ADVERTISEMENT

ಹಾಸಿಗೆಗೆ ಆಸ್ಪತ್ರೆ ಎದುರು ಕಾದ ಸೋಂಕಿತ

​ಪ್ರಜಾವಾಣಿ ವಾರ್ತೆ
Published 5 ಮೇ 2021, 15:09 IST
Last Updated 5 ಮೇ 2021, 15:09 IST

ಚಿತ್ರದುರ್ಗ: ಕೋವಿಡ್ ದೃಢಪಟ್ಟು ಆಸ್ಪತ್ರೆಗೆ ಧಾವಿಸುವ ರೋಗಿಗಳು ಹಾಸಿಗೆ ಸಿಗುವವರೆಗೂ ಆವರಣದಲ್ಲೇ ಕಾಯುವ ಸ್ಥಿತಿ ನಿರ್ಮಾಣವಾಗಿದೆ. ಹಿರಿಯೂರಿನ ರೋಗಿಯೊಬ್ಬರು ಬುಧವಾರ ಮಧ್ಯಾಹ್ನ ಒಂದೂವರೆ ಗಂಟೆ ಆಂಬುಲೆನ್ಸ್‌ನಲ್ಲೇ ಕಾದು ಹಾಸಿಗೆ ಪಡೆದಿದ್ದಾರೆ.

ಹಿರಿಯೂರಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರೋಗಿಯೊಬ್ಬರಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದೆ. ಕೂಡಲೇ ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಾಗುವಂತೆ ವೈದ್ಯರು ಸೂಚನೆ ನೀಡಿದ್ದಾರೆ. ಅಲ್ಲಿಂದ ಶಿಫಾರಸು ಮಾಡಲಾದ ರೋಗಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ಹಾಸಿಗೆ ಸಿಗುವುದು ದುಸ್ತರವಾಯಿತು.

ಆಮ್ಲಜನಕ ಸೌಲಭ್ಯ ಹೊಂದಿದ ಆಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ಬಂದ ರೋಗಿಗೆ ಪ್ರವೇಶ ಸಿಗಲಿಲ್ಲ. ಹಾಸಿಗೆ ಖಾಲಿ ಆಗುವ ವರೆಗೆ ಕಾಯುವಂತೆ ವೈದ್ಯರು ಸೂಚನೆ ನೀಡಿದರು. ಒಂದೂವರೆ ಗಂಟೆಯ ಬಳಿಕ ಆಂಬುಲೆನ್ಸ್‌ನಲ್ಲಿದ್ದ ಆಮ್ಲಜನಕವೂ ಖಾಲಿಯಾಗುವ ಹಂತಕ್ಕೆ ಬಂದಿತು. ಆಕ್ರೋಶಗೊಂಡ ರೋಗಿಯ ಸಂಬಂಧಿಕರು ಆಸ್ಪತ್ರೆಯ ಅಧಿಕಾರಿಗಳ ವಿರುದ್ಧ ಹರಿಹಾಯ್ದರು. ಬಳಿಕ ಅವರಿಗೆ ಹಾಸಿಗೆ ಸಿಕ್ಕಿತು.

ADVERTISEMENT

ಇಬ್ಬರು ಸಾವು:ಹಳೆ ಕಲ್ಲಹಳ್ಳಿ ಗ್ರಾಮದ ಲಕ್ಷ್ಮಿದೇವಿ (52) ಸೇರಿ ಇಬ್ಬರು ಕೋವಿಡ್‌ನಿಂದ ಮೃತಪಟ್ಟಿದ್ದಾರೆ. ಇದರಿಂದ ಮೃತರ ಸಂಖ್ಯೆ 83ಕ್ಕೆ ಏರಿಕೆಯಾಗಿದೆ.

ಲಕ್ಷ್ಮಿದೇವಿ ಅವರು ಐದು ದಿನಗಳ ಹಿಂದೆ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆಗೆ ದಾಖಲಾದ ಕೊಠಡಿಯ ಬಾತ್‌ರೂಮಿನಲ್ಲಿ ಆಯತಪ್ಪಿ ಬಿದ್ದಿದ್ದರು ಎನ್ನಲಾಗಿದೆ. ಸೋಂಕು ತಗಲುವುದಕ್ಕೂ ಮೊದಲು ಇವರು ಲಸಿಕೆ ಪಡೆದಿದ್ದರು.

‘ಜಿಲ್ಲಾ ಆಸ್ಪತ್ರೆಯಲ್ಲಿ ಕೋವಿಡ್‌ ರೋಗಿಗಳನ್ನು ಸರಿಯಾಗಿ ಆರೈಕೆ ಮಾಡುತ್ತಿಲ್ಲ. ಹಣ ನೀಡಿದವರಿಗೆ ಮಾತ್ರ ಉತ್ತಮ ಚಿಕಿತ್ಸೆ ಸಿಗುತ್ತಿದೆ’ ಎಂದು ಲಕ್ಷ್ಮಿದೇವಿ ಅವರ ಪುತ್ರ ಅಂಜನಿ ಆರೋಪ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.