ADVERTISEMENT

ಕೊರೊನಾ ಸೋಂಕು ತಗುಲಿದ ಶಂಕೆ: ಕುಟುಂಬಕ್ಕೆ ಬಹಿಷ್ಕಾರ ಹಾಕಲು ಯತ್ನ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2020, 14:47 IST
Last Updated 28 ಮಾರ್ಚ್ 2020, 14:47 IST
ಚಿತ್ರ28ಡಿಪಿಆರ್1ಇಪಿ:ಧರ್ಮಪುರ ಸಮೀಪದ ಹೂವಿನಹೊಳೆಯಲ್ಲಿ ಕೊರೊನಾ ಶಂಕೆಯಿಂದ ಗ್ರಾಮಸ್ಥರ ಭಹಿಷ್ಕಾರಕ್ಕೆ ಒಳಗಾಗುತ್ತಿದ್ದ ಬಾಬುಸಾಬ್ ಕುಟುಂಬದವರನ್ನು ತಾಲ್ಲೂಕು ವೈದ್ಯಾಧಿಕಾರಿಗಳ ತಂಡ ಮತ್ತು ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ತಪಾಸಣೆಗೆ ಒಳಪಡಿಸಿದರು.
ಚಿತ್ರ28ಡಿಪಿಆರ್1ಇಪಿ:ಧರ್ಮಪುರ ಸಮೀಪದ ಹೂವಿನಹೊಳೆಯಲ್ಲಿ ಕೊರೊನಾ ಶಂಕೆಯಿಂದ ಗ್ರಾಮಸ್ಥರ ಭಹಿಷ್ಕಾರಕ್ಕೆ ಒಳಗಾಗುತ್ತಿದ್ದ ಬಾಬುಸಾಬ್ ಕುಟುಂಬದವರನ್ನು ತಾಲ್ಲೂಕು ವೈದ್ಯಾಧಿಕಾರಿಗಳ ತಂಡ ಮತ್ತು ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ತಪಾಸಣೆಗೆ ಒಳಪಡಿಸಿದರು.   

ಧರ್ಮಪುರ: ಕೊರೊನಾ ಸೋಂಕು ತಗುಲಿದ ಶಂಕೆಯ ಮೇರೆಗೆ ಕುಟುಂಬವೊಂದಕ್ಕೆ ಬಹಿಷ್ಕಾರ ಹಾಕಲು ಯತ್ನಿಸಿದ ಘಟನೆ ಇಲ್ಲಿಗೆ ಸಮೀಪದ ಹೂವಿನಹೊಳೆ ಗ್ರಾಮದಲ್ಲಿ ಶನಿವಾರ ನಡೆದಿದೆ. ಸಕಾಲಕ್ಕೆ ಮಧ್ಯಪ್ರವೇಶ ಮಾಡಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಈ ಪ್ರಯತ್ನವನ್ನು ತಡೆದಿದ್ದಾರೆ.

ತುಮಕೂರು ಜಿಲ್ಲಾ ಆಸ್ಪತ್ರೆಯಲ್ಲಿ ‘ಕೋವಿಡ್‌–19’ ಬಲಿಯಾದ ಶಿರಾ ನಗರದ 65 ವರ್ಷದ ವ್ಯಕ್ತಿ ಹೂವಿನಹೊಳೆಗೆ ಬಂದು ಹೋಗಿದ್ದರು ಎಂಬ ವದಂತಿಯ ಮೇರೆಗೆ ಇಂತಹ ಘಟನೆ ನಡೆದಿದೆ. ಈ ವ್ಯಕ್ತಿಯ ಸಂಪರ್ಕದಲ್ಲಿದ್ದ ಕುಟುಂಬಕ್ಕೂ ಸೋಂಕು ತಗುಲಿದೆ ಎಂಬುದು ಗ್ರಾಮಸ್ಥರ ಅನುಮಾನ.

ಶನಿವಾರ ಬೆಳಿಗ್ಗೆ ಶಂಕಿತ ಕುಟುಂಬದ ಮನೆಯ ಬಳಿ ಜಮಾಯಿಸಿದ ಗ್ರಾಮಸ್ಥರು ಊರಿನಿಂದ ಬಹಿಷ್ಕಾರ ಹಾಕಿರುವುದಾಗಿ ತಿಳಿಸಿದ್ದಾರೆ. ಕೂಡಲೇ ಗ್ರಾಮ ತೊರೆಯುವಂತೆ ಒತ್ತಾಯಿಸಿದ್ದಾರೆ. ಇದಕ್ಕೆ ಕುಟುಂಬ ಒಪ್ಪದೇ ಇದ್ದ ನಂತರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ADVERTISEMENT

ತಾಲ್ಲೂಕು ವೈದ್ಯಾಧಿಕಾರಿ ಡಾ.ವೆಂಕಟೇಶ್ ಹಾಗೂಅಬ್ಬಿನಹೊಳೆ ಪಿಎಸ್ಐ ಚಂದ್ರಶೇಖರ್ ನೇತೃತ್ವದಲ್ಲಿ ಗ್ರಾಮಕ್ಕೆ ಧಾವಿಸಿದ ತಂಡ ಗ್ರಾಮಸ್ಥರ ಮನವೊಲಿಸಿದೆ. ಕುಟುಂಬದ ಐವರು ಸದಸ್ಯರನ್ನು ತಪಾಸಣೆಗೆ ಒಳಪಡಿಸಿದೆ. ಆದರೆ, ಯಾರಲ್ಲೂ ರೋಗ ಲಕ್ಷಣಗಳು ಕಂಡುಬಂದಿಲ್ಲ. ‘ಕೋವಿಡ್‌–19’ ಬಲಿಯಾದ ವ್ಯಕ್ತಿಗೂ ಹಾಗೂ ಕುಟುಂಬಕ್ಕೂ ಯಾವುದೇ ಸಂಬಂಧವಿಲ್ಲ ಎಂಬುದು ಖಾತ್ರಿಯಾಗಿದೆ. ಗ್ರಾಮಸ್ಥರ ಅನುಮಾನವನ್ನು ನಿವಾರಿಸುವ ಉದ್ದೇಶದಿಂದ 14 ದಿನಗಳ ಕಾಲ ಮನೆಯಲ್ಲೇ ಪ್ರತ್ಯೇಕವಾಗಿ ವಾಸ ಮಾಡುವಂತೆ ಸೂಚನೆ ನೀಡಲಾಗಿದೆ.

‘ಕೋವಿಡ್‌–19ಗೆ ಬಲಿಯಾದ ಶಿರಾ ನಗರದ ವ್ಯಕ್ತಿಯ ಸಂಪರ್ಕದಲ್ಲಿದ್ದವರು ತಕ್ಷಣ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ಈ ಬಗ್ಗೆ ಸಾರ್ವಜನಿಕರು ಆರೋಗ್ಯ ಇಲಾಖೆಯ ಗಮನಕ್ಕೆ ತರಬೇಕು’ ಎಂದು ಡಾ.ವೆಂಕಟೇಶ್‌ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.