ADVERTISEMENT

ಚಿತ್ರದುರ್ಗ | ಕರ್ಫ್ಯೂನಲ್ಲಿ ಜೋಕಾಲಿ ಆಡಿ ನಲಿದರು

ತಿಮ್ಮಣ್ಣನಾಯಕ ಕೆರೆ ಅಂಗಳದಲ್ಲಿ ಸಾರ್ವಜನಿಕರ ವಿಹಾರ

​ಪ್ರಜಾವಾಣಿ ವಾರ್ತೆ
Published 10 ಜನವರಿ 2022, 5:11 IST
Last Updated 10 ಜನವರಿ 2022, 5:11 IST
ಚಿತ್ರದುರ್ಗದ ಹೊರವಲಯದ ತಿಮ್ಮಣ್ಣ ನಾಯಕ ಕೆರೆ ಅಂಗಳದಲ್ಲಿ ಮರಕ್ಕೆ ಭಾನುವಾರ ಜೋಕಾಲಿ ಕಟ್ಟಿ ನಲಿದ ಜನರು. ಚಿತ್ರ–ವಿ.ಚಂದ್ರಪ್ಪ
ಚಿತ್ರದುರ್ಗದ ಹೊರವಲಯದ ತಿಮ್ಮಣ್ಣ ನಾಯಕ ಕೆರೆ ಅಂಗಳದಲ್ಲಿ ಮರಕ್ಕೆ ಭಾನುವಾರ ಜೋಕಾಲಿ ಕಟ್ಟಿ ನಲಿದ ಜನರು. ಚಿತ್ರ–ವಿ.ಚಂದ್ರಪ್ಪ   

ಚಿತ್ರದುರ್ಗ: ಕೋವಿಡ್‌ ನಿಯಂತ್ರಣಕ್ಕೆ ಸರ್ಕಾರ ಅನುಷ್ಠಾನಗೊಳಿಸಿದ ವಾರಾಂತ್ಯದ ಕರ್ಫ್ಯೂನಲ್ಲಿ ಅನೇಕರು ಭಾನುವಾರದ ಸಮಯವನ್ನು ವಿಹಾರಕ್ಕೆ ಬಳಸಿಕೊಂಡರು. ತಿಮ್ಮಣ್ಣನಾಯಕ ಕೆರೆಯ ಅಂಗಳದಲ್ಲಿ ಮರಗಳಿಗೆ ಜೋಕಾಲಿ ಕಟ್ಟಿ ಸಂಭ್ರಮಿಸಿದರು.

ಶನಿವಾರ ಕಟ್ಟುನಿಟ್ಟಾಗಿ ಅನುಷ್ಠಾನಗೊಂಡಿದ್ದ ವಾರಾಂತ್ಯದ ಕರ್ಫ್ಯೂ ನಿಯಮ ಭಾನುವಾರ ಕೊಂಚ ಸಡಿಲಗೊಂಡಿತ್ತು. ವಾಹನ ಮತ್ತು ಜನಸಂಚಾರ ಹೆಚ್ಚಿತ್ತು. ಈ ಅವಕಾಶವನ್ನು ಬಳಸಿಕೊಂಡ ಬಹುತೇಕರು ನಗರದ ಹೊರಭಾಗಕ್ಕೆ ತೆರಳಿ ವಿಹಾರ ನಡೆಸಿದರು. ಇದರಿಂದ ತಿಮ್ಮಣ್ಣನಾಯಕ ಕೆರೆ ಅಂಗಳ ಸಾರ್ವಜನಿಕರಿಂದ ಭರ್ತಿಯಾಗಿತ್ತು.

ಕರ್ಫ್ಯೂ ಸಮಯದಲ್ಲಿ ಜನರು ಮನೆಯಲ್ಲೇ ಉಳಿಯುವಂತೆ ಪೊಲೀಸರು ಮನವಿ ಮಾಡಿದ್ದರು. ಅನಗತ್ಯವಾಗಿ ಹೊರಗೆ ಸಂಚರಿಸುವವರಿಂದ ದಂಡ ವಸೂಲಿ ಮಾಡುವುದಾಗಿ ಎಚ್ಚರಿಕೆ ನೀಡಿದ್ದರು. ಅನಿವಾರ್ಯ ಸಂದರ್ಭ ಹಾಗೂ ಅಗತ್ಯ ವಸ್ತುಗಳ ಖರೀದಿಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ಭಾನುವಾರ ಮಧ್ಯಾಹ್ನದವರೆಗೆ ನಿಯಮಗಳು ಕೊಂಚ ಸಡಿಲಗೊಂಡಿದ್ದನ್ನು ಗಮನಿಸಿದ ಸಾರ್ವಜನಿಕರು ಮನೆಯಿಂದ ಹೊರಬಂದರು.

