ADVERTISEMENT

ಚಿತ್ರದುರ್ಗ: ಆರು ಜನರಿಗೆ ಕೊರೊನಾ ಸೋಂಕು ದೃಢ

ಜಿಲ್ಲೆಯಲ್ಲಿ 89ಕ್ಕೆ ಏರಿದ ಕೋವಿಡ್‌ ಪ್ರಕರಣ

​ಪ್ರಜಾವಾಣಿ ವಾರ್ತೆ
Published 6 ಜುಲೈ 2020, 16:46 IST
Last Updated 6 ಜುಲೈ 2020, 16:46 IST
   

ಚಿತ್ರದುರ್ಗ: ಜಿಲ್ಲೆಯಲ್ಲಿ ಮತ್ತೆ ಆರು ಜನರಿಗೆ ಕೊರೊನಾ ಸೋಂಕು ಸೋಮವಾರ ದೃಢಪಟ್ಟಿದ್ದು, ರೋಗಿಗಳ ಸಂಖ್ಯೆ 89ಕ್ಕೆ ಏರಿಕೆಯಾಗಿದೆ.

ಸೋಮವಾರ 101 ಜನರ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಈ ಪೈಕಿ ಆರು ಜನರಿಗೆ ಕೋವಿಡ್‌ ಖಚಿತವಾಗಿದೆ. ಚಿತ್ರದುರ್ಗದಲ್ಲಿ ಒಬ್ಬರು, ಚಳ್ಳಕೆರೆ ನಾಲ್ಕು ಹಾಗೂ ಮೊಳಕಾಲ್ಮುರು ತಾಲ್ಲೂಕಿನಲ್ಲಿ ಒಬ್ಬರಿಗೆ ಸೋಂಕು ಇರುವುದು ಖಚಿತವಾಗಿದೆ.

ಚಿತ್ರದುರ್ಗದ 50 ವರ್ಷದ ಮಹಿಳೆ, ಚಳ್ಳಕೆರೆಯಲ್ಲಿ 63 ವರ್ಷದ ಪುರುಷ, 52 ವರ್ಷದ ಮಹಿಳೆ, 65 ವರ್ಷದ ಪುರುಷ, 39 ವರ್ಷದ ಪುರುಷ ಹಾಗೂ ಮೊಳಕಾಲ್ಮೂರು ತಾಲ್ಲೂಕಿನಲ್ಲಿ 27 ವರ್ಷದ ಯುವಕನಿಗೆ ಕೋವಿಡ್ ಸೋಂಕು ಇರುವುದು ಪತ್ತೆಯಾಗಿದೆ. ಈವರೆಗೆ 54 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, 35 ಸಕ್ರಿಯ ಪ್ರಕರಣಗಳಿವೆ.

ADVERTISEMENT

ಸದ್ಯ ಜಿಲ್ಲೆಯಲ್ಲಿ 20 ಕಂಟೈನ್ಮೆಂಟ್ ವಲಯಗಳಿವೆ. ಸೋಂಕಿತರಿಗೆ ಸಂಬಂಧಿಸಿದಂತೆ ಒಟ್ಟು 1,619 ಜನ ಪ್ರಾಥಮಿಕ ಹಾಗೂ ದ್ವಿತೀಯ ಹಂತದ ಸಂಪರ್ಕಿತರನ್ನು ಗುರುತಿಸಲಾಗಿದೆ. ಚಿತ್ರದುರ್ಗದ ಕೋವಿಡ್ ಆಸ್ಪತ್ರೆಯಲ್ಲಿ 12, ಭರಮಸಾಗರದಲ್ಲಿ 4, ಹಿರಿಯೂರು ತಾಲ್ಲೂಕು ಧರ್ಮಪುರದ ನಿಗದಿತ ಕೋವಿಡ್ ಹೆಲ್ತ್ ಕೇರ್ ಸೆಂಟರ್‌ನಲ್ಲಿ 10, ಚಳ್ಳಕೆರೆ ತಾಲ್ಲೂಕು ನಾಯಕನಹಟ್ಟಿಯಲ್ಲಿ 1, ಪರಶುರಾಂಪುರದಲ್ಲಿ 2, ಮೊಳಕಾಲ್ಮೂರು ತಾಲ್ಲೂಕು ರಾಂಪುರದಲ್ಲಿ 4 ಹಾಗೂ ಹೊಸದುರ್ಗ ತಾಲ್ಲೂಕು ಬೆಲಗೂರಿನ ನಿಗದಿತ ಕೋವಿಡ್ ಹೆಲ್ತ್ ಕೇರ್ ಸೆಂಟರ್‌ನಲ್ಲಿ ಇಬ್ಬರು ಸೋಂಕಿತರನ್ನು ದಾಖಲಿಸಲಾಗಿದೆ.

