ADVERTISEMENT

ಚಿತ್ರದುರ್ಗ: ಸರ್ಕಾರಿ ಕಚೇರಿಯಲ್ಲೇ ಮಾರ್ಗಸೂಚಿ ಉಲ್ಲಂಘನೆ

ಜಿಲ್ಲೆಯಲ್ಲಿ ಹೆಚ್ಚುತ್ತಿವೆ ಕೋವಿಡ್‌ ಪ್ರಕರಣ, ಕಾಣದ ಮಾಸ್ಕ್‌, ಸ್ಯಾನಿಟೈಸರ್‌

​ಪ್ರಜಾವಾಣಿ ವಾರ್ತೆ
Published 12 ಜನವರಿ 2022, 5:21 IST
Last Updated 12 ಜನವರಿ 2022, 5:21 IST
ಚಿತ್ರದುರ್ಗದ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಪಾಲನೆಯಾಗದ ಕೋವಿಡ್‌ ಮಾರ್ಗಸೂಚಿ
ಚಿತ್ರದುರ್ಗದ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಪಾಲನೆಯಾಗದ ಕೋವಿಡ್‌ ಮಾರ್ಗಸೂಚಿ   

ಚಿತ್ರದುರ್ಗ:ಜಿಲ್ಲೆಯಲ್ಲಿನ ಸರ್ಕಾರಿ ಕಚೇರಿಗಳೇ ಕೋವಿಡ್, ಓಮೈಕ್ರಾನ್ ಸೋಂಕು ಹರಡುವ ಹಾಟ್‌ಸ್ಪಾಟ್‌ಗಳಾಗಿ ಪರಿವರ್ತನೆಗೊಳ್ಳುತ್ತಿವೆ. ಮೊದಲ ಮತ್ತು ಎರಡನೇ ಅಲೆಯ ವೇಳೆ ಕಣ್ಣು ಹಾಯಿಸಿದ ಕಡೆಯಲ್ಲೆಲ್ಲ ಕಾಣುತ್ತಿದ್ದ ಸ್ಯಾನಿಟೈಜರ್, ಥರ್ಮಲ್ ಸ್ಕ್ಯಾನಿಂಗ್‌ ಯಂತ್ರಗಳು ಮೂಲೆ ಸೇರಿವೆ.

ಕಳೆದ ನಾಲ್ಕೈದು ದಿನಗಳಿಂದ ಜಿಲ್ಲೆಯಲ್ಲಿ ಮತ್ತೆ ಕೋವಿಡ್ ಪ್ರಕರಣಗಳ ಸಂಖ್ಯೆ ಏರಿಕೆ ಕಾಣುತ್ತಿದೆ. ಆದರೆ, ಜಿಲ್ಲಾಧಿಕಾರಿ ಕಚೇರಿ, ತಾಲ್ಲೂಕು ಕಚೇರಿ, ನಗರಸಭೆ, ಉಪನೋಂದಣಾಧಿಕಾರಿ ಕಚೇರಿ ಸೇರಿ ವಿವಿಧ ಸರ್ಕಾರಿ ಇಲಾಖೆಗಳಲ್ಲೇ ಕೋವಿಡ್ ನಿಯಮಗಳನ್ನು ಅಧಿಕಾರಿಗಳು ಸ್ಪಷ್ಟವಾಗಿ ಗಾಳಿಗೆ ತೂರಿದ್ದಾರೆ.

‘ಕೋವಿಡ್ ನಿಯಮ ಪಾಲಿಸಿ, ಪ್ರತಿಯೊಬ್ಬರೂ ಮಾಸ್ಕ್ ಧರಿಸಿ’ ಎಂದು ಜಾಗೃತಿ ಮೂಡಿಸುವ ಸಿಬ್ಬಂದಿಯೇ ಸರಿಯಾಗಿ ಮಾಸ್ಕ್ ಧರಿಸುತ್ತಿಲ್ಲ. ಅಂತರ ಕಾಯ್ದುಕೊಳ್ಳುತ್ತಿಲ್ಲ. ಇದರಿಂದ ಸಾರ್ವಜನಿಕರಿಗೂ ಕೋವಿಡ್ ಪರಿಸ್ಥಿತಿಯ ಗಂಭೀರತೆ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ.

