
ಚಿತ್ರದುರ್ಗ: ‘ನ್ಯಾಯ ಸಿಗದ ಅಸಹಾಯಕ ಮತ್ತು ತುಳಿತಕ್ಕೊಳಗಾದ ಜನರ ಸೇವೆಗಾಗಿ ಕಾನೂನು ಸೇವಾ ಪ್ರಾಧಿಕಾರ ರಚಿಸಲಾಗಿದೆ. ಕಾನೂನು ನೆರವು ಪಡೆಯುವುದು ನೊಂದವರ ಹಕ್ಕು. ನ್ಯಾಯಾಲಯಗಳು ನೀಡುವ ಆದೇಶ, ಪರಿಹಾರ ಸಕಾಲದಲ್ಲಿ ಜಾರಿಯಾಗಬೇಕು. ಸಂತ್ರಸ್ತರಿಗೆ ಶೀಘ್ರವಾಗಿ ನ್ಯಾಯ ಸಿಗಬೇಕು’ ಎಂದು ಹೈಕೋರ್ಟ್ ನ್ಯಾಯಮೂರ್ತಿ, ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷೆ ಅನು ಶಿವರಾಮನ್ ಹೇಳಿದರು.
ರಾಜ್ಯ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ನಡೆದ ಕಾನೂನು ಸೇವಾ ಪ್ರಾಧಿಕಾರಗಳ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
‘ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ದೊರಕಬೇಕು ಎಂಬ ಸದುದ್ದೇಶದಿಂದ ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರ ಸ್ಥಾಪಿಸಲಾಗಿದೆ. ಇದರಡಿ ರಾಜ್ಯ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಗಳು ಕಾರ್ಯನಿರ್ವಹಿಸುತ್ತಿವೆ. ರಾಷ್ಟ್ರ ಮಟ್ಟದಲ್ಲಿ ರೂಪಿಸಿರುವ ಯೋಜನೆಗಳನ್ನು ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ಅನುಷ್ಠಾನಗೊಳಿಸುವ ಜವಾಬ್ದಾರಿ ನಮ್ಮ ಮೇಲಿದೆ. ಈ ಕೆಲಸವನ್ನು ಯಾಂತ್ರಿಕವಾಗಿ ಶಿಷ್ಟಾಚಾರದ ಹಿನ್ನೆಲೆಯಲ್ಲಿ ನಿರ್ವಹಿಸದೇ, ಮಾನವೀಯ ಕಳಕಳಿಯೊಂದಿಗೆ ನಿರ್ವಹಿಸಬೇಕು’ ಎಂದರು.
‘ರಾಜ್ಯ ಕಾನೂನು ಸೇವಾ ಪ್ರಾಧಿಕಾರದಲ್ಲಿ ಜಿಲ್ಲೆಗಳಿಗೆ ಸಂಬಂಧಿದಂತೆ ಸುಮಾರು ₹ 6 ಕೋಟಿಯಷ್ಟು ಶುಲ್ಕ ಹಾಗೂ ₹ 21 ಕೋಟಿಯಷ್ಟು ಸಂತ್ರಸ್ತರ ಪರಿಹಾರ ಪಾವತಿ ಬಾಕಿಯಿದೆ. ಬಿಲ್‍ಗಳ ವಿಲೇವಾರಿ, ಹಣಕಾಸು ನಿರ್ವಹಣೆ ಮತ್ತು ಖಾತೆಗಳ ನಿರ್ವಹಣೆಯನ್ನು ಕಾಲಮಿತಿಯಲ್ಲಿ ಮಾಡಬೇಕು. ವಾರದ ಅಂತ್ಯದೊಳಗೆ ಬಾಕಿ ಇರುವ ಕಡತಗಳನ್ನು ವಿಲೇವಾರಿ ಮಾಡುವುದು ಅತ್ಯಗತ್ಯವಾಗಿದೆ’ ಎಂದು ಹೇಳಿದರು.
‘ರಾಜ್ಯ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಗಳ ನಡುವೆ ಸಮನ್ವಯ ಅಗತ್ಯವಾಗಿದೆ. ದುರ್ಬಲ ಹಾಗೂ ವಂಚಿತರಿಗೆ ಕಾಲಮಿತಿಯಲ್ಲಿ ನ್ಯಾಯ ದೊರಕಬೇಕು. ರಾಜ್ಯ ವಿಶಾಲವಾಗಿದ್ದು, ಪ್ರತಿಯೊಂದು ಜಿಲ್ಲೆಯಲ್ಲಿಯೂ ವಿಭಿನ್ನ ರೀತಿಯ ಸಮಸ್ಯೆಗಳಿವೆ. ಇದನ್ನು ಅರಿತು ಪ್ರತಿಯೊಂದು ಜಿಲ್ಲಾ ಮಟ್ಟದ ಕಾನೂನು ಸೇವಾ ಪ್ರಾಧಿಕಾರಗಳು ಕಾರ್ಯನಿರ್ವಹಿಸಬೇಕು. ನ್ಯಾಯಾಧೀಶರ ಕರ್ತವ್ಯಕ್ಕಿಂತಲೂ ಕಾನೂನು ಸೇವಾ ಪ್ರಾಧಿಕಾರದ ಕರ್ತವ್ಯಗಳು ಭಿನ್ನವಾಗಿವೆ’ ಎಂದು ತಿಳಿಸಿದರು.
