ADVERTISEMENT

ವಿರೋಧದ ನಡುವೆ ನಡೆಯಿತು ಅಂತ್ಯಕ್ರಿಯೆ

ಕೋವಿಡ್‌ಗೆ ಮತ್ತೊಬ್ಬ ವ್ಯಕ್ತಿ ಸಾವು, ಸೋಂಕಿತರ ಸಂಖ್ಯೆ 130ಕ್ಕೆ ಏರಿಕೆ

​ಪ್ರಜಾವಾಣಿ ವಾರ್ತೆ
Published 14 ಜುಲೈ 2020, 17:09 IST
Last Updated 14 ಜುಲೈ 2020, 17:09 IST
ಚಿತ್ರದುರ್ಗದ ತಿಮ್ಮಣ್ಣನಾಯಕ ಕೆರೆಗೆ ಸಾಗುವ ಮಾರ್ಗದಲ್ಲಿರುವ ಸ್ಮಶಾನದಲ್ಲಿ ಅಂತ್ಯಕ್ರಿಯೆ ನಡೆಸದಂತೆ ಸ್ಥಳೀಯರು ಮಂಗಳವಾರ ಪ್ರತಿಭಟನೆ ನಡೆಸಿದರು.
ಚಿತ್ರದುರ್ಗದ ತಿಮ್ಮಣ್ಣನಾಯಕ ಕೆರೆಗೆ ಸಾಗುವ ಮಾರ್ಗದಲ್ಲಿರುವ ಸ್ಮಶಾನದಲ್ಲಿ ಅಂತ್ಯಕ್ರಿಯೆ ನಡೆಸದಂತೆ ಸ್ಥಳೀಯರು ಮಂಗಳವಾರ ಪ್ರತಿಭಟನೆ ನಡೆಸಿದರು.   

ಚಿತ್ರದುರ್ಗ: ಕೊರೊನಾ ಸೋಂಕಿನಿಂದ ಮೃತಪಟ್ಟ 61 ವರ್ಷದ ವ್ಯಕ್ತಿಯ ಅಂತ್ಯಕ್ರಿಯೆ ಇಲ್ಲಿನ ತಿಮ್ಮಣ್ಣನಾಯಕ ಕರೆ ಸಮೀಪದ ಸ್ಮಶಾನದಲ್ಲಿ ಸ್ಥಳೀಯರ ಭಾರಿ ವಿರೋಧದ ನಡುವೆ ಮಂಗಳವಾರ ರಾತ್ರಿ ನೆರವೇರಿತು.

ಮೂಲತಃ ಚಳ್ಳಕೆರೆಯ ಪಿ–1877 ಸೋಂಕಿತ ಜುಲೈ 3ರಂದು ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆಗೆ ಸ್ಪಂದಿಸದ ಇವರು ಮಂಗಳವಾರ ಮೃತಪಟ್ಟಿದ್ದರು. ಕೋವಿಡ್‌–19ನಿಂದ ಸಾವನ್ನಪ್ಪಿದ ಜಿಲ್ಲೆಯ ಎರಡನೇ ಪ್ರಕರಣವಾಗಿದೆ.

ಮೃತ ವ್ಯಕ್ತಿಯ ಅಂತ್ಯಕ್ರಿಯೆಗೆ ಸ್ಮಶಾನದಲ್ಲಿ ಸಿದ್ಧತೆ ಆರಂಭವಾಗುತ್ತಿದ್ದಂತೆ ಸ್ಥಳೀಯರು ಜಮಾಯಿಸಿದರು. ಜಟ್‌ಪಟ್‌ ನಗರ ವೃತ್ತ, ಧಾರುಕ ಬಡಾವಣೆಯಿಂದ ಸ್ಮಶಾನದತ್ತ ಸಾಗುವ ಮಾರ್ಗದಲ್ಲಿ ಕಲ್ಲು, ಮರದ ದಿಮ್ಮಿಗಳನ್ನು ಇಟ್ಟು ವಿರೋಧ ವ್ಯಕ್ತಪಡಿಸಿದರು. ಅಧಿಕಾರಿಗಳ ವಾಹನಗಳನ್ನು ತಡೆದು ಆಕ್ರೋಶ ಹೊರಹಾಕಿದರು.

ADVERTISEMENT

‘ಸ್ಮಶಾನದ ಸಮೀಪ ಜನವಸತಿ ಪ್ರದೇಶದಿವಿದೆ. ಹಲವು ಜನರು ನಿತ್ಯ ವಾಯು ವಿಹಾರಕ್ಕೆ ಇದೇ ಮಾರ್ಗದಲ್ಲಿ ಸಾಗುತ್ತಾರೆ. ನಾಯಿ, ಹಂದಿಗಳ ಉಪಟಳ ಹೆಚ್ಚಾಗಿದ್ದು, ಹೂತಿಟ್ಟ ಶವ ಕೆದರುವ ಸಾಧ್ಯತೆ ಇದೆ. ಹೀಗಾಗಿ, ಬೇರೆಡೆ ಅಂತ್ಯಕ್ರಿಯೆ ನಡೆಸಬೇಕು’ ಎಂದು ಪಟ್ಟುಹಿಡಿದರು.

