ಚಿತ್ರದುರ್ಗ: ಪ್ರಿಯತಮೆಯ ಪತಿಯನ್ನು ಕೊಲೆ ಮಾಡಿದ ಅಪರಾಧಿಗೆ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ಆದೇಶಿಸಿದೆ.
ಆಂಧ್ರಪ್ರದೇಶದ ಕಲ್ಯಾಣದುರ್ಗ ತಾಲ್ಲೂಕಿನ ಸೋಮಶೇಖರ ಶಿಕ್ಷೆಗೆ ಗುರಿಯಾದ ವ್ಯಕ್ತಿ. ಕಲ್ಯಾಣದುರ್ಗ ತಾಲ್ಲೂಕಿನ ಬಂಡೆಮೀದಪಲ್ಲಿ ಗ್ರಾಮದ ಚಾಕಲಿ ರಮೇಶ ಎಂಬುವರನ್ನು 2016ರಲ್ಲಿ ಕೊಲೆ ಮಾಡಿದ್ದನು. ವಿಚಾರಣೆ ನಡೆಸಿದ ನ್ಯಾಯಾಧೀಶ ಬನ್ನಿಕಟ್ಟೆ ಆರ್.ಹನುಮಂತಪ್ಪ ಅವರು ಆದೇಶ ನೀಡಿದ್ದಾರೆ.
ರಮೇಶ ಹಾಗೂ ನೇತ್ರಮ್ಮ ವಿವಾಹವಾಗಿದ್ದರು. ಮದುವೆಗೂ ಮೊದಲೇ ನೇತ್ರಮ್ಮನನ್ನು ಸೋಮಶೇಖರ ಪ್ರೀತಿಸುತ್ತಿದ್ದನು. ನೇತ್ರಮ್ಮನ ಪತಿಯನ್ನು ಪರಿಚಯ ಮಾಡಿಕೊಂಡ ಅಪರಾಧಿ ಆಗಾಗ ಮನೆಗೆ ಭೇಟಿ ನೀಡುತ್ತಿದ್ದನು. ಪತ್ನಿಯೊಂದಿಗೆ ಸಲುಗೆ ಬೆಳೆಸಿಕೊಂಡಿದ್ದನ್ನು ಗಮನಿಸಿದ ರಮೇಶ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದನು.
ರಮೇಶನನ್ನು ಕೊಲೆ ಮಾಡಲು ಸಂಚು ರೂಪಿಸಿದ ಸೋಮಶೇಖರ, ಬೆಂಗಳೂರಿಗೆ ತೆರಳುವ ನೆಪ ಮಾಡಿಕೊಂಡು ಪರಶುರಾಂಪುರ ಸಮೀಪದ ನಾಗಪ್ಪನಹಳ್ಳಿ ಗೇಟಿಗೆ ಕರೆಸಿಕೊಂಡಿದ್ದನು. ಪಿಲ್ಲಹಳ್ಳಿ ಸಮೀಪ ಕೊಲೆ ಮಾಡಿ ಪರಾರಿಯಾಗಿದ್ದನು. ಈ ಪ್ರಕರಣದ ತನಿಖೆ ನಡೆಸಿದ ಪರಶುರಾಂಪುರ ಠಾಣೆಯ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಶೇಷ ಅಭಿಯೋಜಕ ಬಿ.ಮಲ್ಲೇಶಪ್ಪ ಅವರು ಸರ್ಕಾರದ ಪರ ವಾದ ಮಂಡಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.