ADVERTISEMENT

ನಗರದ ಹೃದಯ ಭಾಗದಲ್ಲಿರುವ ತಾಲ್ಲೂಕು ಕಚೇರಿ, ನಗರಸಭೆಯಲ್ಲಿ ಕೋವಿಡ್ ನಿಯಮ ಪಾಲಿಸಿ ಎಂಬುದು ಗೋಡೆ ಬರಹಕ್ಕೆ ಸಿಮೀತವಾಗಿದೆ. ನಿತ್ಯ ಸಾವಿರಾರು ಜನರು ಬಂದು ಹೋಗುವ ಈ ಸ್ಥಳದಲ್ಲಿ ಥರ್ಮಲ್ ಸ್ಕ್ಯಾನಿಂಗ್‌ ಇರಲಿ ಕನಿಷ್ಠ ಪಕ್ಷ ಸ್ಯಾನಿಟೈಜರ್ ಕೂಡ ಇಟ್ಟಿಲ್ಲ.

ಈ ಕಚೇರಿ ಆವರಣದಲ್ಲಿ ಗಣಕೀಕೃತ ಪಹಣಿ ವಿತರಣಾ ಕೇಂದ್ರ, ಉಪನೋಂದಣಾಧಿಕಾರಿ ಕಚೇರಿ ಸಹ ಕಾರ್ಯನಿರ್ವಹಿಸುತ್ತಿವೆ. ಗ್ರಾಮೀಣ ಭಾಗದ ಜನರು ಹೆಚ್ಚಾಗಿ ಬರುವುದರಿಂದ ಇಡೀ ಆವರಣದಲ್ಲಿ ನಿತ್ಯ ಜನ ಜಾತ್ರೆ ಸಾಮಾನ್ಯವಾಗಿದೆ.

ನಗರಸಭೆ, ತಾಲ್ಲೂಕು ಕಚೇರಿ ಸೇರಿದಂತೆ ಬಹುತೇಕ ಸರ್ಕಾರಿ ಕಚೇರಿಗಳಲ್ಲಿ ಕೋವಿಡ್ ನಿಯಮ ಪಾಲನೆಯಾಗುತ್ತಿಲ್ಲ. ಕಚೇರಿಗೆ ಬರುವ ಸಾರ್ವಜನಿಕರು, ಸಿಬ್ಬಂದಿ ಮಾಸ್ಕ್ ಧರಿಸುತ್ತಿಲ್ಲ. ಮಾಸ್ಕ್ ಧರಿಸಿದ್ದರೂ ಮೂಗಿನಿಂದ ಕೆಳಗೆ ಇರುತ್ತದೆ.

ಅಧಿಕಾರಿಗಳ ಮುಂದೆ ಜನರು ಗುಂಪು ಗುಂಪಾಗಿ ನಿಂತಿದ್ದರೂ ಎಚ್ಚರಿಸುವ ಕೆಲಸ ಮಾಡುತ್ತಿಲ್ಲ. ಆದರೆ, ಹಿರಿಯ ಅಧಿಕಾರಿಗಳು ಕರೆದಾಗ ಮಾತ್ರ ಮಾಸ್ಕ್ ಹಾಕಿಕೊಂಡು ಹೋಗುವುದು ಕಂಡು ಬರುತ್ತಿದೆ.

ವಾರಾಂತ್ಯದ ಕರ್ಫ್ಯೂ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೂಚನೆಯಂತೆ ಮಾಸ್ಕ್ ಧರಿಸದವರಿಗೆ ದಂಡ ವಿಧಿಸಲಾಗಿತ್ತು. ಕೇವಲ 55 ಗಂಟೆಯಲ್ಲಿ 857 ಕೇಸ್ ದಾಖಲಿಸಿ ₹ 85,700 ದಂಡ ವಸೂಲಿ ಮಾಡಲಾಗಿತ್ತು. ಆದರೆ, ಸರ್ಕಾರಿ ಕಚೇರಿಗಳಲ್ಲಿ ಮಾಸ್ಕ್ ಧರಿಸುವಿಕೆ ಕಡ್ಡಾಯಗೊಂಡಿಲ್ಲ. ಅಂತರದ ಪ್ರಶ್ನೆಯಂತೂ
ಕೇಳುವಂತಿಲ್ಲ.

...

ಜಾಗೃತಿ ಮೂಡಿಸಬೇಕಾದ ಅಧಿಕಾರಿಗಳೇ ಕೋವಿಡ್ ನಿಯಮ ಉಲ್ಲಂಘಿಸುತ್ತಿದ್ದಾರೆ. ಯಾವುದೇ ಕಚೇರಿಯಲ್ಲೂ ಸ್ಯಾನಿಟೈಸರ್, ಥರ್ಮಲ್ ಸ್ಕ್ಯಾನಿಂಗ್‌ ಮಾಡುತ್ತಿಲ್ಲ. ಇದರಿಂದ ಕೋವಿಡ್ ಪ್ರಕರಣಗಳು ಏರಿಕೆ ಆಗುತ್ತಿವೆ.

