ADVERTISEMENT

ಅಂಬುಲೆನ್ಸ್‌ನಲ್ಲಿ ರಾತ್ರಿ ಕಳೆದ ಸೋಂಕಿತೆ

ಆಮ್ಲಜನಕ ಸೌಲಭ್ಯದ ಹಾಸಿಗೆಗೆ ಕೋವಿಡ್‌ ರೋಗಿಗಳ ಪರದಾಟ

​ಪ್ರಜಾವಾಣಿ ವಾರ್ತೆ
Published 15 ಮೇ 2021, 15:38 IST
Last Updated 15 ಮೇ 2021, 15:38 IST
ಚಿತ್ರದುರ್ಗದ ಜಿಲ್ಲಾ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ನೆಲದ ಮೇಲೆ ಮಲಗಿದ್ದ ಕೊರೊನಾ ಸೋಂಕಿತ ವೀರಕರಿಯಪ್ಪ.
ಚಿತ್ರದುರ್ಗದ ಜಿಲ್ಲಾ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ನೆಲದ ಮೇಲೆ ಮಲಗಿದ್ದ ಕೊರೊನಾ ಸೋಂಕಿತ ವೀರಕರಿಯಪ್ಪ.   

ಚಿತ್ರದುರ್ಗ: ಜಿಲ್ಲಾ ಆಸ್ಪತ್ರೆಯಲ್ಲಿ ಹಾಸಿಗೆ ಸಿಗದೇ ಕಂಗೆಟ್ಟ ಕೊರೊನಾ ಸೋಂಕಿತೆಯೊಬ್ಬರು ಆಂಬುಲೆನ್ಸ್‌ನಲ್ಲೇ ಆಮ್ಲಜನಕದ ಆಸರೆಯಲ್ಲಿ ಶುಕ್ರವಾರ ರಾತ್ರಿ ಕಳೆದಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಅವರ ಸೂಚನೆಯ ಬಳಿಕವೂ ಹಾಸಿಗೆಗೆ ಪರದಾಡುವ ಸ್ಥಿತಿ ಇನ್ನೂ ನಿವಾರಣೆ ಆಗಿಲ್ಲ.

ಹೊಸದುರ್ಗ ಪಟ್ಟಣದ ವನಿತಾ ಎಂಬುವರಿಗೆ ಸೋಂಕು ಕಾಣಿಸಿಕೊಂಡಿತ್ತು. ಆರೋಗ್ಯ ಸ್ಥಿತಿ ಹದಗೆಟ್ಟ ಪರಿಣಾಮ ಚಿಕಿತ್ಸೆಗಾಗಿ ಆಸ್ಪತ್ರೆಗಳಿಗೆ ಅಲೆದಿದ್ದಾರೆ. ರಕ್ತದಲ್ಲಿನ ಆಮ್ಲಜನಕ ಪ್ರಮಾಣ ಕಡಿಮೆ ಇರುವುದರಿಂದ ಆಮ್ಲಜನಕ ಸೌಲಭ್ಯ ಹೊಂದಿದ ಹಾಸಿಗೆಯ ಅಗತ್ಯವಿತ್ತು.

ಶುಕ್ರವಾರ ಮಧ್ಯರಾತ್ರಿ ಆರೋಗ್ಯ ಇನ್ನಷ್ಟು ಹದಗೆಟ್ಟಿದ್ದರಿಂದ ವನಿತಾ ಅವರನ್ನು ಆಂಬುಲೆನ್ಸ್‌ನಲ್ಲಿ ಚಿತ್ರದುರ್ಗಕ್ಕೆ ತರಲಾಗಿದೆ. ಜಿಲ್ಲಾ ಆಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆಯಲ್ಲಿ ಹಾಸಿಗೆ ಅಲೆದಾಡಿದ್ದಾರೆ. ಹಾಸಿಗೆ ಸಿಗದೇ ಜಿಲ್ಲಾ ಆಸ್ಪತ್ರೆಯ ಮುಂಭಾಗದಲ್ಲೇ ಆಂಬುಲೆನ್ಸ್‌ನಲ್ಲಿ ರಾತ್ರಿ ಕಳೆದಿದ್ದಾರೆ. ತೀವ್ರವಾಗಿ ಅಸ್ವಸ್ಥಗೊಂಡ ಅವರು ನರಳಾಡುತ್ತಿದ್ದ ದೃಶ್ಯ ಮನಕಲಕುವಂತೆ ಇತ್ತು.

