಮೇರೆಗೆ ಈಗಾಗಲೇ 10 ಜನರನ್ನು ಇಲ್ಲಿಗೆ ದಾಖಲಿಸಲಾಗಿದೆ. ಇವರೆಲ್ಲರನ್ನು ಒಂದೇ ಕೊಠಡಿಯಲ್ಲಿ ಕೂಡಿಹಾಕಿರುವುದು ಆತಂಕ ಸೃಷ್ಟಿಸಿದೆ.

ADVERTISEMENT

ಮಾರ್ಚ್‌ 18ರಂದು ಬೆಂಗಳೂರಿನಿಂದ ಚಿತ್ರದುರ್ಗಕ್ಕೆ ಬಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸಿನಲ್ಲಿದ್ದ ನಿರ್ವಾಹಕಿ ಹಾಗೂ ಚಾಲಕನನ್ನು ಇದೇ ವಾರ್ಡ್‌ಗೆ ದಾಖಲಿಸಲಾಗಿದೆ. ಎಲ್ಲರೂ ಪ್ರತ್ಯೇಕವಾಗಿರುವ ಬದಲಿಗೆ ಒಂದೇ ಕೊಠಡಿಯಲ್ಲಿ ಇಟ್ಟಿರುವುದು ಅನುಮಾನಕ್ಕೆ ಕಾರಣವಾಗಿದೆ. ಮುಖಗವಸು, ಕೈಗವಸು, ಸ್ಯಾನಿಟೈಸರ್‌ ಸೇರಿ ಯಾವುದೇ ಸೌಲಭ್ಯ ನೀಡಿಲ್ಲ ಎಂಬ ಆರೋಪ ಕೇಳಿಬಂದಿದೆ. ಕುಡಿಯುವ ನೀರು, ಊಟ ಪೂರೈಕೆಯಲ್ಲಿಯೂ ವ್ಯತ್ಯಯ ಉಂಟಾಗಿದೆ.

‘ಕೊರೊನಾ ಸೋಂಕಿತ ವ್ಯಕ್ತಿಯೊಬ್ಬರು ನಮ್ಮ ಬಸ್ಸಿನಲ್ಲಿ ಪ್ರಯಾಣಿಸಿದ್ದರು ಎಂಬ ಕಾರಣಕ್ಕೆ ಪ್ರತ್ಯೇಕ ವಾರ್ಡ್‌ಗೆ ದಾಖಲಿಸಲಾಗಿದೆ. ಶುಕ್ರವಾರ ಸಂಜೆ ವಾರ್ಡ್‌ಗೆ ಬಂದಿದ್ದೇನೆ. ಮಹಿಳೆ ಎಂಬ ಕಾರಣಕ್ಕಾದರೂ ಪ್ರತ್ಯೇಕವಾಗಿ ಇರಿಸಿ ಎಂಬ ಮನವಿಗೆ ಯಾರೊಬ್ಬರು ಕಿವಿಗೊಡುತ್ತಿಲ್ಲ. ಸ್ನಾನ, ಶೌಚಾಲಯಕ್ಕೆ ನೀರಿಲ್ಲ. ಕುಡಿಯುವ ನೀರು ಕೂಡ ಕೊಡುತ್ತಿಲ್ಲ’ ಎಂದು ಕೆಎಸ್‌ಆರ್‌ಟಿಸಿ ನಿರ್ವಾಹಕಿಯೊಬ್ಬರು ವಿಡಿಯೊದಲ್ಲಿ ಸಂಕಷ್ಟ ಹಂಚಿಕೊಂಡಿದ್ದಾರೆ.

‘ಸೋಂಕಿತರನ್ನು ಪ್ರತ್ಯೇಕವಾಗಿಡಬೇಕು ಎಂಬ ನಿಯಮವಿದೆ. ಆದರೆ, ಇಲ್ಲಿ ಎಲ್ಲರನ್ನೂ ಒಂದೇ ಕೊಠಡಿಗೆ ಕೂಡಿಹಾಕಲಾಗಿದೆ. ಸಮೀಪದ ಬೆಡ್‌ನಲ್ಲಿರುವ ವ್ಯಕ್ತಿಯೊಬ್ಬರು ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ನಮಗೆ ಸೋಂಕು ಅಂಟಿರುವುದು ಇನ್ನೂ ದೃಢಪಟ್ಟಿಲ್ಲ. ಇಲ್ಲಿರುವ ಮತ್ತೊಬ್ಬರಿಂದ ಸೋಂಕು ತಗುಲಿದರೆ ಯಾರು ಹೊಣೆ’ ಎಂಬುದು ನಿರ್ವಾಹಕಿಯ ಪ್ರಶ್ನೆ.

ದಾಖಲಾದವರಲ್ಲಿ ಸೋಂಕಿಲ್ಲ:ಪ್ರತ್ಯೇಕ ವಾರ್ಡ್‌ಗೆ ದಾಖಲಾಗಿದ್ದ ಹತ್ತು ಜನರ ಗಂಟಲು ಹಾಗೂ ರಕ್ತದ ಮಾದರಿಯ ವರದಿ ಭಾನುವಾರ ಬಂದಿದ್ದು, ಸೋಂಕು ತಗುಲಿಲ್ಲ ಎಂಬುದು ದೃಢಪಟ್ಟಿದೆ. ಹೀಗಾಗಿ, ಎಲ್ಲರನ್ನೂ ಮನೆಗಳಿಗೆ ಕಳುಹಿಸಲಾಗಿದೆ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಬಸವರಾಜ್‌ ಮಾಹಿತಿ ನೀಡಿದ್ದಾರೆ.

ಕೆಎಸ್‌ಆರ್‌ಟಿಸಿಯ ನಾಲ್ವರು ಸಿಬ್ಬಂದಿ ಸೇರಿದಂತೆ ಹತ್ತು ಜನರನ್ನು ಇಲ್ಲಿಗೆ ದಾಖಲಿಸಲಾಗಿತ್ತು. ಸೋಂಕಿತರೊಂದಿಗೆ ನೇರ ಸಂಪರ್ಕ ಹೊಂದಿದ ಕಾರಣಕ್ಕೆ ಇವರಿಗೂ ಕೊರೊನಾ ಅಂಟಿರುವ ಅನುಮಾನ ವ್ಯಕ್ತವಾಗಿತ್ತು. ಇದರಿಂದ ಅವರು ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರು. ಪ್ರಯೋಗಾಲಯದ ವರದಿ ಕೈಸೇರಿದ ಬಳಿಕ ಎಲ್ಲರೂ ನಿರಾಳರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.