‘ಜಿಲ್ಲಾ ಮಟ್ಟದಲ್ಲಿ ಶಾಸಕಾಂಗ ಹಾಗೂ ಕಾರ್ಯಾಂಗ ನಿರ್ವಹಿಸಬೇಕಾದ ಆಡಳಿತಾತ್ಮಕ ಕೆಲಸಗಳ ಮೇಲ್ವಿಚಾರಣೆಯೊಂದಿಗೆ, ಸಂವಿಧಾನದ ಆಶಯ ಈಡೇರಿಸುವಲ್ಲಿ, ನ್ಯಾಯವನ್ನು ಜನರ ಮನೆ ಬಾಗಿಲಿಗೆ ಕೊಂಡೊಯ್ಯುವ ಕೆಲಸವನ್ನು ಕಾನೂನು ಸೇವಾ ಪ್ರಾಧಿಕಾರಗಳು ಮಾಡಬೇಕು. ಜಿಲ್ಲಾ ನ್ಯಾಯಾಧೀಶರನ್ನು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರಾಗಿ ಹಾಗೂ ಹಿರಿಯ ನ್ಯಾಯಾಧೀಶರನ್ನು ಕಾರ್ಯದರ್ಶಿಯಾಗಿ ನೇಮಿಸಲಾಗಿದೆ. ನ್ಯಾಯಾಧೀಶರಾಗಿ ಕರ್ತವ್ಯ ನಿರ್ವಹಿಸುವ ವೇಳೆ ವ್ಯತ್ಯಾಸಗಳು ಮೂಡಿ ಬರುವುದು ಸಹಜ. ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಕೆಲಸ ಮಾಡಬೇಕು’ ಎಂದು ಹೇಳಿದರು.
ಹೈಕೋರ್ಟ್ ನ್ಯಾಯಮೂರ್ತಿ ಎಂ.ಜಿ.ಉಮಾ ಅವರು ‘ಲೆಕ್ಕಪತ್ರ ನಿರ್ವಹಣೆ ಮತ್ತು ಕಾನೂನು ಸೇವೆಗಳ ಚಟುವಟಿಕೆಗಳು’ ಕುರಿತು ಮಾತನಾಡಿದರು. ನ್ಯಾಯಮೂರ್ತಿ ಹಾಗೂ ಚಿತ್ರದುರ್ಗ ಜಿಲ್ಲಾ ನ್ಯಾಯಾಲಯದ ಆಡಳಿತಾತ್ಮಕ ನ್ಯಾಯಾಧೀಶ ವಿ.ಶ್ರೀಶಾನಂದ ಅವರು ‘ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಗಳ ಪಾತ್ರ ಮತ್ತು ಜವಾಬ್ದಾರಿಗಳು’ ಕುರಿತು ನ್ಯಾಯಮೂರ್ತಿ ಟಿ.ವೆಂಕಟೇಶ್ ನಾಯ್ಕ ‘ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಗಳು ಸರ್ಕಾರಿ ಇಲಾಖೆಗಳೊಂದಿಗೆ ಸಹಯೋಗ ಮತ್ತು ಸಮನ್ವಯ’ ಎಂಬ ವಿಷಯದ ಕುರಿತು ಮಾತನಾಡಿದರು.
ಕಾರ್ಯಾಗಾರದಲ್ಲಿ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಚ್.ಶಶಿಧರ ಶೆಟ್ಟಿ, ಚಿತ್ರದುರ್ಗ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ರೋಣ ವಾಸುದೇವ್, ಸದಸ್ಯ ಕಾರ್ಯದರ್ಶಿ ಎಂ.ವಿಜಯ್ ಹಾಜರಿದ್ದರು.
ಮಾನವೀಯ ಕಳಕಳಿತ ಕರ್ತವ್ಯ ಅತ್ಯಾವಶ್ಯ ನೊಂದವರು ನ್ಯಾಯ ಪಡೆಯುವುದು ಅವರ ಹಕ್ಕು ಭಿನ್ನಾಭಿಪ್ರಾಯ ಬದಿಗೊತ್ತಿ ಕೆಲಸ ಮಾಡಲು ಸಲಹೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.