ADVERTISEMENT

ನೆಲವೇ ಹಾಸಿಗೆ:ಚಳ್ಳಕೆರೆ ತಾಲ್ಲೂಕಿನ ರೆಡ್ಡಿಹಳ್ಳಿಯ ವೀರಕರಿಯಪ್ಪ ಅವರು ಜಿಲ್ಲಾ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಶನಿವಾರ ನೆಲದ ಮೇಲೆಯೇ ಮಲಗಿದ್ದರು. ಹಾಸಿಗೆ ಸಿಗದೇ ತೊಂದರೆ ಅನುಭವಿಸಿದ ಅವರಿಗೆ ರೋಟರಿ ಕ್ಲಬ್ ಸದಸ್ಯರ ನೆರವಿನಿಂದ ಹಾಸಿಗೆ ಸಿಕ್ಕಿದೆ.

ವೀರಕರಿಯಪ್ಪ ಅವರಿಗೆ ನಾಲ್ಕು ದಿನಗಳಿಂದ ಜ್ವರ ಕಾಣಿಸಿಕೊಂಡಿತ್ತು. ಕೋವಿಡ್‌ ಪರೀಕ್ಷೆ ನಡೆಸಿದಾಗ ಸೋಂಕು ಇರುವುದು ಖಚಿತವಾಗಿತ್ತು. ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಕುಟುಂಬದ ಸದಸ್ಯರು ಚಳ್ಳಕೆರೆ ಆಸ್ಪತ್ರೆಗೆ ಕರೆತಂದಿದ್ದರು. ವೈದ್ಯರ ಸಲಹೆ ಮೇರೆಗೆ ಅವರನ್ನು ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ಕರೆತರಲಾಗಿತ್ತು.

ಸಂಜೆ ನಾಲ್ಕು ಗಂಟೆಗೆ ಆಸ್ಪತ್ರೆಗೆ ಬಂದ ಸೋಂಕಿತರಿಗೆ ಹಾಸಿಗೆ ಸೌಲಭ್ಯವಿಲ್ಲ ಎಂಬ ಉತ್ತರ ಸಿಕ್ಕಿತು. ತುರ್ತು ನಿಗಾ ಘಟಕದ ಹೊರಗೆ ಕಾಯುತ್ತಿದ್ದ ಸೋಂಕಿತರು ನೆಲದ ಮೇಲೆಯೇ ಮಲಗಿದರು. ಅವರ ದಯನೀಯ ಸ್ಥಿತಿಯನ್ನು ಕಂಡು ಅನೇಕರು ಮರುಗಿದರು.

‘ಜಿಲ್ಲಾಧಿಕಾರಿ ಕಚೇರಿಯನ್ನು ಸಂಪರ್ಕಿಸಿದ ಬಳಿಕ ಹಾಸಿಗೆ ಸೌಲಭ್ಯ ಸಿಕ್ಕಿತು. ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ’ ಎಂದು ಚಳ್ಳಕೆರೆಯ ತಿಪ್ಪೇಸ್ವಾಮಿ ಎಂಬುವರು ಮಾಹಿತಿ ನೀಡಿದ್ದಾರೆ.

ನೆರವಾದ ಸಚಿವ

ಹಾಸಿಗೆ ಸಿಗದೇ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆಯುತ್ತಿದ್ದ ಸಿದ್ದಾಪುರ ಗ್ರಾಮದ ನಾಗಭೂಷಣ್‌ ಎಂಬುವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ನೆರವಾಗಿದ್ದಾರೆ.

‘ಎರಡು ದಿನಗಳಿಂದ ಹಾಸಿಗೆಗಾಗಿ ಪರದಾಟ ನಡೆಸಿದೆವು. ಜಿಲ್ಲಾ ಆಸ್ಪತ್ರೆ, ಖಾಸಗಿ ಆಸ್ಪತ್ರೆಗಳಿಗೆ ಅಲೆದು ವಿಚಾರಿಸಿದೆವು. ಎಲ್ಲಿಯೂ ಹಾಸಿಗೆ ಖಾಲಿ ಇಲ್ಲ ಎಂದೇ ಹೇಳಿದರು. ಅಂತಿಮವಾಗಿ ಸಚಿವ ಶ್ರೀರಾಮುಲು ಅವರನ್ನು ಸಂಪರ್ಕಿಸಿದೆ. ಸಚಿವರು ಸೂಚನೆ ನೀಡಿದ ಬಳಿಕ ಜಿಲ್ಲಾ ಆಸ್ಪತ್ರೆಯಲ್ಲಿ ಹಾಸಿಗೆ ವ್ಯವಸ್ಥೆ ಕಲ್ಪಿಸಲಾಯಿತು’ ನಾಗಭೂಷಣ್‌ ಅವರ ಸಹೋದರ ದಯಾಕರ್‌ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.