ADVERTISEMENT

ಹೆಚ್ಚುವರಿ ಹಾಸಿಗೆಗೆ ವಾರದ ಗಡುವು

ಆರೋಗ್ಯ ಅಧಿಕಾರಿಗಳ ಸಭೆಯಲ್ಲಿ ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ ಸೂಚನೆ

​ಪ್ರಜಾವಾಣಿ ವಾರ್ತೆ
Published 4 ಮೇ 2021, 12:17 IST
Last Updated 4 ಮೇ 2021, 12:17 IST
ಚಿತ್ರದುರ್ಗದ ಪ್ರವಾಸಿ ಮಂದಿರದಲ್ಲಿ ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ ಅವರು ಆರೋಗ್ಯ, ಕಂದಾಯ ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳೊಂದಿಗೆ ಮಂಗಳವಾರ ಸಭೆ ನಡೆಸಿದರು.
ಚಿತ್ರದುರ್ಗದ ಪ್ರವಾಸಿ ಮಂದಿರದಲ್ಲಿ ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ ಅವರು ಆರೋಗ್ಯ, ಕಂದಾಯ ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳೊಂದಿಗೆ ಮಂಗಳವಾರ ಸಭೆ ನಡೆಸಿದರು.   

ಚಿತ್ರದುರ್ಗ: ಜಿಲ್ಲಾ ಆಸ್ಪತ್ರೆಯಲ್ಲಿ ಕೋವಿಡ್‌ ರೋಗಿಗಳ ಚಿಕಿತ್ಸೆಗೆ ಹೆಚ್ಚುವರಿಯಾಗಿ 200 ಹಾಸಿಗೆ ಸೌಲಭ್ಯ ಕಲ್ಪಿಸಲು ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ ಅವರು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ವಾರದ ಗಡುವು ನೀಡಿದರು. ವಿಳಂಬ ಮಾಡದೇ ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸುವಂತೆ ಸೂಚಿಸಿದರು.

ಕೋವಿಡ್‌ನಿಂದ ಗುಣಮುಖರಾಗಿ ಕ್ವಾರಂಟೈನ್‌ ಅವಧಿಯನ್ನು ಪೂರ್ಣಗೊಳಿಸಿದ ಅವರು ಪ್ರವಾಸಿ ಮಂದಿರದಲ್ಲಿ ಮಂಗಳವಾರ ಆರೋಗ್ಯ, ಕಂದಾಯ ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಕೋವಿಡ್‌ ಪರಿಸ್ಥಿತಿ, ಆಮ್ಲಜನಕದ ಪೂರೈಕೆ, ರೆಮ್‌ಡಿಸಿವಿರ್‌ ಚುಚ್ಚುಮದ್ದು ವಿತರಣೆಯ ಮಾಹಿತಿ ಪಡೆದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸಿ.ಎಲ್‌.ಫಾಲಾಕ್ಷ, ‘ಜಿಲ್ಲಾ ಆಸ್ಪತ್ರೆಯಲ್ಲಿ ಆಮ್ಲಜನಕ ಸೌಲಭ್ಯ ಹೊಂದಿದ 175 ಹಾಸಿಗೆ ಇವೆ. ಇದರಲ್ಲಿ ಹತ್ತು ವೆಂಟಿಲೇಟರ್‌ ಹಾಗೂ 20 ತೀವ್ರ ನಿಗಾ ಘಟಕದಲ್ಲಿವೆ. ಹೆಚ್ಚುವರಿಯಾಗಿ 200 ಹಾಸಿಗೆ ನಿರ್ಮಿಸುವ ಪ್ರಸ್ತಾವಕ್ಕೆ ಅನುಮೋದನೆ ಸಿಕ್ಕಿದೆ. ನಾಲ್ಕು ದಿನಗಳಲ್ಲಿ ಹೆಚ್ಚುವರಿ ಹಾಸಿಗೆ ಸಿದ್ಧವಾಗಲಿವೆ’ ಎಂದು ಮಾಹಿತಿ ನೀಡಿದರು.