ಸ್ಥಳಕ್ಕೆ ಧಾವಿಸಿದ ತಹಶೀಲ್ದಾರ್‌ ವೆಂಕಟೇಶಯ್ಯ ಅವರು ಸ್ಥಳೀಯರ ಮನವೊಲಿಸುವ ಪ್ರಯತ್ನ ಮಾಡಿದರು. ಕೋವಿಡ್‌ ಮಾರ್ಗಸೂಚಿಯ ಪ್ರಕಾರ ನಡೆಯುವ ಅಂತ್ಯಕ್ರಿಯೆಯಿಂದ ತೊಂದರೆ ಆಗದು ಎಂಬುದನ್ನು ಮನದಟ್ಟು ಮಾಡಿಸಲು ಪ್ರಯತ್ನಿಸಿದರು. ಎಂಟು ಅಡಿ ಆಳಕ್ಕೆ ಗುಂಡಿ ತೆಗೆದು ಶವಸಂಸ್ಕಾರ ಮಾಡಲಾಗುತ್ತಿದ್ದು, ಆತಂಕಪಡುವ ಅಗತ್ಯವಿಲ್ಲ ಎಂದು ಮನವಿ ಮಾಡಿದರು.

ಆದರೆ, ಪ್ರತಿಭಟನಾಕಾರರು ಇದಕ್ಕೆ ಮಣಿಯಲಿಲ್ಲ. ಡಿವೈಎಸ್‌ಪಿ ಪಾಂಡುರಂಗ ನೇತೃತ್ವದಲ್ಲಿ ಸ್ಥಳಕ್ಕೆ ಧಾವಿಸಿದ ಪೊಲೀಸರೊಂದಿಗೆ ಜನರು ವಾಗ್ವಾದಕ್ಕೆ ಇಳಿದರು. ಲಾಠಿ ಬೀಸುವ ಮೂಲಕ ಗುಂಪು ಚದುರಿಸಿದ ಪೊಲೀಸರು ಅಂತ್ಯಕ್ರಿಯೆಗೆ ಅವಕಾಶ ಕಲ್ಪಿಸಿದರು. ಕೆಲವರನ್ನು ಪೊಲೀಸರು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದರು. ಕುಟುಂಬದ ಸದಸ್ಯರು ದೂರದಿಂದಲೇ ಅಂತ್ಯಕ್ರಿಯೆಗೆ ಸಾಕ್ಷಿಯಾದರು.

10 ಜನರಿಗೆ ಕೋವಿಡ್

ಜಿಲ್ಲೆಯಲ್ಲಿ ಮಂಗಳವಾರದ ಮತ್ತೆ 10 ಜನರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಇದರಿಂದಾಗಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 130 ಕ್ಕೆ ಏರಿಕೆಯಾಗಿದೆ.

ಚಿತ್ರದುರ್ಗದ 52 ವರ್ಷದ ಪುರುಷ, 40 ವರ್ಷದ ಪುರುಷ, 25 ವರ್ಷದ ಪುರುಷ, 36 ವರ್ಷದ ಪುರುಷ, ಹಿರಿಯೂರಿನ 25 ವರ್ಷದ ಮಹಿಳೆ, 34 ವರ್ಷದ ಮಹಿಳೆ, ಹಿರಿಯೂರು ತಾಲ್ಲೂಕಿನ 21 ವರ್ಷದ ಪುರುಷ, ಹೊಸದುರ್ಗದ 50 ವರ್ಷದ ಪುರುಷ, ಹೊಸದುರ್ಗ ತಾಲ್ಲೂಕಿನ 29 ವರ್ಷದ ಪುರುಷ ಹಾಗೂ ಮೊಳಕಾಲ್ಮೂರಿನ 28 ವರ್ಷದ ಪುರಷರಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ.

ಮಂಗಳವಾರ 95 ಜನರ ಗಂಟಲು, ಮೂಗು ದ್ರವ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಇದರಲ್ಲಿ 10 ಜನರಿಗೆ ಕೋವಿಡ್ ಇರುವುದು ಗೊತ್ತಾಗಿದೆ. ಈಗಾಗಲೇ 83 ಜನರು ಗುಣಮುಖರಾಗಿ ಬಿಡುಗಡೆ ಹೊಂದಿದ್ದು, 45 ಸಕ್ರಿಯ ಪ್ರಕರಣಗಳಿವೆ. ಹಿಮ್ಮತ್‌ ನಗರ, ಕರುವಿನಕಟ್ಟೆ ವೃತ್ತ, ಮುನ್ಸಿಪಲ್‌ ಕಾಲೊನಿ, ಹಳಿಯೂರು ಹಾಗೂ ಜಿಲ್ಲಾ ಆಸ್ಪತ್ರೆಯ ಕ್ವಾಟ್ರಸ್‌ ಅನ್ನು ಕಂಟೈನ್‌ಮೆಂಟ್‌ ವಲಯವಾಗಿ ಮಾಡಲಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.