-ಎಚ್.ಕಾಂತಪ್ಪ, ನಿವೃತ್ತ ಶಿಕ್ಷಕರು, ಕೆಳಗೋಟೆ

.....

ಮಾಸ್ಕ್ ಧರಿಸದವರಿಗೆ ರಸ್ತೆಗಳಲ್ಲಿ ದಂಡ ಹಾಕಲಾಗುತ್ತಿದೆ. ಆದರೆ, ಸರ್ಕಾರಿ ಕಚೇರಿಗಳಲ್ಲಿ ಕೋವಿಡ್ ನಿಯಮ ಪಾಲಿಸದ ಸಿಬ್ಬಂದಿ ಮೇಲೆ ಕ್ರಮವಹಿಸುತ್ತಿಲ್ಲ. ನಿಯಮ ಉಲ್ಲಂಘಿಸುವವರಿಗೆ ದಂಡ ವಿಧಿಸುವ ಕಾರ್ಯವಾಗಬೇಕು.

- ಲೋಕೇಶ್, ನಾಗರಿಕ

.....................

ಗಾಳಿ ಬೆಳಕಿಲ್ಲದ ಕಚೇರಿಯಲ್ಲಿ ಜನ ಜಾತ್ರೆ

ತಾಲ್ಲೂಕು ಕಚೇರಿ ಆವರಣದ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಜನ ಜಾತ್ರೆ ಕಂಡು ಬಂದಿತು. ತೀರಾ ಹಳೆಯದಾದ ಕಚೇರಿಯಲ್ಲಿ ಸರಿಯಾದ ಗಾಳಿ ಬೆಳಕಿನ ವ್ಯವಸ್ಥೆಯಿಲ್ಲ. ಚಿಕ್ಕ ಕೊಠಡಿಯಲ್ಲಿ ಜನರು ತುಂಬಿದ್ದರು ಸಹ ತಮಗೂ ಅದಕ್ಕೂ ಸಂಬಂಧವೇ ಇಲ್ಲದಂತೆಸಿಬ್ಬಂದಿ ಇದ್ದರು. ಬಹುತೇಕರು ಮಾಸ್ಕ್‌ಗಳು ಕೊರಳಿಗೆ ಮಾತ್ರ ಸೀಮಿತವಾಗಿದ್ದವು.

‘ಇಲ್ಲಿ ದಿನ ಇದೇ ರೀತಿ. ಇದರಲ್ಲೇನು ವಿಶೇಷ? ಕೋವಿಡ್ ಅಂತಾ ಹೋದ್ರೆ ಕೆಲಸ ಆಗಲ್ಲ. ಗಟ್ಟಿ ಇದ್ದವರು ಬದುಕುತ್ತಾರೆ’ ಎನ್ನುತ್ತಾ ಸಿಬ್ಬಂದಿಯೊಬ್ಬರು ಕೊಠಡಿ ಹೊರನಡೆದರು.

......

ಆಸ್ಪತ್ರೆ ಸ್ಥಿತಿ ಕೋವಿಡ್‌ಗೆ ಪ್ರೀತಿ

ಜಿಲ್ಲಾ ಆಸ್ಪತ್ರೆಯಲ್ಲಿ ಸಹ ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿದ್ದು ಕಂಡು ಬಂದಿತು. ತಾಯಿ–ಮಕ್ಕಳ ವಾರ್ಡ್‌ನಲ್ಲಿ ನೂರಾರು ಜನ ಗುಂಪಾಗಿ ನಿಂತಿದ್ದರೂ ಸಿಬ್ಬಂದಿ ಮೌನವಾಗಿದ್ದರು. ಮಾಸ್ಕ್‌ ಹಾಕಿಕೊಳ್ಳಿ ಎಂದು ಹೇಳುವ ಸೌಜನ್ಯವನ್ನೂ ತೋರಲಿಲ್ಲ. ಮಕ್ಕಳನ್ನು ಆಸ್ಪತ್ರೆ ಕಾರಿಡಾರ್‌ನಲ್ಲಿ ಮಲಗಿಸಿಕೊಂಡಿದ್ದು, ಊಟ ಮಾಡಿಸುವ ದೃಶ್ಯ ಸಾಮಾನ್ಯವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.