ADVERTISEMENT

ಚಂದ್ರವಳ್ಳಿ, ಮುರುಘಾ ಮಠ, ಐತಿಹಾಸಿಕ ಕೋಟೆ, ಆಡುಮಲ್ಲೇಶ್ವರ, ಜೋಗಿಮಟ್ಟಿ ಸೇರಿ ಪಟ್ಟಣದ ಸುತ್ತಲಿನ ಪ್ರವಾಸಿತಾಣಗಳಿಗೆ ನಿರ್ಬಂಧ ವಿಧಿಸಲಾಗಿತ್ತು. ಹೀಗಾಗಿ, ಬಹುತೇಕರು ತಿಮ್ಮಣ್ಣನಾಯಕ ಕೆರೆಯ ಅಂಗಳಕ್ಕೆ ಬಂದಿದ್ದರು. ಅಂಗಳದಲ್ಲಿರುವ ಮಾವಿನ ಮರಗಳಡಿ ಕುಳಿತು ದಿನ ಕಳೆದರು. ಅಲ್ಲಿಯೇ ಅಡುಗೆ ಮಾಡಿ ಮಧ್ಯಾಹ್ನದ ಊಟ ಸವಿದರು. ಮರಗಳಿಗೆ ಜೋಕಾಲಿ ಕಟ್ಟಿ ಆಟವಾಡಿದರು. ಹಾಡಿ, ಕುಣಿದು ಸಂಭ್ರಮಿಸಿದರು.

ದೇಗುಲದ ಸಮೀಪದ ಅಲ್ಲಲ್ಲಿ ಹಾಗೂ ಕರೆಯ ಹಿಂಭಾಗದ ಕಲ್ಲುಬಂಡೆಗಳ ಮೇಲೆಯೂ ಜನರು ಕಾಣುತ್ತಿದ್ದರು. ಯುವಕರು, ಸ್ನೇಹಿತರ ಗುಂಪುಗಳು ಅಲ್ಲಲ್ಲಿ ಆಟವಾಡುತ್ತಿದ್ದವು. ಇಲ್ಲಿ ಕೋವಿಡ್‌ನ ಯಾವುದೇ ಮಾರ್ಗಸೂಚಿಗಳು ಪಾಲನೆ ಆದಂತೆ ಕಂಡುಬರಲಿಲ್ಲ. ಆಟೊ, ಕಾರು, ದ್ವಿಚಕ್ರ ವಾಹನಗಳ ಸಂಚಾರ ಇಲ್ಲಿ ನಿರಂತರವಾಗಿತ್ತು.

ಮಾಂಸ ಖರೀದಿಗೆ ಮುಗಿಬಿದ್ದರು: ಭಾನುವಾರ ಬೆಳಿಗ್ಗೆ ಅಗತ್ಯ ವಸ್ತುಗಳನ್ನು ಖರೀದಿಸಲು ಜನರು ಹೊರಗೆ ಬಂದಿದ್ದರು. ಮಾರುಕಟ್ಟೆಯಲ್ಲಿ ಹೆಚ್ಚಿನ ಜನರು ಕಂಡುಬಂದರು. ಮಾಂಸದ ಅಂಗಡಿಗಳ ಎದುರು ಹೆಚ್ಚು ಜನಸಂದಣಿ ಕಂಡುಬಂದಿತು. ವಾರಾಂತ್ಯದಲ್ಲಿ ಮಾಂಸದೂಟ ಮಾಡುವ ಸಂಪ್ರದಾಯದ ಅಂಗವಾಗಿ ಅನೇಕರು ಅಂಗಡಿಯ ಎದುರು ನಿಂತಿದ್ದರು.

ಹೊರಪೇಟೆ, ಜೋಗಿಮಟ್ಟಿ ರಸ್ತೆ ಸೇರಿ ಹಲವೆಡೆ ಮಾಂಸದ ಅಂಗಡಿಗಳು ಬೆಳಿಗ್ಗೆಯೇ ಬಾಗಿಲು ತೆರೆದಿದ್ದವು. ಕೋಳಿ, ಕುರಿ ಹಾಗೂ ಮೀನು ಮಾರಾಟದ ಮಳಿಗೆಗೆ ಮಾಂಸಪ್ರಿಯರು ಭೇಟಿ ನೀಡಿದರು. ಶನಿವಾರಕ್ಕಿಂತ ಭಾನುವಾರ ಮಾರಾಟ ಜೋರಾಗಿತ್ತು.

ತರಕಾರಿ ಮಾರುಕಟ್ಟೆಯಲ್ಲಿ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರಲಿಲ್ಲ. ಬೆಳಿಗ್ಗೆ ಅಲ್ಲಲ್ಲಿ ತರಕಾರಿ ಖರೀದಿಸಿದ್ದು ಕಂಡುಬಂದರೂ ಇಡೀ ದಿನ ವಹಿವಾಟು ನಡೆಯಲಿಲ್ಲ. ಕೆಲ ವಾಪಾರಸ್ಥರು ಮಧ್ಯಾಹ್ನದ ಹೊತ್ತಿಗೆ ವ್ಯಾಪಾರ ಬಂದ್‌ ಮಾಡಿ ಮನೆಗೆ ತೆರಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.