ADVERTISEMENT

ಹಾಸಿಗೆ ಸೌಲಭ್ಯ ಕಲ್ಪಿಸುವ ಹೊಣೆ ಹೊತ್ತಿರುವ ಕರ್ನಾಟಕ ಆರೋಗ್ಯ ವ್ಯವಸ್ಥೆ ಅಭಿವೃದ್ಧಿ ಮತ್ತು ಸುಧಾರಣಾ ಕೋಶದ (ಕೆಎಚ್‌ಎಸ್‌ಡಿಆರ್‌) ಎಂಜಿನಿಯರ್‌ ರಮೇಶ್ ಅವರನ್ನು ದೂರವಾಣಿಯಲ್ಲಿ ಸಂಪರ್ಕಿಸಿದ ಶಾಸಕರು ಈ ಬಗ್ಗೆ ವಿಚಾರಿಸಿದರು. ಅಧಿಕೃತ ಪ್ರಸ್ತಾವ ಸಲ್ಲಿಕೆ, ಏಜೆನ್ಸಿ ನಿಗದಿ ಕಾರಣಕ್ಕೆ ಸೌಲಭ್ಯ ಕಲ್ಪಿಸಲು ಕನಿಷ್ಠ 40 ದಿನಗಳು ಹಿಡಿಯುತ್ತವೆ ಎಂಬುದಾಗಿ ರಮೇಶ್‌ ನೀಡಿದ ಮಾಹಿತಿಗೆ ತಿಪ್ಪಾರೆಡ್ಡಿ ಕುಪಿತಗೊಂಡರು.

ಶಸ್ತ್ರಚಿಕಿತ್ಸಕರಿಗೆ ತರಾಟೆ:‘ಚಿತ್ರದುರ್ಗದಲ್ಲಿ ಪರಿಸ್ಥಿತಿ ಕೈಮೀರುತ್ತಿದೆ. ದೊಡ್ಡವರು, ಪ್ರಭಾವ ಹೊಂದಿದವರಿಗೇ ಹಾಸಿಗೆ ಸಿಗುತ್ತಿಲ್ಲ. ಇನ್ನೂ ಬಡವರ ಕಥೆ ಏನು? ನಿಮ್ಮಂತಹ ಅಧಿಕಾರಿಗಳನ್ನು ಇಟ್ಟುಕೊಂಡರೆ ಚಾಮರಾಜನಗರದಲ್ಲಿ ನಡೆದ ಘಟನೆ ಚಿತ್ರದುರ್ಗದಲ್ಲಿ ಸಂಭವಿಸಬಹುದು. ಮೊದಲು ಕಾರ್ಯಾದೇಶ ಪಡೆದು ಕೆಲಸ ಆರಂಭಿಸಿ. ವಾರದಲ್ಲಿ ಹಾಸಿಗೆ, ಆಮ್ಲಜನಕ ಸೌಲಭ್ಯ ಕಲ್ಪಿಸಿ’ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಬಸವರಾಜು ಅವರಿಗೆ ತಾಕೀತು ಮಾಡಿದರು.

‘ಚಿತ್ರದುರ್ಗ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆ ಇದೆ ಎಂಬ ನಿರ್ಲಕ್ಷ್ಯ ಸಲ್ಲದು. ಆರೋಗ್ಯ ಇಲಾಖೆ ನೀಡುತ್ತಿರುವ ಅಂಕಿ–ಅಂಶಗಳ ಬಗ್ಗೆ ವಿಶ್ವಾಸವಿಲ್ಲ. ನಿಖರವಾದ ಮಾಹಿತಿ ನೀಡುತ್ತಿಲ್ಲ ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಇನ್ನಾದರೂ ಪ್ರಾಮಾಣಿಕವಾಗಿ ಕೆಲಸ ಮಾಡಿ’ ಎಂದು ಕಿಡಿಕಾರಿದರು.

‘ರೆಮ್‌ಡಿಸಿವಿರ್‌ ಚುಚ್ಚುಮದ್ದು ವಿತರಣೆಯಲ್ಲಿ ತೊಂದರೆ ಉಂಟಾಗುತ್ತಿದೆ. ಸೂಚನೆ ನೀಡಿದ ಬಳಿಕ ಹಿರಿಯೂರು ತಾಲ್ಲೂಕಿನ ಮರಡಿಹಳ್ಳಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ರೆಮ್‌ಡಿಸಿವಿರ್‌ ನೀಡಲಾಗಿದೆ. ಚಿತ್ರದುರ್ಗ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಆಮ್ಲಜಕದ ಕೊರತೆ ಉಂಟಾಗಿತ್ತು. ಐದು ಸಿಲಿಂಡರ್‌ ವ್ಯವಸ್ಥೆ ಮಾಡಿದ್ದೇನೆ. ಎಚ್ಚರ ತಪ್ಪಿದರೆ ಅಪಾಯ ಎದುರಾಗುತ್ತದೆ’ ಎಂದರು.