ಭೀತಿ ಸೃಷ್ಟಿಸಿದ ಸಾವು:ಇಲ್ಲಿನ ಕೃಷ್ಣಾ ನರ್ಸಿಂಗ್‌ ಹೋಂನಲ್ಲಿ ಸೋಮವಾರ ಮೃತಪಟ್ಟ ವ್ಯಕ್ತಿಗೆ ಕೋವಿಡ್‌ ಇತ್ತು ಎಂಬ ವದಂತಿ ಹಬ್ಬಿದ ಪರಿಣಾಮ ನಗರದಲ್ಲಿ ಆತಂಕ ಸೃಷ್ಟಿಯಾಗಿತ್ತು.

ಮೂಲತಃ ಶಿಕಾರಿಪುರದ ವ್ಯಕ್ತಿಯೊಬ್ಬರು ಬೆಂಗಳೂರಿಗೆ ಹೊರಟಿದ್ದಾಗ ಅನಾರೋಗ್ಯ ಕಾಣಿಸಿಕೊಂಡಿತ್ತು. ಹೀಗಾಗಿ ಅವರನ್ನು ಕೃಷ್ಣಾ ನರ್ಸಿಂಗ್‌ ಹೋಂಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದರು. ಪಿ‍ಪಿಪಿ ಕಿಟ್‌ ಧರಿಸಿದ ಆಸ್ಪತ್ರೆ ಸಿಬ್ಬಂದಿ ಮೃತ ದೇಹವನ್ನು ಆಂಬುಲೆನ್ಸ್‌ಗೆ ರವಾನಿಸಿದರು.

ಇದನ್ನು ನೋಡಿದ ಜನರು ಮೊಬೈಲ್‌ನಲ್ಲಿ ದೃಶ್ಯ ಸೆರೆಹಿಡಿದರು. ಇದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತು. ಜಿಲ್ಲಾ ಆಸ್ಪತ್ರೆಯ ಶವಾಗಾರಕ್ಕೆ ಸ್ಥಳಾಂತರಿಸಿ ಕೋವಿಡ್‌ ಪರೀಕ್ಷೆಗೆ ಒಳಪಡಿಸಲಾಗಿತ್ತು. ಮೃತ ವ್ಯಕ್ತಿಗೆ ಸೋಂಕು ಇರಲಿಲ್ಲ ಎಂಬುದು ಪ್ರಯೋಗಾಲಯದ ವರದಿಯಿಂದ ದೃಢಪಟ್ಟಿದೆ. ಹೃದಯ ಸಂಬಂಧಿ ಕಾಯಿಲೆಯಿಂದ ಮೃತಪಟ್ಟಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ.

ಕೋವಿಡ್‌ ಗೆದ್ದ 96 ವರ್ಷದ ವೃದ್ದೆ:ಹಿರಿಯೂರಿನ 96 ವರ್ಷದ ವೃದ್ದೆಯೊಬ್ಬರು ಕೊರೊನಾ ಸೋಂಕಿನಿಂದ ಗುಣಮುಖರಾಗಿ ಸೋಮವಾರ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಪ್ರಾಥಮಿಕ ಸಂಪರ್ಕಿತರಾಗಿದ್ದ ವೃದ್ದೆಯಲ್ಲಿ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿದ್ದವು. ಜೂನ್‌ 25ರಂದು ಇವರು ಜಿಲ್ಲಾ ಆಸ್ಪತ್ರೆಗೆ ಕೋವಿಡ್‌ ಪರೀಕ್ಷೆಗೆ ಒಳಗಾಗಿದ್ದರು. ಮರುದಿನ ಬಂದ ವರದಿಯಲ್ಲಿ ಸೋಂಕು ಇರುವುದು ದೃಢಪಟ್ಟಿತ್ತು. ಕೊರೊನಾ ಸೋಂಕಿನಿಂದ ಗುಣಮುಖರಾದ ರಾಜ್ಯದ ಎರಡನೇ ಅತಿ ಹಿರಿಯ ಮಹಿಳೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.