ಸಿಲಿಂಡರ್ ಇದ್ದರೂ ಆಮ್ಲಜನಕವಿಲ್ಲ:ಜಿಲ್ಲೆಯ 16 ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ನಿರ್ಮಿಸಿದ ಡೆಡಿಕೇಟೆಡ್‌ ಕೋವಿಡ್‌ ಕೇರ್‌ ಸೆಂಟರ್‌ಗಳಲ್ಲಿ ಆಮ್ಲಜನಕ ಸೌಲಭ್ಯ ಹೊಂದಿದ ಹಾಸಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಸಿಲಿಂಡರ್‌ಗಳನ್ನು ಒದಗಿಸಲಾಗಿದೆ. ಆದರೆ, ಆಮ್ಲಜನಕ ಪೂರೈಕೆ ಮಾಡುತ್ತಿಲ್ಲ ಎಂಬುದು ಮಂಗಳವಾರ ಬೆಳಕಿಗೆ ಬಂದಿತು.

ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಗಿರೀಶ್‌ ಮಾತನಾಡಿ, ‘ಭರಮಸಾಗರ, ಸಿರಿಗೆರೆಯಲ್ಲಿ 30 ಬೆಡ್‌ ಸಾಮರ್ಥ್ಯದ ಕೇರ್‌ ಸೆಂಟರ್ ಸ್ಥಾಪಿಸಲಾಗಿದೆ. ಆಮ್ಲಜನಕ ವ್ಯವಸ್ಥೆ ಹೊಂದಿದ ಹಾಸಿಗೆಗಳಿವೆ. ಆದರೆ, ದಾಖಲಾಗುತ್ತಿರುವ ರೋಗಿಗಳ ಸಂಖ್ಯೆ ವಿರಳ’ ಎಂದು ಮಾಹಿತಿ ನೀಡಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ತಹಶೀಲ್ದಾರ್‌ ವೆಂಕಟೇಶಯ್ಯ, ‘ಆಮ್ಲಜನಕ ಸೌಲಭ್ಯ ಹೊಂದಿದ ಹಾಸಿಗೆ ವ್ಯವಸ್ಥೆಯಷ್ಟೇ ಮಾಡಲಾಗಿದೆ. ಸಿಲಿಂಡರ್‌ ಹಾಗೂ ಆಮ್ಲಜನಕ ಪೂರೈಕೆ ಮಾಡುತ್ತಿಲ್ಲ. ಇದರಿಂದ ತೊಂದರೆ ಉಂಟಾಗುತ್ತಿದ್ದು, ಆಮ್ಲಜನಕದ ವ್ಯವಸ್ಥೆ ಮಾಡಬೇಕಿದೆ’ ಎಂದು ಹೇಳಿದರು.

ನೇಮಕಾತಿಯಲ್ಲಿ ತಾರತಮ್ಯ:ಕೋವಿಡ್‌ ಚಿಕಿತ್ಸೆಗೆ ಶುಶ್ರೂಷಕರನ್ನು ಗುತ್ತಿಗೆ ಆಧಾರದಲ್ಲಿ ಮಾಡಿಕೊಂಡ ನೇಮಕಾತಿಯಲ್ಲಿ ನಡೆದ ತಾರತಮ್ಯ ಹಾಗೂ ಅಕ್ರಮವನ್ನು ಪ್ರಸ್ತಾಪಿಸಿದ ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ ಅವರು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಚ್‌.ಜೆ.ಬಸವರಾಜಪ್ಪ ಅವರನ್ನು ತರಾಟೆ ತೆಗೆದುಕೊಂಡರು. ಕಳೆದ ವರ್ಷ ಸೇವೆ ಸಲ್ಲಿಸಿದವರನ್ನು ನೇಮಕಾತಿಗೆ ಪರಿಗಣಿಸುವಂತೆ ಸೂಚನೆ ನೀಡಿದರು.

ಕೋವಿಡ್‌ ಚಿಕಿತ್ಸೆಗೆ ಕಳೆದ ವರ್ಷ ಸುಮಾರು 40 ಶುಶ್ರೂಷಕರನ್ನು ನೇಮಕಾತಿ ಮಾಡಿಕೊಳ್ಳಲಾಗಿತ್ತು. ಸೋಂಕು ಕಡಿಮೆಯಾದ ಬಳಿಕ ಇವರನ್ನು ಸೇವೆಯಿಂದ ಬಿಡುಗಡೆ ಮಾಡಲಾಗಿತ್ತು. ಮತ್ತೆ ನೇಮಕಾತಿ ಮಾಡಿಕೊಳ್ಳುವಾಗ ಸೇವೆ ಸಲ್ಲಿಸಿದವರನ್ನು ಕಡೆಗಣಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.

‘ಬಡ ಕುಟುಂಬದ ಪದವೀಧರರು ಸೇವೆ ಮಾಡಿದ್ದಾರೆ. ಗುತ್ತಿಗೆ ಆಧಾರದ ನೇಮಕಾತಿಗೂ ಲಂಚ ಪಡೆಯಲಾಗಿದೆ. ಮಾಸಿಕ ವೇತನದಲ್ಲಿ ಅರ್ಧದಷ್ಟನ್ನು ಮಾತ್ರ ಪಾವತಿಸಿ ವಂಚಿಸಲಾಗಿದೆ. ಇದೊಂದು ಸಂದಿಗ್ಧ ಪರಿಸ್ಥಿತಿ. ಮಾನವೀಯತೆ ಇಟ್ಟುಕೊಂಡು ಕೆಲಸ ಮಾಡಿ’ ಎಂದು ಶಾಸಕರು ಎಚ್ಚರಿಕೆ ನೀಡಿದರು.

ಆಮ್ಲಜನಕ ಕಂಟೇನರ್‌ಗೆ ಚಿಂತನೆ:ಆಮ್ಲಜನಕ ಪೂರೈಕೆ ಮಾಡುವ ಜಂಬೂ ಸಿಲಿಂಡರ್‌ಗಳ ಕೊರತೆ ಉಂಟಾಗಿರುವುದರಿಂದ ಕಂಟೇನರ್‌ಗಳನ್ನು ಖರೀದಿಸಲು ಜಿಲ್ಲಾಡಳಿತ ಮುಂದಾಗಿದೆ.

‘ಜಂಬೂ ಸಿಲಿಂಡರ್‌ಗಳು ಎಲ್ಲಿಯೂ ಲಭ್ಯವಾಗುತ್ತಿಲ್ಲ. ಪುಣೆಯಲ್ಲಿ ಇದಕ್ಕೆ ಪರ್ಯಾಯವಾಗಿ ಕಂಟೇನರ್‌ ತಯಾರಿಸಲಾಗುತ್ತಿದೆ. ಒಂದು ಕಂಟೇನರ್‌ 20 ಜಂಬೂ ಸಿಲಿಂಡರ್‌ಗೆ ಸಮ. ಪ್ರತಿ ತಾಲ್ಲೂಕು ಆಸ್ಪತ್ರೆಗೆ ಒಂದು ಕಂಟೇನರ್‌ ನೀಡುವ ಬಗ್ಗೆ ಜಿಲ್ಲಾಧಿಕಾರಿ ಅವರೊಂದಿಗೆ ಚರ್ಚಿಸಲಾಗಿದೆ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸಿ.ಎಲ್‌.ಫಾಲಾಕ್ಷ ಮಾಹಿತಿ ನೀಡಿದರು.

ಪ್ರತಿ ತಾಲ್ಲೂಕಿಗೆ 40 ಲೀಟರ್‌ ಸಾಮರ್ಥ್ಯದ 12 ಜಂಬೂ ಸಿಲಿಂಡರ್‌ಗಳನ್ನು ಒದಗಿಸಲಾಗಿದೆ. ಪ್ರತಿ ಸಿಲಿಂಡರ್‌ನಲ್ಲಿ ನಿತ್ಯ 10 ರೋಗಿಗಳಿಗೆ ಚಿಕಿತ್ಸೆ ನೀಡಲು ಸಾಧ್ಯವಿದೆ. ರೋಗಿಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಆಮ್ಲಜನಕ ಪೂರೈಕೆಗೆ ಸಿದ್ಧತೆ ನಡೆಯುತ್ತಿದೆ.

ಜೈನ ಸಮಾಜದ ಕೇರ್ ಸೆಂಟರ್‌:ಕಡಿಮೆ ರೋಗ ಲಕ್ಷಣಗಳನ್ನು ಹೊಂದಿದ ಸೋಂಕಿತರನ್ನು ಉಪಚರಿಸಲು ಜೈನ ಸಮಾಜ ಕೋವಿಡ್‌ ಕೇರ್‌ ಸೆಂಟರ್‌ ತೆರೆಯಲು ಮುಂದಾಗಿದೆ. ಇದಕ್ಕೆ ಅಗತ್ಯ ಅನುಮತಿ ನೀಡಿ ವೈದ್ಯರು, ಶುಶ್ರೂಷಕರನ್ನು ಒದಗಿಸಿ. ಇದರ ವೆಚ್ಚವನ್ನು ಸಮಾಜ ಭರಿಸಲಿದೆ ಎಂದು ಶಾಸಕರು ಸೂಚನೆ ನೀಡಿದರು.

‘ಜೈನ ಸಮುದಾಯದ ಅನೇಕರು ಚಿಕ್ಕ ಮನೆಗಳನ್ನು ಹೊಂದಿದ್ದಾರೆ. ಸೋಂಕು ಕಾಣಿಸಿಕೊಂಡರೆ ಪ್ರತ್ಯೇಕವಾಗಿ ಚಿಕಿತ್ಸೆ ನೀಡಲು ಕಷ್ಟಸಾಧ್ಯ. ಪ್ರತ್ಯೇಕ ಶೌಚಾಲಯದ ವ್ಯವಸ್ಥೆ ಬಹುತೇಕ ಮನೆಗಳಲ್ಲಿ ಇಲ್ಲ. ಹೀಗಾಗಿ, ಜೈನ ಸಮುದಾಯದ ಸೋಂಕಿತರಿಗೆ ಪ್ರತ್ಯೇಕವಾಗಿ ಆರೈಕೆ ಕೇಂದ್ರ ತೆರೆಯಲು ಅನುಮತಿ ಕೋರಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ. ಅವರಿಗೆ ಕೂಡಲೇ ಸ್ಪಂದಿಸಿ’ ಎಂದು ಹೇಳಿದರು.

***

ಚಾಮರಾಜನಗರದ ಘಟನೆ ಮನಕಲಕಿದೆ. ಇಂತಹ ಸ್ಥಿತಿ ಸಂಭವಿಸದಂತೆ ಎಚ್ಚರವಹಿಸುವ ಅಗತ್ಯವಿದೆ. ಆಮ್ಲಜನಕ, ರೆಮ್‌ಡಿಸಿವಿರ್‌ ಚುಚ್ಚುಮದ್ದು ಕೊರತೆ ಆಗದಂತೆ ನೋಡಿಕೊಳ್ಳಿ.

ಜಿ.ಎಚ್‌.ತಿಪ್ಪಾರೆಡ್ಡಿ, ಶಾಸಕ, ಚಿತ್ರದುರ್ಗ

***

ಕೋವಿಡ್‌ ಕೇರ್‌ ಸೆಂಟರ್‌ನ ಆಮ್ಲಜನಕ ಸೌಲಭ್ಯ ಹೊಂದಿದ ಹಾಸಿಗೆಯಲ್ಲಿ ಕನಿಷ್ಠ ನಾಲ್ಕು ಗಂಟೆ ಚಿಕಿತ್ಸೆ ನೀಡಲು ಸಾಧ್ಯವಿದೆ. ಆ ಬಳಿಕ ಅವರನ್ನು ಆಸ್ಪತ್ರೆಗೆ ಸ್ಥಳಾಂತರಿಸಬೇಕು.

ಡಾ.ಸಿ.ಎಲ್‌.ಫಾಲಾಕ್ಷ, ಜಿಲ್ಲಾ ಆರೋಗ